Advertisement

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ

03:45 AM Mar 24, 2017 | |

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ, ಬಿಪಿಎಲ್‌ ಕುಟುಂಬಗಳಿಗೆ ಉಚಿತ ವಿದ್ಯುತ್‌ ಪೂರೈಕೆ ಹಾಗೂ  ಏಳನೇ ವೇತನ ಆಯೋಗದ ಶಿಫಾರಸು ಯಥಾವಥ್‌ ಜಾರಿಗೊಳಿಸುವುದಾಗಿ ಜೆಡಿಎಸ್‌ ಘೋಷಿಸಿದೆ.

Advertisement

ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಸ್ವಾಭಿಮಾನಿ ಸಮಾವೇಶದಲ್ಲಿ “ಮಿನಿ ಪ್ರಣಾಳಿಕೆ’ಯ ನಿರ್ಣಯ ಅಂಗೀಕರಿಸಿರುವ ಜೆಡಿಎಸ್‌, ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರ ಮಾರ್ಗದರ್ಶನದಲ್ಲಿ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ನಾಯಕತ್ವದಲ್ಲಿ ಸ್ವಂತ ಶಕ್ತಿಯ ಮೇಲೆ ಸರ್ಕಾರ ರಚಿಸುವ ಸಂಕಲ್ಪ ಮಾಡಿದೆ.

ಸಮಾವೇಶದಲ್ಲಿ ಮಾತನಾಡಿದ ನಾಯಕರು, ಕಾಂಗ್ರೆಸ್‌ ಅಥವಾ ಬಿಜೆಪಿ ಜತೆ ಚುನಾವಣಾ ಪೂರ್ವ ಅಥವಾ ಚುನಾವಣಾ ನಂತರ ಯಾವುದೇ ರೀತಿಯ ಹೊಂದಾಣಿಕೆ, ಮೈತ್ರಿ ಇಲ್ಲ ಎಂದು ಸ್ಪಷ್ಟನೆ ನೀಡುವುದರ ಜತೆಗೆ ಎರಡೂ ರಾಷ್ಟ್ರೀಯ ಪಕ್ಷಗಳು ರಾಜ್ಯದ ಸಂಪತ್ತು ಲೂಟಿ ಮಾಡಿ ಜನರಿಗೆ ದ್ರೋಹ ಬಗೆದಿವೆ. ಕರ್ನಾಟಕವನ್ನು ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ಮುಕ್ತಗೊಳಿಸುವುದೇ ನಮ್ಮ ಗುರಿ ಎಂದು ಘೋಷಿಸಿದರು.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಮಾತನಾಡಿ, ರಾಜ್ಯದಲ್ಲಿ ಜೆಡಿಎಸ್‌ ಪ್ರಾದೇಶಿಕ ಪಕ್ಷವಾಗಿ ನನ್ನ ನಂತರವೂ ಉಳಿಯಬೇಕು ಎಂಬ ಕಾರಣಕ್ಕೆ ಪಕ್ಷದ ನೂತನ ಕಚೇರಿಗೆ ತ್ಯಾಗಮಯಿ ಜಯಪ್ರಕಾಶ್‌ ನಾರಾಯಣ ಅವರ ಹೆಸರು ಇಟ್ಟು ಜೆಪಿ ಭವನ ಎಂದು ನಾಮಕರಣ ಮಾಡಿದ್ದೇನೆ. ದೇಶದಲ್ಲಿ ಸಮಗ್ರ ಬದಲಾವಣೆ ತಂದವರು ಅವರು. ಅವರು ಹಾಕಿಕೊಟ್ಟಿರುವ ಮಾರ್ಗವೇ ನಮಗೆ ದಾರಿದೀಪ ಎಂದು ಹೇಳಿದರು.

ಮಹದಾಯಿ, ಕಾವೇರಿ ಸೇರಿದಂತೆ ಎಲ್ಲ ವಿಚಾರಗಳಲ್ಲೂ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಎರಡೂ ರಾಷ್ಟ್ರೀಯ ಪಕ್ಷಗಳು ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ವಿಫ‌ಲವಾಗಿವೆ. ರಾಜ್ಯಕ್ಕೆ ಏನಾದರೂ ಒಳ್ಳೆಯದಾಗಬೇಕು ಎಂದರೆ ಅದು ಜೆಡಿಎಸ್‌ನಿಂದ  ಮಾತ್ರ. ಇಲ್ಲಿ ದೇವೇಗೌಡ, ಕುಮಾರಸ್ವಾಮಿ ಪ್ರಶ್ನೆಯಲ್ಲ. ಪಕ್ಷ ಉಳಿಯುವ ಪ್ರಶ್ನೆ ಎಂದು ತಿಳಿಸಿದರು.

Advertisement

ಮುಂದಿನ ವಿಧಾನಸಭೆ ಚುನಾವಣೆ ನಮಗೆ ಅಗ್ನಿ ಪರೀಕ್ಷೆ.  ಈ ಅಗ್ನಿಪರೀಕ್ಷೆಯಲ್ಲಿ ನಾವು ಗೆಲ್ಲಲೇಬೇಕು. ಸ್ವಂತ ಶಕ್ತಿಯ ಮೇಲೆ ಸರ್ಕಾರ ರಚಿಸುವ ಸಂಕಲ್ಪ ತೊಡಬೇಕು. ಪ್ರತಿಯೊಬ್ಬ ಕಾರ್ಯಕರ್ತ, ಮುಖಂಡ ಇನ್ನೊಂದು ವರ್ಷ ವಿಶ್ರಾಂತಿಯಿಲ್ಲದೆ ದುಡಿಯಬೇಕು ಎಂದು ಕರೆ ನೀಡಿದರು.

ಮಾಜಿ ಸಚಿವರಾದ ಎಚ್‌.ಡಿ.ರೇವಣ್ಣ, ಬಸವರಾಜ ಹೊರಟ್ಟಿ,ಎಂ.ಸಿ.ನಾಣಯ್ಯ, ಅಲ್ಕೋಡ್‌ ಹನುಮಂತಪ್ಪ, ಕೆ.ಶ್ರೀನಿವಾಸಗೌಡ, ಜಿ.ಟಿ.ದೇವೇಗೌಡ, ಸತ್ಯನಾರಾಯಣ, ಶಾಸಕರಾದ ವೈ.ಎಸ್‌.ವಿ.ದತ್ತಾ,ಮಧು ಬಂಗಾರಪ್ಪ, ಮಲ್ಲಿಕಾರ್ಜುನ ಖೂಬಾ, ಪಿಳ್ಳಮುನಿಸ್ವಾಮಪ್ಪ, ಸಾ.ರಾ.ಮಹೇಶ್‌, ಶಾರದಾ ಪೂರ್ಯ ನಾಯಕ್‌, ಗೋಪಾಲಯ್ಯ ಸೇರಿದಂತೆ ಪಕ್ಷದ ಶಾಸಕರು, ವಿಧಾನಪರಿಷತ್‌ ಸದಸ್ಯರು , ಜಿಲ್ಲಾ ಮತ್ತು ರಾಜ್ಯ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನಿರ್ಣಯ ಏನು
ಮುಂಬರವ ವಿಧಾನಸಭೆ ಚುನಾವಣೆಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ನಾಯಕತ್ವದಲ್ಲಿ ಜೆಡಿಎಸ್‌ ಪಕ್ಷದ ಸರ್ಕಾರವನ್ನು ಅಧಿಕಾರಕ್ಕೆ ತರುವ ಮೂಲಕ ರಾಜ್ಯದ ರೈತರ ಸಾಲ ಮನ್ನಾ, ಬಿಪಿಎಲ್‌ ಕಾರ್ಡ್‌ದಾರರಿಗೆ ಉಚಿತವಾಗಿ ವಿದ್ಯುತ್‌ ಪೂರೈಕೆ, ಏಳನೇ ವೇತನ ಆಯೋಗದ ಶಿಫಾರಸು ಯಥಾವತ್ತಾಗಿ ಜಾರಿ, ಜನಸಾಮಾನ್ಯರ ದಿನನಿತ್ಯದ ಬದುಕಿನ ಬೇಡಿಕೆಗಳಾದ ನೀರು, ರಸ್ತೆ, ವಿದ್ಯುತ್‌ ಹಾಗೂ ಸೂರುಗಳನ್ನು ಒದಗಿಸುವ ನಿರ್ಣಯವನ್ನು ಮಹಾ ಸಮಾವೇಶ ಕೈಗೊಂಡಿದೆ.  ವಿಧಾನಪರಿಷತ್‌ ಸದಸ್ಯರಾದ ರಮೇಶ್‌ಬಾಬು ನಿರ್ಣಯ ಸೂಚಿಸಿ ಪಕ್ಷದ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಎಂ.ಫ‌ರೂಕ್‌ ಅನುಮೋದಿಸಿದರು.

ಜೇಬುಗಳ್ಳರ ಕೈ ಚಳಕ
ಸಮಾವೇಶದಲ್ಲಿ ಜೇಬುಗಳ್ಳರ ಕೈಚಳಕದಿಂದ ಬೆಳಗಾವಿಯ ಸುರೇಶ್‌ ಐಹೊಳೆ ಎಂಬುವರು 38 ಸಾವಿರ ರೂ. ಕಳೆದುಕೊಂಡರು.ನೂಕು ನುಗ್ಗಲಿನಲ್ಲಿ ಅವರ ಕಿಸೆಯಲ್ಲಿದ್ದ 38 ಸಾವಿರ ರೂ. ಕಳವು ಮಾಡಲಾಗಿತ್ತು. ಈ ಬಗ್ಗೆ ಸ್ಥಳದಲ್ಲಿದ್ದ ಪೊಲೀಸರಿಗೆ ಅವರು ದೂರು ನೀಡಿದರು.

ಸಂಚಾರ ದಟ್ಟಣೆ
ಜೆಡಿಎಸ್‌ ಸಮಾವೇಶ ಹಿನ್ನೆಲೆಯಲ್ಲಿ ಅರಮನೆ ಸುತ್ತಮುತ್ತ ಮೂರ್‍ನಾಲ್ಕು ಗಂಟೆಗಳ ಕಾಲ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು. ಮೇಕ್ರಿ ವೃತ್ತ, ಜೆಸಿ ನಗರ, ಕಾವೇರಿ ವೃತ್ತ, ರಮಣಮಹರ್ಷಿ ರಸ್ತೆ, ಸದಾಶಿವನಗರ, ವಸಂತನಗರ ಭಾಗಗಳಲ್ಲಿ ಸಮಾವೇಶದ ಬಿಸಿ ತಟ್ಟಿತ್ತು. ರಾಜ್ಯದ ವಿವಿಧೆಡೆಯಿಂದ ಬಸ್ಸುಗಳಲ್ಲಿ ಆಗಮಿಸಿದ್ದ ಕಾರ್ಯಕರ್ತರು ಒಮ್ಮೆಲೆ ಅರಮನೆ ಆವರಣದ ನಾಲ್ಕೂ ಭಾಗಗಳಿಂದ ನುಗ್ಗಿದ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸುಗಮ ಸಂಚಾರ ಕಲ್ಪಿಸುವಷ್ಟರಲ್ಲಿ ಸಂಚಾರಿ ಪೊಲೀಸರಿಗೆ ಸಾಕು ಸಾಕಾಯಿತು.

ಮಠಾಧೀಶರು ದೇಶ ಆಳುವ ಸ್ಥಿತಿ ಬಂದಿದೆ. ಮೂವತ್ತು ಕೋಟಿ ಜನಸಂಖ್ಯೆ ಹೊಂದಿರುವ ರಾಜ್ಯದ ಆಡಳಿತ ಚುಕ್ಕಾಣಿ ಮಠಾಧೀಶರೊಬ್ಬರು ಹಿಡಿದಿದ್ದಾರೆ. ದೇಶದ ರಾಜಕಾರಣ ಯಾವ ಕಡೆ ಹೋಗುತ್ತಿದೆ ಎಂಬುದಕ್ಕೆ ಇದು ಸಾಕ್ಷಿ.
-ಎಚ್‌.ಡಿ.ದೇವೇಗೌಡ, ಮಾಜಿ ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next