Advertisement

ಬಹುತ್ವದ ವಿವೇಕ ಸಮಾಜಕ್ಕೆ ಹಂಚುವ ಕನ್ನಡ ಮನಸ್ಸು 

09:05 AM Dec 02, 2017 | |

ವಿದ್ಯಾಗಿರಿ, ಮೂಡಬಿದಿರೆ: “ಮನುಷ್ಯ ಮನುಷ್ಯನ ನಡುವಿನ ಗ್ರಹಿಕೆ ಮತ್ತು ಅವನು ನಂಬಿ ನಡೆಯುವ ಸಿದ್ಧಾಂತಗಳಿಗೂ ಬಹುತ್ವವು ಅನ್ವಯಿಸುತ್ತದೆ. ಇದನ್ನು ಸಾಹಿತ್ಯ, ಕೃತಿಗಳು ಮಾಡುತ್ತಾ ಬಂದಿವೆ. ಕನ್ನಡ ಮನಸ್ಸು ಆದಿಯಿಂದ ಬಹುತ್ವವನ್ನು ಪ್ರಕಟಿಸುತ್ತಾ, ಆರಾಧಿಸುತ್ತಾ, ಆಚರಿಸುತ್ತಾ ಅವರ ವಿವೇಕವನ್ನು ಸಮಾಜಕ್ಕೆ ಹಂಚುತ್ತಾ ಬಂದಿದೆ. ಜನಪದವೂ ಮಾಡಿದೆ ಎಂದು ಸಾಹಿತಿ, ಚಲನಚಿತ್ರ ನಿರ್ದೇಶಕ ಡಾ| ನಾಗತಿಹಳ್ಳಿ ಚಂದ್ರಶೇಖರ್‌ ಅವರು ಆಳ್ವಾಸ್‌ ನುಡಿಸಿರಿಯ 14ನೇ ಆವೃತ್ತಿಯ ಸಮ್ಮೇಳನಾಧ್ಯಕ್ಷರಾಗಿ ಅಭಿಪ್ರಾಯಪಟ್ಟರು.

Advertisement

ಅವರು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ್‌ ಆಳ್ವರ ಸಾರಥ್ಯದಲ್ಲಿ ಮೂಡಬಿದಿರೆಯಲ್ಲಿ “ಕರ್ನಾಟಕ: ಬಹುತ್ವದ ನೆಲೆಗಳು’ ಪರಿಕಲ್ಪನೆಯಲ್ಲಿ ಮೂರು ದಿನ ನಡೆಯಲಿರುವ ನುಡಿಸಿರಿ ಸಮ್ಮೇಳನದಲ್ಲಿ ಮಾತನಾಡುತ್ತಿದ್ದರು. “ಬಹುತ್ವ ಭಾಷೆಗೆ ಸೀಮಿತವಲ್ಲ. ಜಾತಿ ಧರ್ಮ ಗಳಿಗೂ ಸೀಮಿತವಲ್ಲ. ಆಸ್ತಿಕರು ನಾಸ್ತಿಕರನ್ನು ತಾಳಿ ಕೊಳ್ಳಬೇಕು. ನಾಸ್ತಿಕರು ಆಸ್ತಿಕರನ್ನು ತಾಳಿಕೊಳ್ಳಬೇಕು. ನಮ್ಮ ದಲ್ಲದ ಸಿದ್ಧಾಂತದ ಬಗ್ಗೆ ಕನಿಷ್ಠ ಕುತೂ ಹಲ  ವನ್ನಾ ದರೂ ಉಳಿಸಿಕೊಳ್ಳಬೇಕು’ ಎಂದರು.

ಸಾಂಸ್ಕೃತಿಕ ಜಾಲತಾಣ
ಇದು ಅನುಮಾನದ ಯುಗ. ಆದರೆ, ಅನೇಕ ಹತಾಶೆಯ ನಡುವೆಯೂ ನಾವು ನಾಳೆ ಗಳಿಗೆ ಸನ್ನದ್ಧ ರಾಗಬೇಕಿದೆ. ನಮ್ಮ ನಡುವೆ ಇರುವ ಕಿಡಿಗಳನ್ನು ಬೆಂಕಿಯಾಗಿಸದೆ ಹಣತೆಯಾಗಿಸಿಕೊಳ್ಳಬೇಕಿದೆ. ಕಠೊರ ವಾಸ್ತವಗಳ ನಡುವೆಯೂ ನಾವು ಕನಸನ್ನು ಕಾಪಾಡಿಕೊಳ್ಳಬೇಕಾಗಿದೆ. ವಿಜ್ಞಾನವನ್ನು ಮುನ್ನೆಲೆಗೆ ತರಬೇಕಾಗಿದೆ. ಮೌಡ್ಯಗಳನ್ನು ಅಳಿಸ ಬೇಕಿದೆ. ಸಾಮಾಜಿಕ ಜಾಲತಾಣವನ್ನು ಸಾಂಸ್ಕೃತಿಕ ಜಾಲತಾಣ ವನ್ನಾಗಿಸಬೇಕಾಗಿದೆ. ಇಲ್ಲಿ ತುಂಬಿ ತುಳುಕುವ ಜಡ ಮಾಹಿತಿಗಳನ್ನು ಅರಿವಿನ ಅಮೃತವನ್ನಾಗಿಸಿಕೊಳ್ಳಬೇಕಿದೆ.

ಬಹುತ್ವವೆಂದರೆ, ಕೇವಲ ಬಾಹ್ಯರೂಪದ ವಿವಿಧ ಬಣ್ಣಗಳಲ್ಲ. ಅದು ಸೃಷ್ಟಿಯ ಸೋಜಿಗ ಕೂಡಾ. ಬಹುತ್ವದ ಬೀಜದಿಂದ ಅಖಂಡ ವಾದ ಅನನ್ಯವಾದ ಸೃಷ್ಟಿಶೀಲ ಅಭಿವ್ಯಕ್ತಿ ಟಿಸಿಲೊಡೆಯ ಬಲ್ಲುದು. ಅದು ಎತ್ತಣ ಮಾಮರದ ಮೇಲೆ ಎತ್ತಣಿಂದಲೋ ಬಂದು ಕುಳಿತ ಕೋಗಿಲೆಯ ಹಾಡಿ ನಂತೆ. ಬಹುತ್ವವನ್ನು ನಿರಾಕರಿಸುವುದು ಬದುಕನ್ನೇ ನಿರಾಕರಿಸಿದಂತೆ ಎಂದು ವಿಶ್ಲೇಷಿಸಿದರು.

ಸಮತೆ- ಸಮಾನತೆ
ಸಮತೆ, ಸಮಾನತೆ ಅನ್ನುವುದು ಬಹುತ್ವದ ಸಮಾ ನಾರ್ಥಕ ಪದಗಳಾಗಿವೆ. ಅನೇಕ ವಚನ ಕಾರರ ಹೆಸರಿನ ಪೂರ್ವಾರ್ಧಗಳೇ ನಮ್ಮ ಸಮಾಜದ ಬಹುತ್ವದ ಬೇರುಗಳನ್ನು ಪರಿಚಯಿ ಸುತ್ತದೆ. ಸಮಾನತೆಯನ್ನು ಸಾರುತ್ತವೆ ಎಂದರು ನಾಗತಿಹಳ್ಳಿ. ಜಗತ್ತು ಶಾಂತವಾಗಿ ನಡೆಯಲು ಬಹುತ್ವದ ರಕ್ಷಣೆ ಮತ್ತು ಗೌರವಗಳು ಅಗತ್ಯವಿರು ವಂತೆಯೇ ಹಲವು ಬಹುತ್ವಗಳ ನಡುವೆ ಪ್ರೀತಿ ಹೊಂದಾ ಣಿಕೆಯು ಅಗತ್ಯವಾಗಿರುತ್ತದೆ. ಈಗ ಬಹುತೇಕ ನಗರಗಳು ವಿವಿಧ ಬಣ್ಣ, ಸಮುದಾಯಗಳಿಂದ ತುಂಬಿ ತುಳುಕ ತೊಡಗಿವೆ. ಹಲವು ಬಹುತ್ವಗಳು ಏಕೀಭವಿಸುವಾಗ ಸಂಘರ್ಷದ ಅಪಾಯವೂ ಇದೆ. ವಲಸೆ ಬಂದವರು ತಾವು ಸೇರಿದ ನೆಲದ ಸಂಸ್ಕೃತಿ, ಆಚಾರ ವಿಚಾರಗಳನ್ನು ಗೌರವಿಸಿದರೆ ಅದು ಸಾಮರಸ್ಯವೆಂದು ವಿವರಿಸಿದರು.

Advertisement

ಯಕ್ಷಗಾನದ ನಂಟು
ಕರಾವಳಿಯ ಅಭಿಜಾತ ಕಲೆಯಾದ ಯಕ್ಷ ಗಾನಕ್ಕೂ ಸಾಂಸ್ಕೃತಿಕ ಬಹುತ್ವಕ್ಕೂ ವಿಶೇಷವಾದ ನಂಟಿದೆ. ಬಪ್ಪನಾಡು ಕ್ಷೇತ್ರ ಮಹಾತ್ಮೆಯನ್ನು ಉಲ್ಲೇಖೀಸಬಹುದು. ಕರಾವಳಿಯಲ್ಲಿ ಕನ್ನಡ ವನ್ನು ಕಟ್ಟಲು ತುಳು, ಕೊಡವ, ಕೊಂಕಣಿ, ಬ್ಯಾರಿ, ಲಂಬಾಣಿ ಮಾತೃಭಾಷೆಯ ಅನೇಕರು ಶ್ರಮಿಸಿದ್ಧಾರೆ. ಕನ್ನಡ ನಾಡು ಅನ್ನುವುದೇ ಒಂದು ಬಹುರೂಪಿ ಮನಸ್ಸು. 

ಹತ್ತಾರು ವಿಷಯಗಳಲ್ಲಿ ಜಗತ್ತಿನ ಗಮನ ಸೆಳೆದ ಈ ಮಂಗಳೂರು ಪ್ರಾಂತಕ್ಕೆ ಇತ್ತೀಚೆಗೆ ಕಳಂಕ ತರಲು ಹಲವರು ಯತ್ನಿಸಿರುವುದಕ್ಕೆ ಸಂಕಟವಾಗುತ್ತಿದೆ. ಆದರೆ, ಕರಾವಳಿಯಲ್ಲಿರುವ ಕೆಲವು ಸಂಗತಿಗಳು ನಾಳಿನ ಬಗ್ಗೆ ಆಸೆ ಹುಟ್ಟಿಸುತ್ತಿವೆ. ಬಹುತ್ವವು ತನ್ನ ಅಸ್ಮಿತೆಯನ್ನು ಕಳೆದುಕೊಳ್ಳದೆ ಏಕೀಭವಿಸುವ ಅನೇಕ ಉದಾಹರಣೆಗಳು ಇಲ್ಲಿವೆ ಎಂದು ಶ್ಲಾಘಿಸಿದರು.

ಅತ್ಯಮೂಲ್ಯ ಕ್ಷಣ
ಈ ನುಡಿಸಿರಿಯ ಅಧ್ಯಕ್ಷತೆ ವಹಿಸುತ್ತಿರುವುದು ತನ್ನ ಪಾಲಿಗೆ ಅತ್ಯಮೂಲ್ಯ ಕ್ಷಣ ಎಂದರು ನಾಗತಿ ಹಳ್ಳಿ ಚಂದ್ರಶೇಖರ್‌ ಅವರು. ಇದುವರೆಗೆ ತಾನು ಪಡೆದಿರುವ ಎಲ್ಲ ಪ್ರಶಸ್ತಿ, ಪುರಸ್ಕಾರಗಳಿಗಿಂತ ಬಹಳ ಹಿರಿದು ಎಂದರು. ತಾನು ಹುಟ್ಟೂರಿನಲ್ಲಿ ಸಂಘಟಿಸುತ್ತಿರುವ ನಾಗತಿಹಳ್ಳಿ ಸಂಸ್ಕೃತಿ ಹಬ್ಬಕ್ಕೆ ಡಾ | ಮೋಹನ್‌ ಆಳ್ವರು ಬರುತ್ತಿರುತ್ತಾರೆ. ಆಳ್ವರ ವಿದ್ಯಾಲಯದ ವಿದ್ಯಾರ್ಥಿಗಳ ಪ್ರತಿಭೆ ಕಂಡು ಬೆರಗಾಗಿದ್ದೇನೆ ಎಂದರು. 

ಎಲ್ಲರ ಬಳಿ ವಿಕಿರಣಗಳ ಅಣುಬಾಂಬ್‌ ಇದೆ!
 ಅಮೆರಿಕ, ಉತ್ತರ ಕೊರಿಯಾಗಳಲ್ಲಿ ಮಾತ್ರವಲ್ಲ; ನಮ್ಮೆಲ್ಲರ ಬಳಿಯೂ ಅಣುಬಾಂಬ್‌ಗಳಿವೆ- ಮೊಬೈಲ್‌ಗ‌ಳಾಗಿ! ಇದು ವಿಕೃತ ವಿಕಿರಣಗಳನ್ನು ಕ್ಷಣ ಮಾತ್ರದಲ್ಲಿ  ಹರಡಬಲ್ಲುದು. ಸಾಮಾಜಿಕ ಜಾಲತಾಣಗಳಲ್ಲಿ ವಿಷಬೀಜ ಬಿತ್ತಬಲ್ಲುದು. ಟಿವಿ ಮಾಧ್ಯಮ ಗ್ರಾಹಕ- ಉತ್ಪಾದಕರ ನಡುವೆ ನಿಂತ ವೇಷಧಾರಿ ದಲ್ಲಾಲಿ. ಚಲನಚಿತ್ರ ಮಾಧ್ಯಮ ರಂಜನೆಯ ಹೆಸರಲ್ಲಿ ಬಂಡವಾಳಶಾಹಿಗಳ ಕಪಿಮುಷ್ಟಿಯಲ್ಲಿದೆ. ಬಹುತ್ವದ ಭಾಗವಾಗಿ ಈ ಹಿಂದೆ ಚಳವಳಿಗಳು ಸ್ಫೋಟಿಸುತ್ತಿದ್ದವು. ಈಗ ಕುಳಿತಲ್ಲೇ ಕ್ರಾಂತಿ – ಒಂದು ಬಟನ್‌ ಒತ್ತಿ ಲೈಕ್‌ ಮಾಡುವ ನಿಷ್ಕ್ರಿಯತೆ ಇದೆ. ಮಹಾತ್ಮ ಗಾಂಧಿಯವರ ಕಾಲದಲ್ಲಿ  ಸಾಮಾಜಿಕ ಜಾಲತಾಣ ಇದ್ದಿದ್ದರೆ, ಅವರು ಉಪ್ಪಿನ ಸತ್ಯಾಗ್ರಹಕ್ಕೆ ಕರೆಕೊಟ್ಟಾಗ ಎಲ್ಲರೂ ಲೈಕ್‌ ಮಾಡಿ ಮನೆಯಲ್ಲೇ ಕುಳಿತುಕೊಂಡು ಮೆಸೇಜ್‌ ಫಾರ್ವರ್ಡ್‌ ಮಾಡುತ್ತಿದ್ದರೇನೋ!

ನಾಗತಿಹಳ್ಳಿ  ಮೇಷ್ಟ್ರು  ಹೇಳಿದ್ದು…
    ಕುಟುಂಬದ ಸದಸ್ಯರೆಲ್ಲ ನಾವು ಒಂದೇ ಸಂತಾನ ಅಂದಾಗ ಮಾತ್ರ ಕುಟುಂಬ ಉಳಿಯುತ್ತದೆ.
    ಆರೋಗ್ಯಕರ ವಾಗ್ವಾದಗಳು, ಸಮಾಜಮುಖೀ ಟೀಕೆಗಳು ಒಂದು ಸಹಜ ವಾಸ್ತವ ಸ್ಥಿತಿ.
    ರಾಷ್ಟ್ರಗೀತೆ ದೇಶದ ಕಾವ್ಯಾತ್ಮಕ ರೆಸ್ಯೂಮ್‌, ನಾಡಗೀತೆ ನಮ್ಮ ಕರ್ನಾಟಕದ ರೆಸ್ಯೂಮ್‌ ಆಗಿದೆ. ರಾಷ್ಟ್ರಗೀತೆ, ನಾಡಗೀತೆ, ರೈತಗೀತೆಗಳಿಂದ ದೊರೆಯುವ ಕಾವ್ಯಲಾಭ ಅನಿರ್ವಚನೀಯ. 
    ಕಾಡಿಗೆ ಚೆಲುವು ಬರುವುದು ನೂರಾರು ತರುಲತೆಗಳಿಂದ. ಒಂದೇ ಜಾತಿಯ ಮರಗಳಿರುವ ಕಾಡಿಗೆ ಸೌಂದರ್ಯವೆಲ್ಲಿ? 
    ನನ್ನ ಮತ್ತು ಡಾ| ಆಳ್ವರ ಸ್ನೇಹಕ್ಕೆ ಬರಿಯ 15 ವರ್ಷ. ನನ್ನದೂ ಅವರದು ಅಪ್ಪಟ ಸಾಂಸ್ಕೃತಿಕ ಸಂಬಂಧ. ಸಮಾನ ಆಸಕ್ತಿ, ಅಭಿರುಚಿಗಳು ನಮ್ಮನ್ನು  ಒಗ್ಗೂಡಿಸಿವೆ.

ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next