Advertisement

ಚುನಾವಣೆಗೆ ಪ್ರಾದೇಶಿಕ ಅಸ್ಮಿತೆಯೇ ಜೆಡಿಎಸ್‌ ಗುರಾಣಿ

02:48 PM Apr 19, 2022 | Team Udayavani |

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ತಯಾರಿ ಆರಂಭಿಸಿರುವ ಜೆಡಿಎಸ್‌ ಈ ಬಾರಿ “ಪ್ರಾದೇಶಿಕ ಅಸ್ಮಿತೆ’ಯನ್ನು ಗುರಾಣಿಯನ್ನಾಗಿ ಮಾಡಿಕೊಂಡು ಇದಕ್ಕೆ ಪೂರಕವಾಗಿ ನಾಡಿನ ನೆಲ-ಜಲ, ಭಾಷೆಯ ವಿಚಾರಗಳನ್ನು ಮುನ್ನೆಲೆಗೆ ತರಲು ಕಾರ್ಯತಂತ್ರ ರೂಪಿಸಿದೆ.

Advertisement

ಇತ್ತೀಚೆಗೆ ಆಡಳಿತಾರೂಢ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ವಿರುದ್ಧ ಮುಗಿಬಿದ್ದಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಅಲ್ಪಸಂಖ್ಯಾತರ ಓಲೈಕೆಯ ಅಸ್ತ್ರ ಪ್ರಯೋಗಿಸುತ್ತಿದ್ದು, “ದಲಿತ ಮುಖ್ಯಮಂತ್ರಿ’ ಎಂಬ ರಾಜಕೀಯ ದಾಳವನ್ನೂ ಉರುಳಿಸಿದ್ದಾರೆ. ಇದು “ಮುಸ್ಲಿಂ-ದಲಿತ’ ಧ್ರುವೀಕರಣದ ಲೆಕ್ಕಾಚಾರ ಎನ್ನಲಾಗುತ್ತಿದೆ.

ಸಿ.ಎಂ.ಇಬ್ರಾಹಿಂ ಜೆಡಿಎಸ್‌ ಸೇರ್ಪಡೆಯಿಂದ ಪಕ್ಷಕ್ಕೆ “ಅಲ್ಪಸಂಖ್ಯಾತ ಮುಖ’ ಸಿಕ್ಕಂತಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಲ್ಪಸಂಖ್ಯಾತ ಹಾಗೂ ದಲಿತ ಮುಖಂಡರನ್ನು ಪಕ್ಷಕ್ಕೆ ಸೆಳೆಯಲು “ಆಪರೇಷನ್‌ ಜೆಡಿಎಸ್‌’ ನೀಲನಕ್ಷೆಯೂ ಸಿದ್ಧಗೊಂಡಿದೆ.

ಈಗಾಗಲೇ ಚುನಾವಣೆ ತಯಾರಿ ಆರಂಭಿಸಿರುವ ಜೆಡಿಎಸ್‌ ಜನತಾ ಸರ್ಕಾರ ಎಂಬ ಸಂಕಲ್ಪದೊಂದಿಗೆ ಪಂಚರತ್ನ ಯೋಜನೆ ಘೋಷಿಸಿ ಜನತಾ ಪರ್ವ 1.0 ಹಾಗೂ ಮಿಷನ್‌-123 ಹೆಸರಲ್ಲಿ ನಾಲ್ಕು ದಿನದ ಕಾರ್ಯಾಗಾರ ನಡೆಸಿದೆ. ಇದೀಗ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ರೈತರು, ಕನ್ನಡಪರ ಸಂಘಟನೆಗಳು, ಪ್ರಗತಿಪರರೊಂದಿಗೆ ಸಂವಾದಗಳನ್ನೂ ನಡೆಸಿರುವ ಕುಮಾರಸ್ವಾಮಿ, ಚುನಾವಣೆಗೆ ಸ್ಪರ್ಧಿಸುವಂತೆ ಅವರಿಗೆ ನೇರ ಆಹ್ವಾನ ನೀಡಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮಹಿಳೆಯರು ಮತ್ತು ಅಲ್ಪಸಂಖ್ಯಾತರಿಗೆ ಹೆಚ್ಚು ಸೀಟುಗಳನ್ನು ನೀಡುವುದಾಗಿಯೂ ಹೇಳಿದ್ದಾರೆ.

ಮಿಷನ್‌-123 ಸುಲಭವಲ್ಲ: ಸದ್ಯ ಜೆಡಿಎಸ್‌ ಸಂಖ್ಯಾಬಲ 32 ಇದೆ. ಈ ಪೈಕಿ ಬಹುತೇಕ ಹಳೇ ಮೈಸೂರು ಭಾಗದಲ್ಲೇ ಜೆಡಿಎಸ್‌ ಪ್ರಾಬಲ್ಯ ಹೊಂದಿದೆ. ಈ ಮಧ್ಯೆ ಮಿಷನ್‌-123 ಗುರಿ ಇಟ್ಟುಕೊಂಡಿರುವ ಜೆಡಿಎಸ್‌ಗೆ ಅದು ಅಷ್ಟು ಸುಲಭವಲ್ಲ. ಈ ಗುರಿ ಸಾಧಿಸಬೇಕಾದರೆ ಈಗಿರುವ ಸ್ಥಾನಗಳನ್ನು ಉಳಿಸಿಕೊಂಡು ಹಳೇ ಮೈಸೂರು ಭಾಗದ ಜೊತೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಅಗಾಧ ಪ್ರದರ್ಶನ ತೋರಬೇಕಾಗುತ್ತದೆ, ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆ, ನಾಯಕತ್ವ, ತಳಮಟ್ಟದಲ್ಲಿ ಕಾರ್ಯಕರ್ತರ ಗಮನದಲ್ಲಿಟ್ಟು ನೋಡಿದರೆ ಮಿಷನ್‌-123 ಜೆಡಿಎಸ್‌ಗೆ ದುಸ್ಸಾಹಸವೇ ಸರಿ. ಉಪಚನಾವಣೆಗಳು ಮತ್ತು ವಿಧಾನಪರಿಷತ್‌ ಚುನಾವಣೆಗಳಲ್ಲಿ ಪಕ್ಷಕ್ಕೆ ಆಗಿರುವ ಹಿನ್ನಡೆಯೂ ಪಕ್ಷಕ್ಕೆ ಗೊತ್ತಿದೆ. ಹಳೇ ಮೈಸೂರು ಭಾಗದಲ್ಲಿ ಅನೇಕರು ಪಕ್ಷದಿಂದ ದೂರ ಸರಿಯುತ್ತಿದ್ದಾರೆ. ಆದರೂ, ರಾಜಕೀಯ “ಗೇಮ್‌ ಆಫ್ ಚಾನ್ಸ್‌’ ಎಂದು ಜೆಡಿಎಸ್‌ ನಂಬಿದಂತಿದೆ.

Advertisement

ಹಾಲಿ ಶಾಸಕರ ಪೈಕಿ ಪಕ್ಷದಲ್ಲಿ ಉಳಿದುಕೊಂಡವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್‌ ಬಹುತೇಕ ಖಚಿತ. ಇದನ್ನು ಹೊರತುಪಡಿಸಿದರೆ ಟಿಕೆಟ್‌ ಹಂಚಿಕೆ ಜೆಡಿಎಸ್‌ ನಲ್ಲಿ ಯಾವತ್ತೂ ಸವಾಲಿನ ಕೆಲಸ. “ಆಮದು’ ಅಥವಾ “ಎರವಲು’ ಅಭ್ಯರ್ಥಿಗಳನ್ನು ಜೆಡಿಎಸ್‌ ನೆಚ್ಚಿಕೊಳ್ಳಬೇಕಾಗುತ್ತದೆ. ಕಾಂಗ್ರೆಸ್‌-ಬಿಜೆಪಿಯಲ್ಲಿ ಟಿಕೆಟ್‌ ವಂಚಿತರು, ಅತೃಪ್ತರು ಕೊನೇ ಘಳಿಗೆಯಲ್ಲಿ ಜೆಡಿಎಸ್‌ ಸೇರಿ ಟಿಕೆಟ್‌ ಗಿಟ್ಟಿಸಿಕೊಳ್ಳುವ ಸಂದರ್ಭಗಳು ಹೆಚ್ಚಾಗಿರುತ್ತವೆ. ಹೀಗಾಗಿ, ಅಭ್ಯರ್ಥಿಗಳ ಆಯ್ಕೆ, ಟಿಕೆಟ್‌ ಹಂಚಿಕೆಗೆ ಜೆಡಿಎಸ್‌ಗೆ ಕಾದು ನೋಡಲಿದೆ.

ಹಿಜಾಬ್‌ ನಂತರದ ವಿದ್ಯಮಾನಗಳಲ್ಲಿ ಹಲಾಲ್‌, ಮುಸ್ಲಿಂ ವ್ಯಾಪಾರಕ್ಕೆ ನಿಷೇಧ, ಅಜಾನ್‌ ಇತ್ಯಾದಿ ವಿಚಾರಗಳನ್ನು ಮುಂದಿಟ್ಟುಕೊಂಡು ಹಿಂದೂಪರ ಸಂಘಟನೆಗಳ ವಿರುದ್ಧ ಸರಣಿ ವಾಕ್ಸಮರದ ಜತೆಗೆ ಕಾಂಗ್ರೆಸ್‌ ಅಂತರ ಕಾಯ್ದು ಕೊಂಡಿದೆ ಎಂದು ಆರೋಪಿಸಿ ಅಲ್ಪಸಂಖ್ಯಾತರ ಮತಬ್ಯಾಂಕ್‌ ಮೇಲೆ ಕಣ್ಣಿಟ್ಟಿದ್ದಾರೆ. ಇಬ್ರಾಹಿಂ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡರೂ ಅಲ್ಪಸಂಖ್ಯಾತರ ನಂಬಿಕೆ ಉಳಿಸಿಕೊಳ್ಳುವುದು ಜೆಡಿಎಸ್‌ಗೆ ಸವಾಲಾಗಿದೆ.

ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹ: ಜೆಡಿಎಸ್‌ ಸಹ ತಮ್ಮದೇ ಆದ ಮಾರ್ಗದಲ್ಲಿ ಮುಂದಿನ ವಿಧಾನಸಭೆ ಚುನಾವಣೆ ಕುರಿತು ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹ ಮಾಡಿಕೊಂಡಿದೆ. ಜಲಧಾರೆ ರಥಯಾತ್ರೆ ನಂತರ ಬೇರೆ ಪಕ್ಷಗಳ ನಾಯಕರ ಸೆಳೆಯುವ ಕಾರ್ಯವೂ ಆರಂಭವಾಗಲಿದೆ. ಡಿಸೆಂಬರ್‌ ವೇಳೆಗೆ ಪಕ್ಷ ಸಂಘಟನೆ ದೃಷ್ಟಿಯಿಂದ ಗಟ್ಟಿಯಾಗಲಿದೆ ಎಂಬುದು ನಾಯಕರ ಮಾತು.

  • ರಫೀಕ್ ಆಹ್ಮದ್‌
Advertisement

Udayavani is now on Telegram. Click here to join our channel and stay updated with the latest news.

Next