Advertisement

ಕಾಳಿ ನದಿ ನೀರು ತಿರುವು ಹೊತ್ತಿಸಿದ ಕಿಡಿ!

06:32 PM Mar 08, 2022 | Team Udayavani |

ಕಾರವಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಮೊದಲ ಬಜೆಟ್‌ನಲ್ಲಿ ಕಾಳಿ ನದಿಯಿಂದ ಉತ್ತರ ಕರ್ನಾಟಕದ ಜನರಿಗೆ ಕುಡಿಯುವ ನೀರು ಪೂರೈಸುವುದಾಗಿ ಪ್ರಕಟಿಸಿದ್ದು, ಈ ಯೋಜನೆಗೆ ಜಿಲ್ಲೆಯಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.

Advertisement

ಸರ್ಕಾರದ ಯೋಜನೆಯನ್ನು ಬಿಜೆಪಿಯವರೇ ಮೊದಲಿಗೆ ವಿರೋಧಿಸುತ್ತಿರುವ ಸನ್ನಿವೇಶ ಸೃಷ್ಟಿಯಾಗಿದ್ದು, ಇನ್ನು ಕಾಂಗ್ರೆಸ್‌ನವರಂತೂ ಚುನಾವಣಾ ಸಮಯದಲ್ಲಿ ಇದನ್ನು ಬಳಸಿಕೊಳ್ಳುವುದು ಖಚಿತ. ದಾಂಡೇಲಿ ತಾಲೂಕು ಹೋರಾಟ ಸಮಿತಿಯವರು ಕಾಳಿ ನದಿ ನೀರು ಅನ್ಯ ಜಿಲ್ಲೆಗೆ ಒಯ್ಯಲು ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ಕಾರವಾರ ಶಾಸಕಿ ರೂಪಾಲಿ ನಾಯ್ಕ ಸಹ ಕಾಳಿ ನದಿ ನೀರನ್ನು ಅನ್ಯ ಜಿಲ್ಲೆಗೆ ಒಯ್ಯುವ ಯೋಜನೆ ಬಗ್ಗೆ ಸರಿಯಾಗಿ ತಿಳಿದಿಲ್ಲ, ಈ ಸಂಬಂಧ ಮುಖ್ಯಮಂತ್ರಿಗಳ ಜತೆ ಚರ್ಚಿಸುವುದಾಗಿ ಹೇಳಿದ್ದಾರೆ. ರಾಮನಗರ-ಜೋಯಿಡಾದ ಜನತೆ ನದಿ ಪಕ್ಕವೇ ಇರುವ ನಾವು ಬೋರ್‌ವೆಲ್‌ ನೀರು ಕುಡಿಯುತ್ತಿದ್ದೇವೆ.

ಸೂಪಾ ಅಣೆಕಟ್ಟಿನಿಂದ ಸ್ಥಳೀಯರಿಗೆ ನೀರು ಕೊಡದ ಸರ್ಕಾರ, ಹೊರ ಜಿಲ್ಲೆಗಳಿಗೆ ಕುಡಿಯುವ ನೀರು ಅಥವಾ ಕೈಗಾರಿಕೆಗಳಿಗೆ ನೀರು ಪೂರೈಸಲು ಹೊರಟಿರುವುದು ವಿಪರ್ಯಾಸ ಎಂದಿದ್ದಾರೆ. ಜೋಯಿಡಾ ತಾಲೂಕಿನ ವಿವಿಧ ಸಂಘ-ಸಂಸ್ಥೆಗಳು ಸರ್ಕಾರದ ನಡೆಗೆ ಭಾರೀ ವಿರೋಧ ವ್ಯಕ್ತಪಡಿಸಿವೆ. ಸೂಪಾ ಅಣೆಕಟ್ಟು ನಿರ್ಮಾಣವಾಗಿ ದಶಕಗಳೇ ಕಳೆದಿವೆ. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಆರಂಭವಾದ ಯೋಜನೆ ಜಲವಿದ್ಯುತ್‌ ಉತ್ಪಾದನೆಗೆ ಆದ್ಯತೆ ನೀಡಿತೇ
ಹೊರತು, ಸ್ಥಳೀಯರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಬಗ್ಗೆ ಸರ್ಕಾರಗಳು ಯೋಚಿಸಲೇ ಇಲ್ಲ ಎಂಬುದು ನಿಜ.

ಅಳ್ನಾವರಕ್ಕೆ ನೀರು ಒಯ್ಯಲು ವಿರೋಧ: ಕಳೆದ ಎರಡು ವರ್ಷದಿಂದ ಪಕ್ಕದ ಧಾರವಾಡ ಜಿಲ್ಲೆಯ ಅಳ್ನಾವರಕ್ಕೆ ದಾಂಡೇಲಿಯಿಂದ ಕುಡಿಯುವ ನೀರು ಪೂರೈಸಲು ಪೈಪ್‌ಲೈನ್‌ ಹಾಕಲಾಗುತ್ತಿದೆ. ಅಲ್ಲದೇ ನೀರನ್ನು ಎತ್ತಲು ಹಳೆ ದಾಂಡೇಲಿಯಲ್ಲಿ ನದಿ ಪಕ್ಕದಲ್ಲಿ ಜಾಕ್‌ ವೆಲ್‌ (ನೀರೆತ್ತುವ ಯಂತ್ರ ಅಳವಡಿಕೆಗೆ)ಗಳನ್ನು ನಿರ್ಮಿಸಲಾಗುತ್ತದೆ. ನದಿ ದಂಡೆಯಲ್ಲಿ ಜಾಕ್‌ವೆಲ್‌ ಹಾಕಲು ನದಿ ದಂಡೆಯ ಕೆಲ ಭಾಗಕ್ಕೆ ಮಣ್ಣು ಭರ್ತಿ ಮಾಡಲಾಗಿದ್ದು, ಇದು ಮೊಸಳೆಗಳ ಜೀವನಕ್ರಮಕ್ಕೆ ಅಡ್ಡಿಯಾದ ಆರೋಪವೂ ಇದೆ. ಅಳ್ನಾವರಕ್ಕೆ ನೀರು ಪೂರೈಸಲು ವಿರೋಧಿಸಿದ ದಾಂಡೇಲಿಗರು ನಂತರ ಪೊಲೀಸ್‌ ಬಲದೊಂದಿಗೆ ಜಾಕ್‌ವೆಲ್‌ ಬಳಿ ಬಂದಾಗ ಮೌನ ವಹಿಸಿದ್ದರು. ಕಬ್ಬಿನ ಕಾರ್ಖಾನೆಗೆ ಕಾಳಿ ನದಿ ನೀರು ಬಳಸಲು ಒಯ್ಯುತ್ತಿದ್ದಾರೆಂಬ ಅಪಾದನೆ ಸಹ ಇತ್ತು. ಇದು ಸ್ವಪಕ್ಷೀಯರಿಗೆ ನುಂಗಲಾರದ ತುಪ್ಪವಾಗಿತ್ತು.

ಸರ್ಕಾರ ಗೋಟೆಗಾಳಿ, ಕೆರವಡಿ ಕುಡಿಯುವ ನೀರಿನ ಯೋಜನೆಗಳಿಗೆ ಕೋಟಿಗಟ್ಟಲೆ ಹಣ ಸುರಿದು ವ್ಯರ್ಥ ಮಾಡಿದ್ದು ನಿಜ. ಈಗ ಮತ್ತೆ ಕದ್ರಾ ಅಣೆಕಟ್ಟಿನ ಹಿನ್ನೀರಿನಿಂದ ಕುಡಿಯುವ ನೀರಿನ ಯೋಜನೆಗೆ 125 ಕೋಟಿ ರೂ. ವೆಚ್ಚ ಮಾಡಲು ಹೊರಟಿರುವುದು ಶುದ್ಧ ಮೂರ್ಖತನ.

Advertisement

ಸೂಪಾ ಹಿನ್ನೀರಿನಿಂದ ಯೋಜನೆ ಯೋಗ್ಯ
ಕಾಳಿ ನದಿ ನೀರನ್ನು ಸೂಪಾ ಜಲಾಶಯದಿಂದ ಸಂಗ್ರಹಿಸಿ, ಶುದ್ಧೀಕರಿಸಿ ಜನರಿಗೆ ಕುಡಿಯುವ ನೀರಿನ ಯೋಜನೆ ರೂಪಿಸುವುದು ಯೋಗ್ಯ ಹಾಗೂ ವಿವೇಕಯುಕ್ತವಾದುದು. ಜೋಯಿಡಾದಿಂದ ರಾಜ್ಯ ಹೆದ್ದಾರಿ ಪಕ್ಕ ಪೈಪ್‌ಲೈನ್‌ ಅಳವಡಿಸಿ ಕಾರವಾರದ ತನಕ ಕುಡಿಯುವ ನೀರು ತರುವುದು ಅತ್ಯಂತ ಯೋಗ್ಯ. ಅಥವಾ ಗಣೇಶ ಗುಡಿಯಿಂದ ಮುಂದೆ ಹರಿವ ಕಾಳಿ ನದಿಯ ಯಾವುದಾದರೂ ಒಂದು ಭಾಗದಲ್ಲಿ ಬೃಹತ್‌ ನೀರು ಸಂಗ್ರಹ ಟ್ಯಾಂಕ್‌, ಜಾಕ್‌ವೆಲ್‌ಗ‌ಳನ್ನು ರೂಪಿಸಿ ಜೋಯಿಡಾ, ಕುಂಬಾರವಾಡ, ಅಣಶಿ ಮಾರ್ಗವಾಗಿ ಕಾರವಾರಕ್ಕೆ ಹಾಗೂ ಕಾರವಾರಕ್ಕೆ ಬರುವ ಮಾರ್ಗದ ಹಳ್ಳಿಗಳಿಗೆ ಕುಡಿಯುವ ನೀರನ್ನು ಪೂರೈಸಬಹುದು.

ಹಾಗೆ ಜೋಯಿಡಾ ರಾಮನಗರಕ್ಕೂ ಕುಡಿಯುವ ನೀರಿನ ಯೋಜನೆಗಳನ್ನು ರೂಪಿಸಬೇಕು. ಮೊದಲು ಜಿಲ್ಲೆಯ ಜನರಿಗೆ ಕಾಳಿ ನದಿ ನೀರು ಕುಡಿಯಲು ನೀಡಿ, ಆ ಯೋಜನೆಗಳನ್ನು ಅನುಷ್ಠಾನ ಮಾಡಿದ ನಂತರ ನೀರಿನ ಸಂಗ್ರಹ ನೋಡಿಕೊಂಡು ಇತರೆ ಜಿಲ್ಲೆಗಳಿಗೆ ಕುಡಿಯುವ ನೀರು ನೀಡಿದರೆ ಜಿಲ್ಲೆಯ ಜನ ಮನಪೂರ್ವಕವಾಗಿ ಒಪ್ಪಬಹುದು. ಇಲ್ಲದಿದ್ದರೆ ಯೋಜನೆಗಳು ಸರ್ಕಾರದ ಬೊಕ್ಕಸ ಲೂಟಿ ಮಾಡಲು ಎಂದು ಹೋರಾಟಕ್ಕಿಳಿಯುವ ಸಾಧ್ಯತೆಗಳೇ ಹೆಚ್ಚು. ಯೋಜನೆ ರೂಪಿಸುವಾಗ ಎಲ್ಲಿ ನೀರಿನ ಮೂಲ ಕಲುಷಿತವಾಗಿಲ್ಲ. ಕೈಗಾ ಅಣುಸ್ಥಾವರ ಮತ್ತು ಪೇಪರ್‌ ಮಿಲ್‌ ಬಳಸುವ ನೀರಿನ ಜಾಗಗಳನ್ನು ಬಿಟ್ಟು ಅದಕ್ಕಿಂತ ಹಿಂದಿನ ನದಿ ಮೂಲ ಹಾಗೂ ನೀರಿನ ಸಂಗ್ರಹದ ಜಾಗಗಳನ್ನು ಹುಡುಕುವುದು ಸರ್ಕಾರದ ಮತ್ತು ಯೋಜನೆ ರೂಪಿಸುವವರ ವಿವೇಕದ ಕೆಲಸ.

ಕಾಳಿ ನದಿ ನೀರು ಬೇರೆ ಜಿಲ್ಲೆಗಳಿಗೆ ಒಯ್ಯುವುದನ್ನು ವಿರೋಧಿಸಿ ಈ ಹಿಂದೆ 53 ದಿನ ಧರಣಿ ಸತ್ಯಾಗ್ರಹ ಮಾಡಿದ್ದೇವೆ. ಕೊರೊನಾ ಕಾರಣದಿಂದ ಹೋರಾಟ ಕೈ ಬಿಟ್ಟಿದ್ದೇವು. ನಾಳೆ ದಾಂಡೇಲಿ, ಜೋಯಿಡಾ, ಹಳಿಯಾಳದ ನಾಗರಿಕರು ಸೇರಿ ತಹಶೀಲ್ದಾರ್‌ ಮೂಲಕ ಸಿಎಂಗೆ ಮನವಿ ಮಾಡುತ್ತಿದ್ದೇವೆ. ಈ ಯೋಜನೆ ಕೈಬಿಡಲು ಆಗ್ರಹಿಸುತ್ತೇವೆ.
ಅಕ್ರಮ್‌ ಖಾನ್‌ ದಾಂಡೇಲಿ,
ಕಾಳಿ ನದಿ ನೀರು ಸಂರಕ್ಷಣಾ ಸಮಿತಿ ಮುಖಂಡ

ಕಾಳಿ ನದಿ ನೀರು ನಮಗೆ ಬೇಕು. ಅನ್ಯ ಜಿಲ್ಲೆಗೆ ಕೊಂಡೊಯ್ಯುವ ವಿಚಾರ ಸರಕಾರದ ಮುಂದೆ ಇದ್ದರೆ, ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವೆ.
ರೂಪಾಲಿ ನಾಯ್ಕ, ಶಾಸಕಿ

ನಾಗರಾಜ್ ಹರಪನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next