Advertisement

ಕೆರೆಗಳ ಅನಾಹುತ ಮಾನವ ನಿರ್ಮಿತ!

12:39 AM Jan 02, 2020 | Lakshmi GovindaRaj |

ಬೆಂಗಳೂರು: ಕೆರೆಯ ನೀರನ್ನು ಕಡಿಮೆ ಮಾಡುವ ಉದ್ದೇಶದಿಂದ ತೆಗೆದುಕೊಂಡ ಕ್ರಮಗಳೇ ಹುಳಿಮಾವು ಕೆರೆಯ ಅನಾಹುತಕ್ಕೆ ಕಾರಣವಾಗಿರುವ ಸಾಧ್ಯತೆ ಇದೆ ಮತ್ತು ಇದು ಮಾನವ ಸೃಷ್ಟಿತ ಅನಾಹುತವಾಗಿದೆ ಎಂದು ತಾಂತ್ರಿಕ ಸಮಿತಿ ತಿಳಿಸಿದೆ.

Advertisement

ಹುಳಿಮಾವು, ಹೊಸಕೆರೆಹಳ್ಳಿ ಹಾಗೂ ದೊಡ್ಡಬಿದರಕಲ್ಲು ಕೆರೆಗಳ ಅಧ್ಯಯನಕ್ಕೆ ಸರ್ಕಾರ ನೇಮಿಸಿದ್ದ ಭಾರತೀಯ ವಿಜ್ಞಾನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಡಾ.ಬಿ.ಆರ್‌.ಶ್ರೀನಿವಾಸ ಮೂರ್ತಿ ಅವರ ನೇತೃತ್ವದ ತ್ರಿಸದಸ್ಯರ ತಾಂತ್ರಿಕ ಸಮಿತಿ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದೆ. ಹುಳಿಮಾವು ಕೆರೆಯ ಪ್ರದೇಶ ಒತ್ತುವರಿಯಾಗಿದೆ. ಕೆರೆಯ ಕೆಳಭಾಗದ ಪ್ರದೇಶದಲ್ಲಿರುವ ಮನೆಗಳ ರಕ್ಷಣೆ ಮಾಡುವ ನಿಟ್ಟಿನಲ್ಲಿ ಕೆರೆಯ ಏರಿ ಪ್ರದೇಶವನ್ನು ಎತ್ತರಿಸಲಾಗಿದೆ.

ಸರಾಗವಾಗಿ ನೀರು ಹರಿದು ಹೋಗಲು ತಗ್ಗು ಪ್ರದೇಶಗಳಲ್ಲಿ ಅವಕಾಶ ನೀಡಿಲ್ಲ. ಇನ್ನು ರಾಜಕಾಲುವೆ ಪ್ರದೇಶದಲ್ಲೂ ಒತ್ತುವರಿ ಮಾಡಿಕೊಳ್ಳಲಾಗಿದೆ. ಸರಾಗವಾಗಿ ನೀರು ಹರಿದು ಹೋಗಲು ಅವಕಾಶ ನೀಡದೆ, ಮತ್ತೂಂದು ಪ್ರದೇಶದಲ್ಲಿ ಅನಗತ್ಯವಾಗಿ ನೀರು ಹರಿಸಲು ಮುಂದಾಗಿದ್ದೇ ಅನಾಹುತಕ್ಕೆ ಮುಖ್ಯ ಕಾರಣ ಎಂದು ಸಮಿತಿ ವರದಿಯಲ್ಲಿ ವಿಶ್ಲೇಷಣೆ ಮಾಡಿದೆ.

ಮಾನವ ಸೃಷ್ಟಿಸಿದ ಅನಾಹುತ: ಹುಳಿಮಾವು ಕೆರೆಯ ಅನಾಹುತ ಮಾನವರೇ ಸೃಷ್ಟಿಸಿದ್ದಾಗಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಕೆರೆಯ ನೀರು ಸರಾಗವಾಗಿ ಹೋಗುವ ಎರಡೂ ಮಾರ್ಗವನ್ನು ತಡೆಹಿಡಿಯಲಾಗಿದೆ. ಎಲ್ಲ ಭಾಗದಲ್ಲೂ ಒತ್ತುವರಿಯಾಗಿರುವುದರಿಂದ ನೀರು ಮನೆಗಳಿಗೆ ನುಗ್ಗಿದೆ ಎಂದು ತಿಳಿಸಲಾಗಿದೆ. ಕೆರೆಗಳ ಸಂರಕ್ಷಣೆ ಹಾಗೂ ಅನಾಹುತಗಳನ್ನು ತಡೆಯುವ ನಿಟ್ಟಿನಲ್ಲಿ ನಿರಂತರವಾಗಿ ಸಮಿತಿಗಳು ಎಚ್ಚರಿಕೆ ನೀಡಿದರೂ ಅವುಗಳನ್ನು ಅಳವಡಿಸಿಕೊಳ್ಳುವಲ್ಲಿ ಬಿಬಿಎಂಪಿ ಮತ್ತು ಬಿಡಿಎ ವಿಫ‌ಲವಾಗಿವೆ ಎಂದು ಸಮಿತಿ ದೂರಿದೆ.

ದೊಡ್ಡಬಿದರಕಲ್ಲು: ದೊಡ್ಡಬಿದರಕಲ್ಲು ಕೆರೆಯ ನೀರು ಹರಿಯವ ಮಾರ್ಗದಲ್ಲಿ ಹಲವು ವರ್ಷಗಳ ಹಿಂದೆ ಪೈಪ್‌ ಅಳವಡಿಸಲಾಗಿದ್ದು, ಬಿಬಿಎಂಪಿ ಈ ಪೈಪ್‌ಗ್ಳ ದುರಸ್ತಿ ಮಾಡುವುದಕ್ಕೆ ಅಥವಾ ಪುನಃ ಅಳವಡಿಸುವ ಸಂದರ್ಭದಲ್ಲಿ ಏರಿ ಒಡೆದಿರುವ ಸಾಧ್ಯತೆ ಇದೆ. ಮುಖ್ಯವಾಗಿ ಈ ಭಾಗದಲ್ಲಿನ ರಾಜಕಾಲುವೆಗಳ ವಿಸ್ತೀರ್ಣ ತೀರ ಕಡಿಮೆ ಇದೆ. ಉದ್ದೇಶಪೂರ್ವಕವಾಗಿ ರಾಜಕಾಲುವೆ ಮಾರ್ಗ ಕಡಿಮೆ ಮಾಡಲಾಗಿದೆ ಮತ್ತು ಈ ಭಾಗದಲ್ಲೂ ಒತ್ತುವರಿಯಾಗಿದೆ ಎಂದು ವರದಿ ಹೇಳಿದೆ.

Advertisement

ಹೊಸಕೆರೆಹಳ್ಳಿ ಕೆರೆ: ಈ ಭಾಗದಲ್ಲಿ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿ ರುವು ದರಿಂದ ಹಾಗೂ ಕೆರೆಯ ಹೆಚ್ಚುವರಿ ನೀರು ಸರಾಗವಾಗಿ ಹರಿದುಹೋಗಲು ಅವಕಾಶ ನೀಡದೆ ಇರುವುದು ಏರಿ ಒಡೆಯಲು ಕಾರಣವಾಗಿರುವ ಸಾಧ್ಯತೆ ಇದೆ. ಈ ಕೆರೆಯ ಹೊರ ಹರಿವಿನ ಪ್ರದೇಶ ಅಥವಾ ಕಾಲುವೆ ಮಾರ್ಗ ಪತ್ತೆಯಾಗಿಲ್ಲ ಎಂದು ವರದಿ ಉಲ್ಲೇಖ ಮಾಡಿದೆ. ಸಮಿತಿಯು ದೊಡ್ಡಬಿದರಕಲ್ಲು, ಹೊಸಕೆರೆಹಳ್ಳಿ ಕೆರೆ ಹಾಗೂ ಹುಳಿಮಾವು ಕೆರೆಗಳ ಸ್ಥಳ ಪರಿಶೀಲನೆ ನಡೆಸಿದ್ದು, ಈ ಕೆರೆಗಳ ನ್ಯೂನತೆಯ ಬಗ್ಗೆ ಮಧ್ಯಂತರ ವರದಿಯನ್ನು ಸರ್ಕಾರಕ್ಕೆ ನೀಡಿದೆ. ಸಂಪೂರ್ಣ ವರದಿ ನೀಡುವುದಕ್ಕೆ ಮತ್ತಷ್ಟು ಕಾಲಾವಕಾಶ ಕೋರಿದೆ.

ಮಿತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಮಿತಿ: ಸಮಿತಿಯು ತಾಂತ್ರಿಕ ವಿಷಯಗಳನ್ನಷ್ಟೇ ಸರ್ಕಾರದ ಗಮನಕ್ಕೆ ತರುತ್ತಿದೆ. ಇದರ ಹೊರತಾಗಿ ಯಾವುದೇ ತನಿಖೆ ಮಾಡಿಲ್ಲ. ಅಲ್ಲದೆ, ಸಮಿತಿ ನೀಡುವ ವರದಿಯ ಆಧಾರದ ಮೇಲೆ ಯಾರ ಮೇಲಾದರೂ ಕ್ರಮ ತೆಗೆದುಕೊಳ್ಳುವ ಸಾಧ್ಯತೆಯೂ ಕಡಿಮೆ ಇದೆ. ಮುಖ್ಯವಾಗಿ ಸಮಿತಿಯು ತನ್ನ ವರದಿಯಲ್ಲಿ ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನೇ ದಾಖಲಿಸಿಲ್ಲ. ಈ ಎಲ್ಲ ಹಿನ್ನೆಲೆಯಿಂದ ಸಮಿತಿ ಸಂಪೂರ್ಣ ವರದಿ ಮಂಡನೆ ಮಾಡಿದ ನಂತರ ಸರ್ಕಾರ ಯಾವ ಸುಧಾರಣಾ ಕ್ರಮ ತೆಗೆದುಕೊಳ್ಳಲಿದೆ ಎಂಬ ಕುತೂಹಲ ಉಂಟಾಗಿದೆ. ಉಳಿದ ವರದಿಗಳಂತೆ ಈ ವರದಿಯೂ ಮೂಲೆ ಸೇರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next