Advertisement

ಇಂದು ಜನತಾ ಕರ್ಫ್ಯೂ; ನಾಗರಿಕರ ಮುಂಜಾಗ್ರತೆ

11:01 AM Mar 22, 2020 | mahesh |

ಮಹಾನಗರ: ಕೋವಿಡ್- 19 ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ದೇಶದ ಜನತೆಗೆ ನೀಡಿರುವ “ಜನತಾ ಕರ್ಫ್ಯೂ’ ಕರೆ ಹಿನ್ನೆಲೆಯಲ್ಲಿ ಮಂಗಳೂರು ನಗರದ ಬಹುತೇಕ ಕಡೆಗಳಲ್ಲಿ ಶನಿವಾರ ವ್ಯಾಪಾರ ವಹಿವಾಟು ಬಿರುಸಿನಿಂದ ಕೂಡಿತ್ತು.

Advertisement

ಜನತಾ ಕರ್ಫ್ಯೂಗೆ ಸೆಂಟ್ರಲ್‌ ಮಾರುಕಟ್ಟೆ ವ್ಯಾಪಾರಸ್ಥರ ಸಂಘ ಬೆಂಬಲ ಸೂಚಿಸಿರುವ ಕಾರಣ ರವಿವಾರ ಮಾರುಕಟ್ಟೆ ವ್ಯಾಪಾರ ಬಂದ್‌ ಆಗಿರುತ್ತದೆ. ಇದೇ ಕಾರಣಕ್ಕೆ ನಗರ ಜನತೆ ಶನಿವಾರ ಮಧ್ಯಾಹ್ನ ವೇಳೆ ಬಿರುಸಿನ ವ್ಯಾಪಾರದಲ್ಲಿ ತೊಡಗಿದ್ದ ದೃಶ್ಯ ಕಂಡುಬಂತು. ದಿನಬಳಕೆಯ ವಸ್ತುಗಳಾದ ತರಕಾರಿ, ಹಣ್ಣುಹಂಪಲು, ಬೇಳೆ-ಕಾಳು ಸಹಿತ ದಿನಸಿ ಖರೀದಿ ಬಿರುಸಿನಿಂದ ಕೂಡಿತ್ತು. ಕೆಲವು ದಿನಗಳಿಗೆ ಹೋಲಿಸಿದರೆ ಮಾರುಕಟ್ಟೆಯಲ್ಲಿ ಶನಿವಾರ ವ್ಯಾಪಾರ ಸ್ವಲ್ಪ ಮಟ್ಟಿಗೆ ಹೆಚ್ಚಿತ್ತು.

ಸರಕಾರಿ ಕಚೇರಿಗಳು ಬಿಕೋ
ಜಿಲ್ಲೆಯಲ್ಲಿನ ಬಹುತೇಕ ಸರಕಾರಿ ಸೇವೆಗಳನ್ನು ಮಾರ್ಚ್‌ 31ರ ವರೆಗೆ ಸ್ಥಗಿತಗೊಳಿ ಸಲಾಗಿದ್ದು, ಈ ಹಿನ್ನೆಲೆಯಲ್ಲಿ ನಗರದ ಪ್ರಮುಖ ಸರಕಾರಿ ಕಚೇರಿಗಳು ಬಿಕೋ ಎನ್ನುತ್ತಿತ್ತು. ಇನ್ನು, ನಗರದ ಪ್ರಮುಖ ಜಂಕ್ಷನ್‌ಗಳಾದ ಪಿ.ವಿ.ಎಸ್‌., ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ, ಬಂಟ್ಸ್‌ ಹಾಸ್ಟೆಲ್‌, ಪಂಪ್‌ವೆಲ್‌, ಕೆಎಸ್‌ ರಾವ್‌ ರಸ್ತೆ, ನಂತೂರು, ಎಂ.ಜಿ. ರಸ್ತೆ ಸೇರಿದಂತೆ ನಗರದಲ್ಲಿ ವಾಹನ ವಿರಳವಾಗಿತ್ತು. ಧಾರ್ಮಿಕ ಕ್ಷೇತ್ರಗಳು, ಬೀಚ್‌ಗಳಿಗೆ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿತ್ತು.

ಕಮ್ಮಿ ರೇಟ್‌ … ಕಮ್ಮಿ ರೇಟ್‌
ನಗರದ ಸೆಂಟ್ರಲ್‌ ಮಾರುಕಟ್ಟೆಯಲ್ಲಿ ಶನಿವಾರ ಅತೀ ಕಡಿಮೆ ಬೆಲೆಗೆ ವ್ಯಾಪಾರ- ವಹಿವಾಟು ನಡೆಯುತ್ತಿತ್ತು. ಈಗಾಗಲೇ ತರಕಾರಿಗಳು, ಹಣ್ಣು-ಹಂಪಲುಗಳು ಹೆಚ್ಚಿನ ಸಂಗ್ರಹವಿದ್ದು, ಗ್ರಾಹಕರ ಸಂಖ್ಯೆ ಕಡಿಮೆ ಇದ್ದ ಕಾರಣಕ್ಕೆ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಅದರಲ್ಲಿಯೂ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಬೀದಿ ಬದಿ ವ್ಯಾಪಾರಿಗಳು ಕಡಿಮೆ ದರದಲ್ಲಿ ವಸ್ತುಗಳನ್ನು ನೀಡುತ್ತಿದ್ದ ದೃಶ್ಯ ಕಂಡು ಬಂತು.

ಗಂಟು-ಮೂಟೆಯೊಂದಿಗೆ ಬಸ್‌ ನಿಲ್ದಾಣಕ್ಕೆ
ಮಂಗಳೂರು ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಲ್ಲಿ ಬಸ್‌ ಸಂಚಾರ ಎಂದಿನಂತೆ ಇರಲಿಲ್ಲ. ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಬಸ್‌ ಟ್ರಿಪ್‌ಗ್ಳನ್ನು ಕಡಿತಗೊಳಿಸಲಾಗಿತ್ತು. ಅದರಲ್ಲಿಯೂ ಕಾಸರಗೋಡು, ಬಾಯಾರು, ಉಪ್ಪಳ ಸಹಿತ ಕಾಸರಗೋಡು ಗಡಿಪ್ರದೇಶವಾಗಿ ಹಾದುಹೋಗುವ ಎಲ್ಲ ಬಸ್‌ ಸಂಚಾರವನ್ನು ಸ್ಥಗಿತಗೊಳಿಸಲಾತ್ತು. ರವಿವಾರ ಜನತಾ ಕರ್ಫ್ಯೂ ಹಿನ್ನಲೆಯಲ್ಲಿ ಮಂಗಳೂರಿಗೆ ವಲಸೆ ಬಂದ ಕೆಲವೊಂದಷ್ಟು ಕೂಲಿ ಕಾರ್ಮಿಕರು ಗಂಟು ಮೂಟೆಯೊಂದಿಗೆ ಮಂಗಳೂರಿನ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದ ದೃಶ್ಯ ಕಂಡು ಬಂತು. ಇನ್ನು, ಕೆಲವೊಂದು ಬಸ್‌ ನಿರ್ವಾಹಕರು ಮತ್ತು ಚಾಲಕರು ಮಾತ್ರ ಮಾಸ್ಕ್ ಧಿರಿಸಿದ್ದರು.

Advertisement

ನಗರದಲ್ಲೆಡೆ ಕೋವಿಡ್- 19 ಜಾಗೃತಿ
ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆ ಸಹಿತ ಜಿಲ್ಲಾಡಳಿತದ ವತಿಯಿಂದ ನಗರದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ನಗರದ ಜನನಿಬಿಡ ಪ್ರದೇಶ, ಸೆಂಟ್ರಲ್‌ ಮಾರುಕಟ್ಟೆ, ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ, ಕೆಲವೊಂದು ಪ್ರಮುಖ ರಸ್ತೆಗಳು, ಖಾಸಗಿ ಬಸ್‌ ನಿಲ್ದಾಣ ಸಹಿತ ವಿವಿಧ ಪ್ರದೇಶಗಳಲ್ಲಿ ಕೊರೊನಾ ಮುನ್ನೆಚ್ಚರಿಕಾ ಪೋಸ್ಟರ್‌ ಅನ್ನು ಅಳವಡಿಸಲಾಗಿದೆ. ಅದೇ ರೀತಿ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮೈಕ್‌ ಮುಖೇನ ಜಾಗೃತಿ ಮೂಡಿಸಲಾಗುತ್ತಿದೆ. ನಗರದಲ್ಲಿಯೂ ವಾಹನದಲ್ಲಿ ಮೈಕ್‌ಮುಖೇನ ಜಾಗೃತಿ ಮೂಡಿಸಲಾಗುತ್ತಿದೆ.

ಮಾಸ್ಕ್ ತಯಾರಿ
ಮಾರುಕಟ್ಟೆಯಲ್ಲಿ ಮಾಸ್ಕ್ ಪೂರೈಕೆ ಕಡಿಮೆ ಇರುವ ಕಾರಣದಿಂದಾಗಿ ಮಂಗಳೂರಿನ ಕೆಎಸ್ಸಾರ್ಟಿಸಿ ವಿಭಾಗದಲ್ಲಿ ಸಿಬಂದಿ ವಿಭಾಗದಲ್ಲಿ ತಾವೇ ಮಾಸ್ಕ್ ತಯಾರಿ ಯಲ್ಲಿದ್ದಾರೆ. ತಾಂತ್ರಿಕ ಶಿಲ್ಪಿ ಆಶಾಲತಾ, ಉಗ್ರಾಣಾಧಿಕಾರಿ ಕಿರಣ್‌, ಕಾರ್ಯಕಾರಿ ಅಧೀಕ್ಷಕ ಪುರಂದರ್‌ ನೃತೃತ್ವದಲ್ಲಿ ಮಾಸ್ಕ್ ತಯಾರಿ ಮಾಡಲಾಗುತ್ತಿದೆ. ಈ ಮಾಸ್ಕ್ಗಳನ್ನು ಪ್ರಥಮ ಹಂತವಾಗಿ ನಿಗಮದ ಸಿಬಂದಿಗೆ ಮಾಸ್ಕ್ ನೀಡಲಿದ್ದು, ಬಳಿಕ ಕರ್ತವ್ಯ ನಿರ್ವಹಿಸುತ್ತಿರುವ ಸ್ವತ್ಛತ ಸಿಬಂದಿಗೆ, ಆರೋಗ್ಯ ಇಲಾಖೆಗೆ ಮತ್ತು ಸಾರ್ವಜನಿಕರಿಗೂ ಮಾಸ್ಕ್ ನೀಡಲು ತೀರ್ಮಾನ ಮಾಡಲಾಗಿದೆ. ಒಂದು ಮಾಸ್ಕ್ ತಯಾರಿಕೆಗೆ ಸುಮಾರು 3 ರೂ. ವೆಚ್ಚ ತಗಲುತ್ತದೆ. ಸಂಸ್ಥೆಯ ಸಿಬಂದಿ ವರ್ಗಕ್ಕೆ ಉಚಿತವಾಗಿ ನೀಡಲಾಗುತ್ತಿದೆ ಎನ್ನುತ್ತಾರೆ ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅರುಣ್‌.

ಮಾಸ್ಕ್ ಧರಿಸುವಂತೆ ಮನವಿ
ಕೊರೊನಾ ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ನಡೆದಾಡುವ ಸ್ಥಳಗಳಲ್ಲಿ ಕೆಮ್ಮುವಾಗ ಮಾಸ್ಕ್ ಅಥವಾ ಕರವಸ್ತ್ರವನ್ನು ಅಡ್ಡ ಹಿಡಿಯುವ ಮೂಲಕ ಇತರರಿಗೆ ಸಹಾಯವಾಗುವಂತೆ ನೋಡಿಕೊಳ್ಳಬೇಕು. ಅಲ್ಲದೆ, ಸ್ವತ್ಛತೆಯ ಬಗ್ಗೆ ಗಮನ ನೀಡಬೇಕು. ಎಲ್ಲ ವ್ಯಾಪಾರಸ್ಥರು, ರೈತರು, ನಾಗರಿಕ ಗ್ರಾಹಕರು, ಹಮಾಲಿಗಳು, ಅಂಗಡಿಗಳಲ್ಲಿ ದುಡಿಯುವ ಕಾರ್ಮಿಕರು, ಆಟೋರಿಕ್ಷಾ, ಟೆಂಪೋ ಚಾಲಕರು ಮಾಲಕರು ಸಹಕರಿಸುವಂತೆ ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಸಂಘ ಮನವಿ ಮಾಡಿದೆ.

ಹೊಟೇಲ್‌ಗ‌ಳಲ್ಲಿ ಗ್ರಾಹಕರಿಲ್ಲ; ಮುಚ್ಚಲ್ಪಟ್ಟ ಬಾರ್‌
ಕೊರೊನಾ ಆತಂಕ ಹೊಟೇಲ್‌ ಉದ್ಯಮದ ಮೇಲೂ ತಟ್ಟಿದೆ. ಶನಿವಾರ ನಗರದಲ್ಲಿ ಹೊಟೇಲ್‌ಗ‌ಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದವು. ಆದರೆ ಗ್ರಾಹಕರ ಸಂಖ್ಯೆ ವಿರಳವಾಗಿತ್ತು. ಇದೇ ಕಾರಣಕ್ಕೆ ಸಂಜೆ ವೇಳೆ ಕೆಲವೊಂದು ಹೊಟೇಲ್‌ಗ‌ಳು ಮುಚ್ಚಲ್ಪಟ್ಟಿದ್ದವು. ಆದರೆ ರವಿವಾರ ಜನತಾ ಕರ್ಫ್ಯೂ ಹಿನ್ನೆಲೆ ಹೊಟೇಲ್‌ಗ‌ಳು ಮುಚ್ಚಲ್ಪಟ್ಟಿರುತ್ತವೆ. ಮುಖ್ಯ ಮಂತ್ರಿಗಳ ಸೂಚನೆ ಹಿನ್ನೆಲೆಯಲ್ಲಿ ಮಹಾನಗರದ ಬಹುತೇಕ ಬಾರ್‌ ಮತ್ತು ಪಬ್‌ಗಳು ಶನಿವಾರ ಸಂಜೆಯಿಂದ ಮುಚ್ಚಲ್ಪಟ್ಟಿದ್ದವು.

ಕೆಎಸ್ಸಾರ್ಟಿಸಿ ಬಸ್‌ ರದ್ದು
ನೆರೆಯ ಕಾಸರಗೋರು ಜಿಲ್ಲೆಯಲ್ಲಿ ಕೋವಿಡ್- 19 ಪತ್ತೆಯಾದ ಹಿನ್ನೆಲೆಯಲ್ಲಿ ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಿಂದ ಕಾಸರಗೋಡಿಗೆ ತೆರಳುವ ಎಲ್ಲ ರೀತಿಯ ಬಸ್‌ ಸೇವೆಯನ್ನು ಶನಿವಾರ ಬೆಳಗ್ಗಿನಿಂದಲೇ ರದ್ದುಗೊಳಿಸಲಾಗಿತ್ತು. ಸಾಮಾನ್ಯ ದಿನಗಳಲ್ಲಿ ಮಂಗಳೂರಿನಿಂದ ಕಾಸರಗೋಡಿಗೆ 70 ಸರಕಾರಿ ಬಸ್‌ಗಳು ಸಂಚರಿಸುತ್ತವೆ. ಬೆಳಗ್ಗೆ 6 ಗಂಟೆಗೆ ಆರಂಭವಾಗಿ ರಾತ್ರಿ 9.30ರ ವರೆಗೆ ಬಸ್‌ ಸಂಚಾರ ಇರುತ್ತದೆ. ಆದರೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶದಂತೆ ಉಭಯ ರಾಜ್ಯಗಳ ನಡುವೆ ಬಸ್‌ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next