Advertisement

ಜನತಾ ನ್ಯಾಯಾಲಯ ತೀರ್ಪಿಗೆ ಮೇಲ್ಮನವಿ ಸಲ್ಲಿಸುವಂತಿಲ್ಲ

09:38 PM Apr 02, 2019 | Team Udayavani |

ತುಮಕೂರು: ಕಾಯಂ ಜನತಾ ನ್ಯಾಯಾಲಯ ನೀಡುವ ತೀರ್ಪಿನ ವಿರುದ್ಧ ಯಾವುದೇ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂಜೀವ್‌ಕುಮಾರ್‌ ಹೆಂಚಾಟೆ ತಿಳಿಸಿದರು.

Advertisement

ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಮಂಗಳವಾರ ನಡೆದ ಬೆಂಗಳೂರಿನಿಂದ ಎಲ್ಲ ಜಿಲ್ಲೆಗಳ ಮಾಧ್ಯಮ ಪ್ರತಿನಿಧಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ,

-ಕಾಯಂ ಜನತಾ ನ್ಯಾಯಾಲಯ ಹೊರಡಿಸುವ ತೀರ್ಪು ಅಂತಿಮವಾದುದಾಗಿದ್ದು, ಅದನ್ನು ಯಾವುದೇ ಮೂಲ ದಾವೆಯಲ್ಲಿ, ಅರ್ಜಿಯಲ್ಲಿ ಅಥವಾ ಅಮಲ್ಜಾರಿ ವ್ಯವಹರಣೆಯಲ್ಲಿ ಪ್ರಶ್ನಿಸುವಂತಿಲ್ಲ. ಈ ತೀರ್ಪನ್ನು ಸಿವಿಲ್‌ ನ್ಯಾಯಾಲಯದ ಡಿಕ್ರಿಯೆಂದೇ ಪರಿಭಾವಿಸಲಾಗುವುದು ಎಂದು ನುಡಿದರು.

ಪರಿಹಾರ ಕಂಡುಕೊಳ್ಳಿ: ವಾಯು ಮಾರ್ಗ, ರಸ್ತೆ, ನೀರಿನ ಮೂಲಕ ಪ್ರಯಾಣಿಕರು, ಸರಕುಗಳನ್ನು ಸಾಗಿಸುವ ಸಾಗಾಣಿಕ ಸೇವೆ, ಅಂಚೆ, ಟೆಲಿಗ್ರಾಫ್, ಕೊರಿಯರ್‌, ದೂರವಾಣಿ ಸೇವೆ, ಸಾರ್ವಜನಿಕರ ಉಪಯೋಗಕ್ಕಾಗಿ ಒದಗಿಸಲಾಗುವ ವಿದ್ಯುತ್‌, ಬೆಳಕು, ನೀರು ಸರಬರಾಜು ಸೇವೆ, ಸಾರ್ವಜನಿಕ ಸಂರಕ್ಷಣೆ ಅಥವಾ ನೈರ್ಮಲ್ಯ ವ್ಯವಸ್ಥೆ,

ಆಸ್ಪತ್ರೆ, ಔಷಧಿ ವಿತರಣೆ ಸೇವೆ, ವಿಮಾ ಸೇವೆ, ಬ್ಯಾಂಕಿಂಗ್‌, ಹಣಕಾಸು ಸಂಸ್ಥೆಗಳ ಸೇವೆ, ವಸತಿ, ರಿಯಲ್‌ ಎಸ್ಟೇಟ್‌ ಸೇವೆ ಹಾಗೂ ಶಿಕ್ಷಣ ಸೇವೆಯಂಥ ಸಾರ್ವಜನಿಕ ಉಪಯುಕ್ತತಾ ಸೇವೆಗಳಲ್ಲಾಗುವ ಅನ್ಯಾಯ, ಲೋಪಗಳುಂಟಾದಲ್ಲಿ ಈ ಕಾಯಂ ಜನತಾ ನ್ಯಾಯಾಲಯದ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಹೇಳಿದರು.

Advertisement

ರಾಜ್ಯದಲ್ಲಿ ಬೆಂಗಳೂರು, ಬೆಳಗಾವಿ, ಮೈಸೂರು, ಮಂಗಳೂರು, ಧಾರವಾಡ, ಕಲಬುರಗಿ ಜಿಲ್ಲೆಗಳಲ್ಲಿ ಕಾಯಂ ಜನತಾ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಸಾರ್ವಜನಿಕ ಉಪಯುಕ್ತ ಸೇವೆಗಳಲ್ಲಿ ಅನ್ಯಾಯಕ್ಕೊಳಗಾದ ತುಮಕೂರು ಜಿಲ್ಲೆಯ ಜನರು ಬೆಂಗಳೂರಿನ ಕಾಯಂ ಜನತಾ ನ್ಯಾಯಾಲಯದ ಮೊರೆ ಹೋಗುವ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.

1 ಕೋಟಿ ರೂ. ಮೀರಿದ್ದರೆ ಅಧಿಕಾರವಿಲ್ಲ: ಸೇವಾ ಲೋಪದಿಂದ ವಿವಾದ ಹೊಂದಿರುವ ಯಾವುದೇ ಪಕ್ಷಕಾರನು ಸೇವೆಗೆ ಸಂಬಂಧಿಸಿದ ವಿವಾದವನ್ನು ನ್ಯಾಯಾಲಯಕ್ಕೆ ಕೊಂಡೊಯ್ಯುವುದಕ್ಕೆ ಮೊದಲು ವಿವಾದದ ಇತ್ಯರ್ಥಕ್ಕಾಗಿ ಕಾಯಂ ಜನತಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ಕಾನೂನಿನಡಿ ರಾಜಿ ಮಾಡಿಕೊಳ್ಳುವ ಅವಕಾಶವಿರದ ಅಪರಾಧಕ್ಕೆ ಸಂಬಂಧಿಸಿದ ವಿಷಯ ಇತ್ಯರ್ಥಗೊಳಿಸುವ ಹಾಗೂ ವಿವಾದಕ್ಕೊಳಗಾದ ಸ್ವತ್ತಿನ ಮೌಲ್ಯ ಹಾಗೂ ಹಣಕಾಸು ವ್ಯವಹಾರಗಳು 1 ಕೋಟಿ ರೂ.ಗಳನ್ನು ಮೀರಿದ್ದರೆ, ಅಂಥ ವಿವಾದಗಳನ್ನು ಇತ್ಯರ್ಥಪಡಿಸುವ ಅಧಿಕಾರವನ್ನು ಕಾಯಂ ಜನತಾ ನ್ಯಾಯಾಲಯ ಹೊಂದಿರುವುದಿಲ್ಲ ಎಂದು ತಿಳಿಸಿದರು.

ಸಾಕ್ಷ್ಯಾಧಾರಗಳ ಮೇಲೆ ತೀರ್ಪು: ಸೇವಾ ಲೋಪಕ್ಕೆ ಸಂಬಂಧಿಸಿದಂತೆ ವಿವಾದ ಹೊಂದಿರುವ ಯಾವುದೇ ವ್ಯಕ್ತಿಯು ಆ ವಿವಾದವನ್ನು ನ್ಯಾಯಾಲಯದ ಮುಂದೆ ಕೊಂಡೊಯ್ಯುವ ಮೊದಲು ಇತ್ಯರ್ಥ ಕೋರಿ ಕಾಯಂ ಜನತಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಹೆಚ್ಚಿನ ಪ್ರಕ್ರಿಯೆ ಅನುಸಿರುವ ಅಗತ್ಯತೆಯಿರುವುದಿಲ್ಲ.

ಸರಳ ರೀತಿಯಲ್ಲಿ ಬಿಳಿ ಹಾಳೆ ಮೂಲಕ ಖರ್ಚಿಲ್ಲದೆ ಅರ್ಜಿ ಸಲ್ಲಿಸಬಹುದಾಗಿದೆ. ಈ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ನಂತರ ಅದೇ ವಿವಾದಕ್ಕೆ ಸಂಬಂಧಿಸಿದಂತೆ ಯಾವುದೇ ನ್ಯಾಯಾಲಯಕ್ಕೆ ಹೋಗಲು ಅವಕಾಶವಿಲ್ಲ. ವಿವಾದಕ್ಕೊಳಗಾದ ಎರಡೂ ಪಕ್ಷಕಾರರನ್ನು ವಿಚಾರಣೆ ನಡೆಸಿ ಸಾಕ್ಷ್ಯಾಧಾರಗಳ ಮೇಲೆ ತೀರ್ಪು ನೀಡಲಾಗುವುದು.

ಜನತಾ ನ್ಯಾಯಾಲಯಕ್ಕೆ ತೃಪ್ತಿಯಾಗುವಂತೆ ಹೇಳಿಕೆಗಳನ್ನು ದಾಖಲಿಸಿದ ಮೇಲೆ ಹಾಗೂ ಪೂರಕ ದಸ್ತಾವೇಜುಗಳನ್ನು ಸಲ್ಲಿಸಿದ ನಂತರವೇ ತೀರ್ಪು ನೀಡಲಾಗುವುದು. ಸಿವಿಲ್‌ ನ್ಯಾಯಾಲಯದ ತೀರ್ಪಿನಷ್ಟೇ ಈ ತೀರ್ಪಿಗೆ ಮಾನ್ಯತೆ ಇರುತ್ತದೆ ಎಂದು ಹೇಳಿದರು.

ನ್ಯಾಯಿಕ ತತ್ವ ಅನುಸರಣೆ: ವಿವಾದಕ್ಕೆ ಸಂಬಂಧಿಸಿದ ಪಕ್ಷಕಾರರು ಒಪ್ಪಿಕೊಳ್ಳಬಹುದಾದ ಇತ್ಯರ್ಥದ ಅಂಶಗಳು ಪ್ರಕರಣದಲ್ಲಿ ಇದೆ ಎಂದು ಜನತಾ ನ್ಯಾಯಾಲಯಕ್ಕೆ ಮನವರಿಕೆಯಾದಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲು ಮುಂದಾಗುತ್ತದೆ. ಪಕ್ಷಕಾರರು ಸಂಧಾನಕ್ಕೆ ಒಪ್ಪದಿದ್ದರೆ ಪ್ರಕರಣದ ಗುಣಾವಗುಣಗಳಿಗೆ ಅನುಗುಣವಾಗಿ ವಿವಾದವನ್ನು ಇತ್ಯರ್ಥಗೊಳಿಸಲಾಗುವುದು.

ಸಂಧಾನ ವ್ಯವಹರಣೆಯಲ್ಲಿ ಪಕ್ಷಕಾರರಿಗೆ ಸೌಹಾರ್ದಯುತವಾಗಿ, ಸ್ವತಂತ್ರವಾಗಿ ಹಾಗೂ ನಿಷ್ಪಕ್ಷಪಾತವಾಗಿ ಇತ್ಯರ್ಥ ಮಾಡಿಕೊಳ್ಳುವ ಪ್ರಯತ್ನಕ್ಕೆ ನೆರವು ನೀಡಲಾಗುವುದು. ಸಂಧಾನ ನಡೆಸುವಾಗ ಸಹಜ ನ್ಯಾಯತತ್ವ, ಸಮನ್ಯಾಯತತ್ವ ಹಾಗೂ ಇತರೆ ನ್ಯಾಯಿಕ ತತ್ವ ಅನುಸರಿಸಲಾಗುತ್ತದೆ ಎಂದು ತಿಳಿಸಿದರು.

ತುಮಕೂರಿನಲ್ಲಿ ಸ್ಥಾಪಿಸಲು ಮನವಿ: ಸಾರ್ವಜನಿಕ ಉಪಯುಕ್ತತಾ ಸೇವೆಗಳಿಗೆ ಸಂಬಂಧಿಸಿದ ವಿವಾದಗಳ ಇತ್ಯರ್ಥಕ್ಕಾಗಿ ಜಿಲ್ಲೆಯ ಜನರು ಬೆಂಗಳೂರಿಗೆ ಹೋಗಬೇಕಾಗಿದ್ದು, ರಾಜ್ಯದ 2ನೇ ದೊಡ್ಡ ಜಿಲ್ಲೆಯಾದ ತುಮಕೂರಿನಲ್ಲಿಯೇ ಕಾಯಂ ಜನತಾ ನ್ಯಾಯಾಲಯ ಸ್ಥಾಪಿಸಬೇಕೆಂದು ಪತ್ರಕರ್ತರ ಸಂಘದ ಅಧ್ಯಕ್ಷ ಚಿ.ನಿ. ಪುರುಷೋತ್ತಮ್‌ ಮನವಿ ಮಾಡಿದಾಗ ಪ್ರತಿಕ್ರಿಯಿಸಿದ ಹೆಂಚಾಟೆ, ತುಮಕೂರು ಜಿಲ್ಲೆಯಿಂದ ದಾಖಲಾಗುವ ಪ್ರಕರಣಗಳ ಸಂಖ್ಯೆ ಕಡಿಮೆಯಿರುವುದರಿಂದ ಸದ್ಯಕ್ಕೆ ನ್ಯಾಯಾಲಯದ ಸ್ಥಾಪನೆಗೆ ಚಿಂತನೆ ನಡೆಸಿಲ್ಲ. ಮುಂದಿನ ದಿನಗಳಲ್ಲಿ ಪ್ರಯತ್ನಿಸಲಾಗುವುದು ಎಂದರು.

ಜಿಲ್ಲೆಯ ಎಷ್ಟೋ ಜನರಿಗೆ ಕಾಯಂ ಜನತಾ ನ್ಯಾಯಾಲಯ ಸ್ಥಾಪನೆಯಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮಾಹಿತಿಯೇ ಇಲ್ಲ. ಸೇವಾ ಪ್ರಾಧಿಕಾರದಿಂದ ಈ ಕುರಿತು ಜನರಲ್ಲಿ ಅರಿವು ಮೂಡಿಸಲು ವಿದ್ಯಾರ್ಥಿಗಳಿಗೆ ಉಪನ್ಯಾಸ, ಭಾಷಣ, ಚರ್ಚಾ ಸ್ಪರ್ಧೆ, ಮತ್ತಿತರ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ. ಮಾಧ್ಯಮಗಳೂ ಕಾಯಂ ಜನತಾ ನ್ಯಾಯಾಲಯದ ಬಗ್ಗೆ ವ್ಯಾಪಕ ಪ್ರಚಾರ ಮಾಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಗಣೇಶ್‌ ಮತ್ತಿತರರು ಉಪಸ್ಥಿತರಿದ್ದರು.

ಯಾವುದೇ ಸಾರ್ವಜನಿಕ ಉಪಯುಕ್ತ ಸೇವೆಗಳಲ್ಲಾಗಲಿ ನಿಗದಿಗಿಂತ ಹೆಚ್ಚಿನ ದರ ವಸೂಲಿ ಮಾಡುವುದು, ನಿವೇಶನ ಖರೀದಿಗೆ ಸಂಬಂಧಿಸಿದಂತೆ ಅಗತ್ಯ ಸೌಲಭ್ಯ ಕಲ್ಪಿಸದಿರುವುದು, ಶಿಕ್ಷಣ ಸೇವೆಯಲ್ಲಿ ಪೋಷಕರಿಂದ ಹೆಚ್ಚಿನ ವಂತಿಗೆ ವಸೂಲಿ ಮಾಡುವುದಲ್ಲದೆ, ಸೇವೆಗಳು ನ್ಯೂನ್ಯತೆಯಿಂದ ಕೂಡಿದ್ದರೆ ಕಾಯಂ ಜನತಾ ನ್ಯಾಯಾಲಯದ ಮೊರೆ ಹೋಗಿ ನ್ಯಾಯ ಹೊಂದಬಹುದಾಗಿದೆ.
-ಸಂಜೀವ್‌ಕುಮಾರ್‌ ಹೆಂಚಾಟೆ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next