ಧಾರವಾಡ: ರೈತರ ಬೆಳೆಗೆ ಲಾಭದಾಯಕ ಬೆಲೆ ನೀಡಲಾಗದು ಎಂಬುದಾಗಿ ಕೇಂದ್ರ ಸರಕಾರ ಸುಪ್ರಿಂ ಕೋರ್ಟ್‌ಗೆ ಪ್ರಮಾಣಪತ್ರ ನೀಡಿರುವ ಕ್ರಮ ಖಂಡಿಸಿ ಜೆಡಿಎಸ್ ರೈತ ದಳ ವತಿಯಿಂದ ನಗರದ ಡಿಸಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಕೃಷಿಯ ಉತ್ಪಾದನಾ ವೆಚ್ಚಕ್ಕೆ ಶೇ. 50ರಷ್ಟು ಲಾಭಾಂಶ ಸೇರಿಸಿ ಒಟ್ಟು ಶೇ. 150 ದರ ನಿಗದಿ ಮಾಡುವ ಬದಲು, ರೈತರಿಗೆ ಲಾಭದಾಯಕ ಬೆಲೆ ನೀಡಲಾಗುವುದಿಲ್ಲ ಎಂಬುದಾಗಿ ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ನೀಡಿರುವುದು ಖಂಡನೀಯ.
ಇದರಿಂದ ಚುನಾವಣಾ ಪೂರ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಭರವಸೆಯನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು. ಕೃಷಿ ಸಾಮಗ್ರಿಗಳ ಬೆಲೆ ಏರಿಕೆಯಾಗುತ್ತಿದ್ದು, ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ.
ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಬೇಕಾದದ್ದು ಸರಕಾರಗಳ ಕರ್ತವ್ಯ. ಆದರೆ, ಕೇಂದ್ರ ಸರಕಾರ ಅದಕ್ಕೆ ವಿರುದ್ಧವಾಗಿ ಲಾಭದಾಯಕ ಬೆಲೆ ನೀಡಲು ಸಾಧ್ಯವಿಲ್ಲ ಎಂಬುದಾಗಿ ಹೇಳುತ್ತಿರುವ ಕ್ರಮ ಸರಿಯಲ್ಲ.
ಕೂಡಲೇ ಕೇಂದ್ರ ಸರಕಾರ ಡಾ| ಎಂ.ಎಸ್. ಸ್ವಾಮಿನಾಥನ್ ಆಯೋಗದ ಶಿಫಾರಸನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು. ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಹೇಳಿಕೆ ನೀಡಿರುವ ಪ್ರಧಾನಿಗಳು ರೈತರ ಬೆಲೆಗೆ ಲಾಭದಾಯಕ ಬೆಲೆಯನ್ನೇ ಖಾತ್ರಿ ಪಡಿಸಲು ಹಿಂದೇಟು ಹಾಕುತ್ತಿದ್ದಾರೆ.
ಕೂಡಲೇ ಸುಪ್ರೀಂಕೋಟ್‌ಗೆ ಸಲ್ಲಿಸಿರುವ ಪ್ರಮಾಣ ಪತ್ರ ವಾಪಸ್ ಪಡೆಯಬೇಕು. ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಕೃಷಿ ಬೆಳೆಗಳಿಗೆ ಲಾಭದಾಯಕ ಬೆಲೆ ಖಾತ್ರಿ ಪಡಿಸಬೇಕೆಂದು ಡಿಸಿ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಲಾಗಿದೆ.
ವಿಕಾಸ್ ಸೊಪ್ಪಿನ್, ಸುರೇಶಗೌಡ ಪಾಟೀಲ, ಅಲ್ತಾಫ್ ಕಿತ್ತೂರ, ರಾಜು ಅಂಬೋರೆ, ಭೂಷನ್ ಕಾಳೆ, ಸುರೇಶ ಹಿರೇಮಠ, ಬಸವರಾಜ ಭಜಂತ್ರಿ, ಭೀಮಪ್ಪ ಕಸಾಯಿ, ಈಶ್ವರ ಸಾಣಿಕೊಪ್ಪ, ಮಲ್ಲಪ್ಪ ನವಲೂರ, ಭೀಮಪ್ಪ ಮುರಾರಿ, ಜೀಲ್ಹಾನಿ ಖಾಜಿ ಇದ್ದರು.