Advertisement

ಮಹಿಳೆಯನ್ನು ಕೊಂದು ಕತ್ತರಿಸಿ ವಿವಿಧೆಡೆ ಎಸೆದು ಹೋದ ಹಂತಕ!

02:42 AM May 13, 2019 | sudhir |

ಮಂಗಳೂರು: ಮಹಿಳೆಯೊಬ್ಬರನ್ನು ಬರ್ಬರವಾಗಿ ಕೊಲೆಗೈದು ತಲೆ, ದೇಹದ ಭಾಗಗಳನ್ನು ವಿವಿಧೆಡೆ ಎಸೆದಿರುವ ಭೀಭತ್ಸ ಘಟನೆ ಮಂಗಳೂರಿನಲ್ಲಿ ಶನಿವಾರ ರಾತ್ರಿ ನಡೆದಿದೆ. ರವಿವಾರ ರಾತ್ರಿ ವರೆಗೂ ಆರೋಪಿಯ ಪತ್ತೆಯಾಗಿಲ್ಲ ಮತ್ತು ಕೃತ್ಯಕ್ಕೆ ಕಾರಣವೂ ತಿಳಿದುಬಂದಿಲ್ಲ.

Advertisement

ಮೂಲತಃ ಪೊಳಲಿ ಮೊಗರಿನವರಾಗಿದ್ದು, ಪ್ರಸ್ತುತ ನಗರದ ಅಮರ್‌ ಆಳ್ವ ರಸ್ತೆ ನಿವಾಸಿ ಯಾಗಿದ್ದ ಶ್ರೀಮತಿ ಶೆಟ್ಟಿ (35) ಕೊಲೆಯಾದವರು. ಅವರು ಅತ್ತಾವರದಲ್ಲಿ ಎಲೆಕ್ಟ್ರಿಕಲ್‌ ಉತ್ಪನ್ನಗಳ ದುರಸ್ತಿ ಅಂಗಡಿಯ ಮಾಲಕಿಯಾಗಿದ್ದು, ಕೊಲೆಗೆ ಕಾರಣ ತಿಳಿದುಬಂದಿಲ್ಲ. ಮಂಗಳೂರಿನಲ್ಲಿ ಇಂಥ ಅಮಾನುಷ ಕೃತ್ಯ ಇದೇ ಪ್ರಥಮವಾಗಿದೆ.

ಕದ್ರಿ ಪಾರ್ಕ್‌ ಬಳಿಯ ಅಂಗಡಿ ಮಾಲಕ ರವಿವಾರ ಬಾಗಿಲು ತೆರೆಯಲು ಬಂದಾಗ ಅಂಗಡಿ ಎದುರಲ್ಲಿ ಕಟ್ಟಿರುವ ಸ್ಥಿತಿಯಲ್ಲಿದ್ದ ಗೋಣಿ ಚೀಲವೊಂದು ಪತ್ತೆಯಾಯಿತು. ತೆರೆದು ನೋಡಿದಾಗ ಮಹಿಳೆಯ ತಲೆ ಪತ್ತೆಯಾಗಿದ್ದು, ಕೂಡಲೇ ಕದ್ರಿ ಪೊಲೀಸರಿಗೆ ತಿಳಿಸಿದರು.

ಇನ್ನೊಂದೆಡೆ ನಂದಿಗುಡ್ಡೆ ಬಳಿ ತಲೆಯ ಅರ್ಧಭಾಗ ಪತ್ತೆಯಾಗಿತ್ತು. ಪೊಲೀಸರು ಅಲ್ಲಿಗೆ ತೆರಳಿ ಪರಿಶೀಲಿಸಿದಾಗ ಅದು ಕದ್ರಿ ಪಾರ್ಕ್‌ ಬಳಿಯಲ್ಲಿ ಪತ್ತೆಯಾದ ಮಹಿಳೆಯ ರುಂಡದ ಭಾಗ ಎಂಬುದು ತಿಳಿಯಿತು.

ಕೈ, ಕಾಲು ಇನ್ನೂ ಪತ್ತೆಯಾಗಿಲ್ಲ
ಕೊಲೆಯ ಭೀಕರತೆ ಯಾವ ರೀತಿ ಇತ್ತು ಎಂದರೆ ದೇಹದ ಭಾಗಗಳನ್ನು ತುಂಡು ತುಂಡಾಗಿ ಕೊಚ್ಚಲಾಗಿತ್ತು. ಎದೆಯ ಭಾಗದ ಚರ್ಮವನ್ನು ಸುಲಿಯಲಾಗಿತ್ತು. ದೇಹವನ್ನು ಕತ್ತರಿಸಿ ಗೋಣಿ ಚೀಲದಲ್ಲಿ ತುಂಬಿಸಲಾಗಿತ್ತು.

Advertisement

ತಲೆಯನ್ನು ಹೆಲ್ಮೆಟ್‌ನೊಳಗೆ ತುರುಕಿಸಿ, ಗೋಣಿಚೀಲದಲ್ಲಿ ತುಂಬಿಸಿಡಲಾಗಿತ್ತು. ಕೈಕಾಲು ಹೊರತಾದ ಭಾಗವನ್ನು ನಂದಿಗುಡ್ಡೆ ಬಳಿ ಎಸೆಯಲಾಗಿತ್ತು. ಕಾಲುಗಳು ಹಾಗೂ ಕೈಗಳು ಇನ್ನೂ ಪತ್ತೆಯಾಗಿಲ್ಲ.

ಪ್ರತಿನಿತ್ಯ 9 ಗಂಟೆಗೆ ಅಂಗಡಿಗೆ ಹೋಗುತ್ತಿದ್ದರು. ಮಧ್ಯಾಹ್ನದ ಊಟವನ್ನು ಮನೆಯಿಂದಲೇ ಒಯ್ಯುತ್ತಿದ್ದರು. ಶನಿವಾರ ಅಂಗಡಿ ಸಿಬಂದಿ ಶ್ರೀಮತಿ ಶೆಟ್ಟಿಗೆ ಕರೆ ಮಾಡಿದಾಗ ಕರೆ ಸ್ವೀಕರಿಸಲಿಲ್ಲ. ಮನೆಯಲ್ಲಿ ವಿಚಾರಿಸಿದರೂ ಮಾಹಿತಿ ಸಿಕ್ಕಿಲ್ಲ. ಇದರಿಂದ ಎಲ್ಲರಿಗೂ ಆತಂಕ ಎದುರಾಗಿತ್ತು. ರವಿವಾರ ಕೊಲೆಯಾಗಿ ಪತ್ತೆಯಾಗಿದ್ದಾರೆ.

ಕದ್ರಿ ಪೊಲೀಸರು ಹಾಗೂ ಅಪರಾಧ ಪತ್ತೆದಳದ ಸಿಬಂದಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಮಹಜರು ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಹಂತಕರ ಶೀಘ್ರ ಪತ್ತೆಗೆ ಸಚಿವರ ಸೂಚನೆ
ಮಹಿಳೆಯ ಕೊಲೆ ಕೃತ್ಯವನ್ನು ತೀವ್ರವಾಗಿ ಖಂಡಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಅವರು ಆರೋಪಿಗಳನ್ನು ಶೀಘ್ರ ಪತ್ತೆಹಚ್ಚಿ ಬಂಧಿಸುವಂತೆ ನಗರ ಪೊಲೀಸ್‌ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

ಯಾರು ಈ ಮಹಿಳೆ
ಸೋದರತ್ತೆ (ತಂದೆಯ ಅಕ್ಕ) ಜತೆ ವಾಸಿಸುತ್ತಿದ್ದ ಶ್ರೀಮತಿ ಶೆಟ್ಟಿ 4 ವರ್ಷಗಳ ಹಿಂದೆ ಅಮರ್‌ ಆಳ್ವ ಲೇನ್‌ನಲ್ಲಿ ಸ್ವಂತ ಮನೆ ಕಟ್ಟಿಸಿದ್ದರು. 14 ವರ್ಷಗಳ ಹಿಂದೆ ಮದುವೆಯಾಗಿದ್ದು, ಮೊದಲ ಪತಿಯಿಂದ ವಿಚ್ಛೇದನ ಪಡೆದುಕೊಂಡಿದ್ದರು. 2 ವರ್ಷ ಹಿಂದೆ ದೂರದ ಸಂಬಂಧಿ ಮಡಿಕೇರಿ ಮೂಲದ ಸುದೀಪ್‌ ಅವರನ್ನು 2ನೇ ಮದುವೆ ಯಾಗಿದ್ದರು. ಈ ಮದುವೆಗೆ ಮನೆಯವರ ವಿರೋಧವೂ ಇತ್ತು. ಕೆಲವು ಸಮಯದ ಬಳಿಕ ಆತನ ನಡತೆ ಸರಿಯಿಲ್ಲದ ಕಾರಣ ಆತನಿಂದಲೂ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು.

ಸುದೀಪ್‌ ಕಳವು ಪ್ರಕರಣವೊಂದರಲ್ಲಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖೆಗೆ ಮೂರು ತಂಡ
ಕೊಲೆ ಕೃತ್ಯದ ತನಿಖೆಗೆ ಮೂರು ತಂಡಗಳನ್ನು ರಚಿಸಲಾಗಿದೆ. ನಗರದ ಸಿಸಿಕೆಮರಾಗಳನ್ನು ಪರಿಶೀಲಿಸಲಾಗುತ್ತಿದೆ. ಕೆಲವು ಮಹತ್ವದ ಮಾಹಿತಿಗಳು ಲಭ್ಯವಾಗಿವೆ ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತ ಡಾ| ಸಂದೀಪ್‌ ಪಾಟೀಲ್‌ ತಿಳಿಸಿದ್ದಾರೆ.

ನಗರವನ್ನು ಬೆಚ್ಚಿಬೀಳಿಸಿದ ಘಟನೆ
ರುಂಡ – ಮುಂಡವನ್ನು ಬೇರ್ಪಡಿಸಿ ಭಾಗಗಳನ್ನು ಕೊಚ್ಚಿದ ರೀತಿಯಲ್ಲಿ ನಡೆದಿರುವ ಭೀಕರ ಕೊಲೆ ನಗರದ ಜನತೆಯನ್ನು ಬೆಚ್ಚಿಬೀಳಿಸಿದೆ. ಮಂಗಳೂರಿನಲ್ಲಿ ಇಂಥ ಭೀಭತ್ಸ ಕೊಲೆ ಸಂಭವಿಸಿಲ್ಲ. ದೇಹವನ್ನು ತುಂಡರಿಸಿ ಗೋಣಿಚೀಲದಲ್ಲಿ ತುಂಬಿಸಿ ರಸ್ತೆ ಬದಿಯಲ್ಲಿ ಎಸೆದು ಹೋಗಿರುವುದರಿಂದ ಜನ ದಿಗ್ಭ್ರಮೆಗೊಳಗಾಗಿದ್ದಾರೆ.

ದ್ವಿಚಕ್ರ ವಾಹನದಲ್ಲಿ ತಂದು ಎಸೆಯಲಾಗಿತ್ತೆ?
ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೋರ್ವ ಕದ್ರಿ ಪಾರ್ಕ್‌ ಹಿಂಬದಿಯ ಅಂಗಡಿ ಬಳಿ ಹೆಲ್ಮೆಟ್‌ ಇರಿಸಿ ಹೋಗಿರುವ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ದಾಖಲಾಗಿದೆ. ಇದರಿಂದಾಗಿ ಬೇರೆ ಕಡೆ ಕೊಲೆ ನಡೆಸಿದ ಬಳಿಕ ದೇಹದ ಅಂಗಾಂಗಗಳನ್ನು ಗೋಣಿಯಲ್ಲಿರಿಸಿ ದ್ವಿಚಕ್ರ ವಾಹನದಲ್ಲಿ ತಂದು ಎಸೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next