Advertisement

ಭಿನ್ನ ಶಾಸಕರ ಕ್ಷೇತ್ರದಲ್ಲೇ ಜೆಡಿಎಸ್‌ ಗೆಲ್ಲಿಸಿ ತೋರಿಸುವೆ

11:23 AM Jul 22, 2017 | Team Udayavani |

ಬೆಂಗಳೂರು: ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಶುಕ್ರವಾರ ಜೆಡಿಎಸ್‌ ಸಮಾವೇಶ ನಡೆಸಿ ತಮ್ಮದೇ ಪಕ್ಷದ ಭಿನ್ನಮತೀಯ ಶಾಸಕ ಜಮೀರ್‌ ಅಹಮದ್‌ ಖಾನ್‌ ವಿರುದ್ಧ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ತೀವ್ರ ವಾಗ್ಧಾಳಿ ನಡೆಸಿದರು.

Advertisement

ಜೆಡಿಎಸ್‌ನಿಂದ ಆಯ್ಕೆಯಾಗಿದ್ದರೂ ಪಕ್ಷದ ಚಟುವಟಿಕೆಯಿಂದ ದೂರ ಉಳಿದಿರುವ ಜಮೀರ್‌ ಅಹಮದ್‌ ಖಾನ್‌ ಪ್ರತಿನಿಧಿಸುವ ಚಾಮರಾಜಪೇಟೆ ಕ್ಷೇತ್ರ ವ್ಯಾಪ್ತಿಯ ಆಜಾದ್‌ನಗರದಲ್ಲಿ ನಡೆದ ಸಮಾವೇಶದಲ್ಲಿ ಪಕ್ಷದ ಭಿನ್ನ ಶಾಸಕರ ವಿರುದ್ಧ ಗುಡುಗಿದ ದೇವೇಗೌಡರು, ಭಿನ್ನಮತೀಯ ಶಾಸಕರ ಕ್ಷೇತ್ರದಲ್ಲಿ ಪಕ್ಷವನ್ನು ಗೆಲ್ಲಿಸಿ ತೋರಿಸುತ್ತೇನೆ ಎಂದು ಸವಾಲು ಹಾಕಿದರು.

ಸಮಾವೇಶದಲ್ಲಿ ಮಾತನಾಡಿದ ದೇವೇಗೌಡರು, “ಚಾಮರಾಜಪೇಟೆಯಲ್ಲಿ ಜೆಡಿಎಸ್‌ ಸಮಾವೇಶ ನಡೆಸಲು ಸಾಧ್ಯವೇ ಎಂಬ ಪರೀಕ್ಷೆ ಇತ್ತು. ಎಷ್ಟು ಜನ ಸೇರುತ್ತಾರೆ ಎಂಬ ಪ್ರಶ್ನೆ ಇಲ್ಲ. ನಿಮ್ಮನ್ನೆಲ್ಲಾ ನೋಡಬೇಕು ಎಂಬ ಉದ್ದೇಶದೀಂದ ಸಭೆ ಮಾಡಲಾಗಿದೆ,’ ಎನ್ನುವ ಮೂಲಕ ಕಾರ್ಯಕರ್ತರನ್ನು ಹುರಿದುಂಬಿಸಿದರು.

“ಚಾಮರಾಜಪೇಟೆ ಕ್ಷೇತ್ರದಲ್ಲಿ ಸಭೆ ಮಾಡಿದರೆ ಜನ ಮನೆ ಬಿಟ್ಟು ಬರುವುದಿಲ್ಲ ಎಂದು ಕೆಲವರು ಹೇಳಿದರು. ಇನ್ನೂ ಕೆಲವರು ಸಭೆ ಮಾಡಿದರೆ ಕೇಸು ಹಾಕುತ್ತಾರೆ ಎಂದರು. ಚಾಮರಾಜಪೇಟೆಯಲ್ಲಿ ಜೆಡಿಎಸ್‌ ಸಮಾವೇಶ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದರು. ಇದೇನು ಪಾಕಿಸ್ತಾನ ಅಲ್ಲ. ನಾನು ಧೈರ್ಯ ಹೇಳಿದಮೇಲೆ ಸಭೆ ಮಾಡಿದ್ದಾರೆ.

ಇಲ್ಲಿಂದಲೇ ನಾನು ಹೋರಾಟ ಆರಂಭಿಸುತ್ತೇನೆ. ಯಾರು ಏನು ಮಾಡುತ್ತಾರೋ ನೋಡೋಣ. ಚಾಮರಾಜಪೇಟೆಯಲ್ಲಿ ಪಕ್ಷವನ್ನು ಗೆಲ್ಲಿಸುವುದೇ ನನ್ನ ಗುರಿ. ಇದನ್ನು ನಾನು ಸವಾಲಾಗಿ ಸ್ವೀಕರಿಸುತ್ತೇನೆ ಎಂದು ಗುಡುಗಿದರು.

Advertisement

“ಎಲ್ಲರೂ ನಮ್ಮ ಪಕ್ಷ ಬಿಟ್ಟು ಹೋಗಿದ್ದಾರೆ. ಆದರೂ ಪಕ್ಷ ಉಳಿಸುವುದಕ್ಕಾಗಿ ಈ ದೇವೇಗೌಡ ಏನು ಬೇಕಾದರೂ ಮಾಡಲು ಸಿದ್ಧ. ಮನೆ ಮನೆಗೆ ಹೋಗಿ ಮತ ಕೇಳುತ್ತೇನೆ. ಮನೆಯಲ್ಲಿ ಮಲಗಲ್ಲ. ಎಲ್ಲ ಭಿನ್ನಮತೀಯರ ಕ್ಷೇತ್ರದಲ್ಲೂ ಪಕ್ಷವನ್ನು ಗೆಲ್ಲಿಸಿ ತೋರಿಸುತ್ತೇನೆ,’ ಎಂದು ಸವಾಲು ಹಾಕಿದರು.

“ಅಪ್ಪನನ್ನು ಬಿಟ್ಟು ಬಂದರೆ ಕುಮಾರಣ್ಣನನ್ನು ಮುಖ್ಯಮಂತ್ರಿ ಮಾಡುತ್ತಾರಂತೆ. ಚಾಮರಾಜಪೇಟೆಯಲ್ಲಿ ನಮ್ಮ ಕಾರ್ಯಕರ್ತರಿಗೆ ತೊಂದರೆಯಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆ ಮುಂದೆ ಧರಣಿ ಮಾಡುತ್ತೇನೆ. ನಾನು ಉಪವಾಸ ಧರಣಿ ಮಾಡಿದ್ದಕ್ಕೆ ಗುಂಡೂರಾವ್‌ ಸರ್ಕಾರ ಹೋಯಿತು ಎಂಬುದು ನೆನಪಿರಲಿ,’ ಎನ್ನುವ ಮೂಲಕ ಭಿನ್ನರಿಗೆ ಎಚ್ಚರಿಕೆ ನೀಡಿದರು.

ಕುಮಾರ್‌ ಈಗಲೂ ಮರುಗುತ್ತಾರೆ!: “ಯಾರನ್ನೋ ಟೀಕಿಸುವುದರಿಂದ ದೊಡ್ಡ ಮನುಷ್ಯರಾಗುವುದಿಲ್ಲ. ನಾನಿನ್ನೂ ಸಣ್ಣ ಮನುಷ್ಯ. ಜಮೀರ್‌ ಗೆಲುವಿಗಾಗಿ ಚಾಮರಾಜೇಪಟೆಯ ಗಲ್ಲಿಗಳು, ಕೊಳೆಗೇರಿಗಳಲ್ಲಿ ಓಡಾಡಿದ್ದೇನೆ. ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿಯಾಗಿ ಇಲ್ಲಿಗೇಕೆ ಬಂದಿರಿ ಎಂಬ ಮಾತುಗಳನ್ನೂ ಲೆಕ್ಕಿಸದೆ “ದರಿದ್ರ ನಾರಾಯಣ’ ರ್ಯಾಲಿ ಮಾಡಿ ಜಮೀರ್‌ನನ್ನು ಗೆಲ್ಲಿಸಿದ್ದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅವರ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡ ಭಿನ್ನಮತೀಯ ಶಾಸಕರು ಕುಮಾರಸ್ವಾಮಿಗೆ ವಿಷ ಹಾಕುವುದು ಒಂದನ್ನು ಬಿಟ್ಟು ಉಳಿದೆಲ್ಲಾ ರೀತಿಯ ದ್ರೋಹ ಎಸಗಿದ್ದರ ಬಗ್ಗೆ ಕುಮಾರಸ್ವಾಮಿ ಇಂದಿಗೂ ಮರುಗುತ್ತಿದ್ದಾರೆ,’ ಎಂದರು.

ಚಾಮರಾಜಪೇಟೆಯಲ್ಲಿ ಜೆಡಿಎಸ್‌ ಸಮಾವೇಶ ನಡೆಸಲು ಸಾಧ್ಯವಿಲ್ಲ ಎಂದು ಕೆಲವರು ಹೇಳಿದ್ದರು. ಯಾರು ಏನು ಮಾಡುತ್ತಾರೋ ನೋಡೇಬಿಡತ್ತೇನೆ. ಚಾಮರಾಜಪೇಟೆಯಲ್ಲಿ ಪಕ್ಷವನ್ನು ಗೆಲ್ಲಿಸುವುದೇ ನನ್ನ ಗುರಿ. ಇದನ್ನು ನಾನು ಸವಾಲಾಗಿ ಸ್ವೀಕರಿಸುತ್ತೇನೆ.
-ಎಚ್‌.ಡಿ. ದೇವೇಗೌಡ, ಮಾಜಿ ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next