ಚಿತ್ರರಂಗದಲ್ಲಿ ಸಾಕಷ್ಟು ಆಲ್ಬಂ ಸಾಂಗ್‌ಗಳು ಬಂದು ಹೋಗಿವೆ. ಇದೀಗ ಕನ್ನಡಿಗರ ತಂಡವೊಂದು ವಿನೂತನ ಪ್ರಯತ್ನದೊಂದಿಗೆ “ದಿ ಕಾಶ್ಮೀರ್ ಸಾಂಗ್’ ಆಲ್ಬ ಸಾಂಗ್ ಮೂಲಕ ಕಾಶ್ಮೀರ ದೌರ್ಜನ್ಯಕ್ಕೆ ಒಳಗಾದವರಿಗಾಗಿ ಹಾಡು ನಿರ್ಮಿಸಿದೆ.
ಹಾಡಿನ ಕುರಿತು ಮಾತನಾಡಿದ ಸಂಗೀತ ನಿರ್ದೇಶಕ ವೀರ್ ಸಮರ್ಥ್, “ಇತ್ತೀಚೆಗೆ ಬಂದ “ದಿ ಕಾಶ್ಮೀರ್ ಫೈಲ್ಸ್ ‘ ಚಿತ್ರ ಈ ಹಾಡಿಗೆ ಸ್ಫೂರ್ತಿ. ನಾನು ಒಂದು ಆಲ್ಬಂ ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಈ ಟ್ಯೂನ್ ರಚಿಸಿದ್ದೆ. ಹಾಡಿಗೆ ಸಾಹಿತ್ಯ ಬೇಕು ಅನ್ನುವ ಯೋಚನೆಯಲ್ಲಿದ್ದಾಗ ಹಿಂದಿಯ ಸಂಜು ಚಿತ್ರದ ಖ್ಯಾತಿಯ ಸಾಹಿತಿ ಶೇಖರ್ ಅಸ್ತಿತ್ವ ಬಳಿ ಹಾಡಿಗೆ ಸಾಹಿತ್ಯ ಬರೆಯುವಂತೆ ಕೇಳಿದಾಗ, ಎರಡು ದಿನದಲ್ಲಿ ಸಾಹಿತ್ಯವನ್ನು ಬರೆದುಕೊಟ್ಟರು’ ಎಂದರು.
ನಿರ್ದೇಶಕ ಕ್ರಿಷ್ ಜೋಶಿ ಮಾತನಾಡಿ “ಒಂದು ಪೂರ್ತಿ ಕಥೆಯನ್ನು ಕೇವಲ ಒಂದು ಹಾಡಿನ ಮೂಲಕ ತೋರಿಸುವುದ ಕಷ್ಟ . ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿ ಕಾಶ್ಮೀರ್ ಸಾಂಗ್‌ಗೆ ಸ್ಕ್ರಿಪ್ಟ್ ಕೂಡಾ ಸಿದ್ಧಮಾಡಿ ಚಿತ್ರೀಕರಣಕ್ಕೆ ತಯಾರಾದೆವು. ಆದರೆ ನಮಗೆ ಕಾಶ್ಮೀರಕ್ಕೆ ಹೋಗಿ ಚಿತ್ರೀಕರಿಸುವುದು ಕಷ್ಟವಾಗಿತ್ತು. ಆದ್ದರಿಂದ ಊಟಿಯಲ್ಲೇ ಕಾಶ್ಮೀರದ ಟಚ್ ಕೊಟ್ಟು ಶೂಟಿಂಗ್ ಮುಗಿಸಿದ್ದೇವೆ” ಎಂದರು.
ನಟ ಕೋವಿದ್ ಮಿತ್ತಲ್ ಮಾತನಾಡಿ, “ಇತ್ತೀಚಿನ ದಿನಗಳಲ್ಲಿ ಬರುವ ಆಲ್ಬಂ ಹಾಡುಗಳಿ ಗಿಂತ ನಮ್ಮ ಕಾಶ್ಮೀರ್ ಸಾಂಗ್ ಹಾಡು ಭಿನ್ನವಾಗಿದೆ. ಔಟ್ ಆಫ್ ದಿ ಬಾಕ್ಸ್ ಅಂತ ಹೇಳಬಹುದು. ದೌರ್ಜನ್ಯಕ್ಕೊಳಗಾದ ಕಾಶ್ಮೀರದ ಮೂಲ ನಿವಾಸಿಗಳಿಗಾಗಿ ಮಾಡಿದ ಹಾಡು ಇದಾಗಿದೆ. 50 ಜನರ ತಂಡವನ್ನು ಕಾಶ್ಮೀರಕ್ಕೆ ಕರೆದೊಯ್ದು ಚಿತ್ರೀಕರಿಸುವುದು ನಮಗೆ ದೊಡ್ಡ ಸವಾಲಿನ ಕೆಲಸವಾಗಿತ್ತು. ನಮ್ಮ ತಂಡ ಕಾಶ್ಮೀರದ ಸೆಟ್ ಹಾಕಿ ಕಾಶ್ಮೀರವನ್ನೇ ಮರು ಸೃಷ್ಟಿ ಮಾಡಿತು’ ಎಂದರು.
“ದಿ ಕಾಶ್ಮೀರ್ ಸಾಂಗ್’ ಜೂ.18ರಂದು “ಗೆಟ್ ಹೈ ಆನ್ ಮ್ಯೂಸಿಕ್’ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಗೊಳ್ಳಲಿದೆ.