ಕೋಲಾರ: ಜಿಲ್ಲೆಯ ವಿವಿಧ ಠಾಣೆಗಳಲ್ಲಿರುವ ಮಹಿಳಾ ಪೇದೆಗಳಿಗೆ ಆಧುನಿಕ ತರಬೇತಿ ನೀಡುವ ಮೂಲಕ ಕೋಲಾರಮ್ಮ ಪಡೆ ರೂಪಿಸಲಾಗುತ್ತಿದ್ದು, ಶೀಘ್ರವೇ ನಾಗರಿಕರ ಸೇವೆಗೆ ಸಜ್ಜುಗೊಳಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ.
ಜಿಲ್ಲೆಯ ವಿವಿಧ ಠಾಣೆಗಳಲ್ಲಿರುವ ಮಹಿಳಾ ಪೇದೆಗಳಿಗೆ ಈಗಾಗಲೇ ಮೂರು ತಂಡಗಳಲ್ಲಿ ತರಬೇತಿ ನೀಡಲಾಗಿದ್ದು, ಕೊನೆಯ ತಂಡದ ತರಬೇತಿ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆಯುತ್ತಿದೆ.
ನಿರ್ಗಮಿತ ಪೊಲೀಸ್ ವರಿಷ್ಠಾಧಿಕಾರಿ ಡಾ.ರೋಹಿಣಿ ಸಫೆಟ್ ಕಟೋಚ್ರ ಆಸಕ್ತಿಯ ಫಲವಾಗಿ ಈ ತರಬೇತಿ ಕಾರ್ಯಕ್ರಮ ರೂಪುಗೊಂಡಿದ್ದು, ಮಹಿಳಾ ಪೇದೆಗಳು ಕೇವಲ ಕಚೇರಿ ಕೆಲಸಗಳಿಗೆ ಸೀಮಿತವಾಗಬಾರದು ಎನ್ನುವುದೇ ಕೋಲಾರಮ್ಮ ಪಡೆಯ ಮುಖ್ಯ ಉದ್ದೇಶವಾಗಿದೆ. ಕಾನೂನು ಸುವ್ಯವಸ್ಥೆ ಸೇವೆಗೆ ಅಗತ್ಯವಾಗಿರುವ ಎಲ್ಲಾ ರೀತಿಯ ಆಧುನಿಕ ತರಬೇತಿಯನ್ನು ಮಹಿಳಾ ಪೇದೆಗಳಿಗೆ ಜಿಲ್ಲಾ ಸಶಸ್ತ್ರಪಡೆಯ ಅಧಿಕಾರಿ ಮತ್ತು ಸಿಬ್ಬಂದಿ ಮೂಲಕ ನೀಡಲಾಗುತ್ತಿದೆ.
ಕರಾಟೆ – ಬೈಕ್ ತರಬೇತಿ: ಮಾನಸಿಕ ಮತ್ತು ದೈಹಿಕವಾಗಿ ಸಜ್ಜುಗೊಳಿಸಲು ಪ್ರತಿನಿತ್ಯ ಬೆಳಗಿನ ಜಾವ ಕರಾಟೆ ತರಬೇತುದಾರ ಶ್ರೀನಿವಾಸ್ ನೇತೃತ್ವದಲ್ಲಿ ತರಬೇತಿ ನೀಡಲಾಗುತ್ತಿದೆ. ಆನಂತರ ದಿನದ ಎರಡು ಹಂತಗಳಲ್ಲಿ ಬೈಕ್ ಸವಾರಿ, ಕಾನೂನು ಸುವ್ಯವಸ್ಥೆ ಕಾಪಾಡುವ ಬಗ್ಗೆ ತಿಳಿಸಲಾಗುತ್ತದೆ. ಹೀಗೆ ತರಬೇತಿ ಪಡೆದ ಮಹಿಳಾ ಪೇದೆಗಳಿಗೆ ಇಲಾಖೆಯ ಕಡೆಯಿಂದಲೇ ವಾಹನ ಚಾಲನಾ ಪರವಾನಗಿ ಮಾಡಿಸಲಾಗುತ್ತಿದೆ. ಸಂಕಷ್ಟದ ಸನ್ನಿವೇಶ ನಿಭಾಯಿಸಲು ಕೋಲಾರಮ್ಮ ಪಡೆಯ ಶಿಬಿರಾರ್ಥಿಗಳಿಗೆ ಅತ್ಯಾಧುನಿಕ ಕಮಾಂಡೋ ತರಬೇತಿ ಪರಿಚಯಿಸಲಾಗುತ್ತಿದೆ.
ಎಲ್ಲರಿಗೂ ತರಬೇತಿ: ಕಾನೂನು ಸುವ್ಯವಸ್ಥೆ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿ, ಬಿಡಲಿ, ಪ್ರತಿಯೊಬ್ಬ ಮಹಿಳಾ ಪೇದೆಯು ಕೋಲಾರಮ್ಮ ಪಡೆ ತರಬೇತಿ ಕಡ್ಡಾಯಗೊಳಿ ಸಲಾಗಿದೆ. ಈಗಾಗಲೇ ನೂರಕ್ಕೂ ಹೆಚ್ಚು ಮಹಿಳಾ ಪೇದೆಗಳಿಗೆ ತರಬೇತಿ ನೀಡಲಾಗಿದೆ. ಮೂರನೇ ತಂಡದ ತರಬೇತಿ ಈ ವಾರದಲ್ಲಿ ಪೂರ್ಣಗೊಳ್ಳಲಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಕೋಲಾರಮ್ಮ ಪಡೆ ಇಲಾಖೆಯಲ್ಲಿ ಕಾನೂನು ಸುವ್ಯವಸ್ಥೆ ಸೇವೆಗೆ ಲೋಕಾರ್ಪಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
ಮಹಿಳೆಯರ ರಕ್ಷಣೆ: ತರಬೇತಿ ಪಡೆಯುತ್ತಿರುವ ಸಿಬ್ಬಂದಿಯ ಮೊದಲ ಆದ್ಯತೆ ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡುವುದೇ ಆಗಿದೆ. ಮಹಿಳಾ ಕಾಲೇಜು, ಸಾರ್ವಜನಿಕ ಬಸ್ ನಿಲ್ದಾಣಗಳಂತ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯನಿರ್ವಹಿಸಲಿರುವ ಈ ಪಡೆಯ ಸಿಬ್ಬಂದಿಯು ಎಂಥದ್ದೇ ಸನ್ನಿವೇಶವನ್ನು ಧೈರ್ಯವಾಗಿ ನಿಭಾಯಿಸುವಂತೆ ತರಬೇತಿ ನೀಡಲಾಗಿದೆ.
● ಕೆ.ಎಸ್.ಗಣೇಶ್