Advertisement
ತುರ್ತು ಸೇವೆಗಳ ವಾಹನಗಳು ಮತ್ತು ಆವಶ್ಯಕ ವಸ್ತುಗಳ ಕಾಯಿದೆ 1955ರಡಿ ನಮೂದಿಸಿರುವ ಆವಶ್ಯಕ ವಸ್ತುಗಳ ಸಾಗಾಣಿಕೆಯ ವಾಹನಗಳನ್ನು ಮಾತ್ರ ತಲಪಾಡಿ ಚೆಕ್‌ಪೋಸ್ಟ್ ಮೂಲಕ ಸಂಚರಿಸಲು ಅವಕಾಶ ನೀಡಲಾಗಿದೆ.
ವಿಟ್ಲ/ಸಾರಡ್ಕ,/ಈಶ್ವರಮಂಗಲ/ಉಳ್ಳಾಲ: ಜಿಲ್ಲಾಧಿಕಾರಿಗಳ ಆದೇಶದಂತೆ ಗಡಿಭಾಗದಲ್ಲಿ ಶನಿವಾರ ಮಧ್ಯಾಹ್ನ 2ರಿಂದ ವಾಹನ ಸಂಚಾರವನ್ನು ಸ್ಥಗಿತಗೊಳಿಸುವ ಕಾರ್ಯವನ್ನು ವಿಟ್ಲ ಪೊಲೀಸರು ನಡೆಸಿದರು. ಇದರಿಂದ ಒಂದೆಡೆ ಆತಂಕಗೊಂಡ ಜನತೆ, ಇನ್ನೊಂದೆಡೆ ಅಧಿಕಾರಿಗಳಿಗೆ ಇಕ್ಕಟ್ಟು ಪರಿಸ್ಥಿತಿ ನಿರ್ಮಾಣವಾದ ಘಟನೆ ಸಂಭವಿಸಿತು. ಸಾರಡ್ಕ ಚೆಕ್‌ಪೋಸ್ಟ್‌ನಲ್ಲಂತೂ ಸ್ಥಳೀಯರು ವಾಹನಗಳನ್ನು ಗಡಿಯಲ್ಲೇ ನಿಲ್ಲಿಸಿ ನಡೆದುಕೊಂಡು ಮನೆ ಸೇರುವ ಪರಿಸ್ಥಿತಿ ನಿರ್ಮಾಣವಾಯಿತು. ಸಾರಡ್ಕ ಗೇಟಿನ ಆಚೆ ಬದಿಯಲ್ಲಿರುವ ಅಡ್ಕಸ್ಥಳದ ವ್ಯಕ್ತಿಗಳೂ ತಮ್ಮ ಮನೆಗಳಿಗೆ ತೆರಳುವುದು ಅಸಾಧ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಯಿತು. ಕೆಲವರು ತಾವು ಸ್ಥಳೀಯರು ಎಂದು ದೃಢೀಕರಿಸುವ ದಾಖಲೆಗಳನ್ನು ತೋರಿಸಿ ಮುಂದುವರಿದರು.
ಸಾಲೆತ್ತೂರು ಭಾಗದ ಮೆದುವಿನಲ್ಲಿ, ಕನ್ಯಾನ ಭಾಗದ ನೆಲ್ಲಿಕಟ್ಟೆ, ಕರೋಪಾಡಿ ಗ್ರಾಮದ ಆನೆಕಲ್ಲುವಿನಲ್ಲಿ, ಅಡ್ಯನಡ್ಕ ಸಮೀಪದ ಸಾರಡ್ಕ, ಪೆರುವಾಯಿಯಲ್ಲಿ ಮುಖ್ಯರಸ್ತೆಗಳನ್ನು ಬಂದ್ ಮಾಡಿ ವಾಹನಗಳನ್ನು ತಡೆಯುವ ಕಾರ್ಯ ಶನಿವಾರ ಮಾಡಲಾಯಿತು. ಆದರೆ ನಾಗರಿಕರು ಮಾತ್ರ ಸರಕಾರದ ಆದೇಶವನ್ನು ಪಾಲಿಸಲು ನಿರಾಕರಿಸಿದರು. ಪೊಲೀಸರ ಜತೆ ಮಾತಿನ ಚಕಮಕಿ ನಡೆಸಿ, ಹಲವು ಕಡೆಗಳಿಂದ ಕೇರಳದಿಂದ ಕರ್ನಾಟಕಕ್ಕೆ ನುಗ್ಗಿಬಂದಿದ್ದಾರೆ.
Related Articles
Advertisement
ಅಧಿಕಾರಿಗಳ ಭೇಟಿವಿಟ್ಲ ಠಾಣಾಧಿಕಾರಿ ವಿನೋದ್ ಎಸ್.ಕೆ. ನೇತೃತ್ವದಲ್ಲಿ ಚೆಕ್‌ಪೋಸ್ಟ್‌ಗಳನ್ನು ಮಾಡಲಾಗಿದೆ. ಪ್ರತಿಯೊಂದು ಕಡೆಗೂ ಬಂಟ್ವಾಳ ತಾಲೂಕು ತಹಶೀಲ್ದಾರ್ ರಶ್ಮಿ ಎಸ್.ಆರ್., ತಾಲೂಕು ವೈದ್ಯಾ ಧಿಕಾರಿ ಡಾ| ದೀಪಾ ಪ್ರಭು ಭೇಟಿ ನೀಡಿ ಹಲವರ ಮನವೊಲಿಸಲು ಪ್ರಯತ್ನಿಸಿದರು. ಅಧಿಕಾರಿಗಳಿಗೆ ಕಚೇರಿಯಲ್ಲಿ ಕುಳಿತು ಕಾರ್ಯ ನಿರ್ವಹಿಸಬಹುದು. ಜನರ ಹಿತಕ್ಕಾಗಿ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲಾಗಿದೆ. ನಾಗರಿಕರು ಗಡಿಯನ್ನು ದಾಟಿ ಬರುವುದಾದರೆ ವಾಹನ ಸಂಚಾರವನ್ನು ಸ್ಥಗಿತ ಮಾಡುವ ಆವಶ್ಯಕತೆಯಿಲ್ಲ. ಯಾವುದೇ ಕಾರಣಕ್ಕೂ ನಾಗರಿಕರು ಮನೆಯಿಂದ ಹೊರಗೆ ಬರುವ ಸಾಹಸ ಮಾಡಬಾರದು.
– ರಶ್ಮಿ ಎಸ್. ಆರ್. ತಹಶೀಲ್ದಾರ್, ಬಂಟ್ವಾಳ ತಾಲೂಕು