ವಾಡಿ: ಕಳೆದ ವರ್ಷ ಹಿರಿಯ-ಕಿರಿಯರೆನ್ನದೆ ಇಡೀ ಗ್ರಾಮವೇ ತತ್ತರಿಸುವಂತೆ ಮಾಡಿದ್ದ ಮಲೇರಿಯಾ, ಈ ವರ್ಷ ಮತ್ತೆ ಕಾಲಿಟ್ಟಿದ್ದು, ಕೈಕಾಲುಗಳಲ್ಲಿ ಶಕ್ತಿ ಕಳೆದುಕೊಳ್ಳುತ್ತಿರುವ ಗ್ರಾಮಸ್ಥರು ಒಬ್ಬೊಬ್ಬರಾಗಿ ಹಾಸಿಗೆ ಹಿಡಿಯುತ್ತಿದ್ದಾರೆ.
ಕಲ್ಲು ಗಣಿ ಕೂಲಿ ಕಾರ್ಮಿಕರೇ ಹೆಚ್ಚಾಗಿರುವ ರಾವೂರ ಗ್ರಾಪಂ ವ್ಯಾಪ್ತಿಯ ಲಕ್ಷಿಪುರವಾಡಿ ಗ್ರಾಮದ ಚರಂಡಿಗಳು ಹರಿಯದೆ ತುಂಬಿ ನಿಂತಿದ್ದು, ಬೆಳ್ಳಿ ಚುಕ್ಕಿ ಸೊಳ್ಳೆಗಳ ಸಾಮ್ರಾಜ್ಯವಾಗಿ ಮಾರ್ಪಟ್ಟಿದೆ. ಚರಂಡಿಗಳು ಸೊಳ್ಳೆಗಳ ಗೂಡುಗಳಾಗಿ ಸಾಂಕ್ರಾಮಿಕ ರೋಗ ಪಸರಿಸುತ್ತಿವೆ.
ಸಾರ್ವಜನಿಕ ನಳಗಳು ಇದ್ದೂ ಇಲ್ಲದಂತಿದ್ದು, ಗ್ರಾಮದ ಏಕೈಕ ಕುಡಿಯುವ ನೀರಿನ ಬಾವಿಗೆ ಗಣಿ ಧೂಳು ಸೇರ್ಪಡೆಯಾಗಿ ನಾನಾ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಕಳೆದ ಹತ್ತಾರು ದಿನಗಳಿಂದ ಕೆಲವರು ಚಳಿ ಜ್ವರಗಳಿಂದ ಬಳಲುತ್ತಿದ್ದಾರೆ.
ಮನೆಗಳಲ್ಲಿ ಶೇಖರಣೆಯಾದ ನೀರು ಹಾಗೂ ಚರಂಡಿ ನೀರಿನಲ್ಲಿ ಮಲೇರಿಯಾ ಮತ್ತು ಡೆಂಘೀ ಹರಡುವ ಸೊಳ್ಳೆಗಳು ಗೂಡು ಕಟ್ಟಿಕೊಂಡು ಮೊಟ್ಟೆಗಳನ್ನಿಡುತ್ತಿವೆಯೇ ಎಂಬ ಭೀತಿ ಗ್ರಾಮಸ್ಥರಲ್ಲಿ ಮೂಡಿದೆ. ನಮಗೆ ಕುಡಿಯಲು ಶುದ್ಧ ನೀರಿನ ಸೌಲಭ್ಯವಿಲ್ಲ. ಊರಿನ ಬಚ್ಚಲು ನೀರೆಲ್ಲಾಹಳೆಯ ಬಾವಿ ಸೇರಿಕೊಳ್ಳುತ್ತದೆ.
ಅದೇ ನೀರನ್ನು ನಾವು ಕುಡಿಯುತ್ತೇವೆ. ಸೊಳ್ಳೆಗಳಂತೂ ಸಂಜೆ ಜೇನು ನೊಣಗಳಂತೆ ಮುಖದ ಸುತ್ತ ಗಿರಕಿಹೊಡೆಯುತ್ತವೆ. ಸೊಳ್ಳೆ ಕಡಿತದಿಂದ ತುರಿಕೆ ಬೇನೆಗೆ ತುತ್ತಾಗಿದ್ದೇವೆ. ಸೊಳ್ಳೆ ಬತ್ತಿ ಹಚ್ಚಿದರೂ ಸಾಯೋದಿಲ್ಲ. ಸಿಟ್ಟಿಗೆದ್ದು ಮತ್ತೆ ಮನುಷ್ಯರ ಮೇಲೆ ದಾಳಿ ಮಾಡುತ್ತವೆ.
ಒಟ್ಟಾರೆ ರಾತ್ರಿ ಮಲಗಲು ನಮಗೆ ಸಾಧ್ಯವಾಗುತ್ತಿಲ್ಲ. ನಮ್ಮ ಕಷ್ಟ ಯಾರೂ ಕೇಳುತ್ತಿಲ್ಲ ಎಂದು ಗ್ರಾಮದ ಹುಲಿಗೆಮ್ಮಾ ನಂದೆಳ್ಳಿ, ಭೀಮಬಾಯಿ ನಾಲವಾರ, ಲಕ್ಷಿ ಮೈಂದರ್ಗಿ, ಯಂಕಮ್ಮ, ದ್ಯಾವಮ್ಮಾ, ಹಣಮಂತಿ ಆರೋಪಿಸಿದ್ದಾರೆ.