Advertisement

ದ. ಕನ್ನಡ: 228 ಕಿರಿಯ ಪುರುಷ ಆರೋಗ್ಯ ಸಹಾಯಕರ ಹುದ್ದೆಗಳ ಪೈಕಿ 181 ಖಾಲಿ

12:49 AM Aug 13, 2019 | Sriram |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ತಳ ಮಟ್ಟದಲ್ಲಿ ಕೆಲಸ ಮಾಡುವ ಕಿರಿಯ ಪುರುಷ ಆರೋಗ್ಯ ಸಹಾಯಕರ ತೀವ್ರ ಕೊರತೆ ಇದೆ. ಹಾಗಿದ್ದರೂ ಇಲಾಖೆಯು ಜನರಿಗೆ ಒದಗಿಸುವ ಸೇವೆಯಲ್ಲಿ ಚ್ಯುತಿ ಆಗದಂತೆ ಕಾರ್ಯ ನಿರ್ವಹಿಸುತ್ತಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ರಾಮಕೃಷ್ಣ ರಾವ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

ಜಿಲ್ಲೆಯಲ್ಲಿ ಕಿರಿಯ ಪುರುಷ ಆರೋಗ್ಯ ಸಹಾಯಕರ 228 ಹುದ್ದೆಗಳಿದ್ದು, 47 ಹುದ್ದೆಗಳು ಮಾತ್ರ ಭರ್ತಿ ಆಗಿವೆ. 181 ಹುದ್ದೆ ಖಾಲಿ ಇವೆ. ಕಿರಿಯ ಆರೋಗ್ಯ ಸಹಾಯಕರಾಗಿ ಕೆಲಸ ಮಾಡಲು ಜಿಲ್ಲೆಯ ಅಭ್ಯರ್ಥಿಗಳು ಯಾರೂ ಮುಂದೆ ಬರುತ್ತಿಲ್ಲ. ಹೊರ ಜಿಲ್ಲೆಯ ಅಭ್ಯರ್ಥಿಗಳು ನೇಮಕಗೊಳ್ಳುತ್ತಿದ್ದು, ಅವರು ಒಂದೆರಡು ವರ್ಷ ಕೆಲಸ ಮಾಡಿ ತಮ್ಮ ಊರಿಗೆ ವರ್ಗಾವಣೆ ಮಾಡಿಸಿಕೊಂಡು ತೆರಳುತ್ತಾರೆ. ಹಾಗಾಗಿ ಸಮಸ್ಯೆ ತಲೆದೋರಿದೆ ಎಂದರು.

ಎರವಲು ಸೇವೆ
ಇಷ್ಟೊಂದು ಅಧಿಕ ಪ್ರಮಾಣದಲ್ಲಿ ಖಾಲಿ ಹುದ್ದೆ ಇದ್ದರೂ ಸೇವಾ ಸೌಲಭ್ಯ ಒದಗಿಸುವಲ್ಲಿ ಅಡಚಣೆ ಆಗಿಲ್ಲ. ಮಂಗಳೂರು ನಗರದಲ್ಲಿ ಡೆಂಗ್ಯೂ ಕಾಯಿಲೆ ಹರಡಿರುವ ಈ ಸಂದರ್ಭದಲ್ಲಿ ಜಿಲ್ಲೆಯ ಬೇರೆ ತಾಲೂಕುಗಳಲ್ಲಿರುವ ಕಿರಿಯ ಪುರುಷ ಆರೋಗ್ಯ ಸಹಾಯಕ/ಸಹಾಯಕಿಯರ ಸೇವೆಯನ್ನು ಬಳಸಿಕೊಳ್ಳಲಾಗಿದೆ ಎಂದು ವಿವರಿಸಿದರು.

ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಮಂಜೂರಾತಿ ಹುದ್ದೆ 444 ಇದ್ದು ಈ ಪೈಕಿ 346 ಮಂದಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. 98 ಹುದ್ದೆ ಖಾಲಿ ಇವೆ. ಲ್ಯಾಬ್‌ ಟೆಕ್ನೀಶಿಯನ್‌ಗಳು 80ರಲ್ಲಿ 52 ಮಂದಿ ಕಾರ್ಯ ನಿರ್ವಹಿಸುತ್ತಿದ್ದು, 28 ಹುದ್ದೆ ಖಾಲಿ ಇವೆ. ಫಾರ್ಮಸಿಸ್ಟ್‌ ಹುದ್ದೆ 87 ಇದ್ದು, ಈ ಪೈಕಿ 27 ಮಂದಿ ಇದ್ದಾರೆ. 60 ಹುದ್ದೆ ಖಾಲಿ ಇವೆ ಎಂದು ಆರೋಗ್ಯ ಅಧಿಕಾರಿ ತಿಳಿಸಿದರು.

ಜಿಲ್ಲೆಯಲ್ಲಿ ಇರುವ 74 ಪ್ರಾಥಮಿಕ ಆರೋಗ್ಯ
ಕೇಂದ್ರಗಳ ಪೈಕಿ 63 ಕಡೆ ಮಾತ್ರ ವೈದ್ಯಾಧಿಕಾರಿಗಳಿದ್ದಾರೆ. ಅವರಲ್ಲಿ 31 ಜನ ಖಾಯಂ ಹಾಗೂ 32 ಜನ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಖಾಯಂ ವೈದ್ಯಾಧಿಕಾರಿ ಇಲ್ಲದಿದ್ದರೂ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವಾರದಲ್ಲಿ 2- 3 ದಿನ ವೈದ್ಯರ ಸೇವೆ ಲಭ್ಯವಿರುತ್ತದೆ ಎಂದರು.

Advertisement

ಡೆಂಗ್ಯೂ: 2 ಸಾವು ಮಾತ್ರ ದೃಢೀಕರಣ
ಪ್ರಸಕ್ತ ಮಳೆಗಾಲದಲ್ಲಿ ಶಂಕಿತ ಡೆಂಗ್ಯೂ ಪ್ರಕರಣ ದಲ್ಲಿ ಸಾವನ್ನಪ್ಪಿದ ಐವರ‌ಲ್ಲಿ ಇಬ್ಬರದ್ದು ಮಾತ್ರ ದೃಢೀಕರಣ ಗೊಂಡಿದೆ. ಕಡಬದ ವೀಣಾ ನಾಯಕ್‌ ಮತ್ತು ಮಂಗಳೂರಿನ ನಾಗೇಶ್‌ ಪಡು ಡೆಂಗ್ಯೂನಲ್ಲಿ ಸಾವನ್ನಪ್ಪಿರುವುದಾಗಿ ಎಲಿಸಾ ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ಡಾ| ರಾಮಕೃಷ್ಣ ರಾವ್‌ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next