Advertisement

ದುರಸ್ತಿ ಭಾಗ್ಯ ಕಾಣದ ಶತಮಾನದ ಕನ್ನಡ ಶಾಲೆ

09:21 PM Jan 28, 2020 | Lakshmi GovindaRaj |

ಶ್ರೀನಿವಾಸಪುರ: ಸುಣ್ಣ-ಬಣ್ಣ ಕಾಣದ ಕಟ್ಟಡ…ಬಿರುಕು ಬಿಟ್ಟ ಗೋಡೆ… ಮುರಿದು ಬಿದ್ದ ಹೆಂಚು… ಮಳೆ ಬಂದರೆ ಕೊಠಡಿಯಲ್ಲೇ ನೆನೆಯುವ ಮಕ್ಕಳು… ಹೌದು, ವಿನಾಶದ ಅಂಚಿಗೆ ತಲುಪಿರುವ ಹಾಗೂ ಮೊಟ್ಟ ಮೊದಲ ಬಾರಿಗೆ ಬ್ರಿಟಿಷರು ಪಟ್ಟಣದ ಎಂ.ಜಿ.ರಸ್ತೆಯಲ್ಲಿ ನಿರ್ಮಿಸಿರುವದ ಏಕೈಕ ಕನ್ನಡ ಶಾಲೆಯ ದುಸ್ಥಿತಿಯಿದು!.

Advertisement

ಪಟ್ಟಣದ ಮೊದಲ ಶಾಲೆ: ಶ್ರೀನಿವಾಸಪುರ ಪಟ್ಟಣದ ಪ್ರಮುಖ ಎಂ.ಜಿ.ರಸ್ತೆಯಲ್ಲಿರುವ ಏಕೈಕ ಮೊಟ್ಟ ಮೊದಲ ಕನ್ನಡ ಶಾಲೆ ಇದಾಗಿದ್ದು ಶಾಲೆಗೆ ಹೊಂದಿಕೊಂಡಂತೆ ಹಿಂಬಂದಿ ಕಟ್ಟಡದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿದೆ. ಇದೇ ಆವರಣದಲ್ಲಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಬಾಲಕಿಯರ ಪ್ರೌಢಶಾಲೆ, ಬಿಆರ್‌ಸಿ ಕಚೇರಿ, ಪಕ್ಕದಲ್ಲಿ ತಾಂತ್ರಿಕ ಎಂಜನಿಯರ್‌ರ ಕಚೇರಿ, ಲೋಕೋಪಯೋಗಿ ಇವುಗಳ ಜೊತೆ ಗಜಗಳ ಅಂತರದಲ್ಲಿ ತಾಲೂಕು ಕಚೇರಿ, ಬಸ್‌ ನಿಲ್ದಾಣ ಹೀಗೆ ಶಾಲೆಗೆ ಇವೆಲ್ಲವೂ ಹತ್ತಿರವಾಗಿವೆ. ಸದರಿ ಶಾಲೆ ಆವರಣದಲ್ಲಿ ಬಾಲಕಿಯರ ಕಾಲೇಜು ಹಾಗೂ ಪ್ರೌಢಶಾಲೆಯಿದೆ.

ದಾಖಲಾತಿ ಹೊಡೆತ: ಈ ಶಾಲೆಯಲ್ಲಿ ವಿದ್ಯಾರ್ಥಿಗಳು ನೂರಾರು ಸಂಖ್ಯೆಯಲ್ಲಿದ್ದರು. ಆದರೆ, ಪ್ರಸ್ತುತ 2020ನೇ ಸಾಲಿಗೆ 54 ವಿದ್ಯಾರ್ಥಿಗಳು ಮಾತ್ರ ವ್ಯಾಸಂಗ ಮಾಡುತ್ತಿದ್ದಾರೆ. ಈ ಮಕ್ಕಳಿಗೆ ಮುಖ್ಯ ಶಿಕ್ಷಕರು ಸೇರಿ 5 ಮಂದಿ ಶಿಕ್ಷಕರು, ಒಬ್ಬರು ಆಯಾ ಕೆಲಸ ಮಾಡುತ್ತಿದ್ದಾರೆ. ಇವೆಲ್ಲವುಗಳ ನಡುವೆ ಮಕ್ಕಳ ದಾಖಲಾತಿ ಕೊರತೆಯಿದೆ. ಖಾಸಗಿ ಶಾಲೆಗಳ ಪ್ರಭಾವ ಆಂಗ್ಲ ಮಾಧ್ಯಮ ಸೇರಿ ಪ್ರತಿ ಪೋಷಕರಲ್ಲಿ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವುದರಿಂದ ಸರ್ಕಾರಿ ಶಾಲೆ ದಾಖಲಾತಿಗೆ ಹೊಡೆತ ಬಿದ್ದಿದೆ.

ಕಾಲೇಜು ಮೈದಾನ: ವಿದ್ಯಾಭ್ಯಾಸ ಮಾಡುವ ಸಲುವಾಗಿ ಅದಕ್ಕೆ ಬೇಕಾದ ಕಟ್ಟಡಗಳ ನಿರ್ಮಾಣ, ಆ ಕಟ್ಟಡಗಳ ತಳಪಾಯ ವಿನ್ಯಾಸ ನೋಡಿದಾಗ ಬ್ರಿಟಿಷರು ಕಟ್ಟಿಸಿದ ಕಟ್ಟಡಗಳ ವೈಭವಕ್ಕೆ ಪಟ್ಟಣದ ಹೃದಯ ಭಾಗದಲ್ಲಿನ ಸರ್ಕಾರಿ ಕನ್ನಡ ಬಾಲಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸಾಕ್ಷಿಯಂತೆ ನಿಂತಿದೆ. ಈ ಶಾಲೆ ಹೆಸರಿನಲ್ಲಿ ಯಾವುದೇ ರಾಷ್ಟ್ರೀಯ ಕಾರ್ಯಕ್ರಮ ನಡೆದರೂ ಮಾಧ್ಯಮಿಕ ಶಾಲಾ ಮೈದಾನವೆಂದು ಹೆಸರಾಗಿ ನಂತರದ ದಿನಗಳಲ್ಲಿ ಬಾಲಕಿಯರ ಕಾಲೇಜು ಪ್ರಾರಂಭವಾಗಿ ಕಾಲೇಜು ಮೈದಾನ ಎನ್ನಲಾಗುತ್ತಿದೆ.

ಸಿಬ್ಬಂದಿ: ಈ ಶಾಲೆಯಲ್ಲಿ ಮಕ್ಕಳಿಗೆ ಮುಖ್ಯ ಶಿಕ್ಷಕರು ಸೇರಿ 5 ಮಂದಿ ಶಿಕ್ಷಕರು, ಒಬ್ಬರು ಆಯಾ ಕೆಲಸ ಮಾಡುತ್ತಿದ್ದಾರೆ. ಇವೆಲ್ಲವುಗಳ ನಡುವೆ ಮಕ್ಕಳ ದಾಖಲಾತಿ ಕೊರತೆಯಿದೆ. ಖಾಸಗಿ ಶಾಲೆಗಳ ಪ್ರಭಾವ ಆಂಗ್ಲ ಮಾಧ್ಯಮ ಸೇರಿ ಪ್ರತಿ ಪೋಷಕರಲ್ಲಿ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವುದರಿಂದ ಸರ್ಕಾರಿ ಶಾಲೆ ದಾಖಲಾತಿಗೆ ಹೊಡೆತ ಬಿದ್ದಿದೆ.

Advertisement

ಇನ್ಫೋಸಿಸ್‌ ನಾರಾಯಣಮೂರ್ತಿ ಓದಿದ ಶಾಲೆ: ಈ ಶಾಲೆಯಲ್ಲಿ ಇನ್ಫೋಸಿಸ್‌ನ ನಾರಾಯಣಮೂರ್ತಿ, ಜಯದೇವ ಆಸ್ಪತ್ರೆಯ ನಿವೃತ್ತ ವೈದ್ಯರಾದ ಡಾ.ಪ್ರಭುದೇವ್‌, ಡಾ.ವಿಶ್ವನಾಥ್‌ ಓದಿದ್ದಾರೆ. ಅದೆಷ್ಟೋ ಮಂದಿ ರಾಜಕಾರಣಿಗಳು, ಎಂಜನಿಯರು ಈ ಶಾಲೆಯಿಂದ ಕಲಿತ ವಿದ್ಯಾರ್ಥಿಗಳಾಗಿದ್ದಾರೆ. ಕೆಲ ವೈದ್ಯರು ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಶೌಚಾಲಯ, ಕೊಠಡಿಗಳ ಸೌಲಭ್ಯವಿದೆ. ಆದರೆ, ಕಟ್ಟಡಕ್ಕೆ ಸುಣ್ಣ-ಬಣ್ಣ ಬಳಿಯಬೇಕಾಗಿದೆ. ಮುರಿದ ಹೆಂಚು ರಿಪೇರಿ ಮಾಡಿ ಸುಂದರ ವಿನ್ಯಾಸದ ಕಟ್ಟಡದ ಅಸ್ತಿತ್ವವನ್ನು ಉಳಿಸಬೇಕಾಗಿದೆ.

1913 ನೇ ಇಸವಿಯಲ್ಲಿ ಬ್ರಿಟಿಷರಿಂದ ನಿರ್ಮಾಣ: ಈ ಕನ್ನಡ ಶಾಲೆ 1913ನೇ ಸಾಲಿನಲ್ಲಿ ಬ್ರಿಟಿಷರಿಂದ ಕಟ್ಟಲ್ಪಟ್ಟು ಅಂದಿನಿಂದಲೇ ಶಾಲೆ ಆರಂಭವಾಯಿತು. ಇದೀಗ ಶತಮಾನ ಕಂಡು ಸಂಭ್ರಮದ ನಡುವೆ ಶಾಲೆ ಇತಿಹಾಸ ಸ್ಮರಿಸುವಂತಾಗಿದೆ. 1954ನೇ ಸಾಲಿನ ನಂತರ ಮಕ್ಕಳ ದಾಖಲಾತಿ ಮಾಹಿತಿ ಲಭ್ಯವಾಗಿವೆ. ಹೆಂಚಿನ ಕಟ್ಟಡವಾಗಿದ್ದು ಎತ್ತರ ಸುಮಾರು 30 ಅಡಿ ಮೇಲ್ಪಟ್ಟಿದೆ.

ಎತ್ತರದ ಕಿಟಕಿ, ಗಟ್ಟಿಮುಟ್ಟಾದ ಬಾಗಿಲು, ದಪ್ಪದಾದ ಗೋಡೆ, ಕಟ್ಟಡಕ್ಕೆ ಬಳಸಿದ ಪ್ರತಿ ವಸ್ತು ಗುಣಮಟ್ಟದಿಂದ ಕೂಡಿವೆ. ಕಟ್ಟಡ ನಿರ್ಮಾಣದಲ್ಲಿ ಕಾರ್ಮಿಕರು ಗುಣಮಟ್ಟದ ಜೊತೆ ಬಹು ಸುಂದರವಾಗಿ ನಿರ್ಮಿಸಿದ್ದಾರೆ. ಆದರೆ, ಸಣ್ಣಪುಟ್ಟ ದುರಸ್ತಿ ಕಾರ್ಯ ನಡೆಯದೆ ಅಸಡ್ಡೆಗೊಳಪಟ್ಟಂತಿದೆ. ಸದರಿ ಶಾಲೆ ಕೊಠಡಿಗಳನ್ನು ಬ್ರಿಟಿಷರು ಕಟ್ಟಿಸಿದ್ದಾರೆ ಅವರು ಕಟ್ಟಿಸಿದ ಕೊಠಡಿಗಳಲ್ಲಿ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರಿಗಾಗಿ ಕಚೇರಿ ನಿರ್ವಹಣೆಗೆ ಒಂದು ಕೊಠಡಿ, ಉಳಿದ 6 ಕೊಠಡಿ ತರಗತಿ ನಡೆಸಲು ಅನುಕೂಲವಾಗಿದೆ. ಉತ್ತಮ ಗಾಳಿ- ಬೆಳಕು ಬರಲು ಪೂರಕವಾಗಿ ನಿರ್ಮಾಣ ಮಾಡಲಾಗಿದೆ.

ಸ್ವಾತಂತ್ರ್ಯ ನಂತರದ ಬೆಳವಣಿಗೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಕೂಲವಾಗುವಂತೆ ಕಟ್ಟಡದ ಕೊಠಡಿಗಳಿಗೆ ಹೊಂದಿಕೊಂಡು ಶಾಲಾ ಹಿಂಬದಿಗೆ 2 ಕಡೆ ತಲಾ ಒಂದು ಕೊಠಡಿ ನಿರ್ಮಿಸಲಾಗಿದೆ. ತದ ನಂತರ 3 ಕೊಠಡಿ ಕಟ್ಟಿದರೂ ಅದು ಕಳಪೆ ಕಾಮಗಾರಿಯಿಂದ ಗೋಡೆಗಳು ಬಿರುಕು ಬಿಟ್ಟಿವೆ. ಹೀಗಾಗಿ ತರಗತಿ ನಡೆಸಲು ಯೋಗ್ಯವಾಗದೇ ಅದನ್ನು ಬಳಸುತ್ತಿಲ್ಲ. ಜೊತೆಗೆ ಆ ಕೊಠಡಿಗಳ ಸುತ್ತ ಗಿಡಗಂಟಿಗಳು ಬೆಳೆದು ನಿಂತಿವೆ. ಇದನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಉಪಯೋಗಕ್ಕೆ ದುರಸ್ತಿಪಡಿಸಿಕೊಳ್ಳಲಾಗುವುದೆಂದು ಹೇಳಲಾಗಿದೆ.

ಶಾಲೆಯಲ್ಲಿ ಶಿಕ್ಷಕರು ಸೇರಿದಂತೆ ಮೂಲಭೂತ ಸೌಲಭ್ಯಗಳಿದ್ದು ಕಟ್ಟಡಕ್ಕೆ ಸುಣ್ಣ ಬಣ್ಣ ಬಳಿಯಬೇಕು. ವಿದ್ಯಾರ್ಥಿಗಳ ದಾಖಲಾತಿಗಾಗಿ ಪ್ರತಿ ವರ್ಷ ನಮ್ಮ ಶಾಲೆಯಿಂದ ಶಿಕ್ಷಕರು, ಶಾಲಾ ವ್ಯಾಪ್ತಿಯ ವಾರ್ಡುಗಳಲ್ಲಿ ಸಂಚರಿಸಿ ಸರ್ಕಾರಿ ಶಾಲೆಗಳಲ್ಲಿ ಸಿಗಬಹುದಾದ ಸೌಲಭ್ಯ, ಉಪಯೋಗದ ಕುರಿತು ಪೋಷಕರಿಗೆ ಮಾಹಿತಿ ನೀಡಲಾಗುತ್ತಿದೆ. ಆದರೆ, ಪೋಷಕರು ಖಾಸಗಿ ಶಾಲೆಗಳ ಪ್ರಭಾವಕ್ಕೆ ಒಳಗಾಗಿದ್ದಾರೆ.
-ಜಿ.ಎನ್‌.ರಾಮಸ್ವಾಮಿ, ಮುಖ್ಯ ಶಿಕ್ಷಕರು

ಸರ್ಕಾರಿ ಕನ್ನಡ ಮಾಧ್ಯಮಿಕ ಶಾಲೆ ಪಟ್ಟಣದಲ್ಲಿ ಮೊದಲ ಕನ್ನಡ ಶಾಲೆ ಆಗಿದೆ. ಈ ಶಾಲೆ ಶತಮಾನ ಪೂರೈಸಿದ್ದು ಶಾಲೆಯ ಭವ್ಯ ಕಟ್ಟಡದ ವಿನ್ಯಾಸ ಅದರ ಅಸ್ತಿತ್ವ ಉಳಿಸಬೇಕಾಗಿದೆ. ಸದರಿ ಶಾಲೆ ಹೆಸರಿನಲ್ಲಿ ಆಟದ ಮೈದಾನ ಇದೆ. ಇಲ್ಲಿ ಓದಿದ ಸ್ನೇಹಿತರು ದೊಡ್ಡ ಮಟ್ಟದ ಹುದ್ದೆ ಅಲಂಕರಿಸಿದ್ದಾರೆ.
-ಡಾ.ಆರ್‌.ರವಿಕುಮಾರ್‌, 1977-78 ನೇ ಸಾಲಿನ ಹಳೇ ವಿದ್ಯಾರ್ಥಿ, ಪ್ರಸ್ತುತ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.

* ಕೆ.ವಿ.ನಾಗರಾಜ್‌

Advertisement

Udayavani is now on Telegram. Click here to join our channel and stay updated with the latest news.

Next