ಬಾಗಲಕೋಟೆ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರ ಪದಗ್ರಹಣದ ಪ್ರತಿಜ್ಞಾ ವಿಧಿ ಕಾರ್ಯಕ್ರಮಕ್ಕೆ ಜಿಲ್ಲಾದ್ಯಂತ ನಿರೀಕ್ಷೆಗೂ ಮೀರಿ ಸ್ಪಂದನೆ ದೊರೆತಿದೆ ಎಂದು ಪಕ್ಷದ ಜಿಲ್ಲಾ ಅಧ್ಯಕ್ಷ, ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ ತಿಳಿಸಿದ್ದಾರೆ.
ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ, ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸತೀಶ ಜಾರಕಿಹೋಳಿ, ಸಲೀಮ್ ಅಹ್ಮದ ಗುರುವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಕೋವಿಡ್ ಭೀತಿ ಹಿನ್ನೆಲೆಯಲ್ಲಿ ದೊಡ್ಡ ಸಮಾವೇಶ ಮಾಡದೇ, ಬೆಂಗಳೂರಿನಲ್ಲಿ ನಡೆಯುವ ಪದಗ್ರಹಣ ಕಾರ್ಯಕ್ರಮ ನೇರವಾಗಿ ಜಿಲ್ಲಾದ್ಯಂತ ಪಕ್ಷದ ಕಾರ್ಯಕರ್ತರ ವೀಕ್ಷಣೆಗೆ ಹೊಸ ತಂತ್ರಜ್ಞಾನ ಬಳಸಿಕೊಳ್ಳಲಾಗಿತ್ತು. ಇದಕ್ಕೆ ಜಿಲ್ಲಾದ್ಯಂತ ನಮ್ಮ ನಿರೀಕ್ಷೆಗೂ ಮೀರಿ ಸ್ಪಂದನೆ ಸಿಕ್ಕಿದೆ ಎಂದು ಉದಯವಾಣಿಗೆ ತಿಳಿಸಿದರು.
300ಕ್ಕೂ ಹೆಚ್ಚು ಕಾರ್ಯಕ್ರಮ: ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲೆಯ ಆಯಾ ಗ್ರಾಪಂ ಕೇಂದ್ರ ಸ್ಥಾನ ಹಾಗೂ ನಗರ ಸ್ಥಳೀಯ ಸಂಸ್ಥೆಯ ಆಯಾ ವಾರ್ಡ್ ಗಳಲ್ಲಿ ಟಿ.ವಿ ಪರದೆ, ಫೇಸ್‌ಬುಕ್ ಲೈವ್ ಮುಂತಾದ ಹೊಸ ತಂತ್ರಜ್ಞಾನ ಮೂಲಕ ಕಾರ್ಯಕ್ರಮ ನೇರವಾಗಿ ವೀಕ್ಷಿಸುವ ಜತೆಗೆ ಸಂವಿಧಾನದ ಪೀಠಿಕೆ ಓದು, ಪ್ರತಿಜ್ಞೆ ವಿಧಿ ಸ್ವೀಕಾರದ ಜತೆಗೆ ನೂತನ ಅಧ್ಯಕ್ಷರು, ಕಾರ್ಯಾಧ್ಯಕ್ಷರ ಜತೆಗೆ ಸಂವಾದ ನಡೆಸಲೂ ಅವಕಾಶ ಕಲ್ಪಿಸಲಾಗಿತ್ತು ಎಂದು ಹೇಳಿದರು.
ಜಿಲ್ಲೆಯ ಬಾಗಲಕೋಟೆ, ಬಾದಾಮಿ, ಹುನಗುಂದ, ಬೀಳಗಿ, ಮುಧೋಳ, ಜಮಖಂಡಿ ಹಾಗೂ ತೇರದಾಳ ವಿಧಾನಸಭೆ ವ್ಯಾಪ್ತಿಯ ಆಯಾ ಬ್ಲಾಕ್ ಘಟಕಗಳ ಉಸ್ತುವಾರಿಯಲ್ಲಿ ಕಾರ್ಯಕ್ರಮ ನಡೆದಿದೆ. ಬ್ಲಾಕ್ ಘಟಕದ ನೇತೃತ್ವದಲ್ಲಿ ಗ್ರಾಮವಾರು ಕಾರ್ಯಕ್ರಮವನ್ನೂ ಕಾರ್ಯಕರ್ತರು ಏರ್ಪಡಿಸಿದ್ದರು. ಇನ್ನೂ ಕೆಲವೆಡೆ ಎಲ್ ಇಡಿ ಪರದೆ ಹಾಕಿ, ಅದರ ಮುಂದೆ ಬಾಳೆದಿಂಡು ಕಟ್ಟಿ, ರಂಗೋಲಿ ಹಾಕಿ ವಿಶಿಷ್ಟವಾಗಿ ಕಾರ್ಯಕ್ರಮ ಮಾಡಿದ್ದಾರೆ. ಇದು, ಜಿಲ್ಲೆಯ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತಂದಿರುವುದು ತೋರಿಸುತ್ತದೆ ಎಂದು ತಿಳಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಡಿಜಿಟಲ್ ಮೂಲಕ ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ ಪದಗ್ರಹಣ ಕಾರ್ಯಕ್ರಮವನ್ನು ಮಾಜಿ ಸಚಿವ ಎಚ್.ವೈ. ಮೇಟಿ, ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಜೂಮ್ ಆ್ಯಪ್ ಮೂಲಕ ಕಚೇರಿಯಲ್ಲಿ ವೀಕ್ಷಿಸಿ ನೂತನ ಕೆಪಿಸಿಸಿ ಅಧ್ಯಕ್ಷರಿಗೆ ಶುಭ ಹಾರೈಸಿದರು. ಮಹಾಮಾರಿ ಕೋವಿಡ್ ವೈರಸ್ ಇದ್ದ ಕಾರಣ ನೂತನ ತಂತ್ರಜ್ಞಾನದಲ್ಲಿ ಕಾರ್ಯಕ್ರಮ ರಾಜ್ಯದ ಜನತೆಗೆ ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದ್ದು ಪ್ರಪ್ರಥಮ ಎಂದು ಮಾಜಿ ಸಚಿವ ಎಚ್. ವೈ. ಮೇಟಿ ಹೇಳಿದರು.