Advertisement
ಜಪಾನ್ ಮಾತ್ರ ನಿಗದಿತ ವೇಳಾಪಟ್ಟಿಯಂತೆಯೇ ಒಲಿಂಪಿಕ್ಸ್ ನಡೆಸುವ ವಿಶ್ವಾಸದಲ್ಲಿದೆ. ಕೂಟಕ್ಕೆ ಇನ್ನೂ 4 ತಿಂಗಳಿದೆ, ಅಷ್ಟರಲ್ಲಿ ಕೊರೊನಾ ಹತೋಟಿಗೆ ಬಂದು, ಕೂಟ ಯಶಸ್ವಿಯಾಗಿ ನಡೆಯಲಿದೆ ಎಂಬ ನಂಬಿಕೆ ಜಪಾನಿನದ್ದು.
1896ರಲ್ಲಿ ಆಧುನಿಕ ಒಲಿಂಪಿಕ್ಸ್ ಮೊದಲ್ಗೊಂಡ ಬಳಿಕ ಈವರೆಗೆ ಈ ಕ್ರೀಡಾಕೂಟ ಮಹಾಯುದ್ಧಗಳ ಕಾರಣ ಹೊರತುಪಡಿಸಿ ಬೇರೆ ಯಾವುದೇ ಕಾರಣಕ್ಕೂ ರದ್ದುಗೊಂಡದ್ದಿಲ್ಲ. ಮಹಾಯುದ್ಧಕ್ಕೆ 1916, 1940 ಮತ್ತು 1944ರ ಒಲಿಂಪಿಕ್ಸ್ ಬಲಿಯಾಗಿದ್ದವು. ಉಳಿದಂತೆ ನಾನಾ ಬಹಿಷ್ಕಾರಗಳ ನಡುವೆಯೂ ಮಾಂಟ್ರಿಯಲ್ (1976), ಮಾಸ್ಕೊ (1980), ಲಾಸ್ ಏಂಜಲೀಸ್ (1984) ಒಲಿಂಪಿಕ್ಸ್ ಯಶಸ್ವಿಯಾಗಿ ನಡೆದಿದ್ದವು. ಇಂದು ಕೊರೊನಾ ಭೀತಿ ಎದುರಾದಂತೆ 2004ರ ಅಥೇನ್ಸ್ ಒಲಿಂಪಿಕ್ಸ್‌ಗೆ ಸಾರ್ ವೈರಸ್ ಕಂಟಕ ಕಾಡಿತ್ತು. ಆದರೂ ಕೂಟ ರದ್ದುಗೊಂಡಿರಲಿಲ್ಲ. ಹಾಗೆಯೇ 2016ರ ರಿಯೋ ಡಿ ಜನೈರೊ ಒಲಿಂಪಿಕ್ಸ್ ವೇಳೆ ಝೀಕಾ ವೈರಸ್ ಕಾಟವಿತ್ತು. ಕೂಟ ಯಶಸ್ವಿಯಾಗಿಯೇ ನಡೆದಿತ್ತು. ಹೀಗಾಗಿ ಕೊರೊನಾ ಹತೋಟಿಗೆ ಬಂದರೆ ಜುಲೈ-ಆಗಸ್ಟ್ ತಿಂಗಳಲ್ಲಿ ನಡೆಯುವ ಟೋಕಿಯೊ ಒಲಿಂಪಿಕ್ಸ್‌ಗೆ ಯಾವುದೇ ಅಡಚಣೆಯಾಗದು ಎಂಬುದು ಆಯೋಜಕರ ಲೆಕ್ಕಾಚಾರ.
Related Articles
ಆದರೆ ಐಒಸಿ ಈ ನಿಟ್ಟಿನಲ್ಲಿ ಯಾವ ಹೆಜ್ಜೆ ಇರಿಸೀತು ಎಂಬುದರ ಮೇಲೆ ಟೋಕಿಯೊ ಒಲಿಂಪಿಕ್ಸ್ ಭವಿಷ್ಯ ಅವಲಂಬಿಸಿದೆ. ಕೂಟವನ್ನು ರದ್ದುಪಡಿಸುವ ಅಥವಾ ಮುಂದೂಡುವ ಸಂಪೂರ್ಣ ನಿರ್ಧಾರ ಐಒಸಿಯದ್ದು. ಆದರೆ ಇದಕ್ಕೆ ಮೂರು ಎರಡರಷ್ಟು ಬಹುಮತ ಅಗತ್ಯ. ಅಧ್ಯಕ್ಷ ಥಾಮಸ್ ಬಾಕ್ ಪ್ರಕಾರ ವೇಳಾಪಟ್ಟಿಯಂದೇ ಒಲಿಂಪಿಕ್ಸ್ ಆರಂಭಿಸುವುದು ಐಒಸಿಯ ಪ್ರಮುಖ ಗುರಿ.
Advertisement
ಈ ನಿಟ್ಟಿನಲ್ಲಿ ವರ್ಲ್ಡ್ ಹೆಲ್ತ್ ಆರ್ಗನೈಸೇಶನ್ (ಡಬ್ಲ್ಯುಎಚ್‌ಒ), ಟೋಕಿಯೊ 2020 ಸಂಘಟನಾ ಸಮಿತಿ, ಟೋಕಿಯೊ ಮೆಟ್ರೊಪೊಲಿಟನ್ ಗವರ್ನ್ಮೆಂಟ್ ಜತೆ ಐಒಸಿ ನಿರಂತರ ಸಂಪರ್ಕ ಇರಿಸಿಕೊಂಡಿದೆ. ಆದರೆ ನಿಬಿಡ ಅಂತಾರಾಷ್ಟ್ರೀಯ ಕ್ರೀಡಾ ಕ್ಯಾಲೆಂಡರ್ ಹಿನ್ನೆಲೆಯಲ್ಲಿ ಒಲಿಂಪಿಕ್ಸ್ ಕೂಟವನ್ನು ಮುಂದೂಡುವುದು ಅಸಾಧ್ಯ ಎಂದೇ ಹೇಳಲಾಗುತ್ತದೆ. ಆಗ ಇದನ್ನು ರದ್ದುಪಡಿಸುವುದೇ ಏಕೈಕ ಮಾರ್ಗವಾಗಿರುತ್ತದೆ.
ಒಂದು ವರ್ಷ ಮುಂದೂಡುವುದು ಉತ್ತಮ: ಉಸೇನ್ ಬೋಲ್ಟ್ ಕೋಚ್ಟೋಕಿಯೊ ಒಲಿಂಪಿಕ್ಸ್ ಕೂಟವನ್ನು ಒಂದು ವರ್ಷ ಕಾಲ ಮುಂದೂಡುವುದು ಉತ್ತಮ ನಿರ್ಧಾರವಾಗಲಿದೆ ಎಂಬುದಾಗಿ ಜಮೈಕನ್ ಸ್ಪ್ರಿಂಟರ್ ಉಸೇನ್ ಬೋಲ್ಟ್ ಅವರ ಕೋಚ್ ಗ್ಲೆನ್ ಮಿಲ್ಸ್ ಅಭಿಪ್ರಾಯಪಟ್ಟಿದ್ದಾರೆ. “ಟೋಕಿಯೊ ಒಲಿಂಪಿಕ್ಸ್ ನಿಗದಿತ ದಿನಾಂಕದಂದೇ ನಡೆಯಲಿದೆ ಎಂಬ ನಂಬಿಕೆ ನನಗಿಲ್ಲ. ನಡೆದರೂ ಇದು ಯಶಸ್ವಿಯಾಗುವುದು ಅನುಮಾನ. ಇದಕ್ಕಿರುವ ಒಂದೇ ಪರಿಹಾರವೆಂದರೆ ಕೂಟವನ್ನೇ ಒಂದು ವರ್ಷದ ಮಟ್ಟಿಗೆ ಮುಂದೂಡುವುದು’ ಎಂಬುದಾಗಿ ಮಿಲ್ಸ್ ಹೇಳಿದ್ದಾರೆ. ಉಸೇನ್ ಬೋಲ್ಟ್ ಅವರ 8 ಒಲಿಂಪಿಕ್ಸ್ ಚಿನ್ನ ಹಾಗೂ 11 ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಗಳ ಹಿಂದೆ ಗ್ಲೆನ್ ಮಿಲ್ಸ್ ಅವರ ಮಾರ್ಗದರ್ಶನ ಇರುವುದನ್ನು ಮರೆಯುವಂತಿಲ್ಲ.