Advertisement

ಗ್ರಾಮೀಣ ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚು

06:11 PM Mar 10, 2018 | Team Udayavani |

ಕುಣಿಗಲ್‌: ಕಾನ್ವೆಂಟ್‌ ಶಾಲೆಗಳಲ್ಲಿ ಕಲಿತ ಮಕ್ಕಳ ಜ್ಞಾನಕ್ಕಿಂತ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಕಲಿತ ಮಕ್ಕಳ ಬೌದ್ಧಿಕ ಮಟ್ಟ ಮತ್ತು ಜ್ಞಾಪಕ ಶಕ್ತಿ ಹೆಚ್ಚಾಗಿರುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಸ್‌.ಜಿ.ಸಿದ್ಧರಾಮಯ್ಯ ತಿಳಿಸಿದರು.

Advertisement

ತಾಲೂಕಿನ ಹುತ್ರಿದುರ್ಗ ಹೋಬಳಿ ಹೊಡಾಘಟ್ಟ ಗ್ರಾಮದಲ್ಲಿ ಬೆಂಗಳೂರು ವಿಜಯನಗರದ ಅಭಿನವ ಪ್ರಕಾಶನದ ವತಿಯಿಂದ ಜಿ.ಪಿ.ರಾಜರತ್ನಂ ನೆನಪಿನ ಶ್ರೀಗಂಧಕುಟಿ-10 ಗ್ರಂಥಾಲಯಕ್ಕೆ 110 ಪುಸ್ತಕಗಳನ್ನು ನೀಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಜಿ.ಪಿ.ರಾಜರತ್ನಂ ಅವರನ್ನು ಕನ್ನಡದ ಮೇರು ಕವಿ, ದೊಡ್ಡ ಗುರು ಎಂದು ಬಣ್ಣಿಸಿದ ಅವರು, ಪುಸ್ತಕ ಸಂಸ್ಕೃತಿಯನ್ನು ಆರಂಭಿಸಿದ ಜಿಪಿ ರಾಜರತ್ನಂ, ಕನ್ನಡ ಭಾಷೆಗೆ ನೀಡಿರುವ ಕೊಡುಗೆ ಅನನ್ಯ. ಈ ನಿಟ್ಟಿನಲ್ಲಿ ಅಭಿನವ ಪ್ರಕಾಶನದ ರವಿಕುಮಾರ್‌ ಅವರು ಜಿ.ಪಿ. ರಾಜರತ್ನಂ ಅವರ ನೆನಪಿನಲ್ಲಿ ಸರ್ಕಾರಿ ಶಾಲೆಯ ಮಕ್ಕಳ ಬೌದ್ಧಿಕ ವಿಕಸನಕ್ಕಾಗಿ ಗ್ರಂಥಾಲಯ ತೆರೆಯುವ ಮೂಲಕ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಪುಸ್ತಕಗಳು ಉತ್ತಮ ಸ್ನೇಹಿತರಿದ್ದಂತೆ. ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಓದುವ ಮಕ್ಕಳ ಜ್ಞಾನ ಮಟ್ಟವನ್ನು ನಗರ ಪ್ರದೇಶದ ಮಕ್ಕಳಿಗೆ ಹೋಲಿಸಿದಾಗ ಗ್ರಾಮೀಣ ಮಕ್ಕಳಲ್ಲೇ ಹೆಚ್ಚಿನ ವಿಚಾರ ಧಾರೆಗಳು ಇರುತ್ತವೆ. ಈ ನೆಲದ ಜನರ ದೈನಂದಿನ ಬದುಕಿನ ವಾಸ್ತವ ಸಂಗತಿಗಳು ಹಳ್ಳಿ ಮಕ್ಕಳಿಗೆ ಹೆಚ್ಚು ಗೊತ್ತಿರುತ್ತವೆ ಎಂದು ಹೇಳಿದರು.

ಪರಿಸರ, ಶಿಕ್ಷಣ ಜಾಗೃತಿ ಮೂಡಿಸಿ: ಅಭಿನವ ಪ್ರಕಾಶನದ ಪ್ರಕಾಶಕ ರವಿಕುಮಾರ್‌, ಈವರೆಗೆ ನಮ್ಮ ಪ್ರಕಾಶನದ ವತಿಯಿಂದ ಸುಮಾರು 500ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗಿವೆ. ಇದಕ್ಕೆ ಹಲವು ಪ್ರಶಸ್ತಿಗಳು ಲಭಿಸಿವೆ. ಜೊತೆಗೆ ಶಿಕ್ಷಣ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮವನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.

Advertisement

2009ರಲ್ಲಿ ರಾಜರತ್ನಂ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ರಾಷ್ಟ್ರಕವಿ ಜಿ.ಎಸ್‌.ಶಿವರುದ್ರಪ್ಪ ಮತ್ತು ಕನ್ನಡ ಸಂಘದ ಮೂಲಕ ಯುವ ಬರಹಗಾರರ ಪಡೆಯನ್ನು ಕಟ್ಟಿದ ಪುಸ್ತಕ ಬಂಧು ಶ್ರೀನಿವಾಸ ರಾಜು ಅವರು ಸೇರಿ ರಾಜ್ಯದ ಬೇರೆ ಬೇರೆ ಶಾಲೆಗಳಿಗೆ ರಾಜರತ್ನಂ ಅವರ ಶ್ರೀಗಂಧಕುಟಿ ಮೂಲಕ ಪುಸ್ತಕಗಳನ್ನು ಕೊಡುವ ಕೆಲಸ ಮಾಡಲಾಗುತ್ತಿತ್ತು. ಆದರೆ, ಶ್ರೀನಿವಾಸರಾಜು ಅವರು ನಿಧನರಾದ ಬಳಿಕ ಅದನ್ನು ಮುಂದುವರಿಸಿಕೊಂಡು ಹೋಗುವ ಕೆಲಸ ಅಭಿನವ ಮಾಡುತ್ತಿತ್ತು. ಈವರೆಗೂ 10 ಶಾಲೆಗಳಿಗೆ ಕನಿಷ್ಠ 100 ಪುಸ್ತಕಗಳನ್ನು ಕೊಡುವ ಕೆಲಸ ಮಾಡುತ್ತಿದೆ ಎಂದರು.

ಮಕ್ಕಳಿಗೆ ಓದುವ ಹವ್ಯಾಸ ಮೂಡಿಸಿ: ವಾರಕ್ಕೆ ಒಮ್ಮೆಯಾದರೂ ಮಕ್ಕಳಿಗೆ ಓದುವ ಹವ್ಯಾಸ ಹಚ್ಚುವುದನ್ನು ಶಿಕ್ಷಕರು ಮಾಡಬೇಕು. ಮಕ್ಕಳಲ್ಲಿ ಜ್ಞಾನ ಹೆಚ್ಚಿಸ ಬೇಕು. ಈ ಶಾಲೆಗೆ 75 ವರ್ಷ ಸಂದಿದ್ದು, ಪುಸ್ತಕಗಳನ್ನು ಇಡಲು ಕಪಾಟುಗಳನ್ನು ನೀಡಲಾಗುವುದು. ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಶ್ರೀಗಂಧಕುಟಿಗಳನ್ನು ಆರಂಭಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಬರಹಗಾರ ಹುಲಿಕುಂಟೆ ಮೂರ್ತಿ, ಚಂದನ ಪ್ರಕಾಶನದ ಗಿರಿಯಪ್ಪ ಶ್ರೀನಿವಾಸಮೂರ್ತಿ, ಮುಖ್ಯ ಶಿಕ್ಷಕ ವೈ. ಎಂ.ಲೋಕೇಶಮೂರ್ತಿ ಮಾತನಾಡಿದರು. ಗ್ರಾಪಂ ಸದಸ್ಯ ನಾಗರಾಜು, ಚಂದ್ರಿಕಾ, ಮುಖಂಡರಾದ ಪಾಪೇಗೌಡ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next