Advertisement

ಜಿಲ್ಲೆಯಲ್ಲಿ ಜನತಾ ಕರ್ಫ್ಯೂ ಯಶಸ್ವಿ

07:38 PM Mar 22, 2020 | Lakshmi GovindaRaj |

ಮಂಡ್ಯ: ಕೊರೊನಾ ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ದೇಶಾದ್ಯಂತ ಜಾರಿಗೊಳಿಸಿದ್ದ ಜನತಾ ಕರ್ಫ್ಯೂ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಯಶಸ್ಸನ್ನು ಕಂಡಿದೆ. ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ಜನರು ಮನೆ ಬಿಟ್ಟು ಹೊರಬರದಂತೆ ಸ್ವಯಂ ನಿರ್ಬಂಧ ವಿಧಿಸಿಕೊಳ್ಳುವಂತೆ ಪ್ರಧಾನಿ ಮೋದಿ ದೇಶದ ಜನರಿಗೆ ಕರೆ ನೀಡಿದ್ದರು. ಕೊರೊನಾ ಸೃಷ್ಟಿಸುತ್ತಿರುವ ಭಯಗ್ರಸ್ಥ ವಾತಾವರಣಕ್ಕೆ ಹೆದರಿದ ಜನರು ದಿನವಿಡೀ ಮನೆ ಬಿಟ್ಟು ಹೊರಬರುವುದಕ್ಕೆ ಮನಸ್ಸು ಮಾಡಲೇ ಇಲ್ಲ.

Advertisement

ರಸ್ತೆಗಳಲ್ಲಿ ವಾಹನ ಸಂಚಾರವಿಲ್ಲ: ಬೆಂಗಳೂರು-ಮೈಸೂರು ಹೆದ್ದಾರಿಯೂ ಸೇರಿದಂತೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ವೃತ್ತ, ಮಹಾವೀರ ವೃತ್ತ, ಹೊಸಹಳ್ಳಿ ವೃತ್ತ, ಎಸ್‌.ಡಿ.ಜಯರಾಂ ವೃತ್ತ, ಸಕ್ಕರೆ ಕಂಪನಿ ವೃತ್ತ, ಹೊಳಲು ವೃತ್ತಗಳೆಲ್ಲವೂ ಜನರು, ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು. ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ನಗರದ ಅಂಗಡಿ-ಮುಂಗಟ್ಟುಗಳೆಲ್ಲವೂ ಸಂಪೂರ್ಣ ಬಂದ್‌ ಆಗಿದ್ದವು. ಔಷಧ ಅಂಗಡಿಗಳು, ಹೋಟೆಲ್‌ಗ‌ಳು, ಆಸ್ಪತ್ರೆ, ಪೆಟ್ರೋಲ್‌ ಬಂಕ್‌, ಕುಡಿಯುವ ನೀರು, ಹಾಲು, ತರಕಾರಿ ಮಳಿಗೆಗಳಿಗೆ ಮಾತ್ರ ಬಾಗಿಲು ತೆರೆಯುವುದಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು.

ಹೋಟೆಲ್‌ಗ‌ಳಲ್ಲೂ ಜನರಿಲ್ಲ: ನಗರದಲ್ಲಿ ಬಹುತೇಕ ಸಣ್ಣ-ಪುಟ್ಟ ಹೋಟೆಲ್‌ಗ‌ಳೆಲ್ಲವೂ ಬಂದ್‌ ಆಗಿದ್ದವು. ಕೆಲವು ಹೋಟೆಲ್‌ಗ‌ಳು ತಿಂಡಿ-ತಿನಿಸುಗಳನ್ನು ತಿನ್ನುವುದನ್ನು ನಿಷೇಧಿಸಿ, ಪಾರ್ಸಲ್‌ಗೆ ಸೀಮಿತವಾದವು. ಕಾಫೀ-ಟೀ, ಹಾಲು ಮಾತ್ರ ದೊರೆಯುತ್ತಿತ್ತು.

ಮೊದಲ ಬಾರಿ ಬಂದ್‌: ಕಾವೇರಿ ಹೋರಾಟದ ಕರ್ಫ್ಯೂ ಸಂದರ್ಭದಲ್ಲಿಯೂ ನಿಲ್ಲದ ಮಂಡ್ಯದ ಮಾರುಕಟ್ಟೆ ಕೊರೊನಾ ಹರಡುವ ಭಯದಿಂದ ಮೊದಲ ಬಾರಿಗೆ ಸಂಪೂರ್ಣ ಸ್ತಬ್ಧಗೊಂಡಿತ್ತು. ವರ್ತಕರು, ವ್ಯಾಪಾರಿಗಳು ಯಾರೂ ಸಹ ಸ್ವಯಂಪ್ರೇರಿತರಾಗಿ ತರಕಾರಿ, ಹೂವು, ಹಣ್ಣು ಮಾರಾಟ ಮಾಡುವುದಕ್ಕೆ ಮುಂದಾಗಲಿಲ್ಲ. ಕೋಳಿ-ಮಾಂಸದಂಗಡಿಗಳು ಸಂಪೂರ್ಣ ಬಂದ್‌ ಆಗಿದ್ದವು. ವೈನ್‌ಶಾಪ್‌, ಬಾರ್‌-ಅಂಡ್‌ ರೆಸ್ಟೋರೆಂಟ್‌ಗಳೂ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದವು.

ಹಾಲಿಗೆ ಪರದಾಟ: ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಭಾನುವಾರ ಹಾಲಿಗೆ ಜನರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಶನಿವಾರವೇ ಹಾಲು ಮಾರಾಟಗಾರರು ಹೆಚ್ಚು ಹಾಲನ್ನು ದಾಸ್ತಾನು ಮಾಡಿಕೊಳ್ಳದಿದ್ದರಿಂದ ಜನರು ಭಾನುವಾರ ಬೆಳಗ್ಗೆ ಹಾಲಿಗಾಗಿ ಪರದಾಡಿದರು. ಮನೆ ಮನೆಗೆ ಹಾಲು ತೆಗೆದುಕೊಂಡು ಹೋಗಿ ನೀಡುವವರಿಗೆ ತೊಂದರೆಯಾಗಲಿಲ್ಲ. ನಂದಿನಿ, ಡೇರಿ ಹಾಲನ್ನು ನಂಬಿಕೊಂಡಿದ್ದವರು ತೊಂದರೆ ಅನುಭವಿಸಿದರು. ಇದರಿಂದ ಬೆಳಗಿನ ಕಾಫೀ-ಟೀ ಕುಡಿಯುವುದಕ್ಕೂ ಸಾಧ್ಯವಾಗದೆ ಪೇಚಿಗೆ ಸಿಲುಕಿದರು.

Advertisement

ಪೊಲೀಸ್‌ ಭದ್ರತೆಯೇ ಇಲ್ಲ..!: ಸಾಮಾನ್ಯವಾಗಿ ಬಂದ್‌ ಆಚರಣೆ ವೇಳೆ ಎಲ್ಲೆಡೆ ಬಿಗಿ ಪೊಲೀಸ್‌ ಭದ್ರತೆ ಆಯೋಜಿಸುವುದು ಸಾಮಾನ್ಯವಾಗಿತ್ತು. ಆದರೆ, ಜನತಾ ಕರ್ಫ್ಯೂ ವೇಳೆ ಯಾವುದೇ ಪೊಲೀಸ್‌ ಭದ್ರತೆ ಇಲ್ಲದೆ ಜನಸಂಚಾರ ಸಂಪೂರ್ಣ ಬಂದ್‌ ಆಗಿದ್ದು ಒಂದು ವಿಶೇಷ. ಬಂದ್‌ ಆಚರಣೆ ವೇಳೆ ಕೆಲವೊಂದು ಸೂಕ್ಷ್ಮ ಸ್ಥಳಗಳಲ್ಲಿ ಪೊಲೀಸ್‌ ವಾಹನಗಳು ಠಿಕಾಣಿ ಹೂಡುತ್ತಿದ್ದವು. ಪೊಲೀಸ್‌ ಅಧಿಕಾರಿಗಳು ಗಸ್ತು ತಿರುಗುತ್ತಿದ್ದರು.

ನೂರಾರು ಪೊಲೀಸರ ಭದ್ರತೆ ನಡುವೆ ಬಂದ್‌ ಆಚರಿಸಲಾಗುತ್ತಿತ್ತು. ಅದರ ನಡುವೆಯೂ ಹಲವು ಜನರು ಹೊರಗೆ ಬಂದು ಓಡಾಡುವುದು, ಖಾಲಿ ಬೀದಿಗಳಲ್ಲಿ ಕ್ರಿಕೆಟ್‌ ಆಡುವುದು ಕಂಡುಬರುತ್ತಿದ್ದವು. ಸಾಮಾನ್ಯ ಸಂಖ್ಯೆಯಲ್ಲಿ ವಾಹನಗಳ ಓಡಾಟವಿರುತ್ತಿತ್ತು. ಆದರೆ, ಜನತಾ ಕರ್ಫ್ಯೂ ವೇಳೆ ಇಂತಹ ಯಾವುದೇ ದೃಶ್ಯಗಳೂ ಜಿಲ್ಲೆಯ ಯಾವ ಭಾಗದಲ್ಲೂ ಕಂಡುಬರಲಿಲ್ಲ. ಜನರು ಸ್ವಯಂಪ್ರೇರಣೆಯಿಂದ ಮನೆ ಸೇರಿಕೊಂಡಿದ್ದರಿಂದ ಪೊಲೀಸರ ಭದ್ರತೆಯಿಲ್ಲದೆ ಜನತಾ ಕರ್ಫ್ಯೂ ಯಶಸ್ಸು ಕಂಡಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next