ವೇಗವಾಗಿ ಸಾಗಬೇಕಾದ ವಾಹನಗಳ ಮುಂಭಾಗ ಸಪೂರವಾಗಿ, ಮೊನಚಾಗಿರುತ್ತದೆ – ವಿಮಾನದ ಹಾಗೆ. ಬುಲೆಟ್ ರೈಲುಗಳ ಮುಂಭಾಗವನ್ನು ಗಮನಿಸಿ, ಈಗಿನ ಹೊಸ ಹೊಸ ಮಾಡೆಲ್ ಬೈಕುಗಳ ಸ್ವರೂಪವನ್ನು ಪರಿಶೀಲಿಸಿ. ಭೂಮಿಯ ವಾತಾವರಣವನ್ನು ಉಲ್ಲಂಘಿಸಿ ಲಕ್ಷಾಂತರ ಕಿಲೊಮೀಟರ್ ದೂರ ಸಾಗಬೇಕಿರುವ ರಾಕೆಟ್‌ಗಳ ಮುಂಭಾಗ ಹೇಗಿರುತ್ತದೆ? ಆಳವಾಗಿ ನಾಟಿಕೊಳ್ಳಬೇಕಾದ ಆಯುಧಗಳು ಕೂಡ ಹೀಗೆಯೇ – ಚೂಪಾಗಿರುತ್ತವೆ. ಬಾಣ ಇರುವುದು ಹೀಗೆಯೇ. ಕತ್ತಿಯ ಅಲಗು ಹರಿತವಾಗಿದ್ದರೆ ಮಾತ್ರ ಅದು ಏನನ್ನಾದರೂ ಕತ್ತರಿಸುವುದಕ್ಕೆ ಸಾಧ್ಯ.
ಇದು ನಮ್ಮ ಬದುಕಿನ ಬಗ್ಗೆಯೂ ಒಂದು ಒಳ್ಳೆಯ ಒಳನೋಟವನ್ನು ಹೇಳುವುದಿಲ್ಲವೆ? ಜೀವನದಲ್ಲಿ ಯಾವುದೇ ಒಂದು ಕೆಲಸ, ಗುರಿ, ಉದ್ದೇಶ ಹೊಂದಿದ್ದರೆ ನಾವು ಹೇಗೆ ಕೆಲಸ ಮಾಡಬೇಕು ಎನ್ನುವುದಕ್ಕೆ ಇದು ಮಾರ್ಗದರ್ಶಕವಲ್ಲವೆ? ಆಧ್ಯಾತ್ಮಿಕವಾದ ಸಾಧನೆ ಮಾಡುವ ವಿಚಾರದಲ್ಲಿಯೂ ಇದರಿಂದ ಪಾಠ, ಪ್ರೇರಣೆ ಪಡೆದುಕೊಳ್ಳಲು ಸಾಧ್ಯ ವಿದೆಯಲ್ಲವೆ!
ಇದೆ. ನಮ್ಮ ಬದುಕಿನಲ್ಲಿ ಏನಾದರೂ ಸಾಧನೆ ಮಾಡುವುದಿದ್ದರೆ ಅದಕ್ಕಾಗಿ ನಮ್ಮಲ್ಲಿ ಏನಿದೆಯೋ ಅದೆಲ್ಲವನ್ನೂ ಒಂದೇ ಗುರಿಯತ್ತ ಕೇಂದ್ರೀ ಕರಿಸಬೇಕು. ನಮ್ಮಲ್ಲಿ ಇರುವುದು ಎಂದರೆ ನಮ್ಮ ಸಂಪತ್ತು, ಅಂತಸ್ತು, ಅಧಿಕಾರ ಇತ್ಯಾದಿಗಳಲ್ಲ. ನಮ್ಮ ಆಂತರಿಕ ಶಕ್ತಿ, ನಮ್ಮ ಭಾವನೆಗಳು, ಗುಣಗಳು, ಯೋಚನೆಗಳು… ಇವೆಲ್ಲವನ್ನೂ ಒಂದು ಬಿಂದುವಿನತ್ತ ಕೇಂದ್ರೀಕರಿಸಿದರೆ ಮಾತ್ರ ಅಂದುಕೊಂಡದ್ದು ಸಾಧನೆಯಾಗಲು ಸಾಧ್ಯ.
ಅಂದರೆ ಒಂದು ದಿಕ್ಕಿನತ್ತ ನಮ್ಮೆಲ್ಲ ಶಕ್ತಿ ಸಾಮರ್ಥ್ಯಗಳನ್ನೂ ಹೂಡಿದರೆ ಮಾತ್ರ ಗಮ್ಯ ಸೇರುವುದು ಸಾಧ್ಯ, ಗುರಿ ಸಾಧನೆ ಯಾಗುವುದಕ್ಕೆ ಸಾಧ್ಯ.
ಆದರೆ ಸಾಮಾನ್ಯವಾಗಿ ನಮ್ಮ ಸ್ಥಿತಿಗತಿ ಹೇಗಿರುತ್ತದೆ ಎಂಬುದನ್ನು ಗಮನಿಸಿ. ದೇವರ ಬಗ್ಗೆ ಭಕ್ತಿ, ನೆರೆಮನೆಯವನ ಕುರಿತು ಈಷ್ಯೆì, ಹೆಂಡತಿಯ ಮೇಲೆ ಪ್ರೀತಿ, ಕಚೇರಿಯಲ್ಲಿ ಉನ್ನತಾಧಿಕಾರಿಯ ಮೇಲೆ ದ್ವೇಷ… ಹೀಗೆ ನಮ್ಮ ಶಕ್ತಿ ಸಾಮರ್ಥ್ಯ, ಭಾವನೆ, ಯೋಚನೆಗಳು ಹತ್ತು ದಿಕ್ಕಿಗೆ ನಮ್ಮನ್ನು ಹಿಡಿದೆಳೆಯುತ್ತಿರುತ್ತವೆ. ಹತ್ತು ಮೊನೆಗಳನ್ನು ಹೊಂದಿರುವ ಆಯುಧ ಆಳವಾಗಿ ನಾಟಿಕೊಳ್ಳಲು ಸಾಧ್ಯವೇ? ಐದಾರು ಕಡೆಗೆ ಮುಖ ಮಾಡಿರುವ ವಾಹನ ಯಾವುದೇ ಗಮ್ಯವನ್ನು ತಲುಪಬಲ್ಲುದೇ? “ಎತ್ತು ಏರಿಗೆ ಎಳೆಯಿತು, ಕೋಣ ನೀರಿಗೆ ಎಳೆಯಿತು’ ಎಂಬ ನಾಣ್ನುಡಿಯೇ ನಮ್ಮ ಜನಪದದಲ್ಲಿ ಇದೆಯಲ್ಲವೆ!
ಅಂದುಕೊಂಡಿರುವ ಯಾವುದೋ ಒಂದು ಸಾಧನೆ, ನಮ್ಮ ದೈನಂದಿನ ಕೆಲಸ ಕಾರ್ಯಗಳು, ಜೀವನದ ಗುರಿ – ಎಲ್ಲವಕ್ಕೂ ಈ ತಣ್ತೀ ಅನ್ವಯವಾಗುತ್ತದೆ. ದೇವರ ಮೇಲಿನ ಭಕ್ತಿಗೂ ಇದು ಅನ್ವಯಿಸುತ್ತದೆ. ನಮ್ಮಲ್ಲಿ ರುವ ಎಲ್ಲವನ್ನೂ ಭಗವಂತನತ್ತ ಗುರಿ ಮಾಡಬೇಕು ಎನ್ನುವುದು ಇದೇ ಅರ್ಥದಲ್ಲಿ.
ನಮ್ಮಲ್ಲಿ ನಿಜವಾಗಿಯೂ ಇರುವುದು ಏನು – ಜೀವನ ಮಾತ್ರ. ದುರ್ಗುಣ- ಸದ್ಗುಣಗಳು, ಆಲೋಚನೆಗಳು, ನಂಬಿಕೆ ಗಳು… ಎಲ್ಲವುಗಳ ಆಳದಲ್ಲಿ ಇರುವುದು ಜೀವನ. ಅದನ್ನು ಚೆನ್ನದಾಗಿಸಬೇಕು, ಲವಲವಿಕೆಯಿಂದ ಇರಬೇಕು, ನಮ್ಮ ಬದುಕು ಪೂರ್ಣಪ್ರಮಾಣದಲ್ಲಿ ಅರಳಿ ಕೊಳ್ಳಬೇಕು ಎಂಬ ಒಂದೇ ದಿಕ್ಕಿನತ್ತ ಕೇಂದ್ರೀಕೃತಗೊಂಡು ಮುನ್ನಡೆದರೆ ಅದು ಈಡೇರುತ್ತದೆ.
ಮೊನಚಾದ ಪೆನ್ಸಿಲ್ ಬಿಳಿ ಹಾಳೆಯ ಮೇಲೆ ಸುಂದರವಾದ ಅಕ್ಷರಗಳನ್ನು ಲೇಖೀ ಸುವಂತೆ ನಮ್ಮ ಜೀವನ ಕೂಡ ಸುಂದರ ವಾಗುವುದು. ಆಗ ಗುರಿ ಸಾಧನೆ ಸುಲಭ ಸಾಧ್ಯ.