Advertisement

‘ಇಸ್ರೇಲ್ ಮಾದರಿ’ಎನ್ನುವುದು ನಾನ್‌ಸೆನ್ಸ್‌

12:41 AM Aug 27, 2019 | mahesh |

ಕಾವೇರಿ ನದಿಯ ಪುನಶ್ಚೇತನಕ್ಕಾಗಿ ‘ಕಾವೇರಿ ಕೂಗು’ ಅಭಿಯಾನದ ಮೂಲಕ ನದಿಯ ಅಚ್ಚುಕಟ್ಟು ಪಾತ್ರದಲ್ಲ್ಲಿ 242 ಕೋಟಿ ಸಸಿಗಳನ್ನು ನೆಡುವ ಮಹತ್ತರ ಗುರಿಯೊಂದಿಗೆ ಹೆಜ್ಜೆ ಇಡುತ್ತಿದೆ ಸದ್ಗುರು ನೇತೃತ್ವದ ಈಶ ಪ್ರತಿಷ್ಠಾನ. ಇದಕ್ಕಾಗಿ ಕಾವೇರಿ ಕಣಿವೆ ಉದ್ದಕ್ಕೂ ನೂರಾರು ಕಿ.ಮೀ. ಬೈಕ್‌ ರ್ಯಾಲಿ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಸದ್ಗುರು ‘ಉದಯವಾಣಿ’ಗೆ ನೀಡಿದ ಸಂದರ್ಶನದಲ್ಲಿ ರೈತರ ಆದಾಯ ಹೆಚ್ಚಳ, ಸಾಲಮನ್ನಾ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಸುದೀರ್ಘ‌ ಮಾತಿಗಿಳಿದರು.

Advertisement

ಕೇಂದ್ರ ಸರ್ಕಾರ ಮುಂದಿನ ಐದು ವರ್ಷಗಳಲ್ಲಿ ರೈತರ ಆದಾಯ ದುಪ್ಪಟ್ಟು ಮಾಡುವ ಗುರಿ ಹೊಂದಿದೆ. ಆದರೆ ಅದೇ ಐದು ವರ್ಷಗಳಲ್ಲಿ ನಾವು ರಾಜ್ಯದ ರೈತರ ಆದಾಯವನ್ನು ಐದಾರು ಪಟ್ಟು ಹೆಚ್ಚಿಸುತ್ತೇವೆ ಎಂದು ಹೇಳುತ್ತಿದ್ದಾರೆ ಆಧ್ಯಾತ್ಮಿಕ ನಾಯಕ, ಈಶ ಪ್ರತಿಷ್ಠಾನದ ಸ್ಥಾಪಕ ಸದ್ಗುರು ಅವರು. ಆದರೆ, ಇದಕ್ಕಾಗಿ ರೈತರು ಕೇವಲ ಕೃಷಿಗೆ ಜೋತುಬಿದ್ದರೆ ಸಾಲದು. ‘ಅರಣ್ಯ-ಕೃಷಿ ಪದ್ಧತಿ’ ಅನುಸರಿಸಬೇಕು. ಅರಣ್ಯ ಜಾತಿಯ ಮರಗಳನ್ನು ನೆಟ್ಟು, ಬೆಳೆದು, ಕಡಿದು ಮಾರಾಟ ಮಾಡಲು ನಮ್ಮ ರೈತರಿಗೆ ಅವಕಾಶ ಕಲ್ಪಿಸಬೇಕು. ಈ ಸಂಬಂಧ ನೆರೆಯ ತಮಿಳುನಾಡಿನಂತೆ ಇಲ್ಲಿನ ಸರ್ಕಾರವೂ ಅನುಮತಿ ನೀಡಬೇಕು. ಇದೆಲ್ಲವೂ ಸಾಧ್ಯವಾದರೆ, ಮುಂದಿನ ಐದು ವರ್ಷಗಳಲ್ಲಿ ರೈತರ ವಾರ್ಷಿಕ ಆದಾಯ ಈಗಿರುವುದಕ್ಕಿಂತ ಹಲವು ಪಟ್ಟು ಅಧಿಕ ಆಗಲಿದೆ ಎಂದೂ ಅವರು ಹೇಳುತ್ತಾರೆ. ಈ ದಿಸೆಯಲ್ಲಿ ಪ್ರತಿಷ್ಠಾನ ಆರಂಭಿಸಿದ ಅಭಿಯಾನವೇ ‘ಕಾವೇರಿ ಕಾಲಿಂಗ್‌’…

∙ ಕೇಂದ್ರ ಸರ್ಕಾರವೇ ಐದು ವರ್ಷಗಳಲ್ಲಿ ರೈತರ ಆದಾಯ ದುಪ್ಪಟ್ಟು ಮಾಡಲು ಹೆಣಗಾಡುತ್ತಿದೆ. ಅಂತಹದ್ದರಲ್ಲಿ ಈ ಕೆಲಸ ಒಂದು ಪ್ರತಿಷ್ಠಾನದಿಂದ ಹೇಗೆ ಸಾಧ್ಯವಾಗುತ್ತದೆ?

ಲೆಕ್ಕಾಚಾರ ಸರಳವಾಗಿದೆ. ಮಾರುಕಟ್ಟೆಯಲ್ಲಿ ಅರಣ್ಯ ಜಾತಿಯ ಮರ ಮತ್ತು ಮರದ ಉತ್ಪನ್ನಗಳಿಗೆ ಭಾರಿ ಬೇಡಿಕೆ ಇದೆ. ಸಾವಿರಾರು ಕೋಟಿ ಮರದ ಉತ್ಪನ್ನಗಳು ಈಗಲೂ ಆಮದು ಆಗುತ್ತಿದೆ. ಹೀಗಿದ್ದರೂ ಅವುಗಳನ್ನು ಬೆಳೆಯಲು ನಮ್ಮ ರೈತರಿಗೆ ಅವಕಾಶ ಇಲ್ಲ. ಒಂದು ವೇಳೆ ಬೆಳೆದು, ಕಡಿದರೆ ಆ ರೈತರನ್ನು ಜೈಲಿಗೆ ಹಾಕಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲವು ಜಾತಿಯ ಮರಗಳನ್ನು ಬೆಳೆಯಲು ಅನುಮತಿ ನೀಡಬೇಕು. ಮೊದಲ ಮೂರು ವರ್ಷ ಆದಾಯ ಕಡಿಮೆ ಇರುತ್ತದೆ. ಐದು ವರ್ಷಗಳ ನಂತರ ಹೆಕ್ಟೇರ್‌ಗೆ 3.2 ಲಕ್ಷ ರೂ. ಆದಾಯ ಬರುತ್ತದೆ. ಹತ್ತು ವರ್ಷಕ್ಕೆ 8.4 ಲಕ್ಷ ರೂ.ಗೆ ಏರಿಕೆ ಆಗುತ್ತದೆ. ಅಂದಹಾಗೆ, ಪ್ರಸ್ತುತ ರೈತರ ಆದಾಯ ಹೆಕ್ಟೇರ್‌ಗೆ ಸರಾಸರಿ 42 ಸಾವಿರ ರೂ. ಇದೆ. ಈಗ ಒಂದೇ ತೆರನಾದ ಬೆಳೆಯಿಂದ ನೀರಿನ ಪೋಲು, ಮಣ್ಣಿನ ಫ‌ಲವತ್ತತೆ ಹಾಳು, ಬೆಲೆ ಕುಸಿತದಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

∙ ನೀವು ಅರಣ್ಯ-ಕೃಷಿ ಅಂತಿದ್ದೀರಾ. ಆದರೆ, ಸರ್ಕಾರ ಇಸ್ರೇಲ್ ಮಾದರಿ ಕೃಷಿ ಎನ್ನುತ್ತಿದೆಯಲ್ಲಾ?

Advertisement

ಇಸ್ರೇಲ್ ಮಾದರಿ ಎನ್ನುವುದು ನಾನ್‌ಸೆನ್ಸ್‌. ಅವರು ಮರಭೂಮಿಯನ್ನು ಫ‌ಲವತ್ತಾದ ಮಣ್ಣಾಗಿ ಪರಿವರ್ತಿಸಲು ಹೊರಟಿದ್ದಾರೆ. ಆದರೆ, ನಮ್ಮಲ್ಲಿ ಈಗಾಗಲೇ ಫ‌ಲವತ್ತಾದ ಮಣ್ಣಿದ್ದು, ನಮ್ಮ ಅವಿವೇಕತನದಿಂದ ಅದನ್ನು ಮರುಭೂಮಿಯಾಗಿ ಪರಿವರ್ತಿಸುತ್ತಿದ್ದೇವೆ. ಇವೆರಡರ ನಡುವೆ ವ್ಯತ್ಯಾಸ ಅರಿತರೆ ಉತ್ತರ ಸಿಗುತ್ತದೆ. ಅಷ್ಟಕ್ಕೂ ಅನೇಕ ತಜ್ಞರು ಹೇಳುವ ಪ್ರಕಾರ ಭಾರತದ ಮಣ್ಣು ತುಂಬಾ ಫ‌ಲವತ್ತತೆಯಿಂದ ಕೂಡಿದ್ದು, ಇಲ್ಲಿನ ಒಂದು ಕ್ಯುಬಿಕ್‌ ಮೀಟರ್‌ ಮಣ್ಣಿನಲ್ಲಿ ಹತ್ತು ಸಾವಿರ ಜಾತಿಯ ಸೂಕ್ಷ್ಮಾಣುಜೀವಿಗಳನ್ನು ಕಾಣಬಹುದು. ಇದನ್ನು ಸಂರಕ್ಷಿಸಲು ಸಾಧ್ಯವಾದಷ್ಟು ಸಾವಯವ ಗೊಬ್ಬರ, ಬೀಜ ಮತ್ತಿತರ ಪೋಷಕಾಂಶಗಳನ್ನು ನೀಡಬೇಕಾಗಿದೆ ಅಷ್ಟೇ. ಜಾನುವಾರುಗಳ ಗೊಬ್ಬರ, ಗಿಡ-ಮರದ ಎಲೆಗಳು ಜಮೀನಿನಲ್ಲೇ ಬೀಳುವಂತಾಗಬೇಕು. ಆದರೆ, ನಮ್ಮಲ್ಲಿನ ಜಾನುವಾರುಗಳು ಕಸಾಯಿ ಖಾನೆಗೆ ಅಥವಾ ವಿದೇಶಕ್ಕೆ ಸಾಗಣೆ ಆಗುತ್ತಿವೆ. ಮರಗಳನ್ನು ಕಡಿದುಹಾಕುತ್ತಿದ್ದೇವೆ.

∙ ಹಾಗಿದ್ದರೆ, ದನಕರುಗಳ ಸಂರಕ್ಷಣೆಯನ್ನು ನೋಡುವ ನಮ್ಮ ದೃಷ್ಟಿಕೋನ ಬದಲಾಗಬೇಕು

ಖಂಡಿತ. ಮಣ್ಣಿನ ಫ‌ಲವತ್ತತೆಗೆ ಜಾನುವಾರು ತ್ಯಾಜ್ಯ ಅತ್ಯವಶ್ಯಕ. ಈ ದೃಷ್ಟಿಯಿಂದ ದನಕರುಗಳ ರಕ್ಷಣೆ ಆಗಬೇಕು. ಇದನ್ನು ಈ ಆಯಾಮದಿಂದ ನೋಡಬೇಕೆ ಹೊರತು, ಧರ್ಮದ ಮೂಸೆಯಿಂದ ನೋಡುವುದೂ ನಾನ್‌ಸೆನ್ಸ್‌.

∙ ದಶಕಗಳಿಂದಲೂ ಸಾಂಪ್ರದಾಯಿಕ ನೀರಾವರಿ ಹಾಗೂ ಒಂದೇ ರೀತಿಯ ಬೆಳೆ ಪದ್ಧತಿ ಅನುಸರಿಸುತ್ತಿರುವ ಕಾವೇರಿ ಕಣಿವೆಯ ರೈತರು ನಿಮ್ಮ ಮಾತು ಕೇಳುತ್ತಾರಾ?

ರೈತರಿಗೆ ಆದಾಯದ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಈಶಾ ಪ್ರತಿಷ್ಠಾನ ಕಾವೇರಿ ಕಣಿವೆಯ ಆರು ಸಾವಿರ ಹಳ್ಳಿಗಳಿಗೆ ಭೇಟಿ ನೀಡಿ, ರೈತರ ಅಭಿಪ್ರಾಯ ಸಂಗ್ರಹಿಸಿದೆ. ತಮಿಳು ನಾಡಿನಲ್ಲೇ ಕಾವೇರಿ ಜಲಾನಯನದಲ್ಲಿ ಬರುವ 2.70 ಲಕ್ಷ ಅಂದರೆ ಶೇ. 42ರಷ್ಟು ರೈತರು ಅರಣ್ಯ-ಕೃಷಿಗೆ ಶಿಫ್ಟ್ ಆಗಲು ಆಸಕ್ತಿ ತೋರಿಸಿ ದ್ದಾರೆ. ಕರ್ನಾಟಕದಲ್ಲೂ ಪೂರಕ ಸ್ಪಂದನೆ ದೊರೆಯುತ್ತಿದೆ.

∙ ವರ್ಷದಿಂದ ವರ್ಷಕ್ಕೆ ಕಾವೇರಿ ಕಣಿವೆಯ ಜಲಮೂಲಗಳೇ ಬತ್ತುತ್ತಿವೆ. ಅಂತಹದ್ದರಲ್ಲಿ ಈ ಹೊಸ ಪ್ರಯೋಗ ರೈತರ ಕೈಹಿಡಿಯಲಿದೆಯೇ?

ಜಲಮೂಲಗಳ ವಿಚಾರದಲ್ಲಿ ವಿಜ್ಞಾನಿಗಳು ಸೇರಿದಂತೆ ನಮ್ಮೆಲ್ಲರ ಪರಿಕಲ್ಪನೆಯೇ ತಪ್ಪು. ಕೆರೆ, ಕುಂಟೆ, ನದಿ, ಬಾವಿಗಳೆಲ್ಲಾ ಜಲಮೂಲಗಳಲ್ಲ. ಅವು ಕೇವಲ ಗಮ್ಯಸ್ಥಳ. ವಾಸ್ತವವಾಗಿ ದೇಶದಮಟ್ಟಿಗೆ ಮುಂಗಾರು ಮಾರುತಗಳೇ ಜಲಮೂಲ. ಆ ಮಾರುತಗಳು-ಮರಗಳ ನಡುವೆ ಒಂದು ಸಂವಹನ ಯಾವಾ ಗಲೂ ನಡೆಯುತ್ತಿರುತ್ತದೆ. ಆ ಸಂವಹನವನ್ನು ಅರಣ್ಯ ನಾಶದ ಮೂಲಕ ನಾವು ಕಡಿದುಹಾಕಿದ್ದೇವೆ. ಅದರ ಮರು ನಿರ್ಮಾಣದ ಪ್ರಯತ್ನವೇ ‘ಕಾವೇರಿ ಕಾಲಿಂಗ್‌’. ಇದರಿಂದ ಹೆಚ್ಚು ಮಳೆ ಸುರಿಯುತ್ತದೆ. ಬೀಳುವ ಮಳೆ ನೀರನ್ನೂ ಹಿಡಿದಿಟ್ಟು ಕೊಳ್ಳುತ್ತದೆ. ಮಣ್ಣಿನ ಫ‌ಲವತ್ತತೆ ಕಾಪಾಡಿಕೊಳ್ಳಲು ಸಾಧ್ಯವಾ ಗುತ್ತದೆ.

∙ ನೀವು ಅಂದುಕೊಂಡಂತೆ ಇದೆಲ್ಲವೂ ನಡೆದರೆ, ನಿಮ್ಮ ಪ್ರಕಾರ ಕಾವೇರಿ ಕಣಿವೆಯಲ್ಲಿ ಎಷ್ಟು ಪ್ರಮಾಣದ ನೀರು ಹಿಡಿದಿಟ್ಟುಕೊಳ್ಳಬಹುದು?

ವಿಶ್ವಸಂಸ್ಥೆ ಪ್ರಕಾರ 10 ಸಾವಿರ ಮರಗಳು 38ರಿಂದ45 ಮಿಲಿಯನ್‌ ಲೀಟರ್‌ ನೀರನ್ನು ಹಿಡಿದಿಟ್ಟುಕೊಳ್ಳಬಲ್ಲವು. ಕಾವೇರಿ ಕಣಿವೆಯಲ್ಲಿ ಅಂದುಕೊಂಡಂತೆ ಮರಗಳನ್ನು ಬೆಳೆಸಿದರೆ, 9 ರಿಂದ 12 ಟ್ರಿಲಿಯನ್‌ ಲೀ. ನೀರನ್ನು ಹಿಡಿದಿಡಬಹುದು.

∙ ರಾಜ್ಯದಲ್ಲಿ ಹಲವು ವರ್ಷ ಬರ ಮತ್ತೂಂದು ವರ್ಷ ನೆರೆ ಹಾವಳಿ ಉಂಟಾಗುತ್ತಿದೆ. ಇತ್ತೀಚೆಗೆ ಕೊಡಗು ಸತತ ಎರಡು ವರ್ಷ ನೆರೆಗೆ ತುತ್ತಾಯಿತು. ಈ ಅಸಮತೋಲನಕ್ಕೆ ಏನು ಪರಿಹಾರ?

ಹಸಿರೀಕರಣವೊಂದೇ ಪರಿಹಾರ. ನದಿ, ಕೆರೆಯ ಜಾಗಗಳನ್ನೆಲ್ಲಾ ನಾವು ಆಕ್ರಮಿಸಿಕೊಂಡು ವಾಸವಾಗಿದ್ದರೆ, ನೀರು ಏನು ಮಾಡ ಬೇಕು? ವರ್ಷ ಎಂದರೆ ಹರ್ಷ ಅಥವಾ ದೇವರ ಆಶೀರ್ವಾದ. ಆದರೆ, ಅದನ್ನು ಶಾಪವಾಗಿ ಮಾಡಿಕೊಂಡಿದ್ದು ನಾವು. ಕೊಡಗಿನಲ್ಲಿ ಕಳೆದ ಬಾರಿ 14 ಭೂಕುಸಿತಗಳು ಸಂಭವಿಸಿವೆ. ಆದರೆ, ಆ ಪೈಕಿ ಒಂದೇ ಒಂದು ಸ್ವಾಭಾವಿಕ ಅರಣ್ಯ ಇಲ್ಲ. ಇನ್ನು ಉತ್ತರ ಕರ್ನಾಟಕದಲ್ಲಿ ನೂರಾರು ವರ್ಷಗಳ ಹಿಂದೆ ಹಸಿರು ಇತ್ತು. ಅದನ್ನು ಬೇಕಾಬಿಟ್ಟಿ ಕಡಿದುಹಾಕಲಾಯಿತು. ಹಾಗಾಗಿ, ಈಗ ನಾವು ಮತ್ತೆ ಸಸ್ಯ ಸಂಪತ್ತನ್ನು ಬೆಳೆಸಬೇಕಾಗಿದೆ.

∙ ಕಾವೇರಿ ಕಣಿವೆ ರೈತರಿಗೆ ಅರಣ್ಯ-ಕೃಷಿ ಹೇಳಿಕೊಡಲು ಹೊರಟಿದ್ದೀರಿ. ಅದೇ ಕಾವೇರಿಯನ್ನು ಅವಲಂಬಿಸಿದ ಬೆಂಗಳೂರಿಗರಿಗೆ ನೀವೇನು ಹೇಳುತ್ತೀರಿ?

ಕಾಂಕ್ರೀಟ್ ಕಾಡು ಕಡಿದು ಸ್ವಾಭಾವಿಕ ಕಾಡು ಬೆಳೆಸಿ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ತಮ್ಮ ಕೈಲಾದಷ್ಟು ಗಿಡಗಳನ್ನು ಖರೀದಿಸಿ, ಸಾಧ್ಯವಿರುವ ಕಡೆಗಳಲ್ಲಿ ನೆಟ್ಟು, ಪೋಷಿಸುವ ಮೂಲಕ ನಗರದ ಜನ ಈ ಅಭಿಯಾನಕ್ಕೆ ಕೈಜೋಡಿಸಬೇಕು.

∙ ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next