ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭೆ ಕ್ಷೇತ್ರದ ಶಾಸಕ ಮುನಿರತ್ನ ಅವರ, ವೈಯಾಲಿಕಾವಲ್ನಲ್ಲಿರುವ ಮನೆ ಎದುರು ಅವಧಿ ಮೀರಿದ ರಾಸಾಯನಿಕ ಸ್ಫೋಟಗೊಂಡು ವ್ಯಕ್ತಿ ಮೃತಪಟ್ಟ ಘಟನೆಯ ತನಿಖೆಯನ್ನು ವೈಯಾಲಿಕಾವಲ್ ಠಾಣೆ ಪೊಲೀಸರು ಚುರುಕುಗೊಳಿಸಿದ್ದು, ಸೋಮವಾರ ಪ್ರತ್ಯಕ್ಷದರ್ಶಿಗಳ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಆರ್ಯ ಎಂಬವರು ನೀಡಿರುವ ದೂರು ಆಧರಿಸಿ ಅಜಾಗರೂಕತೆ ಹಾಗೂ ಸ್ಫೋಟಕ ವಸ್ತುಗಳ ಬಳಕೆ ನಿರ್ಬಂಧ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆದರೆ, ಈ ಹಂತದಲ್ಲಿ ಪ್ರಕರಣದ ಆರೋಪಿಗಳನ್ನಾಗಿ ಯಾರನ್ನು ಪರಿಗಣಿಸಿಲ್ಲ. ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಪ್ರಕರಣದಲ್ಲಿ ಯಾರದ್ದಾದರೂ ಲೋಪವಿದೆಯೇ ಎಂಬ ವಿಚಾರ ಗೊತ್ತಾಗಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು. ಇದುವರೆಗಿನ ಪ್ರಾಥಮಿಕ ತನಿಖೆಯಲ್ಲಿ ಮಿಥೇಲ್ ಈಥೇನ್ ಕಿತೇನ್ ಪೆರೋಕ್ಸೈಡ್ (ಎಂಇಕೆಪಿ) ರಾಸಾಯನಿಕಗಳೇ ಸ್ಫೋಟಕ್ಕೆ ಕಾರಣ ಎಬುದು ಗೊತ್ತಾಗಿದೆ. ತಜ್ಞರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯ (ಎಫ್ಎಸ್‌ಎಲ್) ವರದಿ ಬಂದ ಬಳಿಕ ಮತ್ತಷ್ಟು ಖಚಿತತೆ ಸಿಗಲಿದೆ. ಆದಷ್ಟು ಬೇಗ ವರದಿ ನೀಡುವಂತೆ ಎಫ್ಎಸ್‌ಎಲ್ಗೆ ಮನವಿ ಮಾಡಲಾಗುತ್ತದೆ.
ಕ್ಯಾನ್‌ನಲ್ಲಿದ್ದ ರಾಸಾಯನಿಕದ ಅವಧಿ ಪೂರ್ಣಗೊಂಡಿತ್ತೇ ಅಥವಾ ಒತ್ತಡದಿಂದ ಸ್ಫೋಟಗೊಂಡಿತೇ ಎಂಬುದರ ಬಗ್ಗೆ ವರದಿ ಬಂದ ಬಳಿಕವೇ ಗೊತ್ತಾಗಲಿದೆ ಎಂದು ಅಧಿಕಾರಿ ಹೇಳಿದರು.
ಸ್ಫೋಟವನ್ನು ನೋಡಿದ ಪ್ರತ್ಯಕ್ಷದರ್ಶಿಗಳು, ಸ್ಥಳೀಯರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಜತೆಗೆ, ಮೃತ ವೆಂಕಟೇಶ್ ಸ್ವತ: ಕೆಮಿಕಲ್ ತುಂಬಿದ್ದ ಕ್ಯಾನ್ ಕೊಂಡೊಯ್ಯುತ್ತಿದ್ದರೇ ಅಥವಾ ಅವರ ಕೈಗೆ ಯಾರಾದರೂ ನೀಡಿದ್ದರೇ ಎಂಬುದು ಖಚಿತಪಟ್ಟಿಲ್ಲ. ರಾಸಾಯನಿಕ ತುಂಬಿದ್ದ ಕ್ಯಾನ್ ಎಲ್ಲಿತ್ತು ವೆಂಕಟೇಶ್ ಅದನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದರು ಎಂಬುದು ಗೊತ್ತಾಗಬೇಕಿದ್ದು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ಹೇಳಿದರು.
Advertisement
ವೈಯಾಲಿಕಾವಲ್ನ 11ನೇ ಕ್ರಾಸ್‌ನಲ್ಲಿರುವ ಶಾಸಕ ಮುನಿರತ್ನ ಅವರ ನಿವಾಸದ ಮುಂಭಾಗ ಭಾನುವಾರ ಬೆಳಗ್ಗೆ ರಾಸಾಯನಿಕ ತುಂಬಿದ್ದ ಕ್ಯಾನ್ ಸ್ಫೋಟಗೊಂಡು ಶಾಸಕರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವೆಂಕಟೇಶ್ (45) ಮೃತಪಟ್ಟಿದ್ದರು.
Related Articles
Advertisement
ಮೃತ ವೆಂಕಟೇಶ್ ಅವರ ಅಂತ್ಯಕ್ರಿಯೆ ಶ್ರೀರಾಮಪುರದ ರುದ್ರಭೂಮಿಯಲ್ಲಿ ಸೋಮವಾರ ನೆರವೇರಿದೆ. ಶಾಸಕ ಮುನಿರತ್ನ ಅವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.