ಹರಪನಹಳ್ಳಿ: ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಜಾರಿಯಾಗಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಕೃಷಿ ಕೂಲಿಕಾರ ಸಂಘರ್ಷ ಸಮಿತಿ ತಾಲೂಕು ಘಟಕದ ಆಶ್ರಯದಲ್ಲಿ ಭೈರಾಪುರ ಗ್ರಾಮದ ಕೂಲಿಕಾರರು ಮಂಗಳವಾರ ತಾಪಂ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಹರಿಹರ ವೃತ್ತದಿಂದ ಹೊಸಪೇಟೆ ರಸ್ತೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು, ತಾಪಂಗೆ ಆಗಮಿಸಿ ಬಹಿರಂಗ ಸಭೆ ನಡೆಸಿದರು. ಉದ್ಯೋಗ ಖಾತ್ರಿ ಸಮರ್ಪಕವಾಗಿ ಅನುಷ್ಠಾನ ಗೊಳಿಸಬೇಕು. ಜನ ಮತ್ತು ಜಾನುವಾರುಗಳಿಗೆ ಸಮರ್ಪಕ ಕುಡಿಯುವ ನೀರಿನ ಸಮಸ್ಯೆ ನಿವಾರಿಸಬೇಕು. ನೀಲಗುಂದ ಗ್ರಾಪಂ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲೂ ಉದ್ಯೋಗ ಖಾತ್ರಿ ಯೋಜನೆ ಜಾರಿಯಾಗಬೇಕು ಎಂದು ಆಗ್ರಹಿಸಿದರು.
ನೀರಿನ ತೊಟ್ಟಿ ನಿರ್ವಹಣೆ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಬೇಕು. ದನದ ಕೊಟ್ಟಿಗೆ ಬಾಕಿ ಬಿಲ್ ಪಾವತಿಸಬೇಕು. ಪಡಿತರ ಕಾರ್ಡ್‌ಗೆ ಸಂಬಂಧಪಟ್ಟ ಸಮಸ್ಯೆಗಳ ನಿವಾರಣೆ ಮಾಡಬೇಕು. ಭೈರಾಪುರ ಗ್ರಾಮದಲ್ಲಿ ನ್ಯಾಯ ಬೆಲೆ ಮತ್ತು ವಿಎಸ್‌ಎಸ್‌ಎನ್ ಅಂಗಡಿಗಳನ್ನು ತೆರೆಯಬೇಕು. ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ ಒದಗಿಸಬೇಕು.
ಸೀಮೆ ಎಣ್ಣೆ ತಾರತಮ್ಯ ಹೋಗಲಾಡಿಸಬೇಕು. ಭೈರಾಪುರ ಗ್ರಾಮಕ್ಕೆ ಸಾರಿಗೆ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಪಂ ಕಾರ್ಯನಿರ್ವಾಹಕ ಅಧಿ ಕಾರಿ ಬಿ.ರೇವಣ್ಣ ಅವರು ಉದ್ಯೋಗ ಖಾತ್ರಿ ಯೋಜನೆಗೆ ಸಂಬಂಧಪಟ್ಟ ಎಲ್ಲಾ ಬೇಡಿಕೆಗಳನ್ನು ಈಡೇರಿಸುತ್ತೇವೆ. ಜತೆಗೆ ನಿರುದ್ಯೋಗ ಭತ್ಯೆ ನೀಡುವುದರ ಬಗ್ಗೆ ಪರಿಶೀಲಿಸಲಾಗುವುದು.
ಉದ್ಯೋಗ ಖಾತ್ರಿ ಕೆಲಸವನ್ನು ಬುಧವಾರದಿಂದಲೇ ನೀಡುವಂತೆ ಸಂಬಂಧಪಟ್ಟ ಗ್ರಾಪಂ ಅಭಿವೃದ್ಧಿ ಅಧಿ ಕಾರಿಗೆ ಸೂಚಿಸಿದರು. ಕೃಷಿ ಕೂಲಿಕಾರರ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಚ್.ಕೆ. ವೆಂಕಟೇಶ, ಮುಖಂಡರಾದ ಎನ್.ನಾಗರಾಜ, ಶೀಲಪ್ಪ, ಬಿ.ಬಸವರಾಜ, ಜಗದೀಶ, ಎಚ್.ಮಂಜುನಾಥ, ರಾಮಪ್ಪ, ಮಂಜುನಾಥ , ಕೆಂಚಪ್ಪ, ರವಿಕುಮಾರ ಸೇರಿದಂತೆ ಕೂಲಿಕಾರ್ಮಿಕರು ಪಾಲ್ಗೊಂಡಿದ್ದರು.