Advertisement

ಮಹಾ’ಬಂಧನ್‌ ಬ್ಯಾಂಕ್‌ಗೆ ಅಕ್ರಮ ವರ್ಗ?

08:00 AM Nov 02, 2017 | |

ಬೆಂಗಳೂರು: ಹಳ್ಳಿಗಳ ಮೂಲಸೌಕರ್ಯಗಳ ಅಭಿವೃದ್ಧಿಗೆ ಬಳಕೆಯಾಗಬೇಕಿದ್ದ 55 ಕೋಟಿ ರೂ. “ಬಂಧನ’ದ
ಪಾಲಾಗಿದೆಯೇ? ಅಂದರೆ, ಮಂಗಳೂರಿನಲ್ಲಿರುವ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕಿನ ಕುಳಾಯಿ ಶಾಖೆಯಲ್ಲಿ ಠೇವಣಿ ಇಡಲಾಗಿರುವ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಯ (ಕೆಆರ್‌ಐಡಿಎಲ್‌) 55 ಕೋಟಿ ರೂ.ಗಳ ಪೈಕಿ 53.50 ಕೋಟಿ ರೂ. ಮಹಾರಾಷ್ಟ್ರದ ಬಂಧನ್‌ ಬ್ಯಾಂಕಿನ ಶಾಖೆಯೊಂದಕ್ಕೆ ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂಬ “ಪುಕಾರು’ ಖುದ್ದು ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಎದ್ದಿದೆ.

Advertisement

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂದು ಪರಿಚಯಿಸಿಕೊಂಡು ಓವರ್‌ ಸೀಸ್‌ ಬ್ಯಾಂಕಿನ ಕುಳಾಯಿ ಶಾಖೆಗೆ ಭೇಟಿ ನೀಡಿದ್ದ “ನಕಲಿ’ ಅಧಿಕಾರಿ ನೇತೃತ್ವದ ವಂಚಕ ತಂಡ ಈ ಹಣವನ್ನು ಮಹಾರಾಷ್ಟ್ರದ “ಬಂಧನ್‌’ ಬ್ಯಾಂಕಿನ ಶಾಖೆಯೊಂದಕ್ಕೆ ವರ್ಗಾಯಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಆದರೆ, ಕುಳಾಯಿ ಶಾಖೆಯಲ್ಲಿ ಠೇವಣಿ ಇಟ್ಟಿದ್ದ ಹಣ ಬೇರೆ ರಾಜ್ಯದ ಬ್ಯಾಂಕಿನ ಶಾಖೆಯೊಂದಕ್ಕೆ ವರ್ಗಾವಣೆ ಆಗಿದ್ದು
ನಿಜವೇ, ಆಗಿದ್ದರೆ ಅದು ಹೇಗಾಯಿತು, ಯಾರ ಮೂಲಕ ಆಗಿದೆ ಅನ್ನುವುದನ್ನು ಓವರ್‌ಸೀಸ್‌ ಬ್ಯಾಂಕಿನ ಸಂಬಂಧಪಟ್ಟ
ಶಾಖೆಯವರೇ ಸ್ಪಷ್ಟಪಡಿಸಿಬೇಕು ಎಂದು ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
ಕೆಆರ್‌ಐಡಿಎಲ್‌ ಸಂಸ್ಥೆಯಿಂದ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕಿನ ಕುಳಾಯಿ ಶಾಖೆಯಲ್ಲಿ ಇಟ್ಟಿರುವ 55 ಕೋಟಿ ರೂ. ಸ್ಥಿರ ಠೇವಣಿಯಲ್ಲಿ ಆಗಿರುವ ಅವ್ಯವಹಾರದ ತನಿಖೆ ನಡೆಸಬೇಕು.

ಪ್ರಕರಣದಲ್ಲಿ ಭಾಗಿಯಾಗಿರುವ ಶಾಖಾ ಪ್ರಬಂಧಕ ಸೆರಿನ್‌ ಮಧುಸೂಧನ್‌ ಹಾಗೂ ಮುಖ್ಯ ಪ್ರಾಂತೀಯ ಪ್ರಬಂಧಕ
ಎ.ಸೆಂಥಿಲ್‌ ಕುಮಾರ್‌ ಮೇಲೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು ಎಂದು ಕೆಆರ್‌ಐಡಿಎಲ್‌ನ ಮುಖ್ಯ ಹಣಕಾಸು ಅಧಿಕಾರಿ-1 ಡಾ. ವೀರನಗೌಡ ಪಾಟೀಲ್  ಮಂಗಳೂರಿನ ಪಣಂಬೂರು ಪೊಲೀಸ್‌ ಠಾಣೆಗೆ ಲಿಖೀತ ದೂರು ಸಲ್ಲಿಸಿದ್ದಾರೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?: ಅಸಲಿಗೆ ಈ ಠೇವಣಿ ಪ್ರಕರಣ ಬೆಳಕಿಗೆ ತಂದಿದ್ದು ವಿಜಯಾ ಬ್ಯಾಂಕಿನ ಬೆಂಗಳೂರಿನ ಕೊರಮಂಗಲ ಶಾಖೆ. ಈ ಶಾಖೆಯಲ್ಲಿರುವ ಕಳೆದ 2 ವರ್ಷಗಳಿಂದ ನಿಷ್ಕ್ರಿಯವಾಗಿರುವ ಷಾ ಎಕ್ಸ್‌ಪೋರ್ಟ್‌ರ್ಸ್‌ಹೆಸರಿನ ಖಾತೆಗೆ ಕೆಆರ್‌ಐಡಿಎಲ್‌ ಖಾತೆಯಿಂದ 50 ಲಕ್ಷ ರೂ. ವರ್ಗಾವಣೆಗೊಂಡಿದೆ. ಇದರಿಂದ ಅನು ಮಾನಗೊಂಡ ವಿಜಯಾ ಬ್ಯಾಂಕಿನ ಕೊರಮಂಗಲ ಶಾಖೆಯ ಅನಿಲ್‌ ಎಂಬು ವರು ಅ.19ಕ್ಕೆ ಕೆಆರ್‌ಐಡಿಎಲ್‌ ಕೇಂದ್ರ ಕಚೇರಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದ್ದಾರೆ. ಆಗ 55 ಕೋಟಿ ರೂ. ಠೇವಣಿಯಲ್ಲಿ ಅಕ್ರಮ ನಡೆದಿದೆ ಎಂದು ಗೊತ್ತಾಗಿದೆ.

Advertisement

ಅದು ಠೇವಣಿ ಅಲ್ಲ; ಚಾಲ್ತಿ ಖಾತೆ: ಕೆಆರ್‌ಐಡಿಎಲ್‌ ಸಂಸ್ಥೆ 55 ಕೋಟಿ ರೂ. ಠೇವಣಿ ಇಟ್ಟಿದ್ದು ಸಂಸ್ಥೆಯ ಹೆಸರಿನಲ್ಲಿರುವ”ಸ್ಥಿರ ಠೇವಣಿ ಖಾತೆ’ಗೆ. ಆ.24ಕ್ಕೆ 20 ಕೋಟಿ ರೂ. ಮತ್ತು ಆ.30ಕ್ಕೆ 35 ಕೋಟಿ ರೂ. ಸೇರಿ ಒಟ್ಟು 55 ಕೋಟಿ ರೂ. ಠೇವಣಿ ಇಡಲಾಗಿದೆ. ಇದಕ್ಕೆ ಆ.31ಕ್ಕೆ ಬ್ಯಾಂಕಿನವರು ಠೇವಣಿ ಖಾತರಿ ಬಾಂಡ್‌ ಸಹ ನೀಡಿದ್ದಾರೆ. ಸೆ.13ಕ್ಕೆ ಈ ಬಾಂಡ್‌ಗಳ ಮರು ದೃಢೀಕರಣ ಸಹ ಆಗಿದೆ. ಆದರೆ, 50 ಲಕ್ಷ ರೂ. ವಿಜಯಾ ಬ್ಯಾಂಕಿನ ಕೊರಮಂಗಲ ಶಾಖೆಗೆ ವರ್ಗಾವಣೆ ಆದಾಗ ಅನುಮಾನಗೊಂಡು ವಿಚಾರಿಸಿದಾಗ ಅಸಲಿಗೆ ಕೆಆರ್‌ಐಡಿಎಲ್‌ ಸಂಸ್ಥೆಯ ಹೆಸರಲ್ಲಿ ಇರುವುದು ಠೇವಣಿ ಖಾತೆ ಅಲ್ಲ, ಬದಲಾಗಿ ಚಾಲ್ತಿ ಖಾತೆ ಎಂಬ ವಿಷಯ ಬೆಳಕಿಗೆ ಬಂತು.

ಕಡತ ಸಿಎಂ ಕಚೇರಿಗೆ
ಠೇವಣಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಸಲ್ಲಿಸಿರುವ ಪ್ರಾಥಮಿಕ ತನಿಖಾ ವರದಿ ಆಧರಿಸಿ ತಪ್ಪು ಮಾಡಿರುವ ಶಂಕೆ ಇರುವ ಅಧಿಕಾರಿಗಳ ವಿರುದಟಛಿ ಕ್ರಮ ಕೈಗೊಳ್ಳುವ ಸಂಬಂಧ ಕಡತವನ್ನು ಸಿಎಂ ಕಚೇರಿಗೆ ಕಳಿಸಲಾಗಿದೆ. ಅಲ್ಲಿಂದ ಕಡತ ವಾಪಸ್‌ ಬಂದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಹೇಳಿದೆ.

– ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next