Advertisement

ಉದ್ಘಾಟನೆಗೆ ತೋರಿದ ಆಸಕ್ತಿ ಬಳಕೆಗಿಲ್ಲ!

09:20 AM Jul 23, 2019 | Suhan S |

ಹುಬ್ಬಳ್ಳಿ: ರೈತರ ಹಾಗೂ ವ್ಯಾಪಾರಿಗಳ ಅನುಕೂಲಕ್ಕಾಗಿ ಇಲ್ಲಿನ ಎಪಿಎಂಸಿ ಆವರಣದಲ್ಲಿ ಗೋದಾಮುಗಳನ್ನು ನಿರ್ಮಿಸಲಾಗಿದೆ. ಆದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದ ಪರಿಣಾಮ ಉದ್ಘಾಟನೆಗೊಂಡು ಮೂರು ವರ್ಷ ಕಳೆಯುತ್ತಿದ್ದರೂ ಸದ್ಬಳಕೆಯಾಗುತ್ತಿಲ್ಲ.

Advertisement

ರೈತರು ಬೆಳೆದ ಬೆಳೆಯನ್ನು ದಾಸ್ತಾನು ಮಾಡಿ ಉತ್ತಮ ಬೆಲೆ ಬಂದಾಗ ಮಾರಾಟ ಮಾಡುವುದು ಹಾಗೂ ರೈತರಿಗೆ ಆರ್ಥಿಕ ಸದೃಢತೆ ತಂದುಕೊಡುವ ನಿಟ್ಟಿನಲ್ಲಿ ಇಲ್ಲಿನ ಅಮರಗೋಳ ಎಪಿಎಂಸಿ ಆವರಣದಲ್ಲಿ ಎರಡು ವಿಶಾಲವಾದ ಗೋದಾಮುಗಳನ್ನು ನಿರ್ಮಿಸಲಾಗಿದೆ. ಕೇಂದ್ರ ಸರಕಾರದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ಗೋದಾಮುಗಳು ತಲೆಯೆತ್ತಿವೆ. 2016ರಲ್ಲಿ ಅದ್ಧೂರಿಯಾಗಿ ಉದ್ಘಾಟನೆ ಕೂಡ ಮಾಡಲಾಗಿತ್ತು. ನಿರ್ಮಾಣ ಹಾಗೂ ಉದ್ಘಾಟನೆಗೆ ತೋರಿದ ಆಸಕ್ತಿ ಸದ್ಭಳಕೆ ಮಾಡುಕೊಳ್ಳುವಲ್ಲಿ ಅಧಿಕಾರಿಗಳ ಹಾಗೂ ಸ್ಥಳೀಯ ಜನಪ್ರತಿನಿಧಿಗಳಲ್ಲಿ ಇಲ್ಲದಿರುವ ಪರಿಣಾಮ ಕೋಟ್ಯಂತರ ರೂ. ವೆಚ್ಚ ಮಾಡಿದ ಯೋಜನೆ ಸಾಕಾರಗೊಳ್ಳದಂತಾಗಿದೆ.

ಗೋದಾಮುಗಳ ನಿರ್ವಹಣೆಯನ್ನು ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮಕ್ಕೆ ವಹಿಸಲಾಗಿದೆ. ಸುಮಾರು 6350 ಮೆಟ್ರಿಕ್‌ ಟನ್‌ ಸಾಮರ್ಥ್ಯದ 49 ಸಾವಿರ ಚದರ ಅಡಿ ವಿಸ್ತೀರ್ಣದ ಎರಡು ಗೋದಾಮುಗಳು, ಕಚೇರಿ, ಪ್ರಯೋಗಾಲಯ, ಕ್ಯಾಂಟೀನ್‌, ಉಗ್ರಾಣ, ಶೌಚಾಲಯ ಸೇರಿದಂತೆ ಇತರೆ ಎಲ್ಲ ಸೌಲಭ್ಯಗಳಿವೆ.

ಖಾಲಿಯಿರುವ ಗೋದಾಮುಗಳನ್ನು ಬಾಡಿಗೆ ಕೊಡುವ ನಿಟ್ಟಿನಲ್ಲಿ ನಿಗಮದಿಂದ ಸಾಕಷ್ಟು ಪ್ರಯತ್ನ ನಡೆದಿದೆ. ಕೆಲ ಸಂಸ್ಥೆಯವರು ನೋಡಿಕೊಂಡು ಹೋಗಿದ್ದಾರೆ. ಆದರೆ ಯಾರೂ ಮುಂದೆ ಬರುತ್ತಿಲ್ಲ. ಗೋದಾಮುಗಳು ದೊಡ್ಡದಾಗಿವೆ ಎನ್ನುವ ಕಾರಣಕ್ಕಾಗಿಯೋ ಅಥವಾ ಬಾಡಿಗೆ ಹೆಚ್ಚಾಗುತ್ತಿದೆ ಎನ್ನುವ ಕಾರಣಕ್ಕಾಗಿ ಹಿಂದೇಟು ಹಾಕುತ್ತಿದ್ದಾರೋ ಗೊತ್ತಾಗುತ್ತಿಲ್ಲ.

ಹೆಸರು ಹೇಳಲು ಇಚ್ಛಿಸದ ನಿಗಮದ ಅಧಿಕಾರಿರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಗೋದಾಮುಗಳನ್ನು ನಿರ್ಮಿಸಿರುವುದು ಪ್ರಮುಖವಾಗಿ ರೈತರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ. ಆದರೆ ಉದ್ಘಾಟನೆಯಾಗಿ ಮೂರು ವರ್ಷ ಕಳೆದರೂ ಸದ್ಬಳಕೆಯಾಗುವುದಿರುವುದು ವಿಪರ್ಯಾಸ. ಈ ಕುರಿತು ನಿಗಮದ ಅಧಿಕಾರಿಗಳು ಕೂಡಲೇ ನಿರ್ಧಾರ ಕೈಗೊಳ್ಳಬೇಕು. •ರಘುನಾಥಗೌಡ ಕೆಂಪಲಿಂಗನಗೌಡರ, ಎಪಿಎಂಸಿ ನಿರ್ದೇಶಕ
ಶೀಥಲೀಕರಣಘಟಕಕ್ಕೆ ಚಿಂತನೆ:

ಖಾಲಿಯಿರುವ ಈ ಗೋದಾಮುಗಳ ಮುಂಭಾಗದಲ್ಲಿನ 2000 ಮೆಟ್ರಿಕ್‌ ಟನ್‌ ಸಾಮರ್ಥ್ಯದ ಶೀಥಲೀಕರಣ ಗೋದಾಮಿಗೆ ಸಾಕಷ್ಟು ಬೇಡಿಕೆಯಿದೆ. ಖಾಸಗಿ ಗೋದಾಮಿಗಿಂತ ಕಡಿಮೆ ದರವಿರುವ ಕಾರಣಕ್ಕೆ ಕೆಲವು ಸೀಸನ್‌ ಸಂದರ್ಭದಲ್ಲಿ 5-6 ಸಾವಿರ ಮೆಟ್ರಿಕ್‌ ಟನ್‌ವರೆಗೂ ಬೇಡಿಕೆಯಿರುತ್ತದೆ. ರೈತರ ಹಾಗೂ ವ್ಯಾಪಾರಿಗಳ ಬೇಡಿಕೆಯನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಕಾರಣಕ್ಕೆ ಖಾಲಿಯಿರುವ ಗೋದಾಮುಗಳನ್ನು ಶೀಥಲೀಕರಣ ಘಟಕವನ್ನಾಗಿ ಪರಿವರ್ತಿಸುವ ಚಿಂತನೆಯಿದೆ. ಗೋದಾಮಿಗೆ ಕೇಂದ್ರ ಸರಕಾರದ ಅನುದಾನವಿದ್ದು ಕೇಂದ್ರದ ಅನುಮತಿ ಬೇಕಾಗುವುದರಿಂದ ಸದ್ಯಕ್ಕೆ ಸಾಧ್ಯವಿಲ್ಲ ಎನ್ನಲಾಗಿದೆ.
ಗೋದಾಮುಗಳಿಗೆ ಬೇಡಿಕೆ: ಗೋದಾಮುಗಳಿಗೆ ಸಾಕಷ್ಟು ಬೇಡಿಕೆಯಿದೆ. ಸರಕಾರ ಬೆಂಬಲ ಬೆಲೆಯಡಿ ಬೆಳೆ ಖರೀದಿ ಮಾಡುವ ಸಂದರ್ಭದಲ್ಲಿ ಹಾಗೂ ಸೀಸನ್‌ಗಳಲ್ಲಿ ಬೆಳೆ ಸಂಗ್ರಹಿಸಲು ಗೋದಾಮುಗಳು ಸಿಗುವುದಿಲ್ಲ. ಇಂತಹ ಪರಿಸ್ಥಿತಿ ಇರುವಾಗ ಇದ್ದ ಗೋದಾಮುಗಳು ಬಳಕೆಯಾಗುತ್ತಿಲ್ಲ ಎನ್ನುವುದು ವ್ಯಾಪಾರಸ್ಥರ ಹಾಗೂ ರೈತರ ಅಳಲು. ರೈತರ ಅನುಕೂಲಕ್ಕಾಗಿ ಪಿಪಿಪಿ ಮಾದರಿಯಲ್ಲಿ ಸರಕಾರ ಗೋದಾಮುಗಳನ್ನು ಪಡೆದು ರೈತರಿಗೆ ನೀಡುವ ನಿರ್ಧಾರ ಮಾಡಿದೆ. ಖಾಲಿಯಿರುವ ಗೋದಾಮುಗಳ ಸದ್ಬಳಕೆಗೆ ಸರಕಾರ ಮುಂದಾಗಬೇಕು ಎಂಬುದು ರೈತರ ಒತ್ತಡವಾಗಿದೆ.
ಸಿಬ್ಬಂದಿ ಕೊರತೆ: ಗೋದಾಮುಗಳ ನಿರ್ವಹಣೆಗೆ ಸಿಬ್ಬಂದಿ ಬೇಕಾಗುತ್ತದೆ. ನಿಗಮದಲ್ಲಿ ಅಷ್ಟೊಂದು ಸಿಬ್ಬಂದಿಗಳಿಲ್ಲ ಎನ್ನುವ ಕಾರಣಕ್ಕೆ ನಿಗಮದ ಅಧಿಕಾರಿಗಳು ಖಾಸಗಿಯವರಿಗೆ ಬಾಡಿಗೆ ನೀಡಲು ಚಿಂತನೆ ನಡೆಸಿದ್ದಾರೆ. ಗೋದಾಮುಗಳು ದೊಡ್ಡ ಪ್ರಮಾಣದಲ್ಲಿದ್ದು, ದರ ದುಬಾರಿಯಾಗಿದೆ ಎನ್ನುವ ಕಾರಣಕ್ಕೆ ಖಾಸಗಿಯವರು ಮುಂದೆ ಬರುತ್ತಿಲ್ಲ ಎನ್ನಲಾಗುತ್ತಿದೆ. ಹೇಗಾದರೂ ಮಾಡಿ ಖಾಸಗಿಯವರಿಗೆ ಬಾಡಿಗೆ ನೀಡಬೇಕು ಎನ್ನುವ ಅಧಿಕಾರಿಗಳ ಉದ್ದೇಶ ಈಡೇರದಂತಾಗಿದೆ.
•ಹೇಮರಡ್ಡಿ ಸೈದಾಪುರ
Advertisement

Udayavani is now on Telegram. Click here to join our channel and stay updated with the latest news.

Next