Advertisement

ಇರಾಕ್‌ ದೇಶದ ಕತೆ: ಕೊಕ್ಕರೆಯಾದ ರಾಜ

12:30 AM Mar 10, 2019 | |

ಒಂದು ರಾಜ್ಯವನ್ನು ಆಳುತ್ತಿದ್ದ ರಾಜನು ಪ್ರಜೆಗಳನ್ನು ಸ್ವಂತ ಮಕ್ಕಳಂತೆ ಪ್ರೀತಿಸುತ್ತಿದ್ದ. ಅವನಿಗೆ ಬೆನ್ನಿನಲ್ಲಿ ಸಾವಿರ ಕಣ್ಣುಗಳಿವೆ, ಅದರ ಮೂಲಕ ಪ್ರಜೆಗಳಿಗೆ ಏನೇ ಕಷ್ಟ ಬಂದರೂ ನೋಡಿ ಪರಿಹಾರ ಮಾಡುತ್ತಾನೆ ಎಂದು ಜನ ಆಡಿಕೊಳ್ಳುತ್ತಿದ್ದರು. ಅವನು ತನ್ನ ಸೇವಕ ಸಲೀಂ ಎಂಬವನೊಂದಿಗೆ ರಾತ್ರೆ ಮಾರುವೇಷ ಧರಿಸಿ ಪ್ರಜೆಗಳಿರುವ ಕಡೆಗೆ ಹೋಗುತ್ತಿದ್ದ. ಅವರ ಮನೆಯ ಗೋಡೆಗೆ ಕಿವಿಯೊಡ್ಡಿ ನಿಲ್ಲುತ್ತಿದ್ದ. ತಮ್ಮ ತೊಂದರೆಗಳ ಕುರಿತು ಪ್ರಜೆಗಳು ಏನು ಹೇಳುತ್ತಾರೆಂದು ತಿಳಿದುಕೊಂಡು ಪರಿಹಾರವನ್ನು ಒದಗಿಸುತ್ತಿದ್ದ. ರಾಜನು ಮಾರುವೇಷದಲ್ಲಿ ಸಂಚರಿಸುವ ಗುಟ್ಟು ಪ್ರಜೆಗಳಿಗೆ ಗೊತ್ತಿರಲಿಲ್ಲ.

Advertisement

ಒಂದು ದಿನ ರಾತ್ರೆ ಎಂದಿನಂತೆ ರಾಜನು ಹೀಗೆ ಸಂಚರಿಸುವಾಗ ಒಂದೆಡೆ ಬಿಳಿಯ ಗಡ್ಡವಿರುವ ಒಬ್ಬ ವ್ಯಕ್ತಿಯನ್ನು ನೋಡಿದ. ಅಪರಿಚಿತನಾದ ಅವನನ್ನು ಮಾತನಾಡಿಸಿದ. ಅವನು, “”ನಾನು ನೆರೆಯ ದೇಶದವನು. ಜಾದೂ ಮಾಡಿ ಮನ ರಂಜಿಸುವುದು ನನ್ನ ವೃತ್ತಿ. ಯಾರಿಗಾದರೂ ಪ್ರಾಣಿಯಾಗಿ, ಪಕ್ಷಿಯಾಗಿ ಸಂಚರಿಸುವ ಬಯಕೆಯಿದ್ದರೆ ನನ್ನ ಬಳಿ ಒಂದು ವಿಶಿಷ್ಟವಾದ ನಶ್ಯವಿದೆ. ಅದನ್ನು  ಮೂಗಿಗೆ ಸೇದಿ, ಸೋರ್‌ಫಾಲ್‌ ಎಂದು ಹೇಳಿದರೆ ಸಾಕು, ಅವರು ಹಕ್ಕಿಯಾಗಿ ಹಾರಾಡುತ್ತ ಊರೂರು ಸುತ್ತಬಹುದು. ಮತ್ತೆ ಮನುಷ್ಯನಾಗಲು ಬಯಸಿದರೆ ಇದೇ ನಶ್ಯವನ್ನು ಮೂಗಿಗೆ ಸೇದಿ ಕ್ಯಾಲಸಾವರ್‌ ಎಂದು ಉಚ್ಚರಿಸಿದರೆ ಮಾನವ ರೂಪ ತಳೆಯಬಹುದು” ಎಂದು ಹೇಳಿದ.

ಈ ಮಾತು ಕೇಳಿ ರಾಜನಿಗೆ ತುಂಬ ಕುತೂಹಲ ಮೂಡಿತು. ಇಂತಹ ನಶ್ಯ ತನ್ನ ಬಳಿಯಿದ್ದರೆ ಮಾರುವೇಷ ತೊಟ್ಟು ಕಾಲ್ನಡಿಗೆಯಲ್ಲಿ ಸಂಚರಿಸುವ ಕಷ್ಟ ತಪ್ಪುತ್ತದೆ. ಬಗೆಬಗೆಯ ಹಕ್ಕಿಯಾಗಿ ಹಾರಾಡಿಕೊಂಡು ಹೆಚ್ಚು ಪ್ರಜೆಗಳ ಕಷ್ಟಗಳನ್ನು ತಿಳಿಯಬಹುದು ಎಂದು ಲೆಕ್ಕ ಹಾಕಿದ. ಅವನೊಂದಿಗೆ, “”ಈ ನಶ್ಯದ ಬೆಲೆ ಎಷ್ಟು?” ಎಂದು ಕೇಳಿದ. ಅವನು, “”ನನಗೆ ಅಂತಹ ದುರಾಸೆಯಿಲ್ಲ. ಕೇವಲ ಒಂದು ಚಿನ್ನದ ನಾಣ್ಯ ಕೊಟ್ಟರೆ ನಶ್ಯ ತುಂಬಿದ ಬಟ್ಟಲನ್ನು ಕೊಟ್ಟುಬಿಡುತ್ತೇನೆ” ಎಂದು ಹೇಳಿದ.

ರಾಜನು, “”ಒಂದು ನಾಣ್ಯವೇಕೆ, ನೂರು ನಾಣ್ಯಗಳನ್ನು ಕೊಡುತ್ತೇನೆ. ವಿಶೇಷವಾದ ನಶ್ಯವಿರುವ ಹತ್ತು ಬಟ್ಟಲುಗಳನ್ನು ನನಗೆ ಕೊಡು” ಎಂದು ಹೇಳಿ ಹಣದ ಥೈಲಿಯನ್ನು ಅವನ ಮುಂದಿರಿಸಿದ. ಬಿಳಿಯ ಗಡ್ಡದವನು ಅವನಿಗೆ ಆನೆಯ ದಂತದಿಂದ ತಯಾರಿಸಿದ ಬಟ್ಟಲುಗಳ ತುಂಬ ನಶ್ಯವನ್ನು ನೀಡಿದ. 

ರಾಜನು ನಶ್ಯ ತುಂಬಿದ ಬಟ್ಟಲುಗಳನ್ನು ಒಂದು ಹಾಳುಬಿದ್ದ ಮನೆಗೆ ತೆಗೆದುಕೊಂಡು ಹೋದ. ತನ್ನೊಂದಿಗಿರುವ ಸೇವಕನೊಂದಿಗೆ ತಾನು ಕೊಕ್ಕರೆಯಾಗಿ ಬದಲಾಯಿಸಿ ಹಲವು ಕಡೆಗಳಿಗೆ ಭೇಟಿ ನೀಡಿ ಬೆಳಗಾಗುವ ಹೊತ್ತಿಗೆ ಮರಳುವುದಾಗಿ ಹೇಳಿದ. ಬಳಿಕ ಬಟ್ಟಲಿನಲ್ಲಿದ್ದ ನಶ್ಯವನ್ನು ಸೇದಿ ಸೋರ್‌ಫಾಲ್‌ ಎಂದು ಉಚ್ಚರಿಸಿದ. ಮರುಕ್ಷಣವೇ ಅವನು ಕೊಕ್ಕರೆಯಾದ. ರೆಕ್ಕೆಗಳನ್ನು ಬಡಿಯುತ್ತ ಸಂತೋಷದಿಂದ ಆಕಾಶಕ್ಕೇರಿದ. ಮುಂದೆ ಹೋಗಿ ಬಡವರ ಮನೆಗಳಿರುವ ಪ್ರದೇಶದಲ್ಲಿ ಕೆಳಗಿಳಿದ. ಅವರಾಡುವ ಕುಂದುಕೊರತೆಗಳನ್ನು ಆಲಿಸಿದ. ನಾಳೆಯೇ ಇದಕ್ಕೆ ಪರಿಹಾರ ಒದಗಿಸಬೇಕೆಂದು ನಿರ್ಧರಿಸಿ ಬೆಳಕು ಹರಿಯುವಾಗ ಹಾಳುಬಿದ್ದ ಮನೆಗೆ ಮರಳಿದ.

Advertisement

ಆದರೆ ಮರಳಿ ಮನುಷ್ಯನಾಗಲು ರಾಜನು ನಶ್ಯವನ್ನು ಸೇದಿ ಬಿಳಿಯ ಗಡ್ಡದ zವನು ಹೇಳಿಕೊಟ್ಟಿದ್ದ ಕ್ಯಾಲಸಾವರ್‌ ಎಂದು ಎಷ್ಟು ಸಲ ಹೇಳಿದರೂ ಕೊಕ್ಕರೆಯ ರೂಪ ಬದಲಾಗಲಿಲ್ಲ. ರಾಜನಿಗೆ ನಿರಾಶೆಯಾಯಿತು. ಇದರಲ್ಲಿ ಏನೋ ಪ್ರಮಾದವಾಗಿದೆ ಎಂದರಿತು ತನಗೆ ನಶ್ಯ ಕೊಟ್ಟವನನ್ನು ಹುಡುಕಿಕೊಂಡು ಹೋದ. ಆದರೆ ಎಲ್ಲಿಯೂ ಅವನು ಕಣ್ಣಿಗೆ ಬೀಳಲಿಲ್ಲ. ಹಾಗೆಯೇ ದುಃಖದಲ್ಲಿ ಅವನು ಪ್ರಜೆಗಳು ತನ್ನ ಗುರುತು ಹಿಡಿಯುತ್ತಾರೋ ನೋಡಲು ಅವರ ಮುಂದೆ ಹಾರಿಕೊಂಡು ಹೋದ. ತಮ್ಮ ಹಿತೈಷಿಯಾದ ರಾಜನು ಇದ್ದಕ್ಕಿದ್ದಂತೆ ನಾಪತ್ತೆಯಾದ ಬಗೆಗೆ ಪ್ರಜೆಗಳು ಕಣ್ಣೀರಿಡುತ್ತಿದ್ದರೂ ಯಾರಿಗೂ ಈ ಕೊಕ್ಕರೆಯೇ ರಾಜನೆಂಬುದು ತಿಳಿಯಲೇ ಇಲ್ಲ.

ರಾಜನು ನಾಪತ್ತೆಯಾದ ಕೂಡಲೇ ಮನ್ಸೂರ್‌ ಎಂಬ ಅವನ ಮಂತ್ರಿಯು ಪ್ರಜೆಗಳನ್ನು ಸಭೆ ಕರೆದ. “”ಆಳುವ ದೊರೆ ಯಾವುದೋ ದುಷ್ಟ ಶಕ್ತಿಗೆ ಬಲಿಯಾಗಿದ್ದಾನೆ. ಇನ್ನು ಅವನು ಬರುವುದಿಲ್ಲ. ದೇಶ ಅರಾಜಕವಾದರೆ ಪ್ರಜೆಗಳ ಹಿತ ಯಾರು ಕಾಯಬೇಕು? ಆದಕಾರಣ ನಾನು ಸಿಂಹಾಸನವನ್ನೇರಿ ನಿಮ್ಮನ್ನು ಪ್ರೀತಿಯಿಂದ ನೋಡಿಕೊಳ್ಳುತ್ತೇನೆ. ಈ ವಿಶೇಷ ವ್ಯಕ್ತಿಯು ನನ್ನ ಮಂತ್ರಿಯಾಗಿ ಆಡಳಿತದಲ್ಲಿ ಬೇಕಾದ ಸಲಹೆಗಳನ್ನು ಕೊಡುತ್ತಾನೆ” ಎಂದು ಬಿಳಿಯ ಗಡ್ಡದವನನ್ನು ತೋರಿಸಿದ. ಸನಿಹದ ಮರದ ಕೊಂಬೆಯಲ್ಲಿ ಕುಳಿತುಕೊಂಡು ಕೊಕ್ಕರೆಯಾಗಿದ್ದ ರಾಜನು ಇದನ್ನು ನೋಡಿದ. ಮನ್ಸೂರನು ಈ ವ್ಯಕ್ತಿಯ ಮೂಲಕ ಸಂಚು ಮಾಡಿ ತನ್ನನ್ನು ಕೊಕ್ಕರೆಯಾಗಿ ಮಾಡಿದ್ದಾನೆಂಬುದು ಅವನಿಗೆ ಅರ್ಥವಾಯಿತು. ಇನ್ನು ತಾನು ಸಾಯುವವರೆಗೂ ಇದೇ ಜನ್ಮದಲ್ಲಿರದೆ ವಿಧಿಯಿಲ್ಲ ಎಂದು ಯೋಚಿಸಿ ದುಃಖೀಸುತ್ತ ಅವನು ಹೊರಟುಹೋದ

ಆಮೇಲೆ ರಾಜನು ಜಲಾಶಯಗಳ ಸಮೀಪದಲ್ಲಿ ಇದ್ದುಕೊಂಡು ಮೀನುಗಳನ್ನು ಹಿಡಿದು ತಿನ್ನುತ್ತ ಕಾಲಯಾಪನೆ ಮಾಡುತ್ತಿದ್ದ. ಒಂದು ದಿನ ಅವನು ಒಂದು ಮರಕುಟಿಗವನ್ನು ನೋಡಿದ. ಕೀಟಗಳಿಗಾಗಿ ಅದು ಕೊಕ್ಕಿನಿಂದ ಮರಕ್ಕೆ ರಂಧ್ರ ಕೊರೆಯುವಾಗಲೂ ಕಣ್ಣುಗಳಿಂದ ನೀರಿಳಿಸುತ್ತ ಇತ್ತು. ರಾಜನು ಅದನ್ನು ಮಾತನಾಡಿಸಿದ. “”ಯಾಕೆ ಅಳುತ್ತಿರುವೆ, ನಿನಗೆ ಏನು ದುಃಖ ಬಂದಿದೆ?”’ ಎಂದು ಕೇಳಿದ. ಮರಕುಟಿಗವು, “”ನಿಜವಾಗಿ ನಾನೊಂದು ಹಕ್ಕಿಯಲ್ಲ, ಒಬ್ಬ ರಾಜಕುಮಾರ. ನೆರೆದೇಶದ ರಾಜನ ಮಗಳು ತುಂಬ ಸುಂದರಿ. ಅವಳು ನನ್ನ ಸಹಪಾಠಿ. ನಾವಿಬ್ಬರೂ ಪ್ರೀತಿಸುತ್ತಿದ್ದೆವು, ಮದುವೆಯಾಗಬೇಕೆಂದು ನಿರ್ಧರಿಸಿದ್ದೆವು. ಆದರೆ ಅವಳ ತಂದೆ ಒಂದು ದಿನ ಇದ್ದಕ್ಕಿದ್ದಂತೆ ನಾಪತ್ತೆಯಾದರು. ಮನ್ಸೂರ್‌ ಎಂಬ ಮಂತ್ರಿಯು ಸಿಂಹಾಸನವನ್ನೇರಿದ. ಬಿಳಿಯ ಗಡ್ಡದವನೊಬ್ಬ ಅವನಿಗೆ ಮಂತ್ರಿಯಾದ. ರಾಜಕುಮಾರಿಯು ನನ್ನನ್ನು ಪ್ರೀತಿಸುತ್ತಿರುವ ವಿಷಯ ಕೆಟ್ಟವನಾದ ಈ ಮಂತ್ರಿಗೆ ತಿಳಿಯಿತು. ರಾಜಕುಮಾರಿಯ ಮೂಲಕ ನನಗೆ ಪ್ರೀತಿಯ ಉಡುಗೊರೆಯೆಂದು ನಶ್ಯವೊಂದನ್ನು ಕಳುಹಿಸಿದ. ನಾನು ಕಪಟ ತಿಳಿಯದೆ ಅದನ್ನು ಸೇದಿ ಮರಕುಟಿಗನಾದೆ. ಈಗ ಮಂತ್ರಿಯು ತನ್ನನ್ನು ವರಿಸಲು ರಾಜಕುಮಾರಿಗೆ ಕಾಟ ಕೊಡುತ್ತಿದ್ದಾನಂತೆ. ಇದೇ ದುಃಖದಲ್ಲಿ ನಾನು ಕಣ್ಣೀರಿಳಿಸುತ್ತಿದ್ದೇನೆ” ಎಂದು ಹೇಳಿತು.

    ರಾಜನು, “”ನಮ್ಮಿಬ್ಬರ ಕತೆಯೂ ಒಂದೇ ರೀತಿ ಇದೆ. ಅದೇ ಮುದುಕನಿಂದಾಗಿ ನಾನು ಕೊಕ್ಕರೆಯಾದೆ. ನೀನು ಪ್ರೀತಿಸಿದ ಹುಡುಗಿ ಬೇರೆ ಯಾರೂ ಅಲ್ಲ, ನನ್ನ ಮಗಳೇ. ನಾವು ಮೊದಲಿನಂತಾಗಬೇಕಿದ್ದರೆ ನೀನು ನಿನ್ನ ಪ್ರಿಯತಮೆಯಾದ ಅವಳನ್ನು ಆ ಬಿಳಿಯ ಗಡ್ಡದವನ ಬಳಿಗೆ ಕಳುಹಿಸಿ ಇದಕ್ಕೆ ಏನಾದರೂ ಪರಿಹಾರವಿದೆಯೇ ಎಂದು ತಿಳಿಯಲು ಪ್ರಯತ್ನಿಸಬೇಕು. ಅವಳಿಗೆ ಹಕ್ಕಿಗಳ ಭಾಷೆ ಗೊತ್ತಿದೆ” ಎಂದು ಹೇಳಿದ. ರಾಜಕುಮಾರನು ರಹಸ್ಯವಾಗಿ ರಾಜಕುಮಾರಿಯನ್ನು ಭೇಟಿಯಾಗಿ ಈ ವಿಷಯ ತಿಳಿಸಿದ.

ರಾಜಕುಮಾರಿಯು ಬಂಗಾರದ ಹೂಜಿಯಲ್ಲಿ ದ್ರಾಕ್ಷಾರಸ ತುಂಬಿಕೊಂಡು ಬಿಳಿಯ ಗಡ್ಡದವನ ಬಳಿಗೆ ಹೋಗಿ ಪ್ರೀತಿಯ ಮಾತುಗಳನ್ನಾಡಿ ಅದನ್ನು ಕುಡಿಯಲು ಕೊಟ್ಟಳು. “”ನನಗೆ ನಿನ್ನನ್ನು ಮದುವೆಯಾಗಲು ಆಸೆಯಿದೆ. ಆದರೆ ನನ್ನ ತಂದೆ ಮರಳಿ ಬಂದರೆ ಇದಕ್ಕೆ ಅಡ್ಡಿಯಾಗಬಹುದೆಂಬ ಭಯವಾಗಿದೆ” ಎಂದು ಹೇಳಿದಳು. ಅವನು ದ್ರಾಕ್ಷಾರಸ ಕುಡಿದ ಮತ್ತಿನಿಂದ ಗಹಗಹಿಸಿ ನಗುತ್ತ, “”ನಿನ್ನ ತಂದೆ ಇನ್ನೆಲ್ಲಿ ಬರುತ್ತಾನೆ? ಅವನು ಮರಳಿ ಮನುಷ್ಯನಾಗಲು ನಶ್ಯವನ್ನು ಸೇದಿ ಕ್ಯಾಲಸಾದಿಯೇರ್‌ ಎಂದು ಉಚ್ಚರಿಸಿದರೆ ಮಾತ್ರ ಸಾಧ್ಯವಾಗುತ್ತಿತ್ತು. ಬೇಕಂತಲೇ ನಾನು ಆ ಮಂತ್ರವನ್ನು ಬದಲಾಯಿಸಿ ಕೊಟ್ಟಿದ್ದೇನೆ. ನಿರ್ಭಯವಾಗಿ ನನ್ನ ಕೈಹಿಡಿ. ಇಲ್ಲವಾದರೆ ನೀನು ಕೂಡ ಹಕ್ಕಿಯಾಗಬೇಕಾದೀತು” ಎಂದು ಹೇಳಿದ.

ಈ ವಿಷಯವನ್ನು ರಾಜಕುಮಾರಿ ಮರಕುಟಿಗನಾಗಿದ್ದ ರಾಜ ಕುಮಾರನಿಗೆ ಹೇಳಿದಳು. ರಾಜನು ಅವನನ್ನು ಜೊತೆಗೂಡಿಕೊಂಡು ಹಾಳುಬಿದ್ದ ಮನೆಗೆ ಬಂದ. ಅಲ್ಲಿ ಭದ್ರವಾಗಿಟ್ಟಿದ್ದ ನಶ್ಯವನ್ನು ಸೇದಿ ಇಬ್ಬರೂ “ಕ್ಯಾಲಸಾದಿಯೇರ್‌’ ಎಂದು ಉಚ್ಚರಿಸಿದ ಕೂಡಲೇ ಮರಳಿ ಮನುಷ್ಯರಾದರು. ಅರಮನೆಗೆ ಬಂದು ದ್ರೋಹಿಗಳಾದ ಮನ್ಸೂರ್‌ ಮತ್ತು ಬಿಳಿಯ ಗಡ್ಡದವನನ್ನು ಕಠಿನವಾಗಿ ದಂಡಿಸಿದರು. ರಾಜನ ಮಗಳ ಮದುವೆ ರಾಜಕುಮಾರನೊಂದಿಗೆ ನೆರವೇರಿತು. ರಾಜನು ಮತ್ತೆ ಸಿಂಹಾಸನವೇರಿ ಸುಖವಾಗಿದ್ದ. 

ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next