ಚೆನ್ನೈ: ಈ ವರ್ಷ ಆಸ್ಕರ್ ವೇದಿಕೆಯಲ್ಲಿ ಭಾರತ ಐತಿಹಾಸಿಕ ಸಾಧನೆಯನ್ನು ಮಾಡಿತ್ತು. ಭಾರತದ ʼಆರ್ ಆರ್ ಆರ್ʼ ಹಾಗೂ ʼಎಲಿಫೆಂಟ್ ವಿಸ್ಪರರ್ಸ್ʼ ಎರಡು ಅಕಾಡೆಮಿ ಪ್ರಶಸ್ತಿಗಳನ್ನು ಭಾರತಕ್ಕೆ ತಂದು ಸಿನಿ ಲೋಕದಲ್ಲಿ ಐತಿಹಾಸಿಕ ಸಾಧನೆಯನ್ನು ಮಾಡಿತ್ತು.
96ನೇ ಆಸ್ಕರ್ ಅವಾರ್ಡ್ಸ್‌ಗೆ ಭಾರತದಿಂದ ಅಧಿಕೃತವಾಗಿ ಪ್ರವೇಶ ಪಡೆಯುವ ಸಿನಿಮಾಗಳ ಆಯ್ಕೆ ಪ್ರಕ್ರಿಯೆ ಚೆನ್ನೈನಲ್ಲಿ ಆರಂಭವಾಗಿದೆ. ನಿರ್ದೇಶಕ ಗಿರೀಶ್ ಕಾಸರವಳ್ಳಿ ನೇತೃತ್ವದ 17 ಸದಸ್ಯರ ತೀರ್ಪುಗಾರರನ್ನು ಒಳಗೊಂಡಿರುವ ಆಯ್ಕೆ ಸಮಿತಿಗೆ ಭಾರತದಾದ್ಯಂತ ತೆರೆಕಂಡ 22 ಸಿನಿಮಾಗಳು ಅಧಿಕೃತ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿವೆ ಎಂದು ʼಹಿಂದೂಸ್ತಾನ್ ಟೈಮ್ಸ್ʼ ವರದಿ ತಿಳಿಸಿದೆ.
“ಬಾಲಗಮ್”, “ದಿ ಕೇರಳ ಸ್ಟೋರಿ”, “ಜ್ವಿಗಾಟೊ” “ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ” ಸೇರಿದಂತೆ ಇನ್ನು ಕೆಲ ಸಿನಿಮಾಗಳು ಆಸ್ಕರ್ ನ ಅಧಿಕೃತ ಪ್ರವೇಶ ಪಡೆಯುವ ಸಾಲ್ಲಿನಲ್ಲಿದೆ ಎನ್ನಲಾಗಿದೆ.
ಇವುಗಳು ಮಾತ್ರವಲ್ಲದೆ, ಅನಂತ್ ಮಹದೇವನ್ ಅವರ ಸ್ಟೋರಿ ಟೇಲರ್ (ಹಿಂದಿ), ಮ್ಯೂಸಿಕ್ ಸ್ಕೂಲ್ (ಹಿಂದಿ), ಮಿಸಸ್ ಚಟರ್ಜಿ vs ನಾರ್ವೆ (ಹಿಂದಿ), 12
th ಫೇಲ್ (ಹಿಂದಿ) ವಿದುತಲೈ ಭಾಗ 1 (ತಮಿಳು), ಘೂಮರ್ (ಹಿಂದಿ), ಮತ್ತು ದಸರಾ (ತೆಲುಗು) ಸಿನಿಮಾಗಳನ್ನು ಆಸ್ಕರ್ ಆಯ್ಕೆಗಾಗಿ ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾಕ್ಕೆ ಕಳುಹಿಸಲಾಗಿದೆ ಎಂದು ವರದಿ ತಿಳಿಸಿದೆ.
ಇನ್ನು ಇತ್ತೀಚೆಗೆ ತೆರೆಕಂಡ ಸನ್ನಿ ಡಿಯೋಲ್ ಅವರ ʼಗದರ್-2ʼ ಸಿನಿಮಾ ಕೂಡ ಆಸ್ಕರ್ ಅಧಿಕೃತ ಪ್ರವೇಶಕ್ಕೆ ಅರ್ಜಿ ಸಲ್ಲಿಸಿದೆ. ವಾಲ್ವಿ (ಮರಾಠಿ), ಅಬ್ ತೋ ಸಬ್ ಭಗವಾನ್ ಭರೋಸ್ (ಹಿಂದಿ), ಬಾಪ್ ಲಿಯೋಕ್ (ಮರಾಠಿ) ಸಿನಿಮಾಗಳ ಅರ್ಜಿಯನ್ನು ಸ್ವೀಕರಿಸಲಾಗಿದೆ ಎಂದು ವರದಿ ತಿಳಿಸಿದೆ.
ಈಗಾಗಲೇ ಈ ಸಿನಿಮಾಗಳ ಸ್ಕ್ರೀನಿಂಗ್ ಆರಂಭಗೊಂಡಿದ್ದು ಎಲ್ಲಾ ಸಿನಿಮಾಗಳನ್ನು ನೋಡಿದ ಬಳಿಕ ನಿರ್ಧಾರವನ್ನು ಸಮಿತಿ ಕೈಗೊಳ್ಳಲಿದೆ. ಮುಂದಿನ ವಾರ ಭಾರತದಿಂದ ಅಧಿಕೃತ ಪ್ರವೇಶ ಪಡೆಯುವ ಸಿನಿಮಾವನ್ನು ಅನೌನ್ಸ್ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಈ ವರ್ಷ ಭಾರತದಿಂದ ಅಧಿಕೃತವಾಗಿ ಪಾನ್ ನಳಿನ್ ಅವರ ಗುಜರಾತಿ ಚಿತ್ರ ಲಾಸ್ಟ್ ಫಿಲ್ಮ್ ಶೋ (ಛೆಲ್ಲೋ ಶೋ) ಪ್ರವೇಶ ಪಡೆದಿತ್ತು.