Advertisement

ಸುಳ್ವಾಡಿ ಪ್ರಕರಣದ ತನಿಖೆ ಚುರುಕು

06:00 AM Dec 21, 2018 | Team Udayavani |

ಮರಾಜನಗರ/ಹನೂರು: ಸುಳ್ವಾಡಿ ಗ್ರಾಮದ ಕಿಚ್ಚಗುತ್ತಿ ಮಾರಮ್ಮನ ದೇವಾಲಯದ ಪ್ರಸಾದಕ್ಕೆ ಕ್ರಿಮಿನಾಶಕ ಬೆರೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು, ಡಿವೈಎಸ್ಪಿ ಪುಟ್ಟಮಾದಯ್ಯ ನೇತೃತ್ವದ ತಂಡ ಗುರುವಾರ ನಾಲ್ವರು ಆರೋಪಿಗಳ ಪೈಕಿ ಮೂವರನ್ನು ದೇವಾಲಯಕ್ಕೆ ಕರೆ ತಂದು ಸ್ಥಳದ ಮಹಜರು ನಡೆಸಿದರು.

Advertisement

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಬಳಿಕ, ನ್ಯಾಯಾಲಯ ಅವರನ್ನು ಡಿ.22ರವರೆಗೆ ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶಿಸಿತ್ತು. ಅದರಂತೆ ಆರೋಪಿಗಳನ್ನು ರಾಮಾಪುರ ಪೊಲೀಸ್‌ ಠಾಣೆಗೆ ಕರೆದೊಯ್ಯಲಾಗಿದ್ದು, ಪ್ರಮುಖ ಆರೋಪಿ ಇಮ್ಮಡಿ ಮಹದೇವ ಸ್ವಾಮಿಗೆ ಪ್ರತ್ಯೇಕ ಕೊಠಡಿ, ಮಹಿಳಾ ಆರೋಪಿ ಅಂಬಿಕಾಳಿಗೆ ಪ್ರತ್ಯೇಕ ಕೊಠಡಿ ಹಾಗೂ ಮಾದೇಶ, ದೊಡ್ಡಯ್ಯನನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿದೆ.

ಗುರುವಾರ ಬೆಳಗಿನ ಉಪಾಹಾರದ ಬಳಿಕ ಘಟನೆಗೆ ಸಂಬಂಧಿಸಿದಂತೆ ಮಧ್ಯಾಹ್ನದವರೆಗೂ ಪೊಲೀಸರು ಠಾಣೆಯಲ್ಲಿಯೇ ವಿಚಾರಣೆ ನಡೆಸಿದರು. ಬಳಿಕ, ಮಹದೇವಸ್ವಾಮಿಯನ್ನು ಠಾಣೆಯಲ್ಲಿಯೇ ಬಿಟ್ಟು ಉಳಿದ ಮೂವರು ಆರೋಪಿಗಳನ್ನು ದೇವಾಲಯಕ್ಕೆ ಕರೆದೊಯ್ದರು. ಅಂಬಿಕಾಳನ್ನು ವಾಹನದಲ್ಲಿಯೇ ಇರಿಸಿ, ಮಾದೇಶ್‌ ಮತ್ತು ದೊಡ್ಡಯ್ಯನನ್ನು ದೇವಾಲಯದ ಸಮೀಪಕ್ಕೆ ಕರೆ ತಂದು ಸ್ಥಳ ಪರಿಶೀಲನೆ ನಡೆಸಿದರು. ಪ್ರಸಾದಕ್ಕಾಗಿ ತಯಾರಿಸಲಾಗಿದ್ದ ರೈಸ್‌ಬಾತ್‌ಗೆ ಯಾವ ರೀತಿ ಮತ್ತು ಯಾವ ಪ್ರಮಾಣದಲ್ಲಿ ಕ್ರಿಮಿನಾಶಕ ಮಿಶ್ರಣ ಮಾಡಲಾಯಿತು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದರು.

ಚೆಕ್‌ ವಿತರಣೆ: ಈ ಮಧ್ಯೆ, ವಿಷಪ್ರಸಾದ ಸೇವನೆಯಿಂದ ಮೃತಪಟ್ಟ ದುಂಡಮ್ಮನ ಮನೆಗೆ ಭೇಟಿ ನೀಡಿದ ಶಾಸಕ ಆರ್‌.ನರೇಂದ್ರ, 5 ಲಕ್ಷ ರೂ.ಪರಿಹಾರದ ಚೆಕ್‌ ಹಾಗೂ ದಿನಬಳಕೆಯ ಆಹಾರ ಪದಾರ್ಥ ವಿತರಿಸಿದರು. ಮಲೆ ಮಹದೇಶ್ವರ ಬೆಟ್ಟದ ದಾಸೋಹ ಭವನದಲ್ಲಿ ದುಂಡಮ್ಮ ಕಾರ್ಯ ನಿರ್ವಸುತ್ತಿದ್ದರು. ಕುಟುಂಬಸ್ಥರು ಯಾರನ್ನು ಸೂಚಿಸುತ್ತಾರೋ ಅವರಿಗೆ ಅವರು ನಿರ್ವಹಿಸುತ್ತಿದ್ದ ಕೆಲಸ ನೀಡಲಾಗುವುದು ಎಂದು ಭರವಸೆ ನೀಡಿದರು. ಪ್ರಕರಣದಲ್ಲಿ ಅಸ್ವಸ್ಥರಾಗಿ ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 42 ಮಂದಿಯನ್ನು ಡಿಸಾcರ್ಜ್‌ ಮಾಡಲಾಗಿದ್ದು, ಇವರ ಆರೋಗ್ಯದ ಮೇಲ್ವಿಚಾರಣೆಗಾಗಿ 7 ಮಂದಿ ಹೆಚ್ಚುವರಿ ನುರಿತ ವೈದ್ಯರು, 1 ವೆಂಟಲೇಟರ್‌ಯುಕ್ತ ಆ್ಯಂಬುಲೆನ್ಸ್‌ ಸೇವೆ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ದೇವಾಲಯಕ್ಕೆ ಬೀಗ: ಈ ಮಧ್ಯೆ, ಘಟನೆ ನಡೆದ ಮಾರನೆಯ ದಿನದಿಂದ ದೇವಾಲಯದ ಬಾಗಿಲಿಗೆ ಬೀಗ ಹಾಕಲಾಗಿದ್ದು, ಕಿಚ್ಚುಗುತ್ತು ಮಾರಮ್ಮ ದೇವಾಲಯಲ್ಲೀಗ ದೇವಿಯ ದರ್ಶನವಿಲ್ಲ. ಡಿ.16ರಿಂದ ದೇವಾಲಯದಲ್ಲಿ ಪೂಜಾ ಕೈಂಕರ್ಯಗಳು ನಡೆದಿಲ್ಲ. ಘಟನೆ ನಡೆದಾಗಿನಿಂದ ಭಕ್ತರ ಸಂಖ್ಯೆ ಕಡಿಮೆಯಾಗಿದ್ದು, ಭೇಟಿ ನೀಡಿದವರು ದೇವಾಲಯದ ಬಾಗಿಲು ಹಾಕಿರುವುದರಿಂದ ಹೊರಗೇ ಕೈಮುಗಿದು ಮರಳುತ್ತಿದ್ದಾರೆ.

Advertisement

ನಾವು 5 ಜನ ಹೆಣ್ಣು ಮಕ್ಕಳಿದ್ದು, ಇದೀಗ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದೇವೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿಸಬೇಕು.
– ಪ್ರೇಮ, ಮೃತ ದುಂಡಮ್ಮನವರ ದ್ವಿತೀಯ ಪುತ್ರಿ.

Advertisement

Udayavani is now on Telegram. Click here to join our channel and stay updated with the latest news.

Next