ಸವಣೂರು: ಕಡಬ ತಾಲೂಕಿನ ಪಾಲ್ತಾಡಿ ಗ್ರಾಮ ಹಾಗೂ ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮವನ್ನು ಜೋಡಿಸುವ ಗೌರಿಹೊಳೆಗೆ ನಿರ್ಮಿಸಿದ ಏಕೈಕ ಸೇತುವೆಯೊಂದು ತೀರಾ ಶಿಥಿಲಾವಸ್ಥೆಗೆ ತಲುಪಿದ್ದು ಕುಸಿಯುವ ಹಂತಕ್ಕೆ ಬಂದಿದೆ. ಇದರಿಂದಾಗಿ ಈ ಭಾಗದ ಜನರು ಸಂಪರ್ಕ ಕಡಿತದ ಭೀತಿ ಎದುರಿಸುತ್ತಿದ್ದಾರೆ. ಈ ಸೇತುವೆಯನ್ನು ಸಂಪರ್ಕಿಸುವ ಬೆಳ್ಳಾರೆ ಜಿ.ಪಂ. ಕ್ಷೇತ್ರಕ್ಕೊಳ ಪಟ್ಟಿರುವ ರಸ್ತೆಯಂತೂ ಸಂಪೂರ್ಣ ಹದಗೆಟ್ಟು ಹೋಗಿದೆ. ಆ ರಸ್ತೆಯೂ ಅಭಿವೃದ್ಧಿ ಆಗಬೇಕಿದೆ.
ಸೇತುವೆಯ ಎರಡೂ ಬದಿಯಲ್ಲೂ ಸರಿಯಾದ ತಡೆಗೋಡೆ ಇಲ್ಲದೆ ಇರು ವುದರಿಂದ ವಾಹನ ಸವಾರರಿಗೆ, ಪುಟ್ಟ ಮಕ್ಕಳಿಗೆ ಅಪಾಯಕಾರಿ ಸ್ಥಿತಿ ಇದೆ.
ಬೆಳಂದೂರು ಜಿ.ಪಂ. ಕ್ಷೇತ್ರಕ್ಕೆ ಒಳ ಪಟ್ಟಂತೆ ಸವಣೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಬರುವ ಚೆನ್ನಾವರ ಮಸೀದಿ ಯವರೆಗೆ ರಸ್ತೆಯನ್ನು ಸಂಸದರ, ಶಾಸಕರ, ಜಿ.ಪಂ., ತಾ.ಪಂ., ಗ್ರಾ.ಪಂ ಹೀಗೆ ಸುಮಾರು 19 ಲಕ್ಷ ರೂ.ಗಳ ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಆದರೆ ಸೇತುವೆ ಹಾಗೆಯೇ ಉಳಿದಿದೆ.
ಸುಳ್ಯ ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಇಲ್ಲಿ ಸುಮಾರು 25 ವರ್ಷಗಳ ಹಿಂದೆ ಜನರ ಬೇಡಿಕೆಯಂತೆ ಕಿರುಸೇತುವೆಯೊಂದನ್ನು ನಿರ್ಮಿಸಲಾಗಿತ್ತು. ಇದು ಕಿರು ಸೇತುವೆಯಾದ ಕಾರಣ ಘನ ವಾಹನಗಳು ಹೋಗುವಂತಿಲ್ಲ. ಈ ಸೇತುವೆ ಕುಸಿದು ಸಂಪರ್ಕ ಕಡಿತವಾದರೆ ಪಾಲ್ತಾಡಿ ಭಾಗದಿಂದ ಸವಣೂರು, ಕಾಣಿಯೂರು, ಪೆರುವಾಜೆಗೆ ಹೋಗಲು ಪುತ್ತೂರು ಅಥವಾ ಬೆಳ್ಳಾರೆ ಮೂಲಕ ಸುತ್ತಿ ಬಳಸಿ ಹೋಗಬೇಕಾದ ಪರಿಸ್ಥಿತಿ ಬರಲಿದೆ.
ಈ ಸೇತುವೆ ದಾಟಿ ಮಕ್ಕಳು ಚೆನ್ನಾವರ ಕಿ.ಪ್ರಾ.ಶಾಲೆ, ಮುಕ್ಕೂರು ಹಿ.ಪ್ರಾ.ಶಾಲೆ, ಸವಣೂರು, ಪೆರುವಾಜೆ ಕಾಲೇಜುಗಳಿಗೆ ಹೋಗುತ್ತಿದ್ದಾರೆ. ಈಗ ಈ ಸೇತುವೆಯ ದುರಸ್ತಿ ಕುರಿತು ಗಮನಹರಿಸಿದರೆ ಉತ್ತಮ. ಇಲ್ಲದಿದ್ದಲ್ಲಿ ಮುಂದಿನ ಮಳೆಗಾಲದಲ್ಲಿ ಈ ಸೇತುವೆಯು ಕುಸಿದು ಬೀಳುವಲ್ಲಿ ಯಾವುದೇ ಸಂಶಯ ಇಲ್ಲ ಎನ್ನುತ್ತಾರೆ ಸ್ಥಳೀಯರು.
ಇದನ್ನೂ ಓದಿ:ಪ್ರೇಯಸಿಯ ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ ವಿವಾಹಿತ ವ್ಯಕ್ತಿ
ಸೇತುವೆ ಹಾಗೂ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪೆರುವಾಜೆ ಗ್ರಾಮಕ್ಕೊಳಪಟ್ಟ ಗ್ರಾಮಸ್ಥರ ಸಭೆ ಕುಂಡಡ್ಕದಲ್ಲಿ ನಡೆದು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುವುದು ಹಾಗೂ ಮುಂದಿನ ತಾ.ಪಂ., ಜಿ.ಪಂ.ಚುನಾವಣೆಯನ್ನು ಬಹಿಷ್ಕಾರ ಮಾಡುವ ಕುರಿತೂ ನಿರ್ಧರಿಸಿದ್ದಾರೆ. ಪಾಲ್ತಾಡಿ ಗ್ರಾಮಕ್ಕೊಳಪಟ್ಟ ಗ್ರಾಮಸ್ಥರಿಗೂ ಈ ಸೇತುವೆಯು ಸಂಪರ್ಕ ಕಲ್ಪಿಸುವ ಏಕೈಕ ದಾರಿ ಯಾಗಿ ರುವುದರಿಂದ ಚೆನ್ನಾವರ ಶಾಲೆಯಲ್ಲಿ ಸಭೆ ನಡೆಸಿ ಹೋರಾಟದ ಕುರಿತು ಗ್ರಾಮಸ್ಥರು ಚರ್ಚಿಸಿ ಮುಂದಿನ ತಾ.ಪಂ., ಜಿ.ಪಂ.ಚುನಾವಣೆಗೂ ಮುನ್ನ ಸೇತುವೆಯ ಕಾಮಗಾರಿ ಆರಂಭಿಸದಿದ್ದರೆ ಚುನಾವಣೆ ಬಹಿಷ್ಕಾರದ ಬಗ್ಗೆ ನಿರ್ಣಯ ಕೈಗೊಂಡಿದ್ದಾರೆ.