Advertisement

ಕೈಕುಂಜೆ ಬಳಿ ನಿರ್ಮಾಣಗೊಳ್ಳುತ್ತಿದೆ “ಕನ್ನಡ ಭವನ’

12:24 AM Feb 19, 2020 | mahesh |

ಬಂಟ್ವಾಳ: ಸಾಹಿತ್ಯಿಕ ಚಟುವಟಿಕೆಗಳನ್ನು ನಡೆಸುವುದಕ್ಕೆ ಸುಸಜ್ಜಿತ ಕಟ್ಟಡದ ವ್ಯವಸ್ಥೆ ಬೇಕು ಎಂಬ ಉದ್ದೇಶದಿಂದ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ “ಕನ್ನಡ ಭವನ’ ನಿರ್ಮಾಣಕ್ಕೆ ಮುಂದಾಗಿದ್ದು, ಅನುದಾನಗಳ ಕೊರತೆಯ ನಡುವೆಯೂ ಈಗಾಗಲೇ ಕಟ್ಟಡದ ಬಹುತೇಕ ಕಾಮಗಾರಿಗಳನ್ನು ಮುಗಿಸಿಕೊಂಡಿದೆ.

Advertisement

ಬಂಟ್ವಾಳ ತಾಲೂಕು ಕೇಂದ್ರ ಬಿ.ಸಿ. ರೋಡ್‌ನ‌ ಕೈಕುಂಜೆ ಬಳಿ (ಮೆಸ್ಕಾಂ ಕಚೇರಿಯ ಮುಂಭಾಗದಲ್ಲಿ) ಜಿ ಪ್ಲಸ್‌ ವನ್‌ ಮಾದರಿಯ ಕಟ್ಟಡ ಸಿದ್ಧಗೊಂಡಿದ್ದು, ಈಗಾಗಲೇ ಸುಮಾರು 60 ಲಕ್ಷ ರೂ.ಗಳ ಕಾಮಗಾರಿ ಪೂರ್ಣಗೊಂಡಿದೆ. ವಿವಿಧ ಅನುದಾನಗಳನ್ನು ಕ್ರೋಢೀಕರಿಸಿ ಕಟ್ಟಡ ನಿರ್ಮಾಣವಾಗಿದ್ದು, ಪೂರ್ತಿಗೊಳ್ಳಲು ಪರಿಷತ್‌ ಇನ್ನಷ್ಟು ಅನುದಾನದ ನಿರೀಕ್ಷೆಯಲ್ಲಿದೆ.

4,000 ಚ.ಅಡಿ ವಿಸೀರ್ಣ
ಕೈಕುಂಜೆಯಲ್ಲಿರುವ ತಾಲೂಕು ಸಾಹಿತ್ಯ ಪರಿಷತ್‌ನ 8 ಸೆಂಟ್ಸ್‌ ಜಾಗದಲ್ಲಿ ಈ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು, ತಲಾ 2 ಸಾವಿರ ಚದರ ಅಡಿ ವಿಸ್ತೀರ್ಣ ಸೇರಿದಂತೆ ಒಟ್ಟು 4 ಸಾವಿರ ಚ.ಅಡಿ ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದೆ. ತಳ ಅಂತಸ್ತಿನಲ್ಲಿ ಬಾಡಿಗೆಯ ಉದ್ದೇಶದಿಂದ ಎರಡು ಅಂಗಡಿ ಕೋಣೆಗಳನ್ನು ನಿರ್ಮಿಸಲಾಗಿದೆ.

ಮೇಲಿನ ಅಂತಸ್ತಿನಲ್ಲಿ ಸುಮಾರು 250 ಮಂದಿ ಸಾಮರ್ಥ್ಯದ ಸಭಾಂಗಣ, ವೇದಿಕೆ (ಸ್ಟೇಜ್‌) ಜತೆಗೆ ಶೌಚಾಲಯಗಳು, ಗ್ರೀನ್‌ ರೂಮ್‌ಗಳು ನಿರ್ಮಾಣವಾಗಿವೆ. ಈಗಾಗಲೇ ಕಟ್ಟಡ ನಿರ್ಮಾಣವಾಗಿದ್ದು, ಸುಣ್ಣ ಬಳಿದು ಬಿಡಲಾಗಿದೆ. ಕಟ್ಟಡ ನಿರ್ವಹಣೆಯ ದೃಷ್ಟಿಯಿಂದ 2 ಅಂಗಡಿ ಕೋಣೆಗಳನ್ನು ನಿರ್ಮಿಸಲಾಗಿದ್ದು, ಶೀಘ್ರದಲ್ಲಿ ಅದನ್ನು ಬಾಡಿಗೆಗೆ ನೀಡುವ ಕುರಿತು ಯೋಚಿಸಲಾಗುತ್ತಿದೆ ಎಂದು ಕಸಾಪ ತಾಲೂಕು ಅಧ್ಯಕ್ಷರು ಹೇಳುತ್ತಾರೆ.

ಕಸಾಪ ತಾಲೂಕು ಸಮಿತಿಯ ನಿಯೋಗ ಸರಕಾರದ ಅನುದಾನಕ್ಕಾಗಿ ಉಸ್ತುವಾರಿ ಸಚಿವರು ಸೇರಿದಂತೆ ಈಗಿನ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅವರ ಬಳಿಯೂ ಮನವಿ ಮಾಡಿದ್ದು, ಬೆಂಗಳೂರಿಗೆ ನಿಯೋಗದ ಮೂಲಕ ತೆರಳಿ ಸಂಬಂಧಪಟ್ಟ ಸಚಿವರು, ಅಧಿಕಾರಿಗಳ ಜತೆ ಮಾತನಾಡಿ ಅನುದಾನದ ತರಿಸುವ ಕುರಿತು ಶಾಸಕರು ಕಸಾಪಕ್ಕೆ ಭರವಸೆ ನೀಡಿದ್ದಾರೆ ಎಂದು ಪರಿಷತ್‌ ಹೇಳುತ್ತಿದೆ.

Advertisement

ಜತೆಗೆ ಮಂಗಳೂರು ವಿಧಾನಸಭಾ ಕ್ಷೇತ್ರವು ಬಂಟ್ವಾಳ ತಾಲೂಕಿನ ವ್ಯಾಪ್ತಿಯನ್ನೂ ಒಳಗೊಂಡಿರುವುದರಿಂದ ಅಲ್ಲಿನ ಶಾಸಕ ಯು.ಟಿ. ಖಾದರ್‌ ಅವರ ಬಳಿ ಮನವಿ ನೀಡಲಾಗಿದೆ. ಅವರು 5 ಲಕ್ಷ ರೂ. ಗಳಿಗಾಗಿ ಜಿಲ್ಲಾಧಿಕಾರಿಗೆ ಬರೆದಿದ್ದು, ಆ ಅನುದಾನ ಪ್ರಸ್ತುತ ಜಿ.ಪಂ. ಎಂಜಿನಿಯರಿಂಗ್‌ ವಿಭಾಗಕ್ಕೆ ಬಂದಿದೆ ಎಂದು ಪರಿಷತ್‌ ಮಾಹಿತಿ ನೀಡುತ್ತಿದೆ.

ಸರಕಾರದ ಅನುದಾನದ ಜತೆಗೆ ಇತರ ಕಂಪೆನಿಗಳ ಸಿಎಸ್‌ಆರ್‌ ಅನುದಾನಕ್ಕೂ ಈ ಹಿಂದೆ ಸಂಸದರ ಮೂಲಕ ಮನವಿ ಮಾಡಲಾಗಿತ್ತು. ಜತೆಗೆ ಕಸಾಪ ರಾಜ್ಯ ಘಟಕವು ಕಟ್ಟಡ ಪೂರ್ಣಗೊಂಡ ಬಳಿಕ ಪೀಠೊಪಕರಣಗಳಿಗೆ ಅನುದಾನ ನೀಡುವ ಭರವಸೆ ನೀಡಿದೆ.ದ.ಕ.ಜಿಲ್ಲೆಯ ಸುಳ್ಯ ತಾಲೂಕನ್ನು ಹೊರತು ಪಡಿಸಿದರೆ ಬೇರೆ ಎಲ್ಲಿಯೂ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನವಿಲ್ಲ. ಹೀಗಾಗಿ ಬಂಟ್ವಾಳದಲ್ಲಿ ಸುಸಜ್ಜಿತ ಭವನವಾಗಿ ಕನ್ನಡ ಭವನ ನಿರ್ಮಾಣವಾದರೆ ಇಡೀ ಜಿಲ್ಲೆಗೆ ಅದು ಮಾದರಿಯಾಗಲಿದೆ.

30 ಲಕ್ಷ ರೂ.ಗಳ ಪ್ರಸ್ತಾವನೆ
ತಾಲೂಕಿನ ಕನ್ನಡ ಭವನ ನಿರ್ಮಾಣಕ್ಕೆ 10 ಲಕ್ಷ ರೂ.ಗಳನ್ನು ಕನ್ನಡ ಸಾಹಿತ್ಯ ಪರಿಷತ್‌ ಬೆಂಗಳೂರು ನೀಡಿದ್ದು, ಹಿಂದೆ ಸಚಿವರಾಗಿದ್ದ ಬಿ. ರಮಾನಾಥ ರೈ ಅವರು ತಮ್ಮ ಅನುದಾನವಾಗಿ 5 ಲಕ್ಷ ರೂ.ಗಳನ್ನು ನೀಡಿದ್ದಾರೆ. ಕಟ್ಟಡ ನಿರ್ಮಾಣಕ್ಕಾಗಿ ರಾಜ್ಯ ಸರಕಾರಕ್ಕೆ 30 ಲಕ್ಷ ರೂ.ಗಳ ಪ್ರಸ್ತಾವನೆಯನ್ನು ಹಿಂದೆಯೇ ಕಳುಹಿಸಲಾಗಿದ್ದು, ಆಗ ಶಾಸಕರಾಗಿದ್ದ ಬಿ. ರಮಾನಾಥ ರೈ ಅವರು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದರು.

60 ಲಕ್ಷ ರೂ.ಕಾಮಗಾರಿ ಪೂರ್ಣ
ಅನುದಾನದ ಕೊರತೆಯ ಮಧ್ಯೆಯೂ ಕನ್ನಡ ಭವನದ ನಿರ್ಮಾಣ ಒಂದು ಹಂತವನ್ನು ತಲುಪಿದ್ದು, ಕಟ್ಟಡದ ತಳಭಾಗದಲ್ಲಿರುವ ಅಂಗಡಿ ಕೋಣೆಗಳನ್ನು ಶೀಘ್ರ ಬಾಡಿಗೆಗೆ ನೀಡುವ ಯೋಚನೆ ಪರಿಷತ್ತಿನ ಮುಂದಿದೆ. ದಾನಿಗಳ ಸಹಕಾರದಿಂದ ಈಗಾಗಲೇ ಸುಮಾರು 60 ಲಕ್ಷ ರೂ.ಗಳ ಕಾಮಗಾರಿ ನಡೆದಿದ್ದು, ಇನ್ನೂ ಸಾಕಷ್ಟು ಅನುದಾನದ ಅಗತ್ಯವಿದೆ. 30 ಲಕ್ಷ ರೂ.ಗಳ ಅನುದಾನಕ್ಕಾಗಿ ಸರಕಾರಕ್ಕೂ ಪ್ರಸ್ತಾವನೆ ಕಳುಹಿಸಲಾಗಿದೆ.
 - ಕೆ.ಮೋಹನ್‌ ರಾವ್‌, ಅಧ್ಯಕ್ಷರು, ಕಸಾಪ, ಬಂಟ್ವಾಳ ತಾಲೂಕು

-ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next