ಚಿತ್ರದುರ್ಗ: ಅನರ್ಹ ಶಾಸಕರ ತೀರ್ಪು ನಮಗೂ ಬಹಳ ಮುಖ್ಯವಾಗಿದೆ. ಹಿಂದಿನ ಸ್ಪೀಕರ್ ನಿರ್ಧಾರ ಸರಿಯಿಲ್ಲ ಎನ್ನುವುದು ನಮ್ಮ ವಾದ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ಚಿತ್ರದುರ್ಗ ಜಿಲ್ಲೆಯ ಹೊಸಯಳನಾಡು ಗ್ರಾಮದಲ್ಲಿ ಸುದ್ದಿಗಾರರ ಜತೆ ಮಾತನಾಡಿದರು.
ಅನರ್ಹ ಶಾಸಕರ ತೀರ್ಪಿಗಾಗಿ ನಾವು ಕಾಯುತ್ತಿದ್ದೇವೆ. ಅದನ್ನು ನೋಡಿಕೊಂಡು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದರು.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕುರಿತು ಸಿದ್ದರಾಮಯ್ಯ ಆಡಿರುವ ಮಾತುಗಳಿಗೆ ಪ್ರತಿಕ್ರಿಯಿಸಿ, ನಾವೂ ಏಕವಚನ, ಬಹು ವಚನಗಳನ್ನು ಕಲಿತಿದ್ದೇವೆ. ಆದರೆ, ಸಿದ್ದರಾಮಯ್ಯ ಮೇಷ್ಟ್ರಾದರೂ ಅವರು ಕಲಿತಿರೋದು ಏಕವಚನ ಮಾತ್ರ. ನಾವೂ ಏನು ಮಾಡೋಕಾಗುತ್ತೆ. ವ್ಯಾಕರಣದ ವ್ಯತ್ಯಾಸ ಗೊತ್ತಿಲ್ಲದೆ ಮಾತನಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಆರ್.ಸಿ.ಇ.ಪಿ. ವಿಚಾರದಲ್ಲಿ ಸಂಪುಟ ಚರ್ಚೆ ಮಾಡುತ್ತೇವೆ. ರೈತರಿಗೆ ತೊಂದರೆಯಾಗದಂತೆ ಕೇಂದ್ರದ ಗಮನ ಸೆಳೆಯುತ್ತೇವೆ. ರೈತರ ಹಿತ ಕಾಪಾಡುವುದು ನಮ್ಮ ಆಧ್ಯತೆ ಎಂದು ಹೇಳಿದರು.
ನೆರೆಯಿಂದ ಬಿದ್ದಿರುವ ಶಾಲೆಗಳ ಪುನಶ್ಚೇತನ ನಮ್ಮ ಮೊದಲ ಆಧ್ಯತೆಯಾಗಿದೆ. ಇದಕ್ಕಾಗಿ 540 ಕೋಟಿ ರೂ.ಗಳ ಅಗತ್ಯವಿದೆ. ನಂತರ ಶತಮಾನದ ಶಾಲೆಗಳ ಬಗ್ಗೆ ಗಮನಹರಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.