Advertisement

ಜೆಡಿಎಸ್‌ ಮುಗಿಸೋದು ಸುಲಭವಲ್ಲ

06:20 AM Jan 16, 2018 | Team Udayavani |

ಬೆಂಗಳೂರು: ಜೆಡಿಎಸ್‌ ಮುಗಿಸಿಬಿಡುವುದು ಅಷ್ಟು ಸುಲಭವಲ್ಲ. ನಾನಿನ್ನೂ ಬದುಕಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ತಿಳಿಸಿದ್ದಾರೆ.

Advertisement

ಪದ್ಮನಾಭನಗರ ನಿವಾಸದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಸಿದ್ದರಾಮಯ್ಯ ಅವರು ಪಕ್ಷ ಬಿಟ್ಟಾಗ ಜೆಡಿಎಸ್‌ ಕಥೆ ಮುಗಿಯಿತು ಎಂದರು. ಆದರೆ, ಮತ್ತೆ ಪಕ್ಷ ಪುಟಿದು ನಿಲ್ಲಲಿಲ್ಲವೇ ಎಂದು ಪ್ರಶ್ನಿಸಿದರು.

ನಾನು ದೇವರನ್ನು ನಂಬುತ್ತೇನೆ. ಜನರ ಆಶೀರ್ವಾದದಿಂದ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರುತ್ತೇವೆ. ಮಾರ್ಚ್‌ ವೇಳೆಗೆ ಏನೇನಾಗುತ್ತೆ ಕಾದು ನೋಡಿ ಎಂದು ಹೇಳಿದರು.

ಜೆಡಿಎಸ್‌ ಅಪ್ಪ -ಮಕ್ಕಳ ಪಕ್ಷವಲ್ಲ. ಅದು ಕಾಂಗ್ರೆಸ್‌ಗೂ ಅನ್ವಯಿಸುತ್ತದೆ. ಕಾಂಗ್ರೆಸ್‌ ತನ್ನ ಶಕ್ತಿ ಕಳೆದುಕೊಂಡಿದೆ. ಹೀಗಾಗಿ, ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಅನಿವಾರ್ಯ ಎಂದು ತಿಳಿಸಿದರು.

ಜೆಡಿಎಸ್‌ಗೆ ಆನಂದ್‌ ಅಸ್ನೋಟಿಕರ್‌ ಬಂದಿದ್ದಾರೆ. ಇದು ಪಕ್ಷಕ್ಕೆ ಭವಿಷ್ಯ ಇರುವ ಸಂಕೇತವಲ್ಲವೇ? ಮಧು ಬಂಗಾರಪ್ಪ, ಪ್ರೊ.ನೀರಾವರಿ, ರಮೇಶ್‌ಬಾಬು, ಬಂಡೆಪ್ಪ ಅವರೆಲ್ಲ ಹಿಂದುಳಿದ ವರ್ಗದ ನಾಯಕರಲ್ಲವೇ? ನಾವು ಮಾತ್ರ ಪಕ್ಷದಲ್ಲಿದ್ದೇವಾ ಎಂದರು.

Advertisement

ಪ್ರಧಾನಿ ಮೌನ ಯಾಕೆ?: ಮಹದಾಯಿ ವಿಚಾರದಲ್ಲಿ ಪ್ರಧಾನಿಯವರ ಬಳಿಯೂ ಮಾತನಾಡಿದ್ದೇನೆ. ಅವರು ಯಾಕೆ ಮೌನ ವಹಿಸಿದ್ದಾರೋ ಗೊತ್ತಿಲ್ಲ ಎಂದು ಹೇಳಿದರು. ಕಾವೇರಿ ವಿಚಾರದಲ್ಲಿ ನಾನು ಉಪವಾಸ ಮಾಡಿದ್ದೆ. ಆ ಹೋರಾಟವೇ ಬೇರೆ, ಮಹದಾಯಿ ಹೋರಾಟವೇ ಬೇರೆ. ಮಹದಾಯಿ ಇನ್ನೂ ಆ ಹಂತ ತಲುಪಿಲ್ಲ. ಆ ಹಂತ ತಲುಪಿದರೆ ಖಂಡಿತ ಉಗ್ರ ಹೋರಾಟ ಮಾಡುತ್ತೇನೆ ಎಂದು ಹೇಳಿದರು.

ಸಂಸತ್‌ ಅಧಿವೇಶನದಲ್ಲಿ ಮಹದಾಯಿ ಬಗ್ಗೆ ಧ್ವನಿ ಎತ್ತುತ್ತೇನೆ. ಮಹದಾಯಿ ವಿಚಾರದಲ್ಲಿ ಜೆಡಿಎಸ್‌ ನಿಲುವಿನಲ್ಲಿ ಬದಲಾವಣೆಯಿಲ್ಲ ಎಂದು ತಿಳಿಸಿದರು.

ಹಿಂದುತ್ವದ ಫಿಲಾಸಫಿಯೇ ಸಹನೆ. ಇನ್ನೊಂದು ಧರ್ಮವನ್ನು ಸಹಿಸದವರದು ಎಂತಹ ಹಿಂದುತ್ವ? ಶೃಂಗೇರಿಯ ಗುರುಗಳು ಆಚರಿಸುವುದು ನಿಜ ವಾದ ಹಿಂದುತ್ವ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ನಾನು ಶೃಂಗೇರಿಯಲ್ಲಿ ಶತರುದ್ರ ಯಾಗ ಮಾಡಿಸಿದ್ದು ಶತ್ರು ನಾಶಕ್ಕಲ್ಲ, ಲೋಕ ಕಲ್ಯಾಣಕ್ಕಾಗಿ. ಶತ್ರು ಸಂಹಾರಕ್ಕೆ ಶತ ಚಂಡಿಕಾಯಾಗ ಮಾಡ್ತಾರೆ, ಅದು ಕೊಲ್ಲೂರಲ್ಲಿ ಯಾರೋ ಮೊನ್ನೆ ಮಾಡಿಸಿದ್ದರಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next