Advertisement

 ನ್ಯಾಯಾಧೀಶರ ಖಾಲಿ ಹುದ್ದೆ ಭರ್ತಿಗೆ ಆಗ್ರಹ 

10:06 AM Oct 05, 2017 | Team Udayavani |

ಮಹಾನಗರ: ಹೈಕೋರ್ಟ್‌ನ 2ನೇ ಹಿರಿಯ ನ್ಯಾಯಮೂರ್ತಿ ಜಯಂತ್‌ ಎಂ. ಪಟೇಲ್‌ ಅವರ ದಿಢೀರ್‌ ವರ್ಗಾವಣೆ ಖಂಡಿಸಿ ಹಾಗೂ ಖಾಲಿ ಇರುವ ನ್ಯಾಯಾಧೀಶರ ಹುದ್ದೆ ಭರ್ತಿಗೆ ಆಗ್ರಹಿಸಿ ಮಂಗಳೂರು ವಕೀಲರ ಸಂಘದ ಸದಸ್ಯರು ಬುಧವಾರ ಕೋರ್ಟ್‌ ಕಲಾಪದಿಂದ ದೂರ ಉಳಿದು ಪ್ರತಿಭಟಿಸಿದರು.

Advertisement

ಬೆಳಗ್ಗೆ 11 ಗಂಟೆಗೆ ನ್ಯಾಯಾಲಯದ ಆವರಣದಲ್ಲಿ ಪ್ರತಿಭಟನ ಸಭೆ ನಡೆಸಿದ ವಕೀಲರ ಸಂಘದ ಪದಾಧಿಕಾರಿಗಳು ದಿನದ ಕೋರ್ಟ್‌ ಕಲಾಪದಲ್ಲಿ ಭಾಗವಹಿಸದಿರಲು ತೀರ್ಮಾನಿಸಿರುವ ಬಗ್ಗೆ ಪ್ರಕಟಿಸಿದರು.

ಸಂಘದ ಅಧ್ಯಕ್ಷ ಎಂ.ಆರ್‌. ಬಲ್ಲಾಳ್‌ ಮಾತನಾಡಿ, ನ್ಯಾಯಮೂರ್ತಿ ಜಯಂತ್‌ ಎಂ. ಪಟೇಲ್‌ ಅವರನ್ನುದಿಢೀರ್‌ ವರ್ಗಾವಣೆ ಮಾಡಿರುವುದು ಹಾಗೂ ಇದರಿಂದ ಮನನೊಂದು ಅವರು ರಾಜೀನಾಮೆ ನೀಡಲು ಕಾರಣವಾದ ಘಟನೆ ಖಂಡನೀಯ. ಅ. 10ರೊಳಗೆ ನ್ಯಾ| ಜಯಂತ್‌ ಅವರನ್ನು ಮರು ನೇಮಕ ಮಾಡಿ ಭಡ್ತಿ ನೀಡಬೇಕು ಎಂದು ಆಗ್ರಹಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಮಾತನಾಡಿ, ರಾಜ್ಯದ ಎಲ್ಲ 189 ವಕೀಲರ ಸಂಘಗಳಿಂದಲೂ ಇವತ್ತು ಪ್ರತಿಭಟನೆ ನಡೆದಿದೆ. ಹೈಕೋರ್ಟಿನಲ್ಲಿ 62 ನ್ಯಾಯಮೂರ್ತಿ ಮಂಜೂರಾತಿ ಹುದ್ದೆಗಳಿದ್ದು, ಅವುಗಳಲ್ಲಿ 28 ಮಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದರು. ಈಗ ಜಯಂತ್‌ ಎಂ. ಪಟೇಲ್‌ ರಾಜೀನಾಮೆಯಿಂದಾಗಿ ಕಾರ್ಯರ್ವಹಿಸುತ್ತಿರುವ ನ್ಯಾಯಮೂರ್ತಿಗಳ ಸಂಖ್ಯೆ 27ಕ್ಕೆ ಇಳಿದಿದ್ದು, 35 ನ್ಯಾಯಮೂರ್ತಿಗಳ ಸ್ಥಾನ ಖಾಲಿ ಇವೆ. ಇದರಿಂದಾಗಿ ರಾಜ್ಯದ ಜನರಿಗೆ ನ್ಯಾಯ ಸಿಗಲು ವಿಳಂಬವಾಗುತ್ತಿದೆ ಎಂದು ತಿಳಿಸಿದರು.

ವರ್ಗಾವಣೆಯಿಂದ ಅನ್ಯಾಯ
ಸಂಘದ ಮಾಜಿ ಅಧ್ಯಕ್ಷ ಎಸ್‌.ಪಿ. ಚೆಂಗಪ್ಪ ಮಾತನಾಡಿ, ಸುಪ್ರೀಂ ಕೋರ್ಟಿನ ನ್ಯಾಯಾಂಗೀಯ ಆಯ್ಕೆ ಸಮಿತಿ ಯಾರದೋ ಒತ್ತಡಕ್ಕೆ ಮಣಿದು ಸಕಾರಣವಿಲ್ಲದೆ ನ್ಯಾ| ಜಯಂತ್‌ ಎಂ. ಪಟೇಲ್‌ ಅವರನ್ನು ವರ್ಗಾವಣೆ ಮಾಡಿದೆ. ಇದರಿಂದಾಗಿ ಕೆಲವೇ ದಿನಗಳಲ್ಲಿ ಮುಂಭಡ್ತಿ ಪಡೆದು ಮುಖ್ಯ ನ್ಯಾಯಾಧೀಶರಾಗುವ ಅವಕಾಶದಿಂದ ಅವರು ವಂಚಿತರಾಗಿರುವುದು ವಿಷಾದನೀಯ ಎಂದು ತಿಳಿಸಿದರು. 

Advertisement

ನ್ಯಾಯಾಂಗ ವ್ಯವಸ್ಥೆಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಕಷ್ಟಕರ ಎನ್ನುವುದು ಇದರಿಂದ ಸಾಬೀತಾಗಿದೆ. ಎರಡು
ಬಾರಿ ವರ್ಗಾವಣೆ ಮಾಡಿರುವುದು ಜಯಂತ್‌ ಅವರಿಗೆ ನೀಡಿದ ಒಂದು ಶಿಕ್ಷೆ ಹಾಗೂ ಮಾನಸಿಕ ಕಿರುಕುಳವಾಗಿದೆ. ಹೈಕೋರ್ಟ್‌ ನ್ಯಾಯಾಧೀಶರ ನೇಮಕಾತಿ ಮತ್ತು ವರ್ಗಾವಣೆ ಪ್ರಕ್ರಿಯೆಯನ್ನು ರಾಷ್ಟ್ರಪತಿ ನಡೆಸುತ್ತಾರೆ. ನ್ಯಾ| ಜಯಂತ್‌ ವರ್ಗಾವಣೆ ಪ್ರಕ್ರಿಯೆಯಲ್ಲಿ ಸರಕಾರಗಳ ಕಾಣದ ಕೈಗಳು ಕೆಲಸ ಮಾಡಿರುವ ಸಂಶಯವಿದೆ. ಅದು ನಿಜವೇ ಆಗಿದ್ದಲ್ಲಿ ನ್ಯಾಯದಾನ ವ್ಯವಸ್ಥೆಗೆ ಕೊಟ್ಟ ದೊಡ್ಡ ಹೊಡೆತವಾಗಿದೆ. ಹೈಕೋರ್ಟ್‌ ನ್ಯಾಯಾಧೀಶರ ನೇಮಕಾತಿ ಮತ್ತು
ವರ್ಗಾವಣೆ ವಿಚಾರದಲ್ಲಿ ಸುಪ್ರೀಂ ಕೋರ್ಟಿನ ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿದ್ದರೂ ಈ ವಿಷಯದಲ್ಲಿ ಕೆಲವೊಂದು ಸರಕಾರಗಳ ನಾಯಕರು ಹಸ್ತಕ್ಷೇಪ ಮಾಡುವುದು ಖಂಡನೀಯ ಎಂದು ಹೇಳಿದರು. ಹಿರಿಯ ವಕೀಲ ಮಹಮ್ಮದ್‌ ಹನೀಫ್‌ ಅವರೂ ಮಾತನಾಡಿದರು.

ಸಂಘದ ಉಪಾಧ್ಯಕ್ಷೆ ಪುಷ್ಪಲತಾ ಯು.ಕೆ., ಕೋಶಾಧಿಕಾರಿ ಸುಜಿತ್‌ ಕುಮಾರ್‌, ಜತೆ ಕಾರ್ಯದರ್ಶಿ ರೂಪಾ ಕೆ., ಕಾರ್ಯಕಾರಿ ಸಮಿತಿ ಸದಸ್ಯರಾದ ಡೇನಿಯಲ್‌ ಮಸ್ಕರೇನ್ಹಸ್‌, ನವೀನ್‌ ಚಿಲ್ಪರ್‌, ಪ್ರೇಮನಾಥ ಶೆಟ್ಟಿ, ಶ್ರೀಕುಮಾರ್‌, ಉದನೀಶ್‌, ವಿನೋದ್‌ ಪಾಲ್‌, ಪ್ರಫುಲ್ಲ ಕುಮಾರಿ, ಕೆ. ರೇಖಾ, ಸುನೀಲ್‌ ಕುಂಬ್ಳೆ, ಪ್ರಮೋದ್‌ ಕುಮಾರ್‌, ಕಿಶೋರ್‌ ಕುಮಾರ್‌, ಇಸ್ಮಾಯಿಲ್‌, ಕಿಶೋರ್‌ ಡಿ’ಸಿಲ್ವಾ, ಧನವಂತಿ, ಝೀಟಾ ಪ್ರಿಯಾ ಮೋರಸ್‌ ಅವರು ನೇತೃತ್ವ ವಹಿಸಿದ್ದರು. 

ಹುದ್ದೆ ಭರ್ತಿಗೊಳಿಸಿ
ನ್ಯಾಯದಾನ ವಿಳಂಬವಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಆದರೆ ಖಾಲಿ ಇರುವ ನ್ಯಾಯಾಧೀಶರ ಹುದ್ದೆ ಭರ್ತಿಗೆ ಯಾವುದೇ ಕ್ರಮ ಜರಗಿಸುತ್ತಿಲ್ಲ. ನ್ಯಾಯಾಧೀಶರ ಕೊರತೆಯಿಂದಾಗಿ ಬೆಂಗಳೂರಿನ ಹೈಕೋರ್ಟಿನಲ್ಲಿ ಬಹುತೇಕ ಅಧೀನ ನ್ಯಾಯಾಲಯಗಳಲ್ಲಿ ಕಲಾಪ ನಡೆಯುತ್ತಿಲ್ಲ. ಆದ್ದರಿಂದ ಖಾಲಿ ಇರುವ ನ್ಯಾಯಾಧೀಶರ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು. 
ಎಂ.ಆರ್‌. ಬಲ್ಲಾಳ್‌,
ವಕೀಲರ ಸಂಘದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next