Advertisement

ಸೆಕ್ಯುರಿಟಿಯ ಪ್ರಾಣ ತೆಗೆದ ಕಬ್ಬಿಣದ ಗೇಟ್‌

01:28 AM Jul 01, 2019 | Lakshmi GovindaRaj |

ಬೆಂಗಳೂರು: ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಆವರಣದಲ್ಲಿ ಮತ್ತೊಂದು ಅವಘಡ ಸಂಭವಿಸಿದ್ದು, ಟಾಟಾ ಇನ್ಸ್‌ಟಿಟ್ಯೂಟ್‌ (ಐಐಎಸ್‌ಸಿ) ಮುಖ್ಯದ್ವಾರದಲ್ಲಿ ಅಳವಡಿಸಿದ್ದ ಭಾರೀ ಗಾತ್ರದ ಕಬ್ಬಿಣದ ಸ್ಲೈಡಿಂಗ್‌ ಗೇಟ್‌ ಬಿದ್ದು ಭದ್ರತಾ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.

Advertisement

ಒಡಿಶಾ ಮೂಲದ ಗೌತಮ್‌ ಬಿಸ್ವಾಲ್‌ (26) ಮೃತ ಭದ್ರತಾ ಸಿಬ್ಬಂದಿ. ಇದೇ ವಳೆ ಘಟನೆಯಲ್ಲಿ ಬಿಹಾರ ಮೂಲದ ಅನಿಲ್‌ ಕುಮಾರ್‌ (37) ಹಾಗೂ ಒಡಿಶಾದ ವೈ.ನಾಯಕ್‌ (40)ಎಂಬವರೂ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತ ದೇಹವನ್ನು ಎಂ.ಎಸ್‌.ರಾಮಯ್ಯ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ. ದುರ್ಘ‌ಟನೆ ಬಗ್ಗೆ ಬಿಸ್ವಾಲ್‌ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದ್ದು, ಅವರು ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಸಿ ಕಾನೂನು ಪ್ರಕ್ರಿಯೆ ನಡೆಸಲಾಗುವುದು. ಸದ್ಯ ಇನ್ಸ್‌ಟಿಟ್ಯೂಟ್‌ನ ಎಂಜಿನಿಯರ್‌ ಹಾಗೂ ಗೇಟ್‌ ತಯಾರಿಸಿದ ವ್ಯಕ್ತಿಯ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಲಾಗುವುದು ಎಂದು ಸದಾಶಿವನಗರ ಠಾಣೆ ಪೊಲೀಸರು ಹೇಳಿದ್ದಾರೆ.

ಪರಿಚಯಸ್ಥರ ಸಲಹೆ ಮೇರೆಗೆ ಮೂರುವರೆ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಬಿಸ್ವಾಲ್‌, ವಿಜಯನಗರದಲ್ಲಿರುವ ಖಾಸಗಿ ಸೆಕ್ಯೂರಿಟಿ ಏಜೆನ್ಸಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡು ಮೂರು ವರ್ಷಗಳಿಂದ ಟಾಟಾ ಇನ್ಸ್‌ಟಿಟ್ಯೂಟ್‌ನ ಮುಖ್ಯದ್ವಾರದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ.

ಹೀಗಾಗಿ ಐಐಎಸ್‌ಸಿ ಸಮೀಪದಲ್ಲೇ ಇರುವ ಸಂಸ್ಥೆಗೆ ಸೇರಿದ ಕೊಠಡಿಯಲ್ಲಿ ಸಹೋದ್ಯೋಗಿಗಳ ಜತೆ ವಾಸವಾಗಿದ್ದ. ಎಂದಿನಂತೆ ಭಾನುವಾರ ಬೆಳಗ್ಗೆ ಆರು ಗಂಟೆ ಸುಮಾರಿಗೆ ಗೌತಮ್‌ ಬಿಸ್ವಾಲ್‌, ಅನಿಲ್‌ ಕುಮಾರ್‌ ಮತ್ತು ವೈ.ನಾಯಕ್‌ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

Advertisement

ಮೈಮೇಲೆ ಬಿದ್ದ 500 ಕೆ.ಜಿ. ತೂಕದ ಗೇಟ್‌: ಸಂಸ್ಥೆ ಪ್ರವೇಶ ದ್ವಾರದಲ್ಲಿ ಸುಮಾರು 500 ಕೆ.ಜಿ. ತೂಕದ ಸ್ಲೈಡಿಂಗ್‌ ಗೇಟ್‌ ಅಳವಡಿಸಲಾಗಿದೆ. ಮಧ್ಯಾಹ್ನ 1.10ರ ಸುಮಾರಿಗೆ ವ್ಯಕ್ತಿಯೊಬ್ಬರ ಕಾರು ಸಂಸ್ಥೆಯ ಒಳಗೆ ಪ್ರವೇಶಿಸಿದ್ದು, ಈ ವೇಳೆ ಬಿಸ್ವಾಲ್‌ ಗೇಟ್‌ ತೆರೆದು, ಮತ್ತೆ ಹಾಕುವಾಗ ಸ್ಲೈಡಿಂಗ್‌ ಪಟ್ಟಿ ಕಳಚಿಕೊಂಡು ಏಕಾಏಕಿ ಬಿಸ್ವಾಲ್‌ ಮೇಲೆ ಗೇಟ್‌ ಬಿದ್ದಿದ್ದೆ.

ಕೂಡಲೇ ಬಿಸ್ವಾಲ್‌ನ ನೆರವಿಗೆ ಬಂದ ಅನಿಲ್‌ ಮತ್ತು ನಾಯಕ್‌ ಸೇರಿ ಮೂವರು ಗೇಟ್‌ ಬೀಳದಂತೆ ತಡೆಯಲು ಮುಂದಾಗಿದ್ದಾರೆ. ಆದರೆ, ಸಾಧ್ಯವಾಗಿಲ್ಲ ಗೇಟ್‌ನ ಮಧ್ಯದಲ್ಲಿದ್ದ ಬಿಸ್ವಾಲ್‌ ಮೇಲೆ ಗೇಟ್‌ ಬಿದ್ದಿದ್ದು, ಆತನ ತಲೆಗೆ (ಹಣೆ ಭಾಗಕ್ಕೆ) ಬಲವಾದ ಪೆಟ್ಟು ಬಿದ್ದು ತೀವ್ರರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಕೂಡಲೇ ಗೇಟ್‌ ಮುಂಭಾಗದಲ್ಲಿದ್ದ ನಾಲ್ಕೈದು ಮಂದಿ ಆಟೋ ಚಾಲಕರು ಹಾಗೂ ಇತರೆ ಸೆಕ್ಯೂರಿಟಿ ಗಾರ್ಡ್‌ಗಳು ಗೇಟ್‌ನ್ನು ಪಕ್ಕಕ್ಕೆ ತಳ್ಳಿ, ಗೇಟ್‌ ಕೆಳಗಡೆ ಸಿಲುಕಿದ್ದ ಅನಿಲ್‌ ಕುಮಾರ್‌ ಮತ್ತು ನಾಯಕ್‌ನ್ನು ರಕ್ಷಣೆ ಮಾಡಿದ್ದಾರೆ. ಈ ವೇಳೆ ಅನಿಲ್‌ಕುಮಾರ್‌ನ ಬೆನ್ನು ಮತ್ತು ನಾಯಕ್‌ನ ಕೈಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ರವಾನಿಸಲಾಯಿತು ಎಂದು ಪೊಲೀಸರು ಹೇಳಿದರು.

ಆರು ತಿಂಗಳಿಂದ ಕಾಮಗಾರಿ: ಆರು ತಿಂಗಳ ಹಿಂದೆ ಮುಖ್ಯದ್ವಾರದಲ್ಲಿದ್ದ ಹಳೇ ಗೇಟ್‌ ತೆರವುಗೊಳಿಸಿ ಸುಮಾರು ಆರು ಅಡಿ ಎತ್ತರ ಹಾಗೂ 12ರಿಂದ 15 ಅಡಿ ಉದ್ದದ 500 ಕೆ.ಜಿ.ಗೂ ಹೆಚ್ಚು ತೂಕದ ಗೇಟ್‌ ಅಳವಡಿಸಲಾಗಿದೆ.

ಆದರೆ, ಈ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂಬ ಗಂಭೀರ ಆರೋಪ ಕೂಡ ಭದ್ರತಾ ಸಿಬ್ಬಂದಿಯಿಂದಲೇ ಕೇಳಿ ಬಂದಿದೆ. ಗೇಟ್‌ಗೆ ಸರಿಯಾದ ಲಾಕ್‌ ಸಿಸ್ಟಂ ಹಾಕಿಲ್ಲ. ಅಲ್ಲದೆ, ಕಾಮಗಾರಿ ಕೂಡ ಸಂಪೂರ್ಣವಾಗಿ ಮುಗಿದಿಲ್ಲ. ಒಟ್ಟಾರೆ ಕಳಪೆ ಕಾಮಗಾರಿಯಿಂದಲೇ ಗೇಟ್‌ ಬಿದ್ದಿದ್ದೆ ಎಂದು ಸಿಬ್ಬಂದಿ ಆರೋಪಿಸಿದರು.

ಭದ್ರತಾ ಸಿಬ್ಬಂದಿಗೇ ಭದ್ರತೆಯಿಲ್ಲ – ಪ್ರತಿಭಟನೆ: ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸಂಸ್ಥೆಯಲ್ಲಿದ್ದ ಭದ್ರತಾ ಸಿಬ್ಬಂದಿ ಸಂಸ್ಥೆಯ ಆವರಣದಲ್ಲಿರುವ ಸೆಕ್ಯೂರಿಟಿ ಗಾರ್ಡ್‌ಗಳಿಗೆ ಯಾವುದೇ ಭದ್ರತೆ ಇಲ್ಲ. ನಮಗೆ ನ್ಯಾಯ ಕೊಡಿಸಬೇಕು ಎಂದು ಘಟನಾ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.

ಮೃತ ದೇಹವನ್ನು ಕೊಂಡೊಯ್ಯುತ್ತಿದ್ದ ಆ್ಯಂಬುಲೆನ್ಸ್‌ ತಡೆದು ಆಕ್ರೋಶ ವ್ಯಕ್ತಪಡಿಸಿದರು. ನಂತರ ಸ್ಥಳಕ್ಕೆ ಧಾವಿಸಿದ ಹಿರಿಯ ಪೊಲೀಸ್‌ ಅಧಿಕಾರಿಗಳು ಹಾಗೂ ಸಂಸ್ಥೆಯ ಭದ್ರತಾ ಉಸ್ತುವಾರಿ ವಿಭಾಗದ ಅಧಿಕಾರಿಗಳು ಸೆಕ್ಯೂರಿಟಿ ಗಾರ್ಡ್‌ಗಳ ಮನವೊಲಿಸಿ ಸ್ಥಳದಿಂದ ಕಳುಹಿಸಿದರು.

50 ನಿಮಿಷದಲ್ಲಿ ಪಾಳಿ ಮುಗಿಯುತ್ತಿತ್ತು: ಗೌತಮ್‌ ಬಿಸ್ವಾಲ್‌ ಭಾನುವಾರ ಮುಂಜಾನೆಯೇ ಕರ್ತವ್ಯಕ್ಕೆ ಹಾಜರಾಗಿದ್ದು, ಮಧ್ಯಾಹ್ನ 2 ಗಂಟೆ ಸುಮಾರಿಗೆ ಕೆಲಸದ ಪಾಳಿ ಮುಗಿಯುತ್ತಿತ್ತು. ಮಧ್ಯಾಹ್ನ 1.10ರ ಸುಮಾರಿಗೆ ದುರ್ಘ‌ಟನೆ ಸಂಭವಿಸಿದೆ.

ಹಣೆ ಮೇಲೆ ಗೇಟ್‌ ಬಿತ್ತು: “ಮೂವರು ಸಿಬ್ಬಂದಿ ಮೇಲೆ ಗೇಟ್‌ ಬಿದ್ದಿದ್ದನ್ನು ಕಂಡು ಅಲ್ಲೇ ಇದ್ದ ನಾವುಗಳು ರಕ್ಷಣೆಗೆ ಹೋದೆವು. ಬಿಸ್ವಾಲ್‌ ಹಣೆಯ ಭಾಗಕ್ಕೆ ಗೇಟ್‌ ಬಿದ್ದಿದ್ದು, ಪರಿಣಾಮ ಆತನ ಕಿವಿ ಮತ್ತು ಮೂಗಿನಲ್ಲಿ ರಕ್ತಸ್ರಾವ ಆಗಿ ಸ್ಥಳದಲ್ಲೇ ಮೃತಪಟ್ಟಿದ್ದ.

ಮತ್ತೊಂದೆಡೆ ಗೇಟ್‌ ಕೆಳಗಡೆ ಸಿಲುಕಿದ್ದ ಇಬ್ಬರನ್ನು ರಕ್ಷಣೆ ಮಾಡಲಾಯಿತು. ಗೇಟ್‌ನ್ನು ನಾಲ್ಕೈದು ಮಂದಿ ಎತ್ತಲು ಯತ್ನಿಸಿದರು ಸಾಧ್ಯವಾಗಲಿಲ್ಲ. ಕೊನೆಗೆ ಕೆಲ ವಾಹನ ಸವಾರರು ಬಂದು ಸಹಾಯ ಮಾಡಿದರು’ ಎಂದು ಆಟೋ ಚಾಲಕ ಹಾಗೂ ಪ್ರತ್ಯಕ್ಷದರ್ಶಿ ಸುಬ್ರಹ್ಮಣ್ಯ ಹೇಳಿದರು.

ಹೈಡ್ರೋಜನ್‌ ಗ್ಯಾಸ್‌ ಸಿಲಿಂಡರ್‌ ಸ್ಫೋಟ: ಪ್ರತಿಷ್ಠಿತ ಐಐಎಸ್‌ಸಿಯಲ್ಲಿ 2018 ಡಿ.5ರಂದು ಸಂಸ್ಥೆಯ ಆವರಣದಲ್ಲಿರುವ ಲ್ಯಾಬೋರೇಟರಿ ಫಾರ್‌ ಹೈಪರ್‌ಸೋನಿಕ್‌ ಆ್ಯಂಡ್‌ ಶಾಕ್‌ ವೇವ್‌ ರಿಸರ್ಚ್‌ ವಿಭಾಗದಲ್ಲಿ ಬಾಹ್ಯಾಕಾಶದ ತರಂಗಾಂತರ ಕುರಿತು ಸಂಶೋಧನೆ ವೇಳೆ ಹೈಡ್ರೋಜನ್‌ ಅನಿಲ ತುಂಬಿದ ಸಿಲಿಂಡರ್‌ ಸ್ಫೋಟಗೊಂಡು, ಮೈಸೂರು ಮೂಲದ ಯುವ ವಿಜ್ಞಾನಿ ಎಂಟೆಕ್‌ ಪದವಿಧರ ಮನೋಜ್‌ ಕುಮಾರ್‌ ಮೃತಪಟ್ಟಿದ್ದರು. ಕಾರ್ತಿಕ್‌ ಶೆಣೈ, ನರೇಶ್‌ ಕುಮಾರ್‌ ಮತ್ತು ಅತುಲ್ಯ ಎಂಬುವರು ಗಾಯಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next