Advertisement

ಬೇಡಿಕೆ ಈಡೇರಿಸಲು ಅಖಂಡ ಕರ್ನಾಟಕ ರೈತಸಂಘ ಆಗ್ರಹ

12:15 PM Jul 26, 2017 | Girisha |

ಆಲಮಟ್ಟಿ: ಸ್ಥಳೀಯ ಕೃಷ್ಣಾಭಾಗ್ಯಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಸಬಾಭವನದಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವೆ ಉಮಾಶ್ರೀ ಅವರಿಗೆ ರೈತ ಮುಖಂಡರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಅರ್ಪಿಸಿದರು.

Advertisement

ಮನವಿ ಸಲ್ಲಿಸಿ ಮಾತನಾಡಿದ ಅಖಂಡ ಕರ್ನಾಟಕ ರೈತ ಸಂಘದ ಅಧ್ಯಕ್ಷ ಸಿದ್ರಾಮಪ್ಪ ರಂಜಣಗಿ, ಆಲಮಟ್ಟಿಯಲ್ಲಿ ಜಲಾಶಯ ನಿರ್ಮಿಸಿದಾಗಿನಿಂದಲೂ ಈ ವ್ಯಾಪ್ತಿಯ ರೈತರಿಗೆ ಸಮರ್ಪಕವಾಗಿ ನೀರು ದೊರೆಯುತ್ತಿಲ್ಲ, ಈಗ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಕಾಮಗಾರಿಗಳು ನಡೆಯುತ್ತಿವೆ. ಆ ಎಲ್ಲ ಕಾಲುವೆಗಳಿಗೆ ಎರಡೂ ಹಂಗಾಮಿಗೆ ನೀರು ಹರಿಸಬೇಕಾದರೆ ಈ ಮೊದಲು
ಜಲಾಶಯಗಳ ವ್ಯಾಪ್ತಿಯ ಕಾಲುವೆಗಳಿಗೆ ನೀರು ಹರಿಸಲು ಹಂಚಿಕೆ ಮಾಡಲಾಗಿದ್ದ ನೀರನ್ನು ಮರುಹಂಚಿಕೆ ಮಾಡಿ ಎಸ್ಕೀಂ, ಬಿ ಸ್ಕೀಂ ಎನ್ನದೇ ಜಲಾಶಯಕ್ಕಾಗಿ ಭೂಮಿ ಕಳೆದುಕೊಂಡ ಸಂತ್ರಸ್ತರ ಬದುಕು ಹಸನಾಗಿಸಲು ಜಲಾಶಯಗಳ ನೀರನ್ನು ಮರು ಹಂಚಿಕೆ ಮಾಡಬೇಕು. ಇಲ್ಲದಿದ್ದರೆ ಈಗ ಕಾವೇರಿ ನದಿ ನೀರಿಗಾಗಿ ತಮಿಳುನಾಡು ಕ್ಯಾತೆ ತೆಗೆಯುವಂತೆ ನಮ್ಮಲ್ಲಿಯೇ ನಾವು ಕಚ್ಚಾಡುವ ಸ್ಥಿತಿ
ಬರಲಿದೆ ಎಂದರು.

ಕೃಷ್ಣಾಭಾಗ್ಯಜಲ ನಿಗಮದಿಂದ ಮುಳವಾಡ ಏತನೀರಾವರಿ ಯೋಜನೆಯ ಹೂವಿನಹಿಪ್ಪರಗಿ ಸಾಖಾ ಕಾಲುವೆಯು ಸಂಪೂರ್ಣ ಕಳಪೆಯಾಗಿದ್ದು ಸುಣ್ಣಮಿಶ್ರಿತ ಮರಳು, ಕಳಪೆ ಸಿಮೆಂಟ್‌ನಿಂದಾಗಿ ನಿರ್ಮಾಣ ಹಂತದಲ್ಲಿರುವಾಗಲೇ ಎಲ್ಲೆಂದರಲ್ಲಿ ಬಿರುಕು ಕಾಣಿಸಿಕೊಂಡಿದೆ. ಇಂಗಳೇಶ್ವರ ಗ್ರಾಮದ ತಾಂಡಾ-1 ಹಾಗೂ 2ರ ಸಮೀಪದಲ್ಲಿ ನಿರ್ಮಿಸಿರುವ ಕಾಲುವೆಯು ಈಗಲೇ ಹಾಳಾಗಿ ಹೋಗಿದೆ. ಆದ್ದರಿಂದ ನಿರ್ಮಿಸಿದ ಗುತ್ತಿಗೆದಾರರ ಹಾಗೂ ಕಳಪೆಯಾಗಲು ಕಾರಣರಾದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮುಖಂಡ ನಾರಾಯಣ ಗಡದಣ್ಣವರ ಮಾತನಾಡಿ, ಭೂ ಸ್ವಾಧೀನ ಮಾಡಿಕೊಳ್ಳುತ್ತಿರುವ ಜಮೀನಿಗೆ ವೈಜ್ಞಾನಿಕ ಬೆಲೆ ನೀಡಬೇಕು. ಮುಳವಾಡ ಏತ ನೀರಾವರಿ ಪಶ್ಚಿಮ ಕಾಲುವೆ ವ್ಯಾಪ್ತಿಯಲ್ಲಿ ಕೇವಲ ವಿತರಣಾ ಕಾಲುವೆಗಳು ಹಾಗೂ ಶೀಳು ಕಾಲುವೆಗಳನ್ನು ನಿರ್ಮಿಸಿದ್ದಾರೆ. ಆದರೆ ಇನ್ನೂವರೆಗೆ ಹೊಲಗಾಲುವೆಗಳನ್ನು ನಿರ್ಮಿಸದಿರುವುದರಿಂದ ರೈತರ ಜಮೀನುಗಳಿಗೆ ನೀರು ಹೋಗದೇ ಮರಳಿ ನದಿ ಸೇರುವಂತಾಗಿದೆ. ರೈತರ ಹಿತಕಾಪಾಡಲು ಹೊಲಗಾಲುವೆ ನಿರ್ಮಿಸಬೇಕು ಎಂದು ಹೇಳಿದರು.  

ಸಚಿವೆ ಉಮಾಶ್ರೀ ಮಾತನಾಡಿ, ಮುಳವಾಡ ಏತ ನೀರಾವರಿ ಯೋಜನೆಯಲ್ಲಿ ಕಳಪೆ ಕಾಮಗಾರಿ ನಡೆದಿರುವ ಬಗ್ಗೆ ತನಿಖಾಧಿಕಾರಿ ನೇಮಕ ಮಾಡಿ ತನಿಖೆ ನಡೆಸಲಾಗುವುದು. ಕಾಮಗಾರಿ ಕಳಪೆ ಎಂದು ಸಾಬೀತಾದಲ್ಲಿ ಸಂಬಂಧಿ ಸಿದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು. 

Advertisement

ತುಬಚಿ-ಬಬಲೆಶ್ವರ ಕಾಮಗಾರಿಯು ಕೃಷ್ಣಾಭಾಗ್ಯಜಲ ನಿಗಮದ ವ್ಯಾಪ್ತಿಯಲ್ಲಿಲ್ಲ. ಅದು ಕರ್ನಾಟಕ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ ಬರುತ್ತಿದ್ದು ಅವರಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದರು. ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಡಾ| ಎಂ.ರಾಮಚಂದ್ರ ಬೊಮ್ಮನಜೋಗಿ, ದೋಂಡಿಬಾ ಪವಾರ, ವಿಠuಲ ಅಮಾತಿಗೌಡರ, ಜಕ್ಕಪ್ಪ ಉಪ್ಪಾರ, ಮಲ್ಲಪ್ಪ ಹಲಸಂಗಿ,ಬಸವರಾಜ ಹಂಜಗಿ, ಕೆಂಚಪ್ಪ ನಿಂಬಾಳ, ಭೀಮರಾಯ ಉಪ್ಪಾರ, ಭೀಮರಾಯ ಎಳಸಂಗಿ ಮೊದಲಾದವರಿದ್ದರು.

ಇದಕ್ಕೂ ಮೊದಲು ಕೃಷ್ಣಾ ಕಾಡಾ ಮಾಜಿ ಅಧ್ಯಕ್ಷ ಹಾಗೂ ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಸವರಾಜ ಕುಂಬಾರ ಮನವಿ ಸಲ್ಲಿಸಿದರು. ನಂತರ ಮಾತನಾಡಿದ ಅವರು, ನೀರು ಹರಿಸುವ ಮುನ್ನ ಕಾಲುವೆಗಳ ದುರಸ್ಥಿ ಕಾರ್ಯ ಸಂಪೂರ್ಣ ಮುಗಿಯುವುದಿಲ್ಲ. ಅದಕ್ಕಾಗಿ ಹಿಂಗಾರು ಹಂಗಾಮಿಗೆ ನೀರು ಹರಿಸಿ ನಿಲ್ಲಿಸಿದ ತಕ್ಷಣವೇ ಎಲ್ಲ ಕಾಲುವೆಗಳನ್ನು ದುರಸ್ಥಿ ಹಾಗೂ ಹೂಳು ತಗೆಯುವ ಕಾಮಗಾರಿ ಆರಂಭಿಸಬೇಕು. ಇದರಿಂದ ಗುತ್ತಿಗೆದಾರರಿಗೆ ಸಾಕಷ್ಟು ಸಮಯವಿರುತ್ತದೆ ಎಂದರು.

ಪ್ರತಿ ಬಾರಿಯೂ ಅವಶ್ಯತೆಗನುಗುಣವಾಗಿ ದುರಸ್ಥಿ ಕಾಮಗಾರಿಗಳಿಗೆ ಅನುದಾನ ಒದಗಿಸಬೇಕು. ಒಳಹರಿವು ಹೆಚ್ಚಿರುವ ವೇಳೆಯಲ್ಲಿಯೇ ಕಾಲುವೆಗಳ ಮುಖಾಂತರ ಕೆರೆ ಹಾಗೂ ಬಾಂದಾರ್‌ಗಳನ್ನು ತುಂಬಿಸಬೇಕು. ವಾರಾಬಂಧಿ ಪದ್ಧತಿ ಕಟ್ಟುನಿಟ್ಟಾಗಿ ಪಾಲಿಸಬೇಕು. ಅಣೆಕಟ್ಟು ವ್ಯಾಪ್ತಿಯ ರೈತರು ಜೂನ್‌ ತಿಂಗಳಲ್ಲಿಯೇ ಬಿತ್ತನೆ ಮಾಡುತ್ತಾರೆ. ಆದರೆ ಜಲಾಶಯಕ್ಕೆ ಜುಲೈ ನಂತರವೇ ನೀರು ಸಂಗ್ರಹವಾಗುತ್ತದೆ. ಇದರಿಂದ ಪ್ರತಿ ಬಾರಿಯೂ ರೈತರು ಹಾನಿ ಅನುಭವಿಸಬೇಕು. ಇಲ್ಲವೇ ಒಂದೇ ಹಂಗಾಮಿನ ಬೆಳೆ ಬೆಳೆಯಬೇಕಾದ ಅನಿವಾರ್ಯತೆ ಬರಲಿದೆ. ಆದ್ದರಿಂದ ಮುಂದಿನ ಜೂನ್‌ ತಿಂಗಳಲ್ಲಿ ರೈತರ ಜಮೀನಿಗೆ ನೀರು ಪೂರೈಸಲು ಅನುಕೂಲವಾಗುವಂತೆ ಈಗಲೇ ನೀರು ಸಂಗ್ರಹಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next