Advertisement

ಕನ್ನಡ ವಿವಿ ಕೈಬಿಡದಿದ್ರೆ ಹೋರಾಟ

07:19 PM Nov 21, 2017 | |

ಬಳ್ಳಾರಿ/ಹೊಸಪೇಟೆ: ಉದ್ದೇಶಿತ ಕರ್ನಾಟಕ ವಿಶ್ವವಿದ್ಯಾಲಯಗಳ ತಿದ್ದುಪಡಿ ಕಾಯ್ದೆಯ ವ್ಯಾಪ್ತಿಯಿಂದ ಹಂಪಿ ಕನ್ನಡ ವಿವಿಯನ್ನು ರಾಜ್ಯ ಸರ್ಕಾರ ಕೈ ಬಿಡದೆ ಹೋದಲ್ಲಿ ರಾಜ್ಯಾದ್ಯಂತ ಕನ್ನಡ ವಿಶ್ವವಿದ್ಯಾಲಯ ಉಳಿಸಿ ಹೆಸರಿನ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹಂಪಿ ವಿವಿಯ ಸ್ವಾಯತ್ತತೆಯ ಬೆಂಬಲಿಗರು, ವಿವಿಯ ವಿಶ್ರಾಂತ ಕುಲಪತಿಗಳು, ಚಿಂತಕರು, ಲೇಖಕರು ಘೋಷಿಸಿದರು. ಸೋಮವಾರ ವಿವಿಯ ಸೆಮಿನಾರ್‌ ಸಭಾಂಗಣದಲ್ಲಿ ಹಂಪಿ ಕನ್ನಡ ವಿವಿಯ ಸ್ವಾಯತ್ತತೆ ಉಳಿಸುವ ಕುರಿತಂತೆ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರೊಂದಿಗೆ ಚರ್ಚೆ ನಡೆಸಿದ ನಂತರ ಉನ್ನತ ನಾಡೋಜ ಪಾಟೀಲ ಪುಟ್ಟಪ್ಪನವರ
ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟವಾಯಿತು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರಿನ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ| ಕೆ.ಮರುಳಸಿದ್ದಪ್ಪ, 
ಬೇರೆ ವಿವಿಗಳಂತೆ ಕನ್ನಡ ವಿವಿ ಅಲ್ಲ. ಕನ್ನಡ ಭಾಷೆ, ಸಂಸ್ಕೃತಿ, ಸಂಪ್ರದಾಯ, ನೆಲ-ಜಲಗಳ ಕುರಿತ, ಜಾನಪದ, ಸಾಹಿತ್ಯ,
ನಾಡಿನ ಅಭಿವೃದ್ಧಿ ಮುಂತಾದ ವೈವಿಧ್ಯಮಯ ವಿಷಯಗಳ ಕುರಿತ ಸಂಶೋಧನಾ ಕೇಂದ್ರಿತ ವಿವಿಯಾಗಿದೆ. ಇಂತಹ ವಿಶಿಷ್ಟ ಕನ್ನಡ
ವಿವಿಯನ್ನು ಇತರೆ ವಿವಿಗಳೊಂದಿಗೆ ಒಂದೇ ಎಂದು ಭಾವಿಸುವುದು ಸರಿಯಲ್ಲ. ಉದ್ದೇಶಿತ ಕರ್ನಾಟಕ ವಿವಿಗಳ ತಿದ್ದುಪಡಿ ಕಾಯ್ದೆಯ
ವ್ಯಾಪ್ತಿಗೆ ಹಂಪಿ ಕನ್ನಡ ವಿವಿಯನ್ನೂ ತರುವುದರಿಂದ ವಿವಿ ಸ್ಥಾಪನೆಯ ಮೂಲ ಉದ್ದೇಶವೇ ಬದಲಾಗುವ ಸಾಧ್ಯತೆಗಳಿವೆ
ಎಂದು ಅವರು ಆತಂಕ ವ್ಯಕ್ತಪಡಿಸಿದರು. ಆದ್ದರಿಂದ ಹಂಪಿ ಕನ್ನಡ ವಿವಿಯನ್ನು ವಿವಿಗಳ ತಿದ್ದುಪಡಿ ಕಾಯ್ದೆಯಿಂದ ಅದಕ್ಕೆ
ಅನುಮೋದನೆ ನೀಡುವ ಮುಂಚೆಯೆ ಕೈ ಬಿಡಬೇಕು. ಇಲ್ಲದೇ ಹೋದಲ್ಲಿ ವಿವಿಯನ್ನು ಕಾಯ್ದೆಯ ವ್ಯಾಪ್ತಿಯಿಂದ ಕೈಬಿಡುವವರೆಗೆ
ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಹಂಪಿ ಕನ್ನಡ ವಿವಿಯನ್ನು ಉಳಿಸಿ ಹೋರಾಟ ಹಮ್ಮಿಕೊಳ್ಳಬೇಕು ಎನ್ನುವುದು ಸಭೆಯಲ್ಲಿ
ಉಪಸ್ಥಿತರಿದ್ದ ಎಲ್ಲರ ಏಕಾಭಿಪ್ರಾಯವಾಗಿದೆ ಎಂದರು.

ವಿವಿಗಳ ತಿದ್ದುಪಡಿ ಕಾಯ್ದೆಯನ್ನು ಸಂಪೂರ್ಣವಾಗಿ ಪರಿಶೀಲಿಸಲಾಗಿದೆ. ಒಂದು ವೇಳೆ ಈ ಕಾಯ್ದೆ ಜಾರಿಯಾದರೆ ಹಂಪಿ ಕನ್ನಡ
ವಿವಿ ತನ್ನ ಸ್ವಾಯತ್ತತೆಯನ್ನು ಕಳೆದುಕೊಳ್ಳುವ ಅಪಾಯವಿದೆ ಎನ್ನುವುದು ಎಲ್ಲರಿಗೂ ಮನವರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ
ಎಲ್ಲರೂ ಏಕಾಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಅವರು ತಿಳಿಸಿದರು. ಹಂಪಿ ಕನ್ನಡ ವಿವಿಯ ಸ್ವಾಯತ್ತತೆ ಉಳಿಸುವ ಕುರಿತಂತೆ ವಿವಿಯ ಕುಲಪತಿ ಪ್ರೊ| ಮಲ್ಲಿಕಾ ಘಂಟಿ ಅವರ ನೇತೃತ್ವದಲಿ ಚಿಂತಕರು, ಲೇಖಕರು, ವಿವಿಯ ಕುರಿತು  ಅಭಿಮಾನ ಇಟ್ಟುಕೊಂಡಿರುವವರೆಲ್ಲರೂ ಇತ್ತೀಚೆಗೆ ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೆವು. ಅದರ
ಮುಂದುವರಿಕೆಯಾಗಿ ಸಿಎಂ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿಯವರನ್ನು ಇಲ್ಲಿ ಚರ್ಚಿಸಿ ವಿಷಯ ಸಂಗ್ರಹಿಸಲು
ಕಳುಹಿಸಿದ್ದರು.

ರಾಯರಡ್ಡಿ ಅವರೊಂದಿಗೆ ನಡೆದ ಚರ್ಚೆಯಲ್ಲಿ ಕನ್ನಡ ವಿವಿಗೆಂದೇ ಪ್ರತ್ಯೇಕ ವಿಧೇಯಕವಿದೆ. ಈ ಹಿನ್ನೆಲೆ ಕರ್ನಾಟಕ
ವಿವಿ ಕಾಯ್ದೆ-2000ರ ವ್ಯಾಪ್ತಿಯಿಂದ ಕನ್ನಡ ವಿವಿಯನ್ನು ಹೊರಗಿಟ್ಟು ಸ್ವಾಯತ್ತತೆಯನ್ನು ಉಳಿಸಲಾಗಿತ್ತು. ಆದರೆ, ಉದ್ದೇಶಿತ ತಿದ್ದುಪಡಿ ಕಾಯ್ದೆ ವ್ಯಾಪ್ತಿಗೆ ಇತರೆ ವಿವಿಗಳಂತೆ ಕನ್ನಡ ವಿವಿಯೂ ಬರಲಿದೆ. ಇದು ನಿಜಕ್ಕೂ ಆತಂಕದ ವಿಷಯ. ಇದು ನಡೆಯಬಾರದು ಎಂದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ| ಎಲ್‌.ಹನುಮಂತಯ್ಯ ಮಾತನಾಡಿ, ತಿದ್ದುಪಡಿ ವಿಧೇಯಕವನ್ನು ಸದನದ ಮುಂದಿಡುವ ಮುಂಚೆ ಸಂಪುಟ ಸಮಿತಿ ಸಭೆಯಲ್ಲಿ ಹಂಪಿ ಕನ್ನಡ ವಿವಿಯನ್ನು ಹೊರಗಿಡುವ ನಿರ್ಧಾರ ಕೈಗೊಂಡು ನಂತರ ಸದನದಲ್ಲಿ ಮಂಡಿಸಬೇಕೆಂದು ಒತ್ತಾಯಿಸಿದರು.

ಕನ್ನಡ ವಿವಿಯ ಕುಲಪತಿ ಪ್ರೊ| ಮಲ್ಲಿಕಾ ಘಂಟಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ| ಎಸ್‌.ಜಿ.ಸಿದ್ಧರಾಮಯ್ಯ, ವಿಶ್ರಾಂತ ಪ್ರಾಧ್ಯಾಪಕ ಡಾ| ಜಿ.ರಾಮಕೃಷ್ಣ, ಡಾ| ಕಾಳೇಗೌಡ ನಾಗವಾರ, ಡಾ| ಹಿ.ಶಿ. ರಾಮಚಂದ್ರೇಗೌಡ, ವಿವಿಯ ವಿಶ್ರಾಂತ
ಕುಲಪತಿಗಳಾದ ಡಾ| ಎ.ಮುರಿಗೆಪ್ಪ, ಡಾ| ಹಿ.ಚಿ.ಬೋರಲಿಂಗಯ್ಯ, ವಿಶ್ರಾಂತ ಪ್ರಾಧ್ಯಾಪಕ ಡಾ| ಕೆ.ವಿ.ನಾರಾಯಣ, ಡಾ|
ಬಸವರಾಜ ಸಾದರ, ಪ್ರೊ| ಅಲ್ಲಮಪ್ರಭು ಬೆಟ್ಟದೂರು, ಡಾ| ಬಸವರಾಜ ಸಬರದ, ಕನ್ನಡ ವಿವಿಯ ಕಾರ್ಯಕಾರಿ ಸಮಿತಿ ಸದಸ್ಯ ಡಾ| ಎ.ವಿ.ನಾವಡ, ವಿಎಸ್‌ಕೆ ವಿವಿಯ ಕುಲಪತಿ ಪ್ರೊ| ಎಂ.ಎಸ್‌.ಸುಭಾಷ್‌, ದಾವಣಗೆರೆ ವಿವಿ ಕುಲಪತಿ ಪ್ರೊ| ಬಿ.ಬಿ.ಕಲಿವಾಳ್‌
ಮುಂತಾದವರು ಉಪಸ್ಥಿತರಿದ್ದರು. 

Advertisement

ಬೇರೆ ವಿವಿಗಳಂತೆ ಕನ್ನಡ ವಿವಿ ಅಲ್ಲ. ಕನ್ನಡ ಭಾಷೆ, ಸಂಸ್ಕೃತಿ, ಸಂಪ್ರದಾಯ, ನೆಲ-ಜಲಗಳ ಕುರಿತ, ಜಾನಪದ, ಸಾಹಿತ್ಯ, ನಾಡಿನ ಅಭಿವೃದ್ಧಿ ಮುಂತಾದ ವೈವಿಧ್ಯಮಯ ವಿಷಯಗಳ ಕುರಿತ ಸಂಶೋಧನಾ ಕೇಂದ್ರಿತ ವಿವಿಯಾಗಿದೆ. ಇಂತಹ ವಿಶಿಷ್ಟ ಕನ್ನಡ ವಿವಿಯನ್ನು ಇತರೆ ವಿವಿಗಳೊಂದಿಗೆ ಒಂದೇ ಎಂದು ಭಾವಿಸುವುದು ಸರಿಯಲ್ಲ.  ಡಾ| ಕೆ.ಮರುಳಸಿದ್ದಪ್ಪ, ಬೆಂಗಳೂರಿನ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರು. 

Advertisement

Udayavani is now on Telegram. Click here to join our channel and stay updated with the latest news.

Next