Advertisement

26ರಂದು ಹೈದರಾಬಾದ ಕರ್ನಾಟಕ ಬಂದ್‌

11:25 AM Feb 19, 2018 | Team Udayavani |

ಕಲಬುರಗಿ: ಹೈದ್ರಾಬಾದ್‌ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಜಾರಿಗೆ ಬಂದಿರುವ 371ಜೆ ವಿಧಿ ಜಾರಿಗೆ ಅಧಿಕಾರಿಗಳು ಇಲ್ಲದ ಸಲ್ಲದ ನಿಯಮಾವಳಿ ರೂಪಿಸುತ್ತ ಅನ್ಯಾಯ ಎಸಗುತ್ತಿರುವುದನ್ನು ಸರಿಪಡಿಸುವಂತೆ ಹಾಗೂ
ಕಲಂ ಪರಿಣಾಮಕಾರಿ ಜಾರಿಗೆ ಆಗ್ರಹಿಸಿ ಫೆ. 26ರಂದು ಹೈ.ಕ ಭಾಗದ ಬಂದ್‌ಗೆ ಕರೆ ನೀಡಲಾಗಿದೆ ಎಂದು ಹೈ.ಕ ಹೋರಾಟ ಸಮಿತಿ ಅಧ್ಯಕ್ಷರಾಗಿರುವ ಮಾಜಿ ಸಚಿವ ವೈಜನಾಥ ಪಾಟೀಲ ಹೇಳಿದರು. ನಗರದ ಹಿಂದಿ ಪ್ರಚಾರಸಭಾದಲ್ಲಿ ನಡೆದ ಹೈ.ಕ ಹೋರಾಟ ಸಮಿತಿ ವಿಭಾಗೀಯ ಸಭೆಯಲ್ಲಿ ಅವರು ಮಾತನಾಡಿದರು. ಲೋಪ-ದೋಷ ಎತ್ತಿಕೊಂಡು ಪದೇ-ಪದೇ ಬೆಂಗಳೂರಿಗೆ ಅಲೆದಾಡುವಂತಾಗುತ್ತಿದೆ. 

Advertisement

ಗ್ರಾಪಂ ಡಾಟಾ ಎಂಟ್ರಿ ನೇಮಕಾತಿಯಲ್ಲಿ 371ನೇ ಜೆ ಮೀಸಲಾತಿ ಪಾಲನೆ ಮಾಡದೇ ಇದ್ದ ಸಂದರ್ಭದಲ್ಲಿ ಹೋರಾಟಕ್ಕೆ ಧುಮುಕಿದಾಗ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆಯೇ ಹೊರತು ಅಧಿಸೂಚನೆ ರದ್ದುಪಡಿಸಿಲ್ಲ. ಅದೇ ರೀತಿ ನ್ಯಾಯಾಧೀಶರ ನೇಮಕಾತಿಯಲ್ಲೂ 371ನೇಜೆ ಮೀಸಲಾತಿ ಪಾಲನೆ ಮಾಡಿಲ್ಲ. ಪ್ರತಿಯೊಂದಕ್ಕೂ ಹೋರಾಟದ ಅನಿವಾರ್ಯ ನಿರ್ಮಾಣ ಮಾಡುತ್ತಿರುವುದನ್ನು ಖಂಡಿಸಿ ಬಂದ್‌ವೊಂದೇ ಪರಿಹಾರ ಎಂಬುದನ್ನು ಮನಗಂಡು ವಿಭಾಗೀಯ ಬಂದ್‌ ಚಳವಳಿ ನಡೆಸಲು ನಿರ್ಧರಿಸಲಾಗಿದೆ ಎಂದು ಪ್ರಕಟಿಸಿದರು.
 
ಹಿಂದುಳಿದ ಹೈದ್ರಾಬಾದ್‌ ಕರ್ನಾಟಕ ಪ್ರದೇಶಕ್ಕೆ ಜಾರಿಯಾಗಿರುವ 371ನೇ (ಜೆ) ಕಲಂನಡಿ ನೇಮಕಾತಿಗಳಲ್ಲಿ ಅನ್ಯಾಯ ಆಗುತ್ತಿದೆ. ರಾಜ್ಯ ಸರ್ಕಾರ ತಪ್ಪುಗಳನ್ನು ಸರಿಪಡಿಸದೇ ಹೋದಲ್ಲಿ ಪ್ರತ್ಯೇಕ ರಾಜ್ಯದ ಹೋರಾಟಕ್ಕೂ ಹಿಂದೇಟು ಹಾಕುವುದಿಲ್ಲ. ಅಲ್ಲದೇ ಜತೆಗೆ ಕಾಂಗ್ರೆಸ್‌ ಪಕ್ಷವನ್ನು ತ್ಯಜಿಸುವ ಕುರಿತೂ ಚಿಂತನೆ ನಡೆಸುವುದಾಗಿ ಹೇಳಿದರು. 

ಎಐಸಿಸಿಐ ಅಧ್ಯಕ್ಷ ರಾಹುಲ್‌ಗಾಂಧಿ ಅವರು ಜನಾಶೀರ್ವಾದ ಯಾತ್ರೆ ಬಹಿರಂಗ ಸಮಾವೇಶದಲ್ಲಿ 371ನೇ (ಜೆ) ಜಾರಿ ಕುರಿತು ಸುಳ್ಳು ಹೇಳಿಕೆ ನೀಡಿದರು. ಅದಕ್ಕೆ ಸ್ಥಳೀಯ ನಾಯಕರು ನೀಡಿದ ತಪ್ಪು ಮಾಹಿತಿಯೇ ಕಾರಣ ಎಂದು ವೈಜನಾಥ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.

371ನೇ (ಜೆ) ಮೀಸಲಾತಿ ಅನ್ಯಾಯ ವಿರೋಧಿಸಿ ಮಾಜಿ ಸಚಿವ ಡಾ| ವೈಜನಾಥ ಪಾಟೀಲ ಅವರು ಕಾಂಗ್ರೆಸ್‌ ಪಕ್ಷ ತ್ಯಜಿಸಿ, ಹೋರಾಟ ಸಮಿತಿ ನೇತೃತ್ವದಲ್ಲಿಯೇ ಚುನಾವಣೆ ಕಣಕ್ಕಿಳಿಯಲು ಸಹ ಸಭೆಯಲ್ಲಿ ಚರ್ಚೆ ಆಯಿತು.

371ನೇ (ಜೆ)ಯಡಿ ನೇಮಕಾತಿಯಲ್ಲಿ ಹೈದ್ರಾಬಾದ್‌ ಕರ್ನಾಟಕದವರಿಗೆ ಈಗಲೂ ಸಹ ಅನ್ಯಾಯ ಆಗುತ್ತಿದೆ. ಗ್ರಾಪಂ ಡಾಟಾ ಎಂಟ್ರಿ ಆಪರೇಟರ್‌ 6022 ಹುದ್ದೆಗಳ ನೇಮಕಾತಿ ಕುರಿತು 371ನೇ (ಜೆ) ಮೀಸಲಾತಿ ಕಡೆಗಣಿಸಲಾಯಿತು. ಹೋರಾಟ ಮಾಡಿದ್ದರಿಂದ ಅದನ್ನು ತಡೆಯಲಾಗಿದೆ. 

Advertisement

ಆದಾಗ್ಯೂ, ಅರ್ಜಿ ಸಲ್ಲಿಸಿದವರು ಇಲ್ಲಿಯವರೆಗೆ ಯಾವುದೇ ಕ್ರಮ ಇರದೇ ಇರುವುದರಿಂದ ನೊಂದಿದ್ದಾರೆ. ಕೂಡಲೇ ನೇಮಕಾತಿಯನ್ನು 371ನೇ (ಜೆ)ಯಡಿ ಕೈಗೊಳ್ಳಬೇಕು. 100 ಜನ ನ್ಯಾಯಾಧೀಶರ ನೇಮಕಾತಿಯಲ್ಲಿಯೂ 371ನೇ (ಜೆ) ಮೀಸಲಾತಿ ಕಡೆಗಣಿಸಲಾಗಿದೆ.

ಶಿಕ್ಷಕರ ನೇಮಕಾತಿಯಲ್ಲಿಯೂ ಈ ಭಾಗದವರಿಗೆ ಅನ್ಯಾಯ ಆಗಿದೆ. ಅನ್ಯಾಯ ಆದಾಗ ನ್ಯಾಯಾಲಯಕ್ಕೆ ಹೋಗಿ
ತಡೆಯಾಜ್ಞೆ ತರಬೇಕು. ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಭೆಯಲ್ಲಿ ಕಳವಳ ವ್ಯಕ್ತಪಡಿಸಲಾಯಿತು.
 
ಅಲ್ಲಮಪ್ರಭು ಬೆಟ್ಟದೂರು, ಅಬ್ದುಲ್‌ ಹಮೀದ್‌, ಅಶೋಕ ಮಣ್ಣೂರ, ರಮೇಶ ಹೊಸಮನಿ, ಗುರುಶಾಂತ ಬಿರಾದಾರ,
ಶಿವಶಂಕರ ಗಾರಂಪಳ್ಳಿ, ಜಗನ್ನಾಥರೆಡ್ಡಿ, ವಂದನಾ ಜೈನ್‌, ಜಿಪಂ ಸದಸ್ಯ ಗೌತಮ ಪಾಟೀಲ ಸೇರಿದಂತೆ ಅನೇಕ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next