ಬೆಂಗಳೂರು: ಹಣ್ಣುಗಳ ರಾಜ ಮಾವು ಮತ್ತು ಹಲಸು ಈಗ ಮಾರುಕಟ್ಟೆ ಪ್ರವೇಶಿಸಿವೆ. ಇದೇ ಸಂದರ್ಭದಲ್ಲಿ ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಕಸಿ ಮಾಡಿರುವ ವಿವಿಧ ತಳಿಗಳ ಹಲಸು ಹಾಗೂ ಮಾವಿನ ಹಣ್ಣುಗಳ ಮೇಳ ಆಯೋಜಿಸಿದೆ.
24ರಿಂದ 26ರವರೆಗೆ ಹೆಸರುಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್‌ಆರ್) ಆವರಣದಲ್ಲಿ ಮೇಳ ನಡೆಯಲಿದ್ದು, ಐಐಎಚ್‌ಆರ್ ವಿಜ್ಞಾನಿಗಳು ಕಸಿ ಮಾಡಿದ ವಿವಿಧ ತಳಿಗಳ ಹಣ್ಣು ಮತ್ತು ಸಸಿಗಳ ಮಾರಾಟ ಕೂಡ ನಡೆಯಲಿದೆ.
ಮೇಳದ ಅಂಗವಾಗಿ ಹೆಸರಾಂತ ಕೃಷಿ ವಿಜ್ಞಾನಿಗಳೊಂದಿಗೆ ರೈತರು ಬೇಸಾಯ, ಕೊಯ್ಲೋತ್ತರ ತಂತ್ರಜ್ಞಾನ ಮೌಲ್ಯವರ್ಧನೆ ಮತ್ತು ತಳಿ ಅಭಿವೃದ್ಧಿ ಕುರಿತು ವಿಚಾರ ಮಂಡನೆ ಮಾಡಲಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳ ರೈತರು ಮೇಳದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ ಎಂದು ಐಐಎಚ್‌ಆರ್ ನಿರ್ದೇಶಕ ಡಾ.ಎಂ.ಆರ್.ದಿನೇಶ್ ಹೇಳಿದ್ದಾರೆ.
ಇದರ ಜತೆ ಲಾಲ್‌ಬಾಗ್, ಪೆರಿಯಕಳಂ, ಪಾಲೂರ್, ಚಂದ್ರ ಹಲಸು, ಬರ್ಲಿಯಾರ್, ಕೊಂಕಣ್ ಪ್ರಾಲಿಫೀಟ್, ಸಿಲೋನ್, ಕನ್ಯಾ ಕುಮಾರಿ ಭಾಗದಲ್ಲಿ ಬೆಳೆಯುವ ಹಲಸಿನ ಹಣ್ಣುಗಳು ಸೇರಿದಂತೆ ಸುಮಾರು 80 ಜಾತಿಯ ಹಲಸುಗಳು. ಅರ್ಕಾ ಉದಯ್, ಅರ್ಕಾ ನೀಲಕಿರಣ್, ಅನ್ಮೋಲ್, ಪುನೀತ್, ಬಾದಾಮಿ,ಮಲ್ಗೊವಾ, ಹಿಮಾಯತ್, ಕಾಲಾಪಹಡ್,
ರತ್ನಗಿರಿ ಸೇರಿದಂತೆ ಸುಮಾರು 350ಕ್ಕೂ ಹೆಚ್ಚು ತಳಿಗಳ ಮಾವಿನ ಹಣ್ಣು , ಮಲೆನಾಡಿನಲ್ಲಿ ಉಪ್ಪಿನ ಕಾಯಿ ಮಾಡಲು ಬಳಸುವ ಅಪ್ಪೆ ಮಿಡಿ ಮಾವು ಸೇರಿದಂತೆ 46 ಬಗೆಯ ಅಪ್ಪೆ ಮಿಡಿ ಸಸಿಗಳು ಮೇಳದಲ್ಲಿ ದೊರೆಯಲಿವೆ ಎಂದು ಸಂಶೋಧನಾ ಸಂಸ್ಥೆಯ ವಿಜ್ಞಾನಿ ಡಾ.ಬಿ.ನಾರಾಯಣಸ್ವಾಮಿ ತಿಳಿಸಿದ್ದಾರೆ.
ಸಿದ್ದು ಹಲಸು ಮೇಳದ ಆಕರ್ಷಣೆ: ಮೇಳದಲ್ಲಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಸಂರಕ್ಷಿಸಿರುವ “ಸಿದ್ದು ಹಲಸು’ ಪ್ರದರ್ಶನ ಇರಲಿದೆ. ಸಿದ್ದು ಹಲಸು ತಳಿಯ ಹಿನ್ನೆಲೆಯು ವಿಶೇಷತೆಯಿಂದ ಕೂಡಿದೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೇಳೂರು ಗ್ರಾಮದ ಎಸ್.ಕೆ.ಸಿದ್ದಪ್ಪ ಅವರ ಮನೆಯಲ್ಲಿ ಈ ಹಣ್ಣಿನ ಮರ ಇತ್ತು.
ಸುಮಾರು 80 ವರ್ಷದಷ್ಟು ಹಳೇ ತಳಿ ಇದಾಗಿದ್ದು, ಈ ಅಪರೂಪದ ತಳಿಗೆ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ವಿಜ್ಞಾನಿಗಳು “ಸಿದ್ದು ಹಲಸು’ ಎಂದು ಹೆಸರು ಇರಿಸಿದ್ದಾರೆ. ಸುಮಾರು 2ರಿಂದ 4 ಕೆ.ಜಿ ತೂಗುವ ಹಲಸಿನ ತೊಳೆಗಳು ಈ ತಳಿಯ ಒಂದು ಹಣ್ಣಿನಲ್ಲಿ ಇರಲಿದ್ದು, ತೊಳೆಗಳು ಕೆಂಪು ಬಣ್ಣದ್ದಾಗಿರುತ್ತವೆ. ಹಾಗೇ ರುಚಿ ಕೂಡ ಅದ್ಭುತವಾಗಿರುತ್ತದೆ.