Advertisement

23.81 ಕೋಟಿ ರೂ.ಸಂಪುಷ್ಟ ಕೇರಳ ಯೋಜನೆ ಜಾರಿ  

06:00 AM Aug 14, 2018 | |

ಕಾಸರಗೋಡು: ಕೇರಳದಲ್ಲಿ ಮಹಿಳೆಯರು ಮತ್ತು  ಮಕ್ಕಳು ಇನ್ನು  ಮುಂದೆ ಪೋಷಕ ಆಹಾರ ಕೊರತೆಯಿಂದ ಅಸ್ವಸ್ಥರಾಗುವ ಸ್ಥಿತಿ ಬರದು ಎಂದು ವಿಶ್ಲೇಷಿಸಲಾಗಿದೆ. ಈ ನಿಮಿತ್ತ  ಕೇಂದ್ರ ಮತ್ತು  ಕೇರಳ ಸರಕಾರಗಳ ಜಂಟಿ ಸಹಭಾಗಿತ್ವದಲ್ಲಿ  ಈ ನಿಟ್ಟಿನಲ್ಲಿ  ವಿಶೇಷವಾದ ಯೋಜನೆಯೊಂದನ್ನು  ಜಾರಿಗೆ ತರಲಾಗಿದೆ.

Advertisement

ಮಹಿಳೆಯರು ಹಾಗೂ ಮಕ್ಕಳ ಪೋಷಕ ಆಹಾರ ಕೊರತೆ ಪರಿಹರಿಸುವ ಉದ್ದೇಶದೊಂದಿಗೆ ನ್ಯಾಷನಲ್‌ ನ್ಯೂಟ್ರೀಷಿಯನ್‌ ಮಿಶನ್‌ ಅಭಿಯಾನದ ಅಂಗವಾಗಿ ಕೇರಳ ಸರಕಾರವು ಮಹಿಳಾ ಮತ್ತು  ಶಿಶು (ಮಕ್ಕಳು) ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ ಸಂಪುಷ್ಟ  ಕೇರಳ ಎಂಬ ವಿನೂತನ ಯೋಜನೆಯನ್ನು  ಕಾರ್ಯಗತಗೊಳಿಸಲು 23,81,86,000ರೂ. ಗಳ ಆಡಳಿತಾನುಮತಿ ನೀಡಿರುವುದಾಗಿ ಆರೋಗ್ಯ ಮತ್ತು  ಸಾಮಾಜಿಕ ನ್ಯಾಯ ಇಲಾಖೆ ತಿಳಿಸಿದೆ.

ಮೊದಲ ಹಂತದಲ್ಲಿ  ಕಾಸರಗೋಡು, ಕಣ್ಣೂರು, ವಯನಾಡು, ಮಲಪ್ಪುರಂ ಜಿಲ್ಲೆಗಳಲ್ಲಿ  ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ. ಈ ಜಿಲ್ಲೆಗಳ 8,534 ಅಂಗನವಾಡಿಗಳು ಹೊಸ ಯೋಜನೆಯಲ್ಲಿ  ಒಳಪಡುತ್ತಿವೆ. ಉಳಿದ 10 ಜಿಲ್ಲೆಗಳಲ್ಲಿ  ಮುಂದಿನ ವರ್ಷ ಯೋಜನೆಯನ್ನು  ಜಾರಿಗೊಳಿಸಲಾಗುವುದು ಎಂದು ಇಲಾಖೆ ಹೇಳಿದೆ. ಅಲ್ಲದೆ ಇದೀಗ ನಿರ್ಧರಿಸಲಾದ ನಾಲ್ಕು ಜಿಲ್ಲೆಗಳಲ್ಲಿ  ಯೋಜನೆಯು ಯಾವ ರೀತಿ ಫಲಪ್ರದವಾಗುತ್ತದೆ ಎಂಬುದನ್ನು ಗಮನಿಸಿಕೊಂಡು ಮುಂದಿನ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು.ಸಂಪುಷ್ಟ  ಕೇರಳ ಯೋಜನೆಗೆ ಕೇಂದ್ರ ಹಾಗೂ ಕೇರಳ ಸರಕಾರವು ಸಂಯುಕ್ತವಾಗಿ ಅನುದಾನ ಒದಗಿಸುತ್ತಿವೆ. 6 ವಯಸ್ಸಿನ ವರೆಗಿನ ಮಕ್ಕಳು, ಹದಿಹರೆಯದವರಾದ ಹೆಣ್ಮಕ್ಕಳು, ಗರ್ಭಿಣಿಯರು, ಎದೆಹಾಲುಣಿಸುವ ತಾಯಂದಿರು ಮುಂತಾದವರಿಗೆ ಮೂರು ವರ್ಷದೊಳಗೆ ಅಗತ್ಯದ ಪೋಷಕ ಆಹಾರಗಳನ್ನು  ನೀಡಲು ಯೋಜನೆಯ ಮೂಲಕ ಉದ್ದೇಶಿಸಲಾಗಿದೆ.

ಅಂಗನವಾಡಿ ಕಾರ್ಯಕರ್ತೆ ಯರಿಗೆ, ಐಸಿಡಿಎಸ್‌ ಸೂಪರ್‌ವೈಸರ್‌ಗಳಿಗೆ ಸ್ಮಾರ್ಟ್‌ ಫೋನ್‌ಗಳನ್ನು ನೀಡಲಾಗುವುದು. ಫಲಾನುಭವಿಗಳಿಗೆ ಸಂಬಂಧಿಸಿದ ಎಲ್ಲ  ಮಾಹಿತಿಗಳನ್ನು  ಫೋನ್‌ ಅಪ್ಲಿಕೇಶನ್‌ ಮೂಲಕ ಅಂಗನವಾಡಿ ಕಾರ್ಯಕರ್ತೆ ಯರು ನೀಡಬೇಕಿದೆ. ಈ ನಿಟ್ಟಿನಲ್ಲಿ  ಅವರಿಗೆ ಸಮರ್ಪಕವಾದ ತರಬೇತಿಯನ್ನೂ ಒದಗಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಅಂಗನವಾಡಿಗಳಲ್ಲಿ  ಈಗ ಉಪಯೋಗಿಸುತ್ತಿರುವ 11 ರಿಜಿಸ್ಟರ್‌ಗಳನ್ನು  ಇನ್ನು  ಮುಂದೆ ಹೊಸ ಯೋಜನೆಯಡಿ ನಿಲ್ಲಿಸಲಾಗುವುದು. ಕೇರಳದಲ್ಲಿ  ಇದಕ್ಕಾಗಿ ಮೊದಲ ಹಂತದಲ್ಲಿ  8,500 ಫೋನ್‌ಗಳನ್ನು ಖರೀದಿಸಲು ನಿರ್ಧರಿಸಲಾಗಿದೆ. ಮಕ್ಕಳ ತೂಕ ಹಾಗೂ ಎತ್ತರ ಅಳತೆ ಮಾಡಲಿರುವ ಉಪಕರಣಗಳನ್ನೂ  ನೀಡಲು ತೀರ್ಮಾನಿಸಲಾಗಿದೆ. ಇದರನುಸಾರ ಮಕ್ಕಳ ಭಾರ – ಅಳತೆ ತೆಗೆದು ಕೇಂದ್ರೀಕೃತ ಸರ್ವರ್‌ಗೆ ಅಪ್‌ಲೋಡ್‌ ಮಾಡಲಾಗುವುದು.

ಮಹಿಳಾ ಹಾಗೂ ಶಿಶು ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ ಆರೋಗ್ಯ ಇಲಾಖೆ, ಆಯುಷ್‌ ಇಲಾಖೆ, ಶಿಕ್ಷಣ, ಸ್ಥಳೀಯಾಡಳಿತ, ಆಹಾರ ಮತ್ತು  ನಾಗರಿಕಾ ಪೂರೈಕೆ ಖಾತೆ, ಕೃಷಿ, ಪರಿಶಿಷ್ಟ  ಜಾತಿ – ಪರಿಶಿಷ್ಟ  ವರ್ಗ ಕಲ್ಯಾಣ, ಕುಟುಂಬಶ್ರೀ, ಆಹಾರ ಭದ್ರತೆ, ಎಂಜಿಎನ್‌ಆರ್‌ಇಜಿಎಸ್‌, ಶುಚಿತ್ವ ಮಿಷನ್‌, ಜಲ ಪ್ರಾಧಿಕಾರ ಇವುಗಳ ಸಹಕಾರದೊಂದಿಗೆ ಸಂಪುಷ್ಟ  ಕೇರಳ ಯೋಜನೆಯನ್ನು  ಹಂತ ಹಂತವಾಗಿ ಅನುಷ್ಠಾನಕ್ಕೆ ತರಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

Advertisement

ಮಹಿಳಾ ಮತ್ತು  ಶಿಶು ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ ಸ್ಟೇಟ್‌ ಕನ್ವರೇಜಸ್‌ ಆಕ್ಷನ್‌ ಪ್ಲಾನ್‌ ತಯಾರಿಸಲಾಗುವುದು. ಆರೋಗ್ಯ ಇಲಾಖೆಯ ಅಡಿಷನಲ್‌ ಮುಖ್ಯ ಕಾರ್ಯದರ್ಶಿ ಅಧ್ಯಕ್ಷರಾಗಿರುವ ರಾಜ್ಯ ಏಕೋಪನಾ ಸಮಿತಿಯು ಯೋಜನ್ನೆ ತಯಾರಿಸಲಿದೆ. ಇತರ ಇಲಾಖೆಗಳ ಕಾರ್ಯದರ್ಶಿಗಳು ಸಮಿತಿ ಸದಸ್ಯರಾಗಿರುತ್ತಾರೆ. ಸಮಾನವಾದ ಸಮಿತಿಗಳನ್ನು ಜಿಲ್ಲಾ  ಮತ್ತು  ಬ್ಲಾಕ್‌ ಪಂಚಾಯತ್‌ ಮಟ್ಟಗಳಲ್ಲಿ  ರಚಿಸಲಾಗುವುದು. ರಾಜ್ಯ ಮಟ್ಟದ ಸ್ಟೇಟ್‌ ಪ್ರಾಜೆಕ್ಟ್ ಮೆನೇಜ್‌ಮೆಂಟ್‌ ಘಟಕ (ಎಸ್‌ಎಂಪಿಯು)ವು ರಾಜ್ಯ ನ್ಯೂಟ್ರೀಷಿಯನ್‌ ರಿಸೋರ್ಸ್‌ ಕೇಂದ್ರವಾಗಿ ಕಾರ್ಯಾಚರಿಸಲಿದೆ.

ಕಾಸರಗೋಡಿನಲ್ಲಿ ಅನುಷ್ಠಾನ
ಸಂಪುಷ್ಟ  ಕೇರಳ ಯೋಜನೆಯನ್ನು  ಕಾಸರಗೋಡು ಜಿಲ್ಲೆಯಲ್ಲಿ  ಫಲಪ್ರದವಾಗಿ ಅನುಷ್ಠಾನಕ್ಕೆ ತರಲು ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಮಹಿಳಾ ಮತ್ತು  ಶಿಶು ಕಲ್ಯಾಣ ಇಲಾಖೆಯ ಮುಂದಾಳುತ್ವದಲ್ಲಿ  ಐಸಿಡಿಎಸ್‌ ಸೂಪರ್‌ವೈಸರ್‌ಗಳ ನೇತೃತ್ವದಲ್ಲಿ ಯೋಜನೆಯನ್ನು  ಕಾರ್ಯಗತಗೊಳಿಸಲು ಪ್ರಾಥಮಿಕ ಹಂತದ ಕೆಲಸ ಕಾರ್ಯಗಳನ್ನು ನಿರ್ವಹಿಸಲಾಗುತ್ತಿದೆ. ಇದಕ್ಕಾಗಿ ಸಮಿತಿಗಳನ್ನು  ರಚಿಸಲು ನಿರ್ಧರಿಸಲಾಗಿದೆ. ತಾಲೂಕು ಮಟ್ಟದಲ್ಲಿ  ಸಮಿತಿಗಳಿಗೆ ರೂಪು ನೀಡಲಾಗುವುದು. ಈ ಮೂಲಕ ಜಿಲ್ಲೆಯಲ್ಲಿ  ಯೋಜನೆಯನ್ನು  ಕ್ರಮಬದ್ಧವಾಗಿ ಜಾರಿಗೆ ತಂದು ಮಹಿಳೆಯರು ಮತ್ತು  ಮಕ್ಕಳಿಗೆ ಅಗತ್ಯದ ಪೋಷಕಾಹಾರ ಲಭಿಸುವಂತೆ ಮಾಡುವ ಉದ್ದೇಶ ಹೊಂದಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next