Advertisement

ನಾಟ್ಯ ವಿದ್ಯಾರ್ಥಿಗಳ ಜ್ಞಾನ ವಿಸ್ತರಿಸಿದ ತಾಳಮದ್ದಳೆ 

06:00 AM Jul 20, 2018 | |

ಸಿರಿಚಂದನ ಕನ್ನಡ ಯುವಬಳಗ (ರಿ.) ಕಾಸರಗೋಡು ಮನೆಮನೆಗಳಲ್ಲಿ ಕನ್ನಡ ಜಾಗೃತಿ ಮೂಡಿಸುವ ಮತ್ತು ಯಕ್ಷಗಾನ ಕಲೆಯ ಮಹತ್ವವನ್ನು ತಿಳಿಸುವ ಉದ್ದೇಶದಿಂದ ನಡೆಸಿಕೊಂಡು ಬರುತ್ತಿರುವ “ಯಕ್ಷ ನುಡಿಸರಣಿ ಮನೆಮನೆ ಅಭಿಯಾನ’ದಂಗವಾಗಿ ಇತ್ತೀಚೆಗೆ ನಾಟ್ಯ ವಿದ್ಯಾಲಯ (ರಿ.) ಕುಂಬಳೆ ಇದರ ಸಹಯೋಗದೊಂದಿಗೆ ಕಾಸರಗೋಡು ಸಮೀಪದ ನಾಯ್ಕಪು ಶ್ರೀ ಗಣೇಶ ಕಲಾಮಂದಿರದಲ್ಲಿ ಭರತನಾಟ್ಯ ವಿದ್ಯಾರ್ಥಿಗಳಿಗಾಗಿ ಸಿರಿಚಂದನ ಕನ್ನಡ ಯುವಬಳಗದ ಕಲಾವಿದರು ನಡೆಸಿಕೊಟ್ಟ ಯಕ್ಷಗಾನ ತಾಳಮದ್ದಳೆ ಪ್ರಾತ್ಯಕ್ಷಿಕೆಯು ನಾಟ್ಯವಿದ್ಯಾರ್ಥಿಗಳ ಪುರಾಣ ಜ್ಞಾನವನ್ನು ವಿಸ್ತರಿಸುವಲ್ಲಿ ಸಹಕಾರಿಯಾಯಿತು. 

Advertisement

ತಾಳಮದ್ದಳೆಯು ಫ‌ಲಾನುಭವಿಗಳಲ್ಲಿ ಪುಟಾಣಿ ಮಕ್ಕಳಿಂದ ಪದವಿ ತರಗತಿಯ ವಿದ್ಯಾರ್ಥಿಗಳೂ ಇದ್ದರು. ಈ ಹಿನ್ನಲೆಯಲ್ಲಿ ಗುರುವಿನ ಮಹತ್ವವನ್ನು ತಿಳಿಸುವ “ಪಂಚಜನ ಮೋಕ್ಷ’ ಪ್ರಸಂಗ‌ವನ್ನು ತಾಳಮದ್ದಳೆಗೆ ಆಯ್ಕೆ ಮಾಡಲಾಗಿತ್ತು. ಹಿರಿಯ ನಾಟ್ಯ ಗುರುಗಳಾದ ದಿವಾಣ ಶಿವಶಂಕರ ಭಟ್‌ ಅವರ ಮಾರ್ಗದರ್ಶನ ಹಾಗೂ ಸತೀಶ ಪುಣಿಚಿತ್ತಾಯ ಅವರ ನಿರ್ದೇಶನದಲ್ಲಿ ಜರಗಿದ ತಾಳಮದ್ದಳೆಯಲ್ಲಿ ಚೆಂಡೆಯಲ್ಲಿ ಸ್ಕಂದ ದಿವಾಣ, ಮದ್ದಳೆಯಲ್ಲಿ ಲವಕುಮಾರ್‌ ಐಲ ಸಹಕರಿಸಿದರು. 4ನೇ ತರಗತಿಯಲ್ಲಿ ಕಲಿಯುತ್ತಿರುವ ಬಾಲಪ್ರತಿಭೆ ಷಣ್ಮುಖ ಕೃಷ್ಣ ಸ್ತುತಿ ಹಾಡನ್ನು ಹಾಡುವುದರ ಮೂಲಕ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾದರು. ಇಂಜಿನಿಯರಿಂಗ್‌ ಆಗಿರುವ ಸಚಿನ್‌ ಅವರೂ ಭಾಗವತಿಕೆಯಲ್ಲಿ ಸಹಕರಿಸಿದರು. ಭಾಗವತರ ಕಂಠಸಿರಿಗೆ ಮದ್ದಳೆಗಾರರ ಪ್ರಾವೀಣ್ಯ ಶ್ರೋತೃಗಳನ್ನು ರಂಜಿಸಿತು.

 ಕೃಷ್ಣನಾಗಿ ಶಶಿಧರ ಕುದಿಂಗಿಲ, ಬಲರಾಮನಾಗಿ ನವೀನ ಕುಂಟಾರು, ಪಂಚಜನನಾಗಿ ದಿವಾಕರ ಬಲ್ಲಾಳ್‌ ಎ.ವಿ., ಯಮನಾಗಿ ಮನೋಜ್‌ ಎಡನೀರು, ಚಿತ್ರಗುಪ್ತನಾಗಿ ಕಾರ್ತಿಕ್‌ ಪಡ್ರೆ ಹಾಗೂ ಸಾಂದೀಪನಿ ಮಹರ್ಷಿಯಾಗಿ ಶ್ರದ್ಧಾ ಭಟ್‌ ನಾಯರ್ಪಳ್ಳ ಭಾಗವಹಿಸಿದರು. ಶ್ರೀಕೃಷ್ಣ -ಬಲರಾಮರಾಗಿ ಪಾತ್ರನಿರ್ವಹಿಸಿದ ಶಶಿಧರ ಕುದಿಂಗಿಲ ಹಾಗೂ ನವೀನ ಕುಂಟಾರು ಅವರು ಗುರುವಾದ ಸಾಂದೀಪನಿ ಮಹರ್ಷಿಗಳ ಶಿಷ್ಯರಾಗಿ ಮಾತನಾಡುವುದರೊಂದಿಗೆ ಶಿಷ್ಯನೋರ್ವನು ಹೇಗಿರಬೇಕೆಂಬ ಉತ್ತಮ ಸಂದೇಶ ನೀಡಿದರು.

ಪಂಚಜನನ ಪಾತ್ರವನ್ನು ನಿರ್ವಹಿಸಿದ ದಿವಾಕರ ಬಲ್ಲಾಳ್‌ ಅವರು ಖಳಪಾತ್ರವಾಗಿದ್ದುಕೊಂಡೇ ಕ್ರೌರ್ಯದ ನಿರ್ಮೂಲನೆಯ ಧ್ವನಿಯಾದರು. ಸಾಂದೀಪನಿಯ ಪಾತ್ರವು ಗುರುವಿನ ಮಹತ್ವ ಹಾಗೂ ಗುರುಶಿಷ್ಯ ಬಾಂಧವ್ಯವನ್ನು ತಿಳಿಸಿದ್ದಲ್ಲದೆ ಗುರುದಕ್ಷಿಣೆ ಕೇವಲ ಮೂರ್ತಸ್ವರೂಪದ್ದಾಗಿರದೆ ಅಂತರಂಗದ ಭಾವನೆಗೆ ಸಂಬಂಧಪಟ್ಟದ್ದಾಗಿರಬೇಕೆಂದೂ, ಗುರುವಿನ ಸಂಕಷ್ಟಕ್ಕೆ ಸ್ಪಂದಿಸುವ ಭಾವ ಶಿಷ್ಯನಲ್ಲೂ, ಶಿಷ್ಯನ ಕಷ್ಟಕ್ಕೆ ಸ್ಪಂದಿಸುವ ಮನೋಭಾವ ಗುರುವಿನಲ್ಲೂ ಇರಬೇಕೆಂದೂ ತಿಳಿಸಿತು.

ಒಟ್ಟಿನಲ್ಲಿ ತಾಳಮದ್ದಳೆ ಪ್ರಾತ್ಯಕ್ಷಿಕೆ ಶ್ರೋತೃಗಳಿಗೆ ಪುರಾಣದ ಕಥೆಯೊಂದನ್ನು ತಿಳಿಸುವುದರ ಜತೆಗೆ ಗುರು, ಶಿಷ್ಯ ಹಾಗೂ ಗುರುದಕ್ಷಿಣೆಯ ಕುರಿತು ಉತ್ತಮ ಸಂದೇಶ ಲಭಿಸುವಂತೆ ಮಾಡಿತು. ಕಾರ್ಯಕ್ರಮದ ಪ್ರಾರಂಭದಿಂದ ಕೊನೆಯವರೆಗೆ ಭಾಗವಹಿಸಿದ ಸಹೃದಯಿ ಶ್ರೋತೃಗಳ ಸಹಮತ ಸಹಕಾರ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು.

Advertisement

 ಶ್ರದ್ಧಾ ನಾಯರ್ಪಳ್ಳ 

Advertisement

Udayavani is now on Telegram. Click here to join our channel and stay updated with the latest news.

Next