Advertisement
ತಲೆಗೆ ಮುಂಡಾಸು ಸುತ್ತಿ, ಕೈಯಲ್ಲಿ ಬಾರುಕೋಲು ಹಿಡಿದು, ಅಚ್ಚಬಿಳಿ ಬಟ್ಟೆಗೆ ಕೆಸರು ಮೆತ್ತಿಕೊಂಡ ವ್ಯಕ್ತಿ “ಬಲ (ಬಾ) ಬೊಳ್ಳ ಬಲ, ಬಲ ಕಾಳ ಬಲ..’ ಎಂದು ಎರಡೂ ಕೈಗಳಿಂದ ಕರೆಯುತ್ತಿದ್ದಂತೆಯೇ, ಕಣ್ಣೆವೆಯಿಕ್ಕದಂತೆ ನೋಡುತ್ತಿದ್ದ ಜನಸಾಗರದ ಹರ್ಷೋದ್ಗಾರದ ನಡುವೆ, ಕೆಸರುಗದ್ದೆಯಲ್ಲಿ ಓಡುತ್ತಿದ್ದ ಕೋಣ ಗುರಿ ತಲುಪಿತ್ತು. “ಸೂರ್ಯ ಕರೆಯ (ಟ್ರಾಕ್) ಕೋಣ ವಿಜಯೀ’ ಎಂದು ಮೈಕು ಮುಗಿಲು ಮುಟ್ಟುವಂತೆ ಉದ್ಘೋಷಿಸಿತು. ಕೋಣದ ಈ ಅದ್ಭುತದ ಹಿಂದೆ ಕಾಣದೆ ಕುಳಿತಿದ್ದವ, ಅಲ್ಲೇ ಕುಣಿದು ಕುಪ್ಪಳಿಸಿದ್ದ. ಅವನ ಮುಖದಲ್ಲಿ ಹರ್ಷ, ರೋಮಾಂಚನ.
Related Articles
Advertisement
ಕಂಬಳದ ಹಿಂದಿನ ಲಕ್ಷುರಿ ಬಜೆಟ್: 900 ವರ್ಷಗಳ ಇತಿಹಾಸವಿರುವ ಕಂಬಳಕ್ಕೆ ಕೋಣ ಸಾಕುವುದು, ಲಕ್ಷಾಂತರ ರೂ. ಖರ್ಚಿನ ವಿಷಯ. ಪದಕ ಗೆದ್ದ ಕೋಣದ ಬೆಲೆ 15 ಲಕ್ಷ ರೂ.ಗಳನ್ನು ಮೀರಿದ್ದೂ ಇದೆ. ಕೋಣವನ್ನು ಎಳವೆಯಲ್ಲಿಯೇ ಆರಿಸಿ, ಕಂಬಳಕ್ಕಾಗಿ ಸಜ್ಜುಗೊಳಿಸುತ್ತಾರೆ. ಹಟ್ಟಿಯಲ್ಲಿ ಕೋಣವನ್ನು ತಂಪಾಗಿಡಲೆಂದೇ ಫ್ಯಾನ್ ಗಿರ್ರನೆ ತಿರುಗುತ್ತಿರುತ್ತದೆ. ಹನಿನೀರು ಸಿಂಪಡಣೆಯೇ ಇದಕ್ಕೆ ಷವರ್‌ಬಾತ್.
ಮೈಕೆಲ್ ಪೆಲ್ಪ್ಗೂ ಕಮ್ಮಿಯಿಲ್ಲದಂತೆ, ತನಗಾಗಿ ನಿರ್ಮಿಸಿದ ಸ್ವಿಮ್ಮಿಂಗ್‌ಪೂಲ್‌ನಲ್ಲಿ ಈಜುವ ಸುಖ. ಇದು ಕೋಣದ ಮಾತಾಯಿತು. ಇನ್ನು ಕೋಣ ಓಡಿಸುವವನ ಡಿಮ್ಯಾಂಡ್ ಕೇಳಬೇಕೆ? ಆತ 4 ತಿಂಗಳಿಗೆ 5 ಲಕ್ಷ ರೂ.ವರೆಗೂ ಎಣಿಸಿದ್ದೂ ಇದೆ. ಸಾಗಾಟ, ಸಾಕಣೆ, ಸಹಾಯಕರು ಎಂದು ಪ್ರತ್ಯೇಕ ಸಂಬಳ. ಕಂಬಳದ ಕೋಣವನ್ನು ಹೊಂದುವುದು, ಕರಾವಳಿಯಲ್ಲಿ ಒಂದು ಪ್ರತಿಷ್ಠೆಯೇ ಸರಿ.
ಜಾತ್ರೆಯೋಪಾದಿ: ಕಂಬಳದ ಕೋಣದ ಬೀಳ್ಕೊಡುಗೆ ದೃಶ್ಯ, ಹಿಂದಿನ ರಾಜರ ಕಾಲವನ್ನು ನೆನಪಿಸುತ್ತದೆ. ಯುದ್ಧಕ್ಕೆ ಹೊರಟ ರಾಜನಿಗೆ, ದಂಡನಾಯಕನಿಗೆ ಹೇಗೆ ಗೌರವ ಸಿಗುತ್ತಿತ್ತೋ, ಹಾಗೆಯೇ ಮನೆಯಿಂದ ಹೊರಟ ಕೋಣಕ್ಕೂ ಅಂಥದ್ದೇ ರಾಜಮರ್ಯಾದೆ. ಮನೆಮಂದಿಯೆಲ್ಲ ಒಟ್ಟಿಗೆ ನಿಂತು ಪ್ರಾರ್ಥಿಸುತ್ತಾರೆ. ಕೊಂಬುಗಳಿಗೆ ಪ್ರಸಾದ ಹಚ್ಚಿ, ವಾದ್ಯಗೋಷ್ಠಿಯೊಂದಿಗೆ ಬೀಳ್ಕೊಡುತ್ತಾರೆ.
ಅದು ಲಾರಿಯನ್ನು ಏರಿಕೊಂಡು, ಕಂಬಳ ನಡೆವ ಸ್ಥಳದಲ್ಲಿ ಇಳಿಯುವಾಗ, ಮತ್ತೆ ಕೊಂಬುಕಹಳೆಯ ನಾದದ ಗೌಜಿ. ಕಂಬಳದ ಗದ್ದೆಯ ಇಕ್ಕೆಲಗಳಲ್ಲೂ ಕೈಯಲ್ಲಿ ಬೆತ್ತ ಹಿಡಿದು ತಿರುಗಾಡುವ ಕೋಣಗಳ ಯಜಮಾನರು, ಕಟ್ಟುಮಸ್ತಾದ ಓಟಗಾರರು, ಕೋಣಗಳನ್ನು ಸಾಕಿದ ಆಳು, ಸಹಸ್ರಾರು ಪ್ರೇಕ್ಷಕರು, ಕಾಮೆಂಟರಿ ವೀರರ ತುಳು ರಸಗವಳ- ಒಟ್ಟಾರೆ ಅಲ್ಲಿ ಜಾತ್ರೆಯ ರಂಗು.
ಕಂಬಳ ಹೇಗಿರುತ್ತೆ?: ಎರಡು ಬಾರಿ ಟ್ರಯಲ್ ಓಟ, ನಂತರ ಲೀಗ್, ಸೆಮಿಫೈನಲ್, ಫೈನಲ್- ಇವು ಕಂಬಳದ ನಾನಾ ಹಂತಗಳು. ಗದ್ದೆಯ ಆರಂಭದಲ್ಲಿ ಕೋಣದ ಜೋಡಿಯನ್ನು ನಿಲ್ಲಿಸುವುದೇ ಒಂದು ಕಸರತ್ತು. ಓಟಗಾರ, ಸಹಾಯಕರಿಬ್ಬರು ಹಠಮಾರಿ ಕೋಣಗಳನ್ನು ಮಣಿಸಿ, ಅವುಗಳೊಂದಿಗೇ ಕೆಸರಲ್ಲಿ ಸುತ್ತಿ ಸುತ್ತಿ, ಅಂತೂ ಇಂತೂ ನಿಂತವು ಎನ್ನುವಾಗ ಪಕ್ಕದ ಕೋಣವೋ ಅಥವಾ ಜೋಡುಕರೆಯಾಗಿದ್ದಲ್ಲಿ ಆ ಕಡೆಯ ಜೋಡಿಯ ಚೇಷ್ಟೆ ತಪ್ಪಿದ್ದಲ್ಲ. ಓಟದ ಆರಂಭದ ಸೂಚನೆ ಸಿಕ್ಕಾಗ, ಛಟೀರ್ ಎನ್ನುವ ಏಟಿನ ಬೆನ್ನುಡಿ. ಸುತ್ತಲೂ ಕೇಕೆ, ಓಟಗಾರನ ಆರ್ಭಟ, ಸೆಕೆಂಡಿನ ಮುಳ್ಳುಗಳೇ ಸೋಲೊಪ್ಪುವಂಥ ನೆಗೆತ. ಅಬ್ಟಾ! ಕಂಬಳಕ್ಕೆ ಕಂಬಳವೇ ಸಾಟಿ.
ವಿಮಾನವೇರಿ ಬರುತಾರೆ…: ಕೋಣದ ಓಟದಲ್ಲೂ ಅದರ ವಯಸ್ಸನ್ನು ಆಧರಿಸಿ, ನಾನಾ ಶ್ರೇಣಿಗಳುಂಟು. ಚಿನ್ನದ ಪದಕ (2 ಪವನು, 1 ಪವನು ಇತ್ಯಾದಿ) ಗೆದ್ದರೆ ಅದು ವಿಜೇತ ಜೋಡಿಯ ಯಜಮಾನನ ಪಾಲು. ಅದರ ಹಗ್ಗ ಹಿಡಿದು ಓಡಿದ ಓಟಗಾರನಿಗೂ ಪುರಸ್ಕಾರ ಇರುತ್ತದೆ. ಇವೆಲ್ಲದರ ಆಚೆ, ಬಾಜಿ ಕಟ್ಟುವ ಲೋಕವೂ ಉಂಟು. ಕಂಬಳ ನೋಡಲೆಂದೇ, ವಿದೇಶದಿಂದ ವಿಮಾನವೇರುವ, ಹುಚ್ಚು ಅಭಿಮಾನಿಗಳು ಆಗಸದಿಂದ ಇಳಿಯುತ್ತಾರೆ.
ಕಂಬಳದ ಕೋಣದ ಜತೆ ಓಡುವುದು ಗಟ್ಟಿ ನೆಲದಲ್ಲಿ ಒಲಿಂಪಿಕ್‌ಗೆ ಓಡಿದಂತೆ ಅಲ್ಲ. ಕೋಣವೂ ಓಟಗಾರನನ್ನು ಎಳೆದೊಯ್ಯುತ್ತದೆ. ಓಟಗಾರನಿಗಿಂತ ಮೊದಲೇ ಕೋಣ ಗುರಿ ಮುಟ್ಟುತ್ತದೆ. ಕೋಣದ ವೇಗ ಸಾಮರ್ಥ್ಯವೂ ಓಟಗಾರನ ಸಾಮರ್ಥ್ಯ ಹೊಂದಿಕೆಯಾಗದೇ ಇದ್ದರೆ ಓಟಗಾರನನ್ನು ಬಿಟ್ಟು ಕೋಣ ಓಡಿ, ಗುರಿ ದಾಟಿರುತ್ತದೆ. ನಾಡಿನಲ್ಲಿ ಮತ್ತೆ ಕಂಬಳದ ಸದ್ದಾಗಿದೆ. ಜಾಗತಿಕವಾಗಿ ಅದರ ಕಹಳೆ ಮೊಳಗಿದೆ. ಆ ಸದ್ದು, ಈ ಕಹಳೆಯೆಲ್ಲ “ಕಿನ್ನರಿ’ ಎಂದು ಪರಿಗಣಿಸಿ, ಕೋಣ ತನ್ನಪಾಡಿಗೆ ತಾನು ಮುಗ್ಧವಾಗಿ ಓಡುತ್ತಲೇ ಇದೆ.
ನಾನಾ ಓಟಗಳು1. ಹಗ್ಗದ ಓಟ: ಎರಡು ಕೋಣಗಳ ಕುತ್ತಿಗೆಗೆ ಕಟ್ಟಿದ ನೊಗದ ಮಧ್ಯೆ ಹಗ್ಗ ಕಟ್ಟಿ ಅದನ್ನು ಹಿಡಿದು ಓಡಿಸುವುದು. 2. ನೇಗಿಲು ಓಟ: ಕೋಣಗಳ ಕುತ್ತಿಗೆಗೆ ಕಟ್ಟಿದ ನೊಗದ ಮಧ್ಯೆ ಮರದ ದಂಡವನ್ನು ಕಟ್ಟಿ ಅದಕ್ಕೆ ನೇಗಿಲು ಜೋಡಿಸಿ, ಓಡಿಸುವುದು. 3. ಅಡ್ಡ ಹಲಗೆ ಓಟ: ನೊಗದ ಮಧ್ಯೆ ಉದ್ದನೆಯ ದಂಡು ಇರುವ ಹಲಗೆಯನ್ನು ಅಡ್ಡಕಟ್ಟಿ, ಹಲಗೆಯ ಮೇಲೆ ನಿಂತು ಕೋಣಗಳನ್ನು ಓಡಿಸುವುದು. 4. ಕನೆ ಹಲಗೆ ಓಟ: ಹಲಗೆಯ ಮೇಲೆ ಒಂದು ಕಾಲನ್ನಿಟ್ಟು ಮೇಲಕ್ಕೆ ಕೆಸರು ನೀರು ಚಿಮ್ಮುವಂತೆ ಓಡಿಸುವುದು. ಓಟದ ಗದ್ದೆಯ ಮಧ್ಯೆ ಅಡ್ಡ ಹಾಯುವಂತೆ ನಿಗದಿತ ಎತ್ತರದಲ್ಲಿ ಮೇಲೆ ಕಟ್ಟಲಾದ ಬಟ್ಟೆಗೆ ತಾಗುವಂತೆ ಕೆಸರು ನೀರು ಚಿಮ್ಮಿಸಬೇಕು. ಯಾವ ಜೋಡಿ ಅತಿ ಎತ್ತರಕ್ಕೆ ಕೆಸರು ನೀರನ್ನು ಚಿಮ್ಮಿಸುತ್ತವೆಯೋ ಅವು ವಿಜಯಿ. 6.5 ಕೋಲು (ಒಂದು ಕೋಲು = 2.5 ಅಡಿ) ಎತ್ತರದಿಂದ ಈ ಸ್ಪರ್ಧೆ ಆರಂಭ. ದಾಖಲೆ ಬರೆದ ಕೋಣಗಳು
* “ರಾಕೆಟ್ ಮೋಡ’. ಜತೆಗಾರ ಕುಟ್ಟಿಯೊಂದಿಗೆ 144 ಮೀ. ದೂರವನ್ನು 13.57 ಸೆಕೆಂಡ್‌ಗಳಲ್ಲಿ ಕ್ರಮಿಸಿ, ದಾಖಲೆ ಬರೆದಿತ್ತು. “ಮೋಡ’ ಕೋಣವನ್ನು ಕಾರ್ಕಳದ ನಂದಳಿಕೆ ಶ್ರೀಕಾಂತ್ ಭಟ್ ನೋಡಿಕೊಳ್ಳುತ್ತಿದ್ದರು. * “ಮೋಡ’ ಕಳೆದವರ್ಷ ನಿಧನಹೊಂದಿದ್ದು, ಕೊಳಚೂರು ಕೊಂಡೆಟ್ಟು ಸುಕುಮಾರ ಶೆಟ್ಟರ “ಚೆನ್ನ’, ರಾಕೆಟ್ ಮೋಡದ ಜತೆಗೆ 142 ಮೀ. ದೂರವನ್ನು 12.99ಸೆಕೆಂಡ್‌ನಲ್ಲಿ ಓಡಿದ್ದ. ಸದ್ಯ “ಚೆನ್ನ’ ಹಾಗೂ ಬಂಟ್ವಾಳದ ಮಹಾಂಕಾಳಿಬೆಟ್ಟಿನ ಸೀತಾರಾಮ ಶೆಟ್ಟರ “ಗಂಗೆ’ ಅತಿ ಹಿರಿಯ ಕೋಣಗಳಾಗಿವೆ. ಮಿಂಚಿನ ಓಟಗಾರರು
* ಮೂಡಬಿದಿರೆಯ ಮಿಜಾರಿನ ಶ್ರೀನಿವಾಸ ಗೌಡ, ಮಿಜಾರು ಶಕ್ತಿಪ್ರಸಾದ್ ಶೆಟ್ಟಿಯವರ ಕೋಣ ಓಡಿಸಿ, 142.5 ಮೀ. ಅನ್ನು 13.62 ಸೆಕೆಂಡ್‌ನಲ್ಲಿ ಕ್ರಮಿಸಿದ್ದಾರೆ. * ಕಾರ್ಕಳದ ಬಜಗೋಳಿಯ ನಿಶಾಂತ್ ಶೆಟ್ಟಿ 143 ಮೀ. ಅನ್ನು 13.61 ಸೆಕೆಂಡ್‌ನಲ್ಲಿ ಕ್ರಮಿಸಿದ್ದಾರೆ. * ಲಕ್ಷ್ಮೀ ಮಚ್ಚಿನ