Advertisement
ಠೇವಣಿ ಅಕ್ರಮ ವರ್ಗಾವಣೆ ಪ್ರಕರಣವನ್ನು ಗ್ರಾಮೀಣಾಭಿವೃದ್ಧಿ ಇಲಾಖೆಯು ನ.2ರಂದು ಸಿಐಡಿಗೆ ವಹಿಸಿ ಆದೇಶಿಸಿತ್ತು. ಆದೇಶ ಹೊರಬಿದ್ದು ಒಂದೂವರೆ ತಿಂಗಳಾದರೂ ಸಿಐಡಿ ಅಧಿಕೃತವಾಗಿ ತನಿಖೆಯನ್ನು ಇನ್ನೂ ಆರಂಭಿಸಿಲ್ಲ. ಪ್ರಕರಣ ಬೆಳಕಿಗೆ ಬಂದ ಮೇಲೆ ಇಲಾಖೆ ತೋರಿದ್ದ “ಆರಂಭ ಶೂರತ್ವ’ ಈಗ ಕಾಣುತ್ತಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ದೂರು ದಾಖಲಿಸಿ, ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಿದ್ದು ಬಿಟ್ಟರೆ, ಪ್ರಕರಣದ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡಿಲ್ಲ. ಅಕ್ರಮವಾಗಿ ವರ್ಗಾವಣೆಯಾದ 55 ಕೋಟಿ ರೂ. ಈಗ ಎಲ್ಲಿದೆ ಅನ್ನುವುದಕ್ಕೂ ಉತ್ತರ ಈವರಗೂಸಿಕ್ಕಿಲ್ಲ. ಠೇವಣಿ ಅಕ್ರಮ ವರ್ಗಾವಣೆ ಬಗ್ಗೆ ಬೆಂಗಳೂರಿನಲ್ಲಿ ವಿಜಯಾ ಬ್ಯಾಂಕಿನ ಕೋರಮಂಗಲ ಶಾಖೆಯವರು ಮಾಹಿತಿ ನೀಡಿದ್ದರಿಂದ ಇದರ ವ್ಯಾಪ್ತಿಯ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುತ್ತದೆ ಎಂದು ಇಲಾಖೆ ಹೇಳಿತ್ತು.
ಆದರೆ, ಆ ಬಗ್ಗೆಯೂ ಮಾಹಿತಿ ಲಭ್ಯವಾಗುತ್ತಿಲ್ಲ.
ಕುಳಾಯಿಯಲ್ಲಿರುವ ಇಂಡಿಯನ್ ಓವರ್‌ಸೀಸ್ ಬ್ಯಾಂಕಿನಲ್ಲಿ ಇಟ್ಟ 55 ಕೋಟಿ ರೂ. ಠೇವಣಿಯಲ್ಲಿ 53 ಕೋಟಿ ರೂ. ಮಹಾರಾಷ್ಟ್ರದ ಬಂಧನ್ ಬ್ಯಾಂಕಿಗೆ ವರ್ಗಾವಣೆಯಾಗಿದೆ ಎಂದು ಇಲಾಖೆ ಹೇಳಿತ್ತು. ಈ ಮಧ್ಯೆ ಇಂಡಿಯನ್ ಓವರ್ ಸಿಸ್ ಬ್ಯಾಂಕಿನ ಕುಳಾಯಿ ಶಾಖೆಯ ವ್ಯವಸ್ಥಾಪಕ ಸೆರಿನ್ ಮಧುಸೂದನ್ ಹಾಗೂ ಪ್ರಾಂತೀಯ ಮುಖ್ಯ ಪ್ರಬಂಧಕ ಸೆಂಥಿಲ್ ಕುಮಾರ್ ಅವರನ್ನು ಅಮಾನತುಗೊಳಿಸಿರುವ ಬಗ್ಗೆ ಬ್ಯಾಂಕಿನ ಕೇಂದ್ರ ಕಚೇರಿಯಿಂದ ಮಾಹಿತಿ ಬಂದಿದೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಹೇಳಿಕೊಂಡಿತ್ತು. ಒಟ್ಟಾರೆ ಪ್ರಕರಣದ ಬಗ್ಗೆ ಈಗ ಏನಾಗಿದೆ ಎಂಬುದು ಇಲಾಖೆಯೇ ಹೇಳಬೇಕಾಗಿದೆ.
Related Articles
ಕರ್ನಾಟಕ ರಾಜ್ಯ ಗ್ರಾಮೀಣ ಮೂಲಸೌಕರ್ಯ ನಿಗಮಕ್ಕೆ ಸೇರಿದ ಲಾಭಾಂಶದ 55 ಕೋಟಿ ರೂ. ಮೊತ್ತವನ್ನು ಶೇ.5.7 ಬಡ್ಡಿ ದರಕ್ಕೆ ಒಂದು ವರ್ಷದ ಅವಧಿಗೆ ಮಂಗಳೂರಿನ ಕುಳಾಯಿಯಲ್ಲಿರುವ ಇಂಡಿಯನ್ ಓವರ್‌ಸಿಸ್ ಬ್ಯಾಂಕಿನ ಶಾಖೆಯಲ್ಲಿ ಆಗಸ್ಟ್ 23 ಮತ್ತು 30ರಂದು ಎರಡು ಕಂತುಗಳಲ್ಲಿ ಅಕ್ರಮವಾಗಿ ಠೇವಣಿ ಇಡಲಾಗಿತ್ತು. ಈ ಮಧ್ಯೆ ಕೆಆರ್‌ಐಡಿಎಲ್‌ನ ಖಾತೆಯಿಂದ ಕೋರಮಂಗಲದ ವಿಜಯಾ ಬ್ಯಾಂಕಿನಲ್ಲಿ ಎರಡು ವರ್ಷಗಳಿಂದ ಯಾವುದೇ ವಹಿವಾಟು ನಡೆಸದ ಷಾ ಎಕ್ಸ್‌ಪೋರ್ಟ್ ಹೆಸರಲ್ಲಿರುವ ಖಾತೆಗೆ 50
ಲಕ್ಷ ರೂ. ಜಮೆ ಆದಾಗ, ಅನುಮಾನಗೊಂಡ ವಿಜಯಾ ಬ್ಯಾಂಕಿನ ಅಧಿಕಾರಿಗಳು ವಿಷಯವನ್ನು ಸಂಸ್ಥೆಯ ಗಮನಕ್ಕೆ ತಂದರು. ಪರಿಶೀಲಿಸಿದಾಗ ಅಕ್ರಮ ಠೇವಣಿ ಹಗರಣ ಬೆಳಕಿಗೆ ಬಂದಿತ್ತು. ಜೊತೆಗೆ ಠೇವಣಿಯನ್ನು “ಸ್ಥಿರ ಠೇವಣಿ ಖಾತೆಗೆ’ ಜಮೆ ಮಾಡಿದ ಬಗ್ಗೆ ರಸೀದಿಗಳಿದ್ದವು. ಅಸಲಿಗೆ ಠೇವಣಿ ಇಟ್ಟಿದ್ದು ಚಾಲ್ತಿ ಖಾತೆಯಲ್ಲಿ. ಈ ವಿಷಯ ಅ.26ಕ್ಕೆ ಸಚಿವರ ಗಮನಕ್ಕೆ ಬಂದಿತ್ತು. ತನಿಖೆ ನಡೆಸಿ ಅ.28ರೊಳಗೆ ಪ್ರಾಥಮಿಕ ವರದಿ ಸಲ್ಲಿಸುವಂತೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಸಚಿವರು ಸೂಚನೆ ನೀಡಿದ್ದರು. ಈ ಮಧ್ಯೆ ಅ.29ರಂದು ಮಂಗಳೂರಿನ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ದೂರು ದಾಖಲಿಸಲಾಗಿತ್ತು. ಪ್ರಾಥಮಿಕ ವರದಿಯಲ್ಲಿ ಮೇಲ್ನೋಟಕ್ಕೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೆಆರ್‌ಐಡಿಎಲ್‌ನ ಮೂವರು
ಅಧಿಕಾರಿಗಳನ್ನು ಅಮಾನತುಗೊಳಿಸಿ ಪ್ರಕರಣವನ್ನು ನ.2ಕ್ಕೆ ಸಿಐಡಿಗೆ ವಹಿಸಲಾಗಿತ್ತು. ಈಗ ತಿಂಗಳು ಕಳೆದರೂ, ಸಿಐಡಿ ತನಿಖೆ ಆರಂಭವಾಗಿಲ್ಲ.
Advertisement
●ರಫಿಕ್ ಅಹ್ಮದ್