ಒಂದು ಹಳ್ಳಿಯಲ್ಲಿ ರಂಗ ಮತ್ತು ರಾಜು ಎಂಬ ಇಬ್ಬರು ಭಿಕ್ಷಕರು ವಾಸವಾಗಿದ್ದರು. ರಂಗನಿಗೆ ಕಣ್ಣು ಕಾಣುತ್ತಿರಲಿಲ್ಲ. ರಾಜು ಕುಂಟನಾಗಿದ್ದ. ಇಬ್ಬರೂ ದೇವಾಲಯದ ಎದುರು ಕುಳಿತು ಭಿಕ್ಷೆ ಬೇಡುತ್ತಿದ್ದರು. ಒಮ್ಮೆ ದೇವಾಲಯಕ್ಕೆ ಒಬ್ಬ ಶ್ರೀಮಂತ ವ್ಯಾಪಾರಿ ದೇವರ ದರ್ಶನ ಪಡೆಯಲು ಬಂದನು.ದೇವಾಲಯದ ಮುಂಭಾಗದಲ್ಲಿ ಕುಳಿತ್ತಿದ್ದ ರಂಗ ಮತ್ತು ರಾಜುವನ್ನು ನೋಡಿ ಅವರ ಸ್ಥಿತಿಗೆ ಮರುಕ ಪಡುತ್ತಾನೆ. ತನ್ನ ಮನೆಯಲ್ಲಿ ಏರ್ಪಾಡಾಗಿದ್ದ ಔತಣಕೂಟಕ್ಕೆ ಆ ಶ್ರೀಮಂತ ಅವರಿಬ್ಬರನ್ನೂ ಆಹ್ವಾನಿಸಿದ.
ರಂಗ ಮತ್ತು ರಾಜುವಿಗೆ ಪೀಕಲಾಟಕ್ಕಿಟ್ಟುಕೊಂಡಿತು. ಶ್ರೀಮಂತನ ಮನೆಯ ಔತಣಕೂಟಕ್ಕೆ ಹೋದರೆ ಆತ ತಮ್ಮ ಬದುಕಿಗೆ ಸಹಾಯ ಮಾಡುವುದು ಖಚಿತ ಎಂದು ಅವರಿಬ್ಬರಿಗೆ ಗೊತ್ತಿತ್ತು. ಆದರೆ ಇಬ್ಬರೂ ಅಂಗವಿಕಲರಾಗಿದ್ದರಿಂದ ಅಲ್ಲಿಯವರೆಗೆ ಹೋಗುವುದು ಹೇಗೆ ಎಂಬುದು ಅವರಿಗೆ ಬಿಡಿಸಲಾಗದ ಒಗಟಾಯಿತು. ಶ್ರೀಮಂತ ಅವರಿಬ್ಬರ ಪ್ರಯಾಣದ ವ್ಯವಸ್ಥೆ ಕುರಿತು ಏನೂ ಹೇಳಿರಲಿಲ್ಲ. ಅಲ್ಲದೆ ಅವರಿಬ್ಬರೂ ಅನಾಥರಾಗಿದ್ದರಿಂದ ಅವರಿಗೆ ಸಹಾಯ ಮಾಡುವವರು ಯಾರೂ ಇರಲಿಲ್ಲ.
ಏನು ಮಾಡುವುದೆಂದು ಚಿಂತಿತರಾಗಿ ಕುಳಿತಿದ್ದಾಗ ರಾಜುವಿಗೆ ಒಂದು ಉಪಾಯ ಹೊಳೆಯಿತು. ರಾಜು ಕುಂಟ ನಿಜ ಆದರೆ ರಂಗ ನಡೆಯಬಲ್ಲವನಾಗಿದ್ದ. ರಂಗನಿಗೆ ಕಣ್ಣು ಕಾಣುತ್ತಿರಲಿಲ್ಲ ಆದರೆ ರಾಜು ನೋಡಬಲ್ಲವನಾಗಿದ್ದ. ಇಬ್ಬರೂ ಸೇರಿ ಒಬ್ಬರಿಗೊಬ್ಬರು ಸಹಾಯ ಮಾಡಿದರೆ ಆರಾಮಾಗಿ ಶ್ರೀಮಂತನ ಮನೆಗೆ ತಲುಪಬಹುದೆಂಬುದು ರಾಜುವಿನ ಉಪಾಯ. ರಂಗನೂ ಅವನು ಬುದ್ಧಿವಂತಿಕೆಗೆ ತಲೆದೂಗಿದ. ಇಷ್ಟು ಹೊತ್ತು ಸ್ವಾರ್ಥದಿಂದ ಯೋಚಿಸುತ್ತಿದ್ದುದಕ್ಕೆ ಇಬ್ಬರಿಗೂ ಪಶ್ಚಾತ್ತಾಪವಾಯಿತು.
ಔತಣಕೂಟದ ದಿನದಂದು ಇಬ್ಬರೂ ಶ್ರೀಮಂತನ ಮನೆ ತಲುಪಿದರು. ಶ್ರೀಮಂತ ಅವರಿಬ್ಬರನ್ನೂ ಆದರದಿಂದ ಬರಮಾಡಿಕೊಂಡು ತಾನು ಬೇಕೆಂದೇ ಪ್ರಯಾಣದ ವ್ಯವಸ್ಥೆ ಮಾಡಿರಲಿಲ್ಲ ಎಂದು ಹೇಳಿ ಅವರನ್ನು ಸತ್ಕರಿಸಿದನು. ಅಷ್ಟೇ ಅಲ್ಲ ಅವರಿಬ್ಬರಿಗೂ ತನ್ನ ಕಾರ್ಕಾನೆಯ್ಲಲಿಯೇ ನೌಕರಿ ನೀಡಿದನು. ಇನ್ನೆಂದೂ ರಂಗ ಮತ್ತು ರಾಜು ಭಿಕ್ಷೆ ಬೇಡಲಿಲ್ಲ. ಕಷ್ಟಪಟ್ಟು ದುಡಿದು ಜೀವನ ಸಾಗಿಸಿದರು.
– ವೇದಾವತಿ ಹೆಚ್. ಎಸ್.