Advertisement

ಬ್ರಾಹ್ಮಣರ ಅವಹೇಳನ ಖಂಡನೀಯ

04:44 PM Apr 09, 2018 | |

ಶಿವಮೊಗ್ಗ: ರಾಜಕೀಯ ಉದ್ದೇಶದಿಂದ ಬ್ರಾಹ್ಮಣ ಸಮಾಜವನ್ನು ಕೀಳು ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಸಮಾಜ ಬಾಂಧವರು ಇದಕ್ಕೆಲ್ಲ ಹೆದರುವ ಅವಶ್ಯಕತೆ ಇಲ್ಲ ಎಂದು ಅಸ್ಸಾಂ ಉತ್ಛನ್ಯಾಯಾಲಯದ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಕೆ. ಶ್ರೀಧರ ರಾವ್‌ ಹೇಳಿದರು.

Advertisement

ಜಿಲ್ಲಾ ಬ್ರಾಹ್ಮಣ ಮಹಾಸಭಾ ವತಿಯಿಂದ ನಗರದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಮಹಾಸಭಾ ಜಿಲ್ಲಾ ಘಟಕದ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಬ್ರಾಹ್ಮಣ ಸಮಾಜದ ಮೇಲೆ ಹಲವು ರೀತಿಯ ಟೀಕೆಗಳು ಕೇಳಿಬರುತ್ತಿವೆ. ನಮ್ಮನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಕಾಲಕ್ಕೆ ತಕ್ಕಂತೆ ಹೊಂದಿಕೊಂಡು ಹೋಗುತ್ತಿದ್ದೇವೆ. ಆಚಾರ-ವಿಚಾರದಲ್ಲು ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದೇವೆ. ಹೀಗಿದ್ದರೂ ರಾಜಕೀಯ ಕಾರಣಕ್ಕಾಗಿ ನಮ್ಮ ಮೇಲೆ ದೂಷಣೆ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬ್ರಾಹ್ಮಣರು ಸ್ವಾಭಿಮಾನದಿಂದ ಬದುಕು ಸಾಗಿಸುತ್ತಾರೆ. ಏನೇ ಕಷ್ಟ ಎದುರಾದರೂ ಯಾರಲ್ಲಿಯೂ ಹೇಳಿಕೊಳ್ಳುವುದಕ್ಕೆ ಹೋಗುವುದಿಲ್ಲ. ಸರ್ಕಾರಗಳು ಸಮಾಜಕ್ಕೆ ಸೌಲಭ್ಯ ನೀಡಿಲ್ಲ ಎಂದು ಹಿಂಜರಿಯದೆ, ನಮ್ಮದೇ ಆದ ರೀತಿಯಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹನಿಕವನಕಾರ ದುಂಡಿರಾಜ್‌ ಮಾತನಾಡಿ, ಸರ್ವಾಧಿಕಾರ ಅಂದರೆ ಒಡೆಯ ಆಳು. ಪ್ರಜಾಪ್ರಭುತ್ವ ಅಂದರೆ ಒಡೆದು ಆಳು. ಇದು ಪ್ರಸ್ತುತ ಸಮಾಜದಲ್ಲಿ ಕಂಡುಬರುವ ಚಿತ್ರಣ. ಸಮಾಜದಲ್ಲಿ ಒಡೆದು ಆಳುವ ನೀತಿ ಹೆಚ್ಚಾಗಿರುವುದರಿಂದ ಸಮುದಾಯಗಳು ಒಟ್ಟಿಗೆ ಸೇರುವುದಿಲ್ಲ. ಎಲ್ಲರೂ ಒಂದುಗೂಡಿ ಮುನ್ನಡೆಯಬೇಕು ಎಂದು ಹೇಳಿದರು.

Advertisement

ನಾಡೋಜ ಡಾ| ಮಹೇಶ್‌ ಜೋಷಿ ಮಾತನಾಡಿ, ಪ್ರತಿಯೊಬ್ಬರು ತಮ್ಮ ಸಮುದಾಯ, ಭಾಷೆ ಹಾಗೂ ಸಂಸ್ಕೃತಿ ಬಗ್ಗೆ ಅಪಾರ ಅಭಿಮಾನ ಹಾಗೂ ಪ್ರೀತಿ ಹೊಂದಿರಬೇಕು. ಬ್ರಾಹ್ಮಣ ಸಮುದಾಯ ಎಂದು ಹೇಳಿಕೊಂಡರೆ ನಷ್ಟ ಜಾಸ್ತಿ ಎನ್ನುವವರೇ ಕಾಣುತ್ತಾರೆ. ಆದರೆ ಬ್ರಾಹ್ಮಣ ಸಮುದಾಯ ಎಂದು ಹೇಳಿಕೊಳ್ಳುವುದು ತಪ್ಪೇನಿಲ್ಲ. ಆಚರಣೆ, ಪ್ರಾಂತ್ಯ ಹಾಗೂ ಭಾಷೆಗಳ ಬಗ್ಗೆ ಗೌರವ ಹೆಚ್ಚಿರಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಹಾಸಭಾ ಜಿಲ್ಲಾಧ್ಯಕ್ಷ ನಟರಾಜ್‌ ಭಾಗವತ್‌ ಮಾತನಾಡಿ, ಮಹಾಸಭಾ ಜಿಲ್ಲಾ ಘಟಕ ಸಮಾಜಕ್ಕಾಗಿ ಹಲವು ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಎಲ್ಲರ ಏಳ್ಗೆಯನ್ನು ಬಯಸಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಒಂದು ವರ್ಷದೊಳಗೆ ವೃದ್ಧಾಶ್ರಮ ನಿರ್ಮಾಣ ಮಾಡಬೇಕೆಂಬ ಉದ್ದೇಶವಿದೆ. ಜತೆಗೆ ಸಮಾಜದ ಹೆಣ್ಣುಮಕ್ಕಳಿಗಾಗಿ ಹಾಸ್ಟೆಲ್‌ ಕಟ್ಟಡ ನಿರ್ಮಾಣ, ಗೋಶಾಲೆ ಪ್ರಾರಂಭ ಮಾಡುವ ಚಿಂತನೆ ಇದೆ ಎಂದು ಹೇಳಿದರು.

ತಿರುವನಂತಪುರಂ ವಿಕ್ರಂ ಸಾರಾಬಾಯಿ ಬಾಹ್ಯಾಕಾಶ ಕೇಂದ್ರದ ನಿವೃತ್ತ ನಿರ್ದೇಶಕ ಡಾ| ಬಿ.ಎನ್‌. ಸುರೇಶ್‌, ನಿಮ್ಹಾನ್ಸ್‌ ನಿರ್ದೇಶಕ ಡಾ| ಬಿ.ಎನ್‌. ಗಂಗಾಧರ್‌, ಸಾಹಿತಿ ಬಿ.ಆರ್‌. ಲಕ್ಷ್ಮಣ ರಾವ್‌, ಮಹಾಸಭಾ ಗೌರವಾಧ್ಯಕ್ಷ ಡಾ| ವೆಂಕಟರಾವ್‌, ಶ್ರೀ ಗಾಯತ್ರಿ ಪ್ರತಿಷ್ಠಾನ ಅಧ್ಯಕ್ಷ ಡಾ| ಎಚ್‌.ವಿ. ಸುಬ್ರಹ್ಮಣ್ಯ ಮತ್ತಿತರರು ಇದ್ದರು. 

ಬ್ರಾಹ್ಮಣರೆಂದರೆ ಬುದ್ಧಿಜೀವಿಗಳು ಎಂಬ ಪಟ್ಟ ಕಟ್ಟಲಾಗಿದೆ. ಆದರೆ ಸಮಾಜ ಇಂದು ಹಲವು ರೀತಿಯ ಸಂಕಷ್ಟಗಳನ್ನು ಎದುರಿಸುತ್ತಿವೆ. ಇದಕ್ಕೆ ವಿಚಲಿತರಾಗಬಾರದು. ಆತ್ಮಸ್ಥೈರ್ಯ, ಆತ್ಮಬಲದಿಂದ ಪ್ರಗತಿ ಕಾಣಬೇಕು. ಯಾರ ನೆರವು ಬಯಸದೆ, ಏಳ್ಗೆ ಹೊಂದಬೇಕು.  ಶ್ರೀಧರರಾವ್‌, ವಿಶ್ರಾಂತ ನ್ಯಾಯಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next