Advertisement

ಜೈಶ್‌ ಉಗ್ರರ ಸಂಹಾರ ಸತ್ಯ

12:30 AM Mar 03, 2019 | Team Udayavani |

ಜೈಶ್‌ ತರಬೇತಿ ಕೇಂದ್ರದ ಮೇಲೆಯೇ ಭಾರತ ದಾಳಿ  
ಹಾನಿಯನ್ನು ಒಪ್ಪಿದ ಉಗ್ರ ಅಜರ್‌ ಸೋದರ
ಆಡಿಯೋ ಟೇಪ್‌ನಿಂದ ಬಹಿರಂಗವಾಯಿತು ಸತ್ಯ  
ಫ್ರಾನ್ಸ್‌  ಪತ್ರಕರ್ತೆಯಿಂದಲೂ ತನಿಖಾ ವರದಿ

Advertisement

ಹೊಸದಿಲ್ಲಿ / ಇಸ್ಲಾಮಾಬಾದ್‌: ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ವರ್ತಿಸುತ್ತಿದ್ದ ಪಾಕಿಸ್ಥಾನಕ್ಕೆ ಮತ್ತೆ ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಅವಮಾನವಾಗಿದೆ. ಪಾಕ್‌ನ ಬಾಲಾಕೋಟ್‌ನಲ್ಲಿನ ಜೈಶ್‌-ಎ- ಮೊಹಮ್ಮದ್‌ನ ತರಬೇತಿ ಶಿಬಿರದ ಮೇಲೆ ದಾಳಿ ನಡೆಸಿದ್ದು ಸತ್ಯ, ನಮ್ಮ ಬೃಹತ್‌ ಸಂಖ್ಯೆಯ ಫೈಟರ್ಸ್‌ (ಉಗ್ರರು) ಸತ್ತಿದ್ದಾರೆ ಎಂದು ಜೈಶ್‌ ಮುಖ್ಯಸ್ಥ ಮಸೂದ್‌ ಅಜರ್‌ನ ಕಿರಿಯ ಸಹೋದರನೇ ಒಪ್ಪಿಕೊಂಡಿದ್ದಾನೆ. ಇದುವರೆಗೆ ನಮ್ಮಲ್ಲಿ ಭಯೋತ್ಪಾದ ಕರೇ ಇಲ್ಲ, ಬಾಲಾಕೋಟ್‌ನಲ್ಲಿ ಉಗ್ರರ ತರಬೇತಿ ಶಿಬಿರವೂ ನಡೆಯುತ್ತಿರಲಿಲ್ಲ ಎಂದು ಮೊಂಡು ವಾದ ಮಾಡಿಕೊಂಡು ಬರುತ್ತಿದ್ದ ಪಾಕ್‌ಗೆ ಅಜರ್‌ ಸಹೋದರ ಮೌಲಾನಾ ಅಮ್ಮಾರ್‌ನ “ತಪ್ಪೊಪ್ಪಿಗೆ’ ಹೇಳಿಕೆಯಿಂದಾಗಿ ಭಾರೀ ಮುಖಭಂಗವಾಗಿದೆ.

ಬಾಲಾಕೋಟ್‌ನಲ್ಲಿರುವ ನಮ್ಮ ಶಿಬಿರದ ಮೇಲೆ ಭಾರತದ ವಾಯು ಪಡೆ ದಾಳಿ ನಡೆಸಿದೆ ಎಂದು ಮೌಲಾನಾ
ದೂರವಾಣಿಯಲ್ಲಿ ಹೇಳುತ್ತಿರುವ ಆಡಿಯೋ ಕ್ಲಿಪ್‌ವೊಂದು ಬಹಿರಂಗವಾಗಿದೆ. “ಭಾರತದ ವಾಯುಪಡೆಯು ಐಎಸ್‌ಐ ಅಥವಾ ಪಾಕ್‌ ಸೇನೆ ಮೇಲೆ ದಾಳಿ ನಡೆಸಿಲ್ಲ, ಬದಲಾಗಿ ಬಾಲಾ ಕೋಟ್‌ನಲ್ಲಿರುವ ನಮ್ಮ ಮದ್ರಸಾದ ಮೇಲೆಯೇ ದಾಳಿ ನಡೆಸಿದೆ. ವಿದ್ಯಾರ್ಥಿಗಳಿಗೆ ಜೆಹಾದ್‌ ಬಗ್ಗೆ ತರಬೇತಿ ನೀಡುವ ಕೇಂದ್ರದ ಮೇಲೆಯೇ ಬಾಂಬ್‌ ಹಾಕಲಾಗಿದೆ’ ಎಂಬ ಹೇಳಿಕೆ ಆಡಿಯೋ ಕ್ಲಿಪ್‌ನಲ್ಲಿದೆ. 

ಈ ಸಂದರ್ಭ ಭಾರೀ ಪ್ರಮಾಣದಲ್ಲಿ ನಮ್ಮ  ಹೋರಾಟ ಗಾರರು (ಉಗ್ರರು) ಸತ್ತಿದ್ದಾರೆ ಎಂದು ಹೇಳುತ್ತಿರುವುದೂ ಈ ಆಡಿಯೋ ಕ್ಲಿಪ್‌ನಿಂದ ಬಹಿರಂಗವಾಗಿದೆ. 14.32 ನಿಮಿಷಗಳ ಆಡಿಯೋ ಕ್ಲಿಪ್‌ನಲ್ಲಿ ಈ ವಿಷಯಗಳಿವೆ. ಇದನ್ನು ಪತ್ರಕರ್ತರೊಬ್ಬರು ಭಾಷಾಂತರ ಮಾಡಿ 1.51 ನಿಮಿಷಕ್ಕೆ ಇಳಿಸಿ, ಟ್ವೀಟ್‌ ಮಾಡಿದ್ದಾರೆ. ಇದರಿಂದಾಗಿ ಬಾಲಾಕೋಟ್‌ನ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿ ಭಾರೀ ಸಂಖ್ಯೆಯಲ್ಲಿ ಉಗ್ರರನ್ನು ಹತ್ಯೆ ಮಾಡಿದ್ದೇವೆ ಎಂಬ ಭಾರತದ ವಾದಕ್ಕೆ ಪುಷ್ಟಿ ಸಿಕ್ಕಂತಾಗಿದೆ. ಇದೇ ವೇಳೆ, ವಿಂಗ್‌ ಕಮಾಂಡರ್‌ ಅಭಿನಂದನ್‌ರನ್ನು ಬಿಡುಗಡೆ ಮಾಡಿರುವ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ವಿರುದ್ಧವೂ ಆತ ಕಿಡಿಕಾರಿರುವುದು ಆಡಿಯೋದಲ್ಲಿದೆ. ಅಲ್ಲದೆ ನಾವು ಯಾವುದೇ ಕಾರಣಕ್ಕೂ ಇಮ್ರಾನ್‌ ಖಾನ್‌ ಅವರನ್ನು ಕ್ಷಮಿಸುವುದಿಲ್ಲ ಎಂದೂ ಹೇಳಿದ್ದಾನೆ.

ಫ್ರಾನ್ಸ್‌ ಪತ್ರಕರ್ತೆಯ ತನಿಖಾ ವರದಿ
ಬಾಲಾಕೋಟ್‌ನ ದಾಳಿ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಗೊಂದಲಕರ ವರದಿಗಳು ಪ್ರಕಟವಾಗಿರುವ ಮಧ್ಯೆಯೇ ಫ್ರಾನ್ಸ್‌ನ ಪತ್ರಕರ್ತೆ ಫ್ರಾನ್ಸೆಸ್ಕಾ ಮರಿನೋ ಮಾಡಿರುವ ತನಿಖಾ ವರದಿಯ ಪ್ರಕಾರ, ಸುಮಾರು 35-40 ಜನರು ಬಾಲಾಕೋಟ್‌ನ ಜಾಬಾ ಕ್ಯಾಂಪ್‌ನಲ್ಲಿ ಸಾವನ್ನಪ್ಪಿದ್ದಾರೆ. ಒಂದೇ ಕೋಣೆಯಲ್ಲಿ ಮಲಗಿದ್ದ 12 ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇಲ್ಲಿಂದ ಆ್ಯಂಬುಲೆನ್ಸ್‌ನಲ್ಲಿ ಶವಗಳನ್ನು ಸಾಗಿಸಲಾಗಿತ್ತು ಎಂದೂ ತಿಳಿದುಬಂದಿದೆ.

Advertisement

ಎಲ್ಲವೂ ಗುಪ್ತ್ ಗುಪ್ತ್
ಸ್ಥಳೀಯರು ನೀಡಿದ ಮಾಹಿತಿಯನ್ನು ಆಧರಿಸಿ ಈ ವರದಿ ಮಾಡಲಾಗಿದೆ. ಆದರೆ ಮಾಧ್ಯಮಗಳಿಗೆ ವಿವರ ನೀಡಿದರೆ ಪಾಕ್‌ ಸರಕಾರ ಪ್ರತೀಕಾರ ತೀರಿಸಿಕೊಳ್ಳುವ ಭೀತಿಯಿಂದಾಗಿ ನಾಗರಿಕರು ತಮ್ಮ ಗುರುತನ್ನು ಬಹಿರಂಗಗೊಳಿಸದಂತೆ ಸೂಚಿಸಿದ್ದಾರೆ. ಭಾರತ ದಾಳಿ ನಡೆಸಿದ ಕೆಲವೇ ಸಮಯದಲ್ಲಿ ಸ್ಥಳೀಯ ಅಧಿಕಾರಿಗಳು ಅಲ್ಲಿಗೆ ಭೇಟಿ ನೀಡಿದ್ದರು. ತತ್‌ಕ್ಷಣವೇ ಸೇನೆ ಈ ಪ್ರದೇಶವನ್ನು ತನ್ನ ವಶಕ್ಕೆ ಪಡೆದುಕೊಂಡು, ಸ್ಥಳೀಯ ಪೊಲೀಸರಿಗೂ ಇಲ್ಲಿಗೆ ಭೇಟಿ ನೀಡಲು ಅವಕಾಶ ನೀಡಿಲ್ಲ ಎನ್ನಲಾಗಿದೆ.

ಪಾಕಿಸ್ಥಾನದ ಗುಪ್ತಚರ ದಳದ ಮಾಜಿ ಅಧಿಕಾರಿ ಕರ್ನಲ್‌ ಸಲೀಂ ಬಾಂಬ್‌ ದಾಳಿಯಿಂದಾಗಿ ಸಾವನ್ನಪ್ಪಿದ್ದಾನೆ. ಕರ್ನಲ್‌ ಝರಾರ್‌ ಝಾಕ್ರಿ ತೀವ್ರವಾಗಿ ಗಾಯಗೊಂಡಿದ್ದಾನೆ. ಪೇಶಾವರ ಮೂಲದ ಜೈಶ್‌-ಎ-ಮೊಹಮ್ಮದ್‌ ಉಗ್ರ ಮುಫ್ತಿ ಮೊಯೀನ್‌ ಮತ್ತು ಸ್ಫೋಟಕಗಳ ಬಗ್ಗೆ ಪರಿಣತಿ ಹೊಂದಿರುವ ಉಸ್ಮಾನ್‌ ಘನಿ ಸಾವನ್ನಪ್ಪಿರುವುದಾಗಿ  ಹೇಳಲಾಗಿದೆ. ಒಂದೇ ಕೋಣೆಯಲ್ಲಿ ಮಲಗಿದ್ದ 12 ಜನರೂ ಇಲ್ಲಿ ಉಗ್ರ ತರಬೇತಿಗಾಗಿ ಆಗಮಿಸಿದ್ದರು. ಇವರ ವಾಸಕ್ಕಾಗಿ ಮಣ್ಣಿನಿಂದ ಒಂದು ತಾತ್ಕಾಲಿಕ ಕಟ್ಟಡವನ್ನು ನಿರ್ಮಿಸಲಾಗಿತ್ತು. ಬಾಂಬ್‌ ದಾಳಿಯಿಂದಾಗಿ ಈ ಕಟ್ಟಡ ಸಂಪೂರ್ಣ ನಾಶವಾಗಿದೆ.

ತತ್‌ಕ್ಷಣ ರಿಪೇರಿ!
ಭಾರತದ ರಕ್ಷಣಾ ಅಧಿಕಾರಿಗಳು ಹೇಳುವಂತೆ ಸಿಂಥೆಟಿಕ್‌ ಅಪರ್ಚರ್‌ ರಾಡಾರ್‌(ಎಸ್‌ಎಆರ್‌)ನಿಂದ ಸ್ಪಷ್ಟ ಚಿತ್ರಗಳು ಲಭ್ಯವಾಗಿವೆ. ಈ ಚಿತ್ರಗಳನ್ನು ಭಾರತ ಸರಕಾರಕ್ಕೆ ನೀಡಲಾಗಿದೆ. ಇದನ್ನು ಬಿಡುಗಡೆ ಮಾಡುವುದು ಅಥವಾ ಮಾಡದೇ ಇರುವುದು ಸರಕಾರಕ್ಕೆ ಬಿಟ್ಟ ವಿಚಾರ. 

ಅಭಿ ಭೇಟಿ ಮಾಡಿದ ರಕ್ಷಣಾ ಸಚಿವೆ
ದಿಲ್ಲಿಯ ಸೇನಾ ಆಸ್ಪತ್ರೆಯಲ್ಲಿರುವ ಅಭಿನಂದನ್‌ ಅವರನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶನಿವಾರ ಭೇಟಿಯಾಗಿ ಕುಶಲೋಪರಿ ವಿಚಾರಿಸಿದರು. ಇದೇ ವೇಳೆ ಅಭಿನಂದನ್‌ ಅವರ ಧೈರ್ಯವನ್ನು ಶ್ಲಾ ಸಿದರು.

ತಾಯಿ-ಮಕ್ಕಳ ಬಲಿ ಪಡೆದ ಪಾಕಿಸ್ಥಾನ
“ಹೇಳುವುದು ಒಂದು, ಮಾಡುವುದು ಮತ್ತೂಂದು’ ಎಂಬಂತೆ ಪಾಕಿಸ್ಥಾನವು ಶಾಂತಿ ಮಂತ್ರ ಪಠಿಸುತ್ತಲೇ, ಮೂರು ಅಮಾಯಕ ಜೀವಗಳನ್ನು ಬಲಿಪಡೆಯುವ ಮೂಲಕ ತನ್ನ ರಾಕ್ಷಸೀ ಪ್ರವೃತ್ತಿಯನ್ನು ಮತ್ತೂಮ್ಮೆ ಜಗಜ್ಜಾಹೀರು ಮಾಡಿದೆ. ಶುಕ್ರವಾರ ರಾತ್ರಿ ಅಟ್ಟಾರಿ-ವಾಘಾ ಗಡಿಯಲ್ಲಿ ಭಾರತದ ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರನ್ನು ಹಸ್ತಾಂತರ ಮಾಡಿದ ಸ್ವಲ್ಪ ಹೊತ್ತಲ್ಲೇ ಪಾಕಿಸ್ಥಾನದ ಸೇನೆಯು ಜಮ್ಮು-ಕಾಶ್ಮೀರದ ಕೃಷ್ಣಘಾಟಿ ವಲಯದ ಗಡಿ ನಿಯಂತ್ರಣ ರೇಖೆಯಲ್ಲಿ ಭಾರೀ ಪ್ರಮಾಣದ ಶೆಲ್‌ ದಾಳಿ ನಡೆಸಿದೆ. ಪರಿಣಾಮ, 24 ವರ್ಷದ ರುಬಾನಾ ಕೌಸರ್‌ ಎಂಬ ಮಹಿಳೆ ಮತ್ತು ಅವರ 5 ವರ್ಷದ ಪುತ್ರ ಫ‌ಝಾನ್‌ ಹಾಗೂ 9 ತಿಂಗಳ ಪುತ್ರಿ ಶಬ್ನಂ ಅಸುನೀಗಿದ್ದಾರೆ. ರಾತ್ರಿ 12.30ರ ವೇಳೆಗೆ ಈ ಅಪ್ರಚೋದಿತ ಶೆಲ್‌ ದಾಳಿ ನಡೆದಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಅಭಿನಂದನ್‌ ಹಸ್ತಾಂತರವನ್ನು ನಾವು ಸ್ವಾಗತಿಸುತ್ತೇವೆ. ಈ ಸಕಾರಾತ್ಮಕ ಬೆಳವಣಿಗೆಯನ್ನು ಭಾರತ ಮತ್ತು ಪಾಕ್‌ ಹಾಗೆಯೇ ಉಳಿಸಿಕೊಂಡು, ರಚನಾತ್ಮಕ ಮಾತುಕತೆಗೆ ನಾಂದಿ ಹಾಡಬೇಕು.
ಆ್ಯಂಟೋನಿಯೋ ಗುಟೆರಸ್‌, ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ

ಉಗ್ರವಾದವನ್ನು ಬೆಂಬಲಿಸುವ ಮೂಲಕ ಪಾಕಿಸ್ಥಾನವು ಮಾನವತೆಯನ್ನು ಮಾತ್ರವಲ್ಲದೆ, ತನ್ನನ್ನು ತಾನೇ ನಾಶಮಾಡಿಕೊಳ್ಳುತ್ತಿದೆ. ಭಯೋತ್ಪಾದನೆ ನಿರ್ಮೂಲನೆ ನಿಟ್ಟಿನಲ್ಲಿ ಜಾಗತಿಕ ಒಮ್ಮತ ಮೂಡಬೇಕು.
 ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ

Advertisement

Udayavani is now on Telegram. Click here to join our channel and stay updated with the latest news.

Next