ಬೆಂಗಳೂರು: ಈಗಲ್‌ಟನ್ ರೆಸಾರ್ಟ್‌ನಲ್ಲಿರುವ ಗುಜರಾತ್ ಶಾಸಕರ ಆತಿಥ್ಯದ ಹೊಣೆಗಾರಿಕೆಯನ್ನು ಇದೀಗ ಸಂಸದ ಡಿ.ಕೆ.ಸುರೇಶ್ ಜತೆಗೆ ಜೆಡಿಎಸ್ ಭಿನ್ನಮತೀಯ ಶಾಸಕರೂ ವಹಿಸಿಕೊಂಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಜೆಡಿಎಸ್ ಬಂಡಾಯ ಶಾಸಕರಾದ ಜಮೀರ್‌ಅಹಮದ್, ಚೆಲುವರಾಯಸ್ವಾಮಿ, ಎಚ್.ಸಿ.ಬಾಲಕೃಷ್ಣ, ಅಖಂಡ ಶ್ರೀನಿವಾಸಮೂರ್ತಿ ಶುಕ್ರವಾರ ಈಗಲ್ ಟನ್ ರೆಸಾರ್ಟ್‌ಗೆ ಭೇಟಿ ನೀಡಿ ಗುಜರಾತ್ ಶಾಸಕರ ಕುಶಲೋಪರಿ ವಿಚಾರಿಸಿದರು.
ರೆಸಾರ್ಟ್‌ನಲ್ಲಿರುವ 44 ಗುಜರಾತ್ ಶಾಸಕರ ಜತೆ ಚರ್ಚಿಸಿದ ಬಂಡಾಯ ಶಾಸಕರು, ನಿಮಗೆ ಇಲ್ಲಿ ಯಾವುದೇ ಆತಂಕ ಬೇಡ. ನಾವಿದ್ದೇವೆ, ನೋಡಿಕೊಳ್ಳುತ್ತೇವೆ ಎಂದು ಧೈರ್ಯ ತುಂಬಿದರು.
ಆಗಸ್ಟ್ 7 ರವರೆಗೂ ಗುಜರಾತ್ ಶಾಸಕರು ರಾಜ್ಯದಲ್ಲೇ ವಾಸ್ತವ್ಯ ಇರುವ ಹಿನ್ನೆಲೆಯಲ್ಲಿ ಶನಿವಾರದಿಂದ ಧಾರ್ಮಿಕ ಅಥವಾ ಪ್ರವಾಸಿ ತಾಣಗಳಿಗೆ ಕರೆದೊಯ್ಯುವ ಬಗ್ಗೆಯೂ ಚರ್ಚಿಸಲಾಯಿತು. ಬಹುತೇಕ ಶಾಸಕರು ಎರಡು ದಿನದ ಮಟ್ಟಿಗಾದರೂ ಧಾರ್ಮಿಕ ಕ್ಷೇತ್ರಗಳ ಪ್ರವಾಸ ಮಾಡಿ ಬರೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ.
ಗುಜರಾತ್ ಶಾಸಕರು ಪ್ರವಾಸ ಹೋಗುವುದೇ ಆದರೆ ನಾನೇಖುದ್ದಾಗಿ ಕರೆದೊಯ್ಯುವುದಾಗಿಯೂ ಜಮೀರ್ ಅಹಮದ್ ತಿಳಿಸಿದರು ಎನ್ನಲಾಗಿದೆ. ಈ ಕುರಿತು “ಉದಯವಾಣಿ’ ಜತೆ ಮಾತನಾಡಿದ ಜಮೀರ್, ಗುಜರಾತ್ ಶಾಸಕರ ಕುಶಲೋಪರಿ ವಿಚಾರಿಸಲು ಬಂದಿದ್ದೇವೆ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ಅತಿಥಿಗಳಾಗಿ ಬಂದವರಿಗೆ ಆತಿಥ್ಯ ನೀಡುವುದು ನಮ್ಮ ಸಂಸ್ಕೃತಿ. ಈಗಾಗಲೇ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಅವರು ಶಾಸಕರ ಆತಿಥ್ಯದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ನಾವೂ ಅಗತ್ಯಬಿದ್ದರೆ ಜತೆಗೂಡುತ್ತೇವೆ ಎಂದು ಹೇಳಿದರು.