ಬೆಳಗಾವಿ: ಸಚಿವ ಸಂಪುಟ ವಿಸ್ತರಣೆ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊದಿಗೆ ಚರ್ಚಿಸುತ್ತೇನೆ. ಆದರೆ ನಾನು ಏನು ಸಂದೇಶ ತಂದಿದ್ದೇನೆ ಎನ್ನುವುದನ್ನು ಬಹಿರಂಗವಾಗಿ ಹೇಳಲಾಗುವುದಿಲ್ಲ. ಅದನ್ನು ಆಂತರಿಕವಾಗಿ ಚರ್ಚೆ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.
ಬೆಳಗಾವಿಯಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಪಕ್ಷದ ಸಂಘಟನೆ ಹಾಗೂ ಇತ್ತೀಚಿನ ಬೆಳವಣಿಗೆಗಳ ಕುರಿತು ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.
ಸಚಿವ ಸಂಪುಟ ವಿಸ್ತರಣೆ ವಿಷಯ ಪಕ್ಷದ ಆಂತರಿಕ ವಿಷಯ. ಇದನ್ನು ಬಹಿರಂಗವಾಗಿ ಹೇಳಲು ಆಗುವುದಿಲ್ಲ ಎಂದು ಅರುಣ್ ಸಿಂಗ್ ಹೇಳಿದರು.
ಇದನ್ನೂ ಓದಿ: ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆಯನ್ನು ಡಿ.9ಕ್ಕೆ ಮುಂದೂಡಿದ ನ್ಯಾಯಾಲಯ
ಕರ್ನಾಟಕದ ಪ್ರಭಾರಿಯಾಗಿ ಇದೇ ಮೊದಲಿಗೆ ಭೇಟಿ ನೀಡಿದ್ದೇನೆ. ಈ ರಾಜ್ಯದ ಪಕ್ಷದ ಉಸ್ತುವಾರಿ ಆಗಿರುವುದು ನನ್ನ ಸೌಭಾಗ್ಯ. ಪಕ್ಷ ಬಲವರ್ಧನೆ, ರೈತರಿಗಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾಡಿರುವ ಯೋಜನೆಗಳನ್ನು ತಿಳಿಸಿ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಸದೃಢಗೊಳಿಸಲಾಗುವುದು. ಇದಕ್ಕಾಗಿ ರಾಜ್ಯದಾದ್ಯಂತ ಪ್ರವಾಸ ಮಾಡುತ್ತೇನೆ ಎಂದರು.
ದಕ್ಷಿಣ ಭಾರತದಲ್ಲಿ ಕರ್ನಾಟಕವು ಪಕ್ಷಕ್ಕೆ ಮಹತ್ವಪೂರ್ಣವಾದ ಸ್ಥಳವಾಗಿದೆ. ಇಲ್ಲಿ ಬದ್ಧತೆಯುಳ್ಳ ಕಾರ್ಯಕರ್ತರು ಇದ್ದಾರೆ. ಇಲ್ಲಿ ಪಕ್ಷ ಬಲವರ್ಧನೆ ಮಾಡಿದರೆ ದಕ್ಷಿಣ ಭಾರತದ ಇತರ ರಾಜ್ಯಗಳಲ್ಲೂ ಅಧಿಕಾರ ಪಡೆಯುವುದು ಸುಲಭವಾಗಲಿದೆ ಎಂದರು.
ಇದನ್ನೂ ಓದಿ: ಅನಾರೋಗ್ಯಕ್ಕೆ ಕುಗ್ಗದೆ ಕೃಷಿಯಲ್ಲಿ ಬದುಕು ಬದಲಿಸಿಕೊಂಡ ಸಾಧಕ