Advertisement

ಸಮ್ಮಿಶ್ರ ಸರ್ಕಾರದಲ್ಲಿ ಆಂತರಿಕ ತಿಕ್ಕಾಟ ಶುರು

06:00 AM Dec 28, 2018 | |

ಬೆಂಗಳೂರು: ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆಯುತ್ತಿರುವಂತೆ ಆಂತರಿಕ ತಿಕ್ಕಾಟ ಆರಂಭವಾಗಿದ್ದು, ನಿಗಮ ಮಂಡಳಿ ನೇಮಕದ ಬಗ್ಗೆ ಕ್ಯಾತೆ ತೆಗೆದಿರುವ ಜೆಡಿಎಸ್‌ ಲೋಕಸಭೆ ಚುನಾವಣೆಗೂ ತಾವು ಬಯಸಿರುವ 12 ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಕೇಳಿರುವುದು ಕಾಂಗ್ರೆಸ್‌ ಅಸಮಾಧಾನಕ್ಕೆ ಕಾರಣವಾಗಿದೆ.

Advertisement

ಲೋಕಸಭಾ ಚುನಾವಣೆಗೆ ಮಹಾಮೈತ್ರಿ ಮಾಡಿಕೊಳ್ಳಲು ರಾಹುಲ್‌ಗಾಂಧಿ ರಾಷ್ಟ್ರಮಟ್ಟದಲ್ಲಿ ಪ್ರಯತ್ನ ನಡೆಸುತ್ತಿರುವ ಬೆನ್ನಲ್ಲೇ ರಾಜ್ಯ ಸಮ್ಮಿಶ್ರ ಸರ್ಕಾರದ ದೋಸ್ತಿ ಪಕ್ಷಗಳು ಜಂಟಿಯಾಗಿ ಸ್ಪರ್ಧೆ ಮಾಡಬೇಕೆ ಅಥವಾ ಬೇಡವೇ ಎನ್ನುವ ಪ್ರಶ್ನೆ ಎರಡೂ ಪಕ್ಷಗಳ ನಾಯಕರಲ್ಲಿ ಮೂಡಿದಂತೆ ಕಾಣುತ್ತಿದೆ.

ಜೆಡಿಎಸ್‌ ಸರ್ಕಾರ ರಚನೆ ಹಾಗೂ ಮುಖ್ಯಮಂತ್ರಿಗೆ ಮಾತ್ರ ಷರತ್ತು ರಹಿತ ಬೆಂಬಲ ಸೂಚಿಸಿದ್ದು, ಬೇರೆ ವಿಷಯಗಳಲ್ಲಿ ಷರತ್ತುಗಳು ಅನ್ವಯ ಎಂಬ ಸಂದೇಶ ರವಾನಿಸಲು ರಾಜ್ಯ ಕಾಂಗ್ರೆಸ್‌ ನಾಯಕರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಶಕ್ತಿ ಯಾವ ಕ್ಷೇತ್ರದಲ್ಲಿ ಎಷ್ಟಿದೆ. ಯಾವ ಕ್ಷೇತ್ರದಲ್ಲಿ ಸದ್ಯದ ಶಾಸಕರ ಬಲಾಬಲ, ಹಿಂದಿನ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ವೈಯಕ್ತಿಕವಾಗಿ ಪಡೆದಿರುವ ಮತಗಳ ಸಂಖ್ಯೆ ಹಾಗೂ ಆಯಾ ಕ್ಷೇತ್ರದಲ್ಲಿ ಗೆಲ್ಲಬಹುದಾದ ಅಭ್ಯರ್ಥಿಗಳ ಸಾಮರ್ಥ್ಯ ಕುರಿತು ಆಂತರಿಕ ಸಮೀಕ್ಷೆ ನಡೆಸಿಯೇ ತೀರ್ಮಾನ ಆಗಬೇಕು ಎನ್ನುವ ವಾದ ಮಂಡಿಸಲು ಕಾಂಗ್ರೆಸ್‌ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.

ವಿಶೇಷವಾಗಿ ದಕ್ಷಿಣ ಕರ್ನಾಟಕ ಭಾಗದಲ್ಲಿ ಜೆಡಿಎಸ್‌,  ಕಾಂಗ್ರೆಸ್‌ ಸಂಸದರಿರುವ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದೆ. ಆದರೆ, ಆ ಕ್ಷೇತ್ರಗಳಲ್ಲಿ ಈಗಾಗಲೇ ಹಾಲಿ ಸಂಸದರಿದ್ದು, ಕಾಂಗ್ರೆಸ್‌ ಪಕ್ಷ ಸ್ವತಂತ್ರವಾಗಿ ಗೆಲ್ಲುವ ಸಾಮರ್ಥ್ಯ ಹೊಂದಿರುವುದರಿಂದ ಪಕ್ಷ ಅನಾಯಾಸವಾಗಿ ಗೆಲ್ಲುವ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟು ಜೆಡಿಎಸ್‌ ಅಸ್ತಿತ್ವ ಇಲ್ಲದಿರುವ ಉತ್ತರ ಕರ್ನಾಟಕ ಭಾಗದಲ್ಲಿಯೇ ಕಾಂಗ್ರೆಸ್‌ಗೆ ಹೆಚ್ಚಿನ ಸೀಟುಗಳನ್ನು ಹಂಚಿಕೆ ಮಾಡಿದರೆ, ಆ ಭಾಗದಲ್ಲಿ ಬಿಜೆಪಿಯ ಪ್ರಬಲ ಪೈಪೋಟಿ ಎದುರಿಸಬೇಕಾಗುವುದರಿಂದ ಕಾಂಗ್ರೆಸ್‌ಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್‌ ನಾಯಕರು ಲೆಕ್ಕಾಚಾರ ಹಾಕಿದ್ದಾರೆ ಎನ್ನಲಾಗಿದೆ.

Advertisement

ಅಲ್ಲದೇ ಮೈಸೂರು, ಬೆಂಗಳೂರು ಉತ್ತರ ಕ್ಷೇತ್ರಗಳ ಮೇಲೂ  ಜೆಡಿಎಸ್‌ ಕಣ್ಣಿಟ್ಟಿದ್ದು, ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪ್ರಬಲವಾಗಿದೆ.  ಆ ಕ್ಷೇತ್ರಗಳನ್ನೂ ಜೆಡಿಎಸ್‌ಗೆ ನೀಡಿದರೆ ಕಾಂಗ್ರೆಸ್‌  ಎಲ್ಲದಕ್ಕೂ ಶರಣಾದಂತೆ ಆಗುತ್ತದೆ ಎಂಬ ವಾದ ಕಾಂಗ್ರೆಸ್‌ ನಾಯಕರದ್ದಾಗಿದೆ. ಈಗಾಗಲೇ ಮಂಡ್ಯ, ಹಾಸನ ಜೊತೆಗೆ ಶಿವಮೊಗ್ಗ ಕ್ಷೇತ್ರವನ್ನೂ ಜೆಡಿಎಸ್‌ ತನ್ನದೇ ಎಂದು ಬಿಂಬಿಸಿಕೊಂಡಿದ್ದು, ಆ ಕ್ಷೇತ್ರಗಳಲ್ಲಿ ಈಗಾಗಲೇ ಕಾಂಗ್ರೆಸ್‌ ಪಕ್ಷದ ಅಸ್ಥಿತ್ವಕ್ಕಾಗಿ ಸ್ಥಳೀಯ ನಾಯಕರು ಪರದಾಡುವಂತಾಗಿದೆ ಎಂಬ ಮಾತುಗಳು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿವೆ.

ಉತ್ತರ ಕರ್ನಾಟಕ ಭಾಗದಲ್ಲಿಯೂ ಜೆಡಿಎಸ್‌ಗೆ ಒಂದು ಅಥವಾ ಎರಡು ಸ್ಥಾನಗಳನ್ನು ಬಿಟ್ಟು ಕೊಡುವ ಬಗ್ಗೆಯೂ ಲೆಕ್ಕಾಚಾರ ನಡೆಯುತ್ತಿದ್ದು, ವಿಜಯಪುರ ಅಥವಾ ಬೀದರ್‌ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟು ಕೊಡುವ ಬಗ್ಗೆ  ಲೆಕ್ಕಾಚಾರ ನಡೆಯುತ್ತಿದೆ ಎನ್ನಲಾಗುತ್ತಿದೆ. ಒಂದು ವೇಳೆ, ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್‌ ಜೊತೆಗೆ ಮಹಾ ಮೈತ್ರಿ ಏರ್ಪಟ್ಟರೆ, ಬಿಎಸ್‌ಪಿ ಕೂಡ ಒಂದು ಕ್ಷೇತ್ರ ಬಿಟ್ಟು ಕೊಡುವಂತೆ ಕೇಳುವ ಸಾಧ್ಯತೆ ಇದ್ದು, ಅದೂ ಕೂಡ ಕಾಂಗ್ರೆಸ್‌ ಹಾಲಿ ಸಂಸದರಿರುವ ಚಾಮರಾಜನಗರ ಕ್ಷೇತ್ರವನ್ನು ಬಿಟ್ಟುಕೊಡುವಂತೆ ಕೇಳುವ ಸಾಧ್ಯತೆ ಇದೆ.

ಈ ಹಿನ್ನೆಲೆಯಲ್ಲಿ ಕ್ಷೇತ್ರ ಹಂಚಿಕೆ ಕುರಿತಂತೆ ಸಂಕ್ರಾಂತಿ ನಂತರ ಜೆಡಿಎಸ್‌ ನಾಯಕರ ಜೊತೆಗೆ ಅಧಿಕೃತ ಮಾತುಕತೆ ನಡೆಸಲು  ಕಾಂಗ್ರೆಸ್‌ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದ್ದು, ಯಾವುದೇ ಕಾರಣಕ್ಕೂ ಸೀಟು ಹಂಚಿಕೆಯಲ್ಲಿ ಜೆಡಿಎಸ್‌ ನಾಯಕರು ಹೇಳಿದಂತೆ ಒಪ್ಪಿಕೊಳ್ಳಲು ರಾಜ್ಯ ಕಾಂಗ್ರೆಸ್‌ ನಾಯಕರು ಸಿದ್ಧರಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ.

ಲೋಕಸಭಾ ಕ್ಷೇತ್ರಗಳ ಸೀಟು ಹಂಚಿಕೆ ಕುರಿತಂತೆ ಜೆಡಿಎಸ್‌ ಜತೆ  ಇನ್ನೂ ಅಧಿಕೃತ ಮಾತುಕತೆ ಆರಂಭವಾಗಿಲ್ಲ. ಹೀಗಾಗಿ ಯಾರಿಗೆ ಎಷ್ಟು ಸೀಟು ಎಂದು ಈಗಲೇ ಹೇಳಲು ಆಗುವುದಿಲ್ಲ. ಈ ಕುರಿತು ಮಾತುಕತೆ ನಡೆಸಿ ಜೆಡಿಎಸ್‌ ಜತೆ  ಸಮನ್ವಯತೆಯಿಂದ ತೀರ್ಮಾನ ಮಾಡುತ್ತೇವೆ.
ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next