Advertisement

ಅವಧಿಗೂ ಮುನ್ನ ಕದ್ರಿ ಸಂಗೀತ ಕಾರಂಜಿ ಶೋ ಸ್ಥಗಿತ

12:47 AM Jun 12, 2020 | Sriram |

ಮಹಾನಗರ: ಕೋವಿಡ್ -19 ಲಾಕ್‌ಡೌನ್‌ ಪರಿಣಾಮ ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಬೀರಿದ್ದು, ಕದ್ರಿ ಜಿಂಕೆ ಉದ್ಯಾನವನದಲ್ಲಿರುವ ಸಂಗೀತ ಕಾರಂಜಿ ಪ್ರದರ್ಶನ ಈ ಬಾರಿ ಅವಧಿಗೂ ಮುನ್ನ ಸ್ಥಗಿತಗೊಂಡಿದೆ. ತೋಟಗಾರಿಕ ಇಲಾಖೆ ಲೆಕ್ಕಾಚಾರದ ಪ್ರಕಾರ ಈ ಬಾರಿ 3.2 ಲಕ್ಷ ರೂ. ಶುಲ್ಕ ಸಂಗ್ರಹವಾಗಿದೆ.

Advertisement

ಸಾಮಾನ್ಯವಾಗಿ ಸೆಪ್ಟಂಬರ್‌ ತಿಂಗಳಿನಿಂದ ಆರಂಭ ಗೊಂಡ ಕದ್ರಿ ಸಂಗೀತ ಕಾರಂಜಿ ಜೂನ್‌ ತಿಂಗಳವರೆಗೆ ಇರುತ್ತದೆ. ಈ ವೇಳೆ ಸಾವಿರಾರು ಮಂದಿ ಪ್ರವಾಸಿಗರು ಆಗಮಿಸಿ ಪ್ರದರ್ಶನ ವೀಕ್ಷಿಸುತ್ತಾರೆ. ಸ್ಥಳೀಯರಲ್ಲದೆ, ಹೊರ ಜಿಲ್ಲೆಗಳ ಮಂದಿಯೂ ಆಗಮಿಸುತ್ತಾರೆ. ಕದ್ರಿ ಸಂಗೀತ ಕಾರಂಜಿ ಪ್ರದರ್ಶನದಿಂದ ಸಾಮಾನ್ಯವಾಗಿ ಸುಮಾರು 5 ಲಕ್ಷ ರೂ.ಗೂ ಹೆಚ್ಚು ಶುಲ್ಕ ಸಂಗ್ರವಾಗುತ್ತದೆ. ಆದರೆ, ಈ ವರ್ಷ ಕೊರೊನಾದಿಂದಾಗಿ ಮಾ. 17ರಿಂದ ಸಂಗೀತ ಕಾರಂಜಿ ಶೋ ಅನ್ನು ಸ್ಥಗಿತಗೊಳಿಸಲಾಗಿತ್ತು. ಇದೇ ಕಾರಣಕ್ಕೆ ಶುಲ್ಕ ಸಂಗ್ರಹದಲ್ಲಿಯೂ ಇಳಿಮುಖವಾಗಿದೆ.

ತೋಟಗಾರಿಕ ಇಲಾಖೆಯ ಅಂಕಿಅಂಶದಂತೆ 2019ರ ಜನವರಿಯಿಂದ 2020ರ ಮಾರ್ಚ್‌ವರೆಗೆ 2,101 ಮಂದಿ ಮಕ್ಕಳು ಆಗಮಿಸಿ 31,515 ರೂ. ಸಂಗ್ರಹವಾಗಿದೆ. 10,085 ಮಂದಿ ವಯಸ್ಕರು ಆಗಮಿಸಿ 3,02,550 ರೂ. ಸಂಗ್ರಹವಾಗಿದೆ. 2018ರ ಅಕ್ಟೋಬರ್‌ನಿಂದ 2019ರ ಜೂನ್‌ವರೆಗೆ ಕದ್ರಿ ಸಂಗೀತ ಕಾರಂಜಿ, ಲೇಸರ್‌ ಶೋ ವೀಕ್ಷಿಸಲು 12,098 ಮಂದಿ ವಯಸ್ಕರು ಮತ್ತು 2,717 ಮಂದಿ ಮಕ್ಕಳು ಆಗಮಿಸಿದ್ದರು. ಒಟ್ಟಾರೆಯಾಗಿ ಏಳು ತಿಂಗಳುಗಳಲ್ಲಿ 14,815 ಮಂದಿ ಶೋ ವೀಕ್ಷಣೆಗೆ ಆಗಮಿಸಿ 7,60,830 ರೂ. ಶುಲ್ಕ ಸಂಗ್ರಹವಾಗಿತ್ತು.

50,865 ಮಂದಿ ಉದ್ಯಾನವನ ವೀಕ್ಷಣೆ
2019ರ ಜನವರಿಯಿಂದ 2020ರ ಮಾರ್ಚ್‌ವರೆಗೆ 1,030 ಮಂದಿ ಮಕ್ಕಳು ಕದ್ರಿ ಜಿಂಕೆ ಉದ್ಯಾನವನ ವೀಕ್ಷಣೆ ಮಾಡಿದ್ದು, 5,150 ಶುಲ್ಕ ಸಂಗ್ರವಾಗಿದೆ. 49,835 ಮಂದಿ ವಯಸ್ಕರು ಉದ್ಯಾನವನ ವೀಕ್ಷಣೆ ಮಾಡಿ 4,98,350 ರೂ. ಸಂಗ್ರವಾಗಿದೆ.

ಜಿಂಕೆ ಉದ್ಯಾನವನ ತೆರೆದಿರುತ್ತದೆ
ಮಳೆಯಿಂದಾಗಿ ಸಂಗೀತ ಕಾರಂಜಿ ಶೋ ಸ್ಥಗಿತಗೊಂಡರೂ ಕದ್ರಿ ಪಾರ್ಕ್‌ ಉದ್ಯಾನವನ ಮತ್ತು ಜಿಂಕೆ ಉದ್ಯಾನವನ ಎಂದಿನಂತೆ ಪ್ರವಾಸಿಗರಿಗೆ ತೆರೆದಿರಲಿದೆ. ಕದ್ರಿ ಉದ್ಯಾನವನ ವೀಕ್ಷಣೆ ಉಚಿತವಾಗಿದ್ದು, ಜಿಂಕೆ ಉದ್ಯಾನವನಕ್ಕೆ ವಯಸ್ಕರಿಗೆ 10 ರೂ. ಮತ್ತು ಮಕ್ಕಳಿಗೆ 5 ರೂ. ಇದೆ. ಎರಡೂ ಉದ್ಯಾನವನಗಳು ಬೆಳಗ್ಗೆ 7ರಿಂದ 10 ಗಂಟೆ ಮತ್ತು ಸಂಜೆ 4ರಿಂದ 7 ಗಂಟೆಯವರೆಗೆ ಸಾರ್ವಜನಿಕರ ಪ್ರವೇಶಕ್ಕೆ ತೆರೆದಿರುತ್ತವೆ.

Advertisement

ನಷ್ಟ ಹೆಚ್ಚು
ಕೋವಿಡ್ -19 ಕಾರಣದಿಂದಾಗಿ ಕಳೆದ ಮೂರು ತಿಂಗಳ ಹಿಂದೆ ಕದ್ರಿ ಸಂಗೀತ ಪ್ರದರ್ಶನವನ್ನು ನಿಲ್ಲಿಸಲಾಗಿತ್ತು. ಇದೀಗ ಮಳೆಗಾಲ ಆರಂಭವಾಗಿದ್ದು, ಮುಂದಿನ ಕೆಲವು ತಿಂಗಳ ಕಾಲ ಅವಕಾಶ ಸಿಗದು. ಈ ಬಾರಿ ಸಂಗೀತ ಕಾರಂಜಿ ಪ್ರದರ್ಶನದಿಂದ ಒಟ್ಟು 3.34 ಲಕ್ಷ ರೂ. ಶುಲ್ಕ ಸಂಗ್ರಹವಾಗಿದೆ.
 - ಜಾನಕಿ
ತೋಟಗಾರಿಕ ಇಲಾಖೆಯ
ಹಿರಿಯ ಸಹಾಯಕಿ

Advertisement

Udayavani is now on Telegram. Click here to join our channel and stay updated with the latest news.

Next